ಉಡುಪಿ : ತಲ್ಲೂರು ಫ್ಯಾಮಿಲಿ ಟ್ರಸ್ಟ್ ಉಡುಪಿ ಇದರ ಪ್ರವರ್ತಕ ಡಾ.ತಲ್ಲೂರು ಶಿವರಾಮ ಶೆಟ್ಟಿ ಅವರು ಯಕ್ಷಗಾನ ರಂಗಕ್ಕೆ ಅನುಪಮ ಕೊಡುಗೆ ನೀಡಿದ ವಿದ್ವಾಂಸರಿಗಾಗಿ ತಮ್ಮ ಮಾತಾಪಿತರ ಸ್ಮರಣಾರ್ಥ ಸ್ಥಾಪಿಸಿದ ಪ್ರತಿಷ್ಠಿತ ‘ತಲ್ಲೂರು ಕನಕಾ-ಅಣ್ಣಯ್ಯ ಶೆಟ್ಟಿ’ ಪ್ರಶಸ್ತಿಯನ್ನು ಖ್ಯಾತ ಹಿರಿಯ ಮೃದಂಗ ವಾದಕ ವಿದ್ವಾನ್ ಕೆ. ಬಾಬು ರೈ ಅವರಿಗೆ ದಿನಾಂಕ 15-08-2023ರಂದು ಎಡನೀರು ಮಠದಲ್ಲಿ ನಡೆದ ಕೆ. ಬಾಬು ರೈಯವರ ಶತಮಾನೋತ್ಸವ ಆಚರಣೆಯ ಸಂದರ್ಭಲ್ಲಿ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರು ಪ್ರದಾನ ಮಾಡಿದರು.
ಯಕ್ಷಗಾನ ಕಲಾರಂಗದ ಮೂಲಕ ಪ್ರತೀ ವರ್ಷ ವಿದ್ವಾಂಸರಿಗೆ ನೀಡುವ ಈ ಪ್ರಶಸ್ತಿ 40,000/- ರೂ. ನಿಧಿಯನ್ನೊಳಗೊಂಡಿದೆ.
ಈ ಸಂದರ್ಭದಲ್ಲಿ ಅನುಗ್ರಹ ಸಂದೇಶ ನೀಡಿದ ಶ್ರೀಗಳು “ಬಾಬು ರೈ ಅವರು, ಶತಾಯುಷಿ ಕಲಾವಿದರಷ್ಟೇ ಅಲ್ಲ ಶತಮಾನದ ಶ್ರೇಷ್ಠ ಕಲಾವಿದರಾಗಿದ್ದಾರೆ. ಅವರ ವಿನಯಗುಣ, ಸರಳತೆ, ಜೀವನೋತ್ಸಾಹ ಕಿರಿಯರಿಗೆ ಮಾದರಿಯಾಗಿದೆ. ಅವರು ಸಂಗೀತ ಲೋಕ ಹಾಗೂ ಯಕ್ಷಗಾನ ರಂಗಕ್ಕೆ ನೀಡಿದ ಅನುಪಮ ಕೊಡುಗೆಯನ್ನು ನಾವು ಮರೆಯುವಂತಿಲ್ಲ. ಅಂತಹ ಮಹಾನ್ ಸಾಧಕನನ್ನು ಅವರ ಜೀವನ ಶ್ರೇಷ್ಠ ಸಾಧನೆಗಾಗಿ ಗುರುತಿಸಿ, ಡಾ.ತಲ್ಲೂರು ಶಿವರಾಮ ಶೆಟ್ಟಿ ಅವರು ಪ್ರಶಸ್ತಿ ನೀಡಿರುವುದು ಅಭಿನಂದನೀಯ. ಅವರೊಂದಿಗೆ ಸಾಮಾಜಿಕ, ಸಾಂಸ್ಕೃತಿಕ ಕಾಳಜಿಯಿಂದ ಕೆಲಸ ಮಾಡುತ್ತಿರುವ ಉಡುಪಿಯ ಯಕ್ಷಗಾನ ಕಲಾರಂಗ ಮಾದರಿ ಸಂಸ್ಥೆ” ಎಂದು ತಿಳಿಸಿದರು.
ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಲಿ ಕಡೆಕಾರ್ ಅವರು ಅಭಿನಂದನೆಯ ಮಾತುಗಳನ್ನಾಡಿ, “ಬಾಬು ರೈಅವರ ಜೀವನ ಸಾಧನೆ ಬೆರಗು ಹುಟ್ಟಿಸುವಂತಹುದು. ಸರಕಾರ ಎಂದೋ ಇವರನ್ನು ಗುರುತಿಸಿ, ಗೌರವಿಸಬೇಕಿತ್ತು. ಸರಳ ಸಜ್ಜನಿಕೆಯ ಈ ಸಾಧಕನಿಗೆ ಈ ಪ್ರಶಸ್ತಿಯನ್ನು ನೀಡಿರುವುದು ಸಂಸ್ಥೆ ಹಾಗೂ ಪ್ರಶಸ್ತಿಯ ಗೌರವ ಹೆಚ್ಚಿಸಿದೆ” ಎಂದರು.
ತಲ್ಲೂರು ಫ್ಯಾಮಿಲಿ ಟ್ರಸ್ಟಿನ ಪ್ರವರ್ತಕ, ಪ್ರಶಸ್ತಿಯ ರೂವಾರಿ ಡಾ. ತಲ್ಲೂರು ಶಿವರಾಮ ಶೆಟ್ಟಿ, ಟ್ರಸ್ಟಿನ ವಿಶ್ವಸ್ಥೆ ಗಿರಿಜಾ ತಲ್ಲೂರು ಶಿವರಾಮ ಶೆಟ್ಟಿ, ಉದ್ಯಮಿ ಪ್ರದೀಪ ಕುಮಾರ್ ಕಲ್ಕೂರ್, ಕೆ. ಬಾಬು ರೈ ಶತಮಾನೋತ್ಸವ ಸಮೀತಿಯ ಅಧ್ಯಕ್ಷ ರಾಮಪ್ರಸಾದ ಕಾಸರಗೋಡು, ಕಾರ್ಯದರ್ಶಿ ಶಿವರಾಮ ಕಾಸರಗೋಡು, ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ.ಗಂಗಾಧರ ರಾವ್, ದಾನಿಗಳಾದ ಡಾ. ಜೆ.ಎನ್. ಭಟ್, ಯು.ಎಸ್. ರಾಜಗೋಪಾಲ ಆಚಾರ್ಯ, ಉಪಾಧ್ಯಕ್ಷ ಎಸ್.ವಿ. ಭಟ್, ಜತೆ ಕಾರ್ಯದರ್ಶಿಗಳಾದ ನಾರಾಯಣ ಎಂ. ಹೆಗಡೆ, ಎಚ್.ಎನ್. ಶೃಂಗೇಶ್ವರ ಮತ್ತು ಸದಸ್ಯರುಗಳಾದ ಎಂ.ಎಲ್. ಸಾಮಗ, ಪ್ರತಿಭಾ ಎಂ.ಎಲ್. ಸಾಮಗ, ವಿದ್ಯಾಪ್ರಸಾದ್, ರಾಜೀವಿ, ಸುದರ್ಶನ್ ಬಾಯರಿ ಉಪಸ್ಥಿತರಿದ್ದರು.
ವಿದ್ವಾನ್ ಕೆ.ಬಾಬು ರೈ ಅವರ ಬಗ್ಗೆ ಒಂದಿಷ್ಟು : ಅಪ್ಪಟ ಕಲೋಪಾಸಕರಾಗಿರುವ ಮೃದಂಗ ವಿದ್ವಾನ್ ಕೋಟೆಕ್ಕಾರು ಬಾಬು ರೈ ಅವರಿಗೆ 100ರ ಹರೆಯದಂತೆಯೇ ಅವರ ವಿದ್ವತ್ತಿನ ಘನತೆಗೂ ಶತಮಾನ ! 1943ರಲ್ಲಿ ಯಕ್ಷಗಾನ ಮದ್ದಲೆ ವಾದಕನಾಗಿ ಯಕ್ಷಗಾನ ಕಲಾಕ್ಷೇತ್ರವನ್ನು ಪ್ರವೇಶಿಸಿ ಮಧೂರು ಮೇಳದಲ್ಲಿ ತಿರುಗಾಟ ನಡೆಸಿದ ಅವರಿಗೆ ಸಹೋದರ ಕೋಟೆಕ್ಕಾರ್ ದೇರಣ್ಣ ರೈಗಳೇ ಮೊದಲ ಗುರು. ಜೀವನೋಪಾಯಕ್ಕಾಗಿ ಊರು ತೊರೆದು ಬೆಂಗಳೂರು, ಮೈಸೂರು ಸೇರಿ ಮೈಸೂರು ಮಹಾರಾಜರ ಆಸ್ಥಾನ ವಿದ್ವಾನ್ ಟಿ.ಎಂ. ವೆಂಕಟೇಶ ದೇವರ್ ಅವರೊಂದಿಗೆ ಶಿಷ್ಯತ್ವವನ್ನು ಅಂಗೀಕರಿಸಿಕೊಂಡರು. ಏಳು ವರ್ಷ ಮೃದಂಗ ಕಲಿತು ಸಂಗೀತ ಕ್ಷೇತ್ರದ ವಿವಿಧ ಪ್ರಕಾರಗಳಲ್ಲಿ ಪರಿಣತಿ ಸಾಧಿಸಿದರು. ಚಲನಚಿತ್ರದಲ್ಲಿಯೂ ನಟಿಸಿದರು. ಆಕಾಶವಾಣಿಯ ಕಲಾವಿದರಾದರು. ಊರಿಗೆ ಮರಳಿದ ಮೇಲೆ ‘ಕಲಾಸದನ’ ಎಂಬ ಸಂಸ್ಥೆ ಆರಂಭಿಸಿ ಕಲಾಕಾರ್ಯಕ್ರಮಗಳಿಗೆ ಆಸರೆಯಾದರು. ಟಿ.ಆರ್. ಮಹಾಲಿಂಗಂ, ದೊರೆಸ್ವಾಮಿ ಅಯ್ಯಂಗಾರ್, ಬಾಲಮುರಲೀಕೃಷ್ಣರಂತಹ ದಿಗ್ಗಜರಿಗೆ ಸಾಥ್ ನೀಡಿದರು. ಯಕ್ಷಗಾನ ಮದ್ದಲೆ ವಾದಕ ಚಿಪ್ಪಾರು ಕೃಷ್ಣಯ್ಯ ಬಲ್ಲಾಳರಿಗೆ ಮೃದಂಗ ಹೇಳಿಕೊಟ್ಟರು. ಪುತ್ತಿಗೆ ರಾಮಕೃಷ್ಣ ಜೋಯಿಸ, ಮಾಂಬಾಡಿ ನಾರಾಯಣ ಭಾಗವತ, ಅಗರಿ ಶ್ರೀನಿವಾಸ ಭಾಗವತ, ದಾಮೋದರ ಮಂಡೆಚ್ಚರಂಥ ಭಾಗವತರಿಗೆ ಮದ್ದಲೆ ಸಾಥ್ ನೀಡಿದರು. ಕುರಿಯ ವಿಠಲ ಶಾಸ್ತ್ರಿ, ಮಲ್ಪೆ ಶಂಕರನಾರಾಯಣ ಸಾಮಗ, ಕರ್ಗಲ್ಲು ಸುಬ್ಬಣ್ಣ ಭಟ್ಟರಂತಹ ಕಲಾವಿದರನ್ನು ರಂಗದ ಮೇಲೆ ಕುಣಿಸಿದರು. ಶೇಣಿ ಗೋಪಾಲಕೃಷ್ಣ ಭಟ್ಟರ ಪ್ರಿಯ ಮಿತ್ರರಾಗಿ ಅವರ ಹರಿಕಥೆಗೆ ತಬಲಾಸಾಥ್ ನೀಡಿದರು. ಕುದ್ರೆಕೂಡ್ಲು ರಾಮ ಭಟ್, ನಿಡ್ಲೆ ನರಸಿಂಹ ಭಟ್ಟರಂಥ ಕಲಾವಿದರ ಒಡನಾಡಿಯಾದರು. ಮೃದಂಗ-ಮದ್ದಲೆಗಳ ಸಮ್ಯಕ್ ಬಂಧದ ಕುರಿತು ಸದಾ ಚಿಂತನಶೀಲರಾಗಿರುವ ಬಾಬು ರೈಗಳು ‘ಪ್ರತಿಧ್ವನಿ’ ಎಂಬ ಮೃದಂಗ ಪಾಠದ ಕೃತಿಯನ್ನೂ ಬರೆದಿದ್ದಾರೆ.