ಮಂಗಳೂರು : ಗುರುಕುಲ ಕಲಾ ಪ್ರತಿಷ್ಠಾನ ದಕ್ಷಿಣ ಕನ್ನಡ ವತಿಯಿಂದ ಸ್ವಾತಂತ್ರ್ಯ ದಿನಾಚರಣೆಯ ಸಡಗರವನ್ನು ಸಾಹಿತ್ಯ ಗೋಷ್ಠಿಯ ಮೂಲಕ ಸ್ಥಳೀಯ ಸ್ಕೌಟ್ ಮತ್ತು ಗೈಡ್ಸ್ ಸಭಾಭವನದಲ್ಲಿ ದಿನಾಂಕ 15-08-2023ರಂದು ಅದ್ದೂರಿಯಾಗಿ ಆಚರಿಸಲಾಯಿತು. ಉತ್ಸವದ ಅಂಗವಾಗಿ ಮೂವರು ಸಾಧಕರಾದ ಹಿರಿಯ ಯಕ್ಷಗಾನ ಕವಿ ಕುಡುಮಲ್ಲಿಗೆ ಕೃಷ್ಣ ಶೆಟ್ಟಿ, ಅಬೂಬಕ್ಕರ್ ಕೈರಂಗಳ ಮತ್ತು ಯು.ಆರ್. ಶೆಟ್ಟಿಯವರಿಗೆ ಸನ್ಮಾನ ಮತ್ತು ಅಂತರ್ರಾಜ್ಯ ಮಟ್ಟದ ಕವಿಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿತ್ತು.
ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ಮಾನಸಾ ಕೈಂತಜೆಯವರ ಸಾರಥ್ಯದಲ್ಲಿ ನಡೆದ ಈ ಸಮಾರಂಭದ ಉದ್ಘಾಟನೆಯನ್ನು ಕಲ್ಲಚ್ಚು ಪ್ರಕಾಶನದ ಮಹೇಶ್ ನಾಯಕ್ ವಹಿಸಿದ್ದರು. ಅವರು ಮಾತನಾಡುತ್ತಾ “ಸಾಹಿತ್ಯಕ್ಕೆ ಪರಿಧಿಯೇ ಇಲ್ಲ. ದೇಶ ವಿದೇಶಗಳಲ್ಲಿಯೂ ಕನ್ನಡದ ಕಂಪು ಪಸರಿಸುತ್ತಿದೆ. ಒಂದು ಉತ್ತಮ ಸ್ವಾತಂತ್ರ್ಯ ಸಂಭ್ರಮದ ಈ ಗಳಿಗೆ ಅತ್ಯಮೂಲ್ಯ” ಎಂದರು.
ಮುಖ್ಯ ಅತಿಥಿಗಳಲ್ಲೊಬ್ಬರಾದ ಮಂಗಳೂರಿನ ಮೂಲವ್ಯಾಧಿ ಮತ್ತಿತರ ರೋಗಗಳ ಮಿಶ್ರಪದ್ಧತಿ ತಜ್ಞ ಹಾಗೂ ಬರಹಗಾರ ಡಾ. ಸುರೇಶ ನೆಗಳಗುಳಿಯವರು “ಗುರುಕುಲ ಎಂಬ ಅನ್ವರ್ಥ ನಾಮಧೇಯವಿರುವ ಈ ಸಂಸ್ಥೆಯ ಕಾರ್ಯ ವೈಖರಿಗಳು ಜನ ಸಂಕುಲದಲ್ಲಿ ಭಾವಯಾನ ಮಾಡಿಸುತ್ತವೆ.” ಎನ್ನುತ್ತಾ ಸ್ವರಚಿತ ದೇಶಭಕ್ತಿ ಗೀತೆಯನ್ನು ವಾಚಿಸಿದರು.
ಇನ್ನೋರ್ವ ಮುಖ್ಯ ಅತಿಥಿ ಡಿ.ಐ ಅಬ್ಬುಬಕ್ಕರ್ ಕೈರಂಗಳ ಅವರು “ಗುರುಕುಲದ ಕಾರ್ಯಕ್ರಮಗಳು ತನಗೆ ಅತೀವ ಆಪ್ಯಾಯಮಾನ ಹಾಗೂ ಮುಂದೆಯೂ ಜನಹಿತ ಕಾರ್ಯಕ್ರಮಗಳು ನಡೆಯಲಿ” ಎಂದು ಆಶಿಸಿ ಕವನವನ್ನು ಓದಿದರು. ಇನ್ನೋರ್ವ ಮುಖ್ಯ ಅತಿಥಗಳಾಗಿದ್ದ ಪುತ್ತೂರು ಕ.ಸಾ.ಪ. ಅಧ್ಯಕ್ಷ ಉಮೇಶ್ ನಾಯಕ್ ಶುಭ ಕೋರಿದರು.
ಸಭಾಧ್ಯಕ್ಷತೆಯನ್ನು ವಹಿಸಿದ್ದ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಕಾರ್ಯದರ್ಶಿ ಶ್ರೀ ಎಂ.ಜಿ. ಕಜೆಯವರು ಮಾತನಾಡುತ್ತಾ “ಸ್ವಾತಂತ್ರ್ಯೋತ್ಸವನ್ನು ಕೇವಲ ಧ್ವಜಾರೋಹಣ ಹಾಗೂ ಭಾಷಣಗಳಿಗೆ ಸೀಮಿತಗೊಳಿಸದೆ ಸಾಹಿತ್ಯಾಸ್ವಾದನೆಯ ಮೂಲಕ ಸ್ವಾತಂತ್ರ್ಯದ ಮಹತ್ವ ಸಾರಿದ ಈ ಗೋಷ್ಠಿ ಬಹು ಮೌಲ್ಯ ಪಡೆಯುತ್ತದೆ” ಎಂದರು.
ಅನಂತರ ನಡೆದ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಸನ್ಮಾನಿತರಲ್ಲೊಬ್ಬರಾದ ಕುಡುಮಲ್ಲಿಗೆ ಕೃಷ್ಣ ಶೆಟ್ಟಿಯವರು “ಚುಟುಕಿನಿಂದ ಆರಂಭವಾಗುವ ಸಾಹಿತ್ಯ ಹಲವಾರು ಮಜಲುಗಳನ್ನು ಪಡೆದಿದೆ. ಸಾಕಷ್ಟು ಯಕ್ಷಗಾನ ಪ್ರಸಂಗಗಳನ್ನು ತಾನು ಬರೆದಿದ್ದು ಅದಕ್ಕೆ ಸಾಹಿತ್ಯವೇ ಸ್ಪೂರ್ತಿ” ಎಂದರು.
ಗುರುಕುಲ ಬಳಗದ ಡೊಂಬಯ್ಯ ಇಡ್ಕಿದು ಸ್ವಾಗತಿಸಿ, ಮಾನಸಾ ಕೈಂತಜೆ ಧನ್ಯವಾದ ಸಮರ್ಪಣೆಗೈದರು. ಪುಷ್ಪಲತಾ ಮತ್ತು ಸಾಕ್ಷಿಯವರು ನಿರೂಪಣೆಗೈದ ಈ ಸಮಾರಂಭದಲ್ಲಿ ಸಂಸ್ಥೆಯ ಯು.ಆರ್.ಶೆಟ್ಟಿ ಮತ್ತು ಹಿರಿಯ ಬರಹಗಾರ ಕೊಳ್ಚಪ್ಪೆ ಗೋವಿಂದ ಭಟ್, ಗುಣಾಜೆ ರಾಮಚಂದ್ರ ಭಟ್, ಯಶವಂತ ಕುದ್ರೋಳಿ, ಅನಿತಾ ಶೆಟ್ಟಿ, ರೇಖಾ ಸುದೇಶ ರಾವ್, ಡಾ ಮಂಜುನಾಥ, ಶಿವಪ್ರಸಾದ್ ಬೋಳಂತೂರು, ಸತೀಶ್ ಬೆಳಿಯೂರು, ಆಕೃತಿ ಭಟ್, ವಿಂದ್ಯಾ ಎಸ್. ರೈ, ಹರೀಶ ಮೋಟುಗಾನ, ಆರದಯನ್ ಸವಣಾಕ್, ಜ್ಯೂಲಿಯೆಟ್ ಪಿರೇರಾ, ಕುಮಾರಿ ಸೃಷ್ಟಿ ಮೊದಲಾದ ಇಪ್ಪತ್ತೈದು ಹಿರಿ ಕಿರಿಯ ಕವಿಗಳು ಭಾಗವಹಿಸಿ ಕವನ ವಾಚನ ಮಾಡಿದರು.