ಸುಳ್ಯ : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮಂಗಳೂರು ವತಿಯಿಂದ ಯಕ್ಷಧ್ರುವ -ಯಕ್ಷಶಿಕ್ಷಣ ನಾಟ್ಯ ತರಬೇತಿ ಶಿಕ್ಷಣ ಅಭಿಯಾನದ ಉಚಿತ ಯಕ್ಷಗಾನ ತರಬೇತಿ ಉದ್ಘಾಟನಾ ಕಾರ್ಯಕ್ರಮವು ಪಂಜದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ದಿನಾಂಕ 16-08-2023ರಂದು ನಡೆಯಿತು.
ಸುಳ್ಯದ ಶಾಸಕಿ ಭಾಗೀರಥಿ ಮುರುಳ್ಯ ಅವರು ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ “ನಮ್ಮಲ್ಲಿರುವ ಪ್ರತಿಭೆಗಳಿಗೆ ಒಂದಲ್ಲೊಂದು ಅವಕಾಶಗಳು ಸಿಕ್ಕೇ ಸಿಗುತ್ತವೆ. ನಮ್ಮ ಪ್ರಯತ್ನ, ಶ್ರಮ, ಪರಿಶ್ರಮದಿಂದ ಯಶಸ್ಸು ಸಾಧ್ಯ. ಯಾವುದೇ ಕ್ಷೇತ್ರದ ಸಾಧನೆಗೆ ತರಬೇತಿ ಅಗತ್ಯವಾಗಿದೆ. ಯಕ್ಷಗಾನ ಕ್ಷೇತ್ರದಲ್ಲಿ ಅದೆಷ್ಟೋ ಸಾಧಕರನ್ನು ನಾವು ಕಾಣಬಹುದಾಗಿದೆ. ಇಂದು ಪಟ್ಲ ಫೌಂಡೇಶನ್ ವತಿಯಿಂದ ಮಕ್ಕಳಿಗೆ ಉಚಿತ ಯಕ್ಷಗಾನ ತರಬೇತಿ ನೀಡುತ್ತಿರುವುದು ಮಕ್ಕಳಲ್ಲೂ ಯಕ್ಷಗಾನ ಕ್ಷೇತ್ರದ ಬಗ್ಗೆ ಆಸಕ್ತಿ ಬೆಳೆಸಲು ಪೂರಕವಾಗಲಿ” ಎಂದು ಶುಭ ಹಾರೈಸಿದರು.
ಪಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ವಿಜಯಲಕ್ಷ್ಮೀ, ಮಾಜಿ ಅಧ್ಯಕ್ಷೆ ಪೂರ್ಣಿಮಾ ದೇರಾಜೆ, ಯಕ್ಷಗಾನ ತರಬೇತುದಾರ ಗಿರೀಶ್ ಗಡಿಕಲ್ಲು, ಪ್ರೀತಮ್ ವಿದ್ಯಾಸಂಸ್ಥೆಯ ಶಿಕ್ಷಕರು, ಸಿಬ್ಬಂದಿಗಳು ಮತ್ತು ಮಕ್ಕಳು ಉಪಸ್ಥಿತರಿದ್ದರು.
ಮಂಗಳೂರು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಅಧ್ಯಕ್ಷ ಸತೀಶ್ ಪಟ್ಲ ಪ್ರಾಸ್ತಾವಿಕವಾಗಿ ಮಾತನಾಡಿ, ಪಂಜ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ಚಲಪತಿ ವಿ. ಸ್ವಾಗತಿಸಿದರು. ಶಿಕ್ಷಕಿ ಚೈತ್ರಾ ವಂದಿಸಿ, ಶಿಕ್ಷಕ ರವೀಂದ್ರ ಗಣಪತಿ ನಾಯಕ್ ಕಾರ್ಯಕ್ರಮ ನಿರೂಪಿಸಿದರು.