ಪುತ್ತೂರು : ಶ್ರೀ ಮೂಕಾಂಬಿಕಾ ಕಲ್ಚರಲ್ ಆಕಾಡೆಮಿಯು ಹಮ್ಮಿಕೊಂಡ ‘ನೃತ್ಯಾಂತರಂಗ’ದ 103ನೇ ಸರಣಿ ಕಾರ್ಯಕ್ರಮವು ದಿನಾಂಕ 13-08-2023ರಂದು ಪುತ್ತೂರಿನ ಶಶಿಶಂಕರ ಸಭಾಂಗಣದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಪುಟಾಣಿಗಳಾದ ಕುಮಾರಿ ಮಾತಂಗಿ ಮತ್ತು ಕುಮಾರಿ ಅಕ್ಷರಿ ಇವರ ಭರತನಾಟ್ಯ ಪ್ರದರ್ಶನ ನೆರವೇರಿತು.
ಪುಷ್ಪಾಂಜಲಿಯಿಂದ ಕಾರ್ಯಕ್ರಮ ಪ್ರಾರಂಭವಾಗಿ, ನಂತರ ನರ್ತಿಸಿದ ನಟೇಶ ಕೌತ್ವಂ ನಲ್ಲಿ ತಟವನದಲ್ಲಿ ಶಿವನು ಮುನಿಗಳಿಂದ, ರಾಕ್ಷಸರಿಂದ ಪೂಜಿಸಲ್ಪಟ್ಟು, ಶಿವನು ನರ್ತಿಸುವಾಗ ಕಾಲಿನಲ್ಲಿರುವ ಗೆಜ್ಜೆಗಳು ಝಣ,ಝಣ ಎಂದು ಶಬ್ದವನ್ನು ಮಾಡುತ್ತಾ ತ್ರಿಶೂಲ ಮತ್ತು ಡಮರುಗವನ್ನು ತನ್ನ ಕೈಗಳಲ್ಲಿ ಹಿಡಿದು ನರ್ತಿಸುವ ನಟರಾಜನ ವರ್ಣನೆಯನ್ನು ಕಲಾವಿದರು ಸೊಗಸಾಗಿ ಅನಾವರಣಗೊಳಿಸಿದರು.
ನಂತರ ನರ್ತಿಸಿದ ಓಂಕಾರ ಬಿಂದುವಿನಲ್ಲಿ ದೇವಿಯ ವರ್ಣನೆಯನ್ನು ಮಾಡಲಾಗಿದೆ. ಇಲ್ಲಿ ದೇವಿಯು ಮಹಿಷಾಸುರನನ್ನು ಸಂಹರಿಸಿ ಮಹಿಷಾಸುರ ಮರ್ಧಿನಿಯಾದ ಕಥಾ ಭಾಗವನ್ನು ಪುಟಾಣಿ ಕಲಾವಿದರು ಮನಮುಟ್ಟುವಂತೆ ಪ್ರಸುತ ಪಡಿಸಿದರು.
ಕೊನೆಯದಾಗಿ ಕೃಷ್ಣನ ಕುರಿತು ಕನಕದಾಸರು ರಚಿಸಿದ ಬಾರೋ ಕೃಷ್ಣಯ್ಯ ದೇವರನಾಮಕ್ಕೆ ನರ್ತಿಸಲಾಯಿತು. ಕೈಯಲ್ಲಿ ಕೊಳಲನ್ನು ಹಿಡಿದು, ಕಾಲಿನಲ್ಲಿ ಗೆಜ್ಜೆಯ ಸದ್ದನ್ನು ಮಾಡುತ್ತಾ ತಮ್ಮ ಮನೆಗೆ ಬಾ, ಎಂದು ಪುಟ್ಟ ಕೃಷ್ಣನನ್ನು ಪುಟಾಣಿ ಕಲಾವಿದರು ಕರೆದ ರೀತಿ ಕಲಾರಸಿಕರ ಮನ ಮುಟ್ಟಿತು. ಅಲ್ಲದೇ ಉಡುಪಿಯಲ್ಲಿ ಕನಕದಾಸರಿಗೆ ಕೃಷ್ಣನು ದರ್ಶನ ನೀಡಿದ ಬಗೆಯನ್ನು ಕಲಾವಿದರು ತಮ್ಮ ಅಭಿನಯದ ಮೂಲಕ ವ್ಯಕ್ತಪಡಿಸಿದ ರೀತಿ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಇಬ್ಬರೂ ಎಳವೆಯಲ್ಲಿಯೇ ತಮ್ಮ ಉತ್ತಮ ಭಾವಾಭಿನಯದ ಮೂಲಕ ಸಭಿಕರ ಮನಗೆದ್ದರು.
ಈ ಕಾರ್ಯಕ್ರಮಕ್ಕೆ ಬೆನ್ನೆಲುಬಾಗಿ ಹಿಮ್ಮೇಳದ ಹಾಡುಗಾರಿಕೆಯಲ್ಲಿ ವಿದುಷಿ ಪ್ರೀತಿಕಲಾ ದೀಪಕ್, ನಟುವಾಂಗದಲ್ಲಿ ವಿದ್ವಾನ್ ಬಿ ದೀಪಕ್ ಕುಮಾರ್, ಮೃದಂಗದಲ್ಲಿ ವಿದ್ವಾನ್ ಶ್ಯಾಮ್ ಭಟ್ ಸುಳ್ಯ ಹಾಗೂ ಕೊಳಲಿನಲ್ಲಿ ವಿದ್ವಾನ್ ಕೃಷ್ಣಗೋಪಾಲ್ ಪುಂಜಾಲಕಟ್ಟೆ ಇವರು ಸಹಕರಿಸಿದರು.
ಮಂಗಳೂರಿನ ಬೆಸೆಂಟ್ ಮಹಿಳಾ ಕಾಲೇಜಿನ ನಿವೃತ್ತ ಉಪನ್ಯಾಸಕಿಯಾದ ಶ್ರೀಮತಿ ಇಂದಿರಾದೇವಿ ಕೆ.ಪಿ ಇವರು ಅಭ್ಯಾಗತರಾಗಿ ಆಗಮಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ಆಶಾ ಬೆಳ್ಳಾರೆ ಇವರು ಕಾರ್ಯಕ್ರಮದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು. ವಿದ್ವಾನ್ ದೀಪಕ್ ಕುಮಾರ್ ಇವರು ಕಾರ್ಯಕ್ರಮ ನಿರ್ವಹಿಸಿದರು.
ಕುಮಾರಿ ಅಕ್ಷರಿ :
ಪುತ್ತೂರು ತಾಲೂಕು ಮುಕ್ರುಂಪಾಡಿಯ ಗೋಕುಲ ಬಡಾವಣೆಯ ದ್ವಾರಕಾ ಮನೆಯಲ್ಲಿ ವಾಸವಾಗಿರುವ ಕಿಜಕ್ಕಾರು ಅರ್ತ್ಯಡ್ಕ ಮನೆತನದ ಶ್ರೀಯುತ ಗೋಪಾಲಕೃಷ್ಣ ಭಟ್ ಮತ್ತು ಶ್ರೀಮತಿ ಅಶ್ವಿನಿ ದಂಪತಿಯ ಪುತ್ರಿಯಾಗಿರುವ ಕುಮಾರಿ ಅಕ್ಷರಿ ಇವಳು ವಿದುಷಿ ಪ್ರೀತಿಕಲಾ ದೀಪಕ್ ಹಾಗೂ ವಿದ್ವಾನ್ ದೀಪಕ್ ಕುಮಾರ್ ಇವರ ‘ಮೂಕಂಬಿಕಾ ಕಲ್ಕರಲ್ ಅಕಾಡಮಿ’ಯ ಗರಡಿಯಲ್ಲಿ ಕಳೆದ ಒಂದು ವರುಷ ಆರು ತಿಂಗಳುಗಳಿಂದ ಶಾಸ್ತ್ರೀಯ ಭರತ ನಾಟ್ಯವನ್ನು ಅಭ್ಯಾಸ ಮಾಡುತ್ತಿದ್ದಾಳೆ. ಅಂಬಿಕಾ ನಿಲಯ ಪುತ್ತೂರು ಇಲ್ಲಿ ನಾಲ್ಕನೇ ತರಗತಿಯಲ್ಲಿ ಕಲಿಯುತ್ತಿರುವ ಈಕೆಯದು ಬಹುಮುಖ ಪ್ರತಿಭೆ. ಸದಾ ಕಲಿಕೆಯಲ್ಲಿ ಮುಂದಿರುವ ಈಕೆ ಯಕ್ಷಗಾನ, ಚೆಂಡೆ, ಮದ್ದಳೆ, ಕೀಬೋರ್ಡ್ ಗಳನ್ನು ಕೂಡ ಅಭ್ಯಾಸ ಮಾಡುತ್ತಿದ್ದಾಳೆ. ಇದಕ್ಕೂ ಮುನ್ನ ಈಕೆ ಬೆಟ್ಟಂಪಾಡಿ, ಮಾಡಾವು, ಬಿ.ಸಿ.ರೋಡ್ ಹಾಗೂ ತನ್ನ ಮನೆಯಲ್ಲಿ ನಡೆದ ಪೂಜಾ ಕಾರ್ಯಕ್ರಮಗಳಲ್ಲಿ ತನ್ನ ಪ್ರತಿಭೆಯನ್ನು ಪ್ರದರ್ಶಿಸಿದ್ದಾಳೆ.
ಕುಮಾರಿ ಮಾತಂಗಿ :
ಶ್ರೀ ಮೂಕಾಂಬಿಕ ಕಲ್ಚರಲ್ ಅಕಾಡೆಮಿಯ ನೃತ್ಯ ಗುರುಗಳಾದ ವಿದ್ವಾನ್ ಬಿ.ದೀಪಕ್ ಕುಮಾರ್ ಹಾಗೂ ವಿದುಷಿ ಪ್ರೀತಿಕಲಾ ದೀಪಕ್ ಇವರ ಸುಪುತ್ರಿಯಾದ ಕುಮಾರಿ ಮಾತಂಗಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ 3ನೇ ತರಗತಿಯ ವಿದ್ಯಾರ್ಥಿನಿ.
ಭರತನಾಟ್ಯ ಶಿಕ್ಷಣವನ್ನು ತನ್ನ 5ನೇ ವಯಸ್ಸಿನಿಂದ ಕಲಿಯಲು ಪ್ರಾರಂಭಿಸಿ, ತನ್ನ ತಂದೆ ತಾಯಿಯರ ಮಾರ್ಗದರ್ಶನದಲ್ಲಿ ತನ್ನ ಕಲಿಕೆಯನ್ನು ಮುಂದುವರೆಸುತ್ತಾ ಇದ್ದಾಳೆ. ಕರ್ನಾಟಕ ಸಂಗೀತದ ತರಬೇತಿಯನ್ನು ತನ್ನ ತಾಯಿ ವಿದುಷಿ ಪ್ರೀತಿಕಲಾ ದೀಪಕ್ ಇವರಲ್ಲಿ ಪಡೆಯುತ್ತಿದ್ದಾಳೆ.
ವೇದಿಕೆಗಳು :
ಎಡನೀರು ಮಠದಲ್ಲಿ ಚಾತುರ್ಮಾಸ ಸಂದರ್ಭದಲ್ಲಿ, ಕೊಲಕಾಡಿ ಶ್ರೀ ಕಾಳಿಕಾಂಬ ದೇವಸ್ಥಾನದ ಜಾತ್ರಾ ಮಹೋತ್ಸವ ಸಂದರ್ಭದಲ್ಲಿ, ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ದೇವರ ದೀಪೋತ್ಸವದ ಸಂದರ್ಭದಲ್ಲಿ, ಪುತ್ತೂರು ಮಹಾಲಿಂಗೇಶ್ವರ ದೇವರ ಜಾತ್ರಾ ಮಹೋತ್ಸವ, ಚೆನ್ನಾವರ ಬ್ರಹ್ಮಕಲಶೋತ್ಸವ, ಬಿ.ಸಿ.ರೋಡಿನ ರಕ್ತೇಶ್ವರಿ ಸನ್ನಿಧಿಯಲ್ಲಿ ಹಾಗೂ ನಾಡಿನ ಹಲವಾರು ಸಾರ್ವಜನಿಕ ಗಣೇಶೋತ್ಸವಗಳಲ್ಲಿ ಕಾರ್ಯಕ್ರಮ ನೀಡಿರುತ್ತಾಳೆ.
ಬಹುಮಾನಗಳು :
ವಿ ರೈಸ್ ವೇದಿಕ್ ಅಕಾಡಮಿ ಬೆಂಗಳೂರು ಅವರು ನಡೆಸಿದ ಆನ್ಲೈನ್ ಸಂಗೀತ ಸ್ಪರ್ಧೆಯಲ್ಲಿ ಒಂದು ಬಾರಿ ತೃತೀಯ ಹಾಗೂ ಈ ವರ್ಷ ಪ್ರಥಮ ಬಹುಮಾನ, ಗೋಪಿನಾಥ ದಾಸ ಅವರು ನಡೆಸುವ ರಾಷ್ಟ್ರಮಟ್ಟದ ಸಂಗೀತ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಇದಲ್ಲದೆ ಇನ್ನೂ ಹಲವಾರು ರಾಜ್ಯ ಹಾಗೂ ಜಿಲ್ಲಾಮಟ್ಟದ ಸಂಗೀತ ಸ್ಪರ್ಧೆಯಲ್ಲಿ ಬಹುಮಾನಗಳನ್ನು ಪಡೆದಿರುತ್ತಾಳೆ.
1 Comment
ರೂವಾರಿ ದಕ್ಷಿಣ ಕನ್ನಡದ ಸ್ಥಳೀಯ ಪ್ರತಿಭೆಗಳನ್ನು ಪರಿಚಯಿಸುವ ಹಾಗೂ ಕೇವಲ ಈ ನೆಲದ ಸಾಂಸ್ಕೃತಿಕ ಕಾರ್ಯಕ್ರಮಗಳ ಎಲ್ಲಾ ವಿಭಾಗಗಳನ್ನು ಸಮಗ್ರವಾಗಿ ದಾಖಲಿಸುವ ಅತ್ಯುತ್ತಮ ಜಾಲತಾಣವಾಗಿದೆ.