ಮೂಲ್ಕಿ : ಶ್ರೀ ಕ್ಷೇತ್ರ ಬಪ್ಪನಾಡು ಇಲ್ಲಿನ ಅನ್ನಪೂರ್ಣ ಸಭಾಂಗಣದಲ್ಲಿ ದಿನಾಂಕ 27-08-2023ರಂದು ಸಾಹಿತಿ, ಕಲಾವಿದ, ಪ್ರಿನ್ಸಿಪಾಲ್ ಡಾ.ವಿ.ಕೆ. ಯಾದವ್ ಸಸಿಹಿತ್ಲು ರಚಿಸಿದ ಪ್ರಪ್ರಥಮ ತುಳು ಗ್ರಂಥ ‘ಮೊಗವೀರೆರ್ನ ಸಾಂಸ್ಕೃತಿಕ ಬದ್ಕ್ ಬೊಕ್ಕ ಆರ್ಥಿಕ ಚಿಂತನೆ’ ಕೃತಿ ಬಿಡುಗಡೆ ವಿಶಿಷ್ಟ ಶೈಲಿಯಲ್ಲಿ ನಡೆಯಿತು. ಮೊಗವೀರ ಮುಂದಾಳು ನಾಡೋಜ ಡಾ.ಜಿ.ಶಂಕರ್ ಕಾರ್ಯಕ್ರಮವನ್ನು ಕಳಸೆಗೆ ಭತ್ತ ಸುರಿಯುವ ಮೂಲಕ ಉದ್ಘಾಟಿಸಿ ಗ್ರಂಥ ಬಿಡುಗಡೆಗೆ ಶುಭ ಹಾರೈಸಿದರು.
ಬಳಿಕ ಮಾತನಾಡಿದ ಅವರು “ಮೊಗವೀರ ಸಮಾಜದ ಸಂಘಟನೆಗೆ ಗ್ರಂಥ ಪೂರಕವಾಗಲಿದೆ. ಸರಕಾರದ ಮಟ್ಟದಲ್ಲಿ ಗ್ರಂಥಕ್ಕೆ ಬೆಂಬಲ ಹಾಗೂ ಎಲ್ಲ ವಿವಿಗಳ ಗ್ರಂಥಾಲಯಗಳಲ್ಲಿ ಗ್ರಂಥ ಇರಿಸಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ. ಬರುವ ವರ್ಷ ಶತಮಾನೋತ್ಸವ ಸಮಾರಂಭ ನಡೆಸುವ ಮೊಗವೀರ ಮಹಾಜನ ಸಂಘದ ಕಾರ್ಯಕ್ರಮ ಅವಿಸ್ಮರಣೀಯಗೊಳಿಸಲು ಗ್ರಂಥ ಸಹಕಾರಿಯಾಗಲಿದೆ” ಎಂದರು.
ಮೀನುಗಾರರು ಬದುಕು ಕಟ್ಟಿಕೊಂಡ ಸಾಂಪ್ರದಾಯಿಕ ಪಾತಿ ದೋಣಿಯಲ್ಲಿ ಮೀನುಗಾರರು ಐಲೇಸಾ ಸಂಭ್ರಮದೊಂದಿಗೆ ಸಭಿಕರ ನಡುವೆ ಪಾತಿ ದೋಣಿಯನ್ನು ದೂಡಿಕೊಂಡು ಗ್ರಂಥವನ್ನು ವೇದಿಕೆಗೆ ತಂದ ಬಳಿಕ ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್ ಮೀನು ಜೋಳಿಗೆಯಿಂದ ಗ್ರಂಥ ತೆರೆಯುವ ಮೂಲಕ ಗ್ರಂಥ ಲೋಕಾರ್ಪಣೆಗೊಳಿಸಿದರು. ಶಾಸಕ ಉಮಾನಾಥ ಎ. ಕೋಟ್ಯಾನ್ ಅಭಿನಂದಿಸಿದರು.
ಮೊಗವೀರ ಸಮಾಜದಲ್ಲಿ ಮಾತ್ರ ಬಳಸಲ್ಪಡುವ ಸಂಶೋಧನೆಯಲ್ಲಿ ಪತ್ತೆಯಾಗಿರುವ ತುಳು ಭಾಷೆಯ ಒಂದು ವಿಶಿಷ್ಟ ವ್ಯಂಜನಾಕ್ಷರದ ಮತ್ತು ಉಚ್ಛಾರದ ದಾಖಲೀಕರಣ ನಡೆಯಿತು. ಮೊಗವೀರ ಸಮಾಜದ ಹಿರಿಯರಾಗಿದ್ದು, ವ್ಯಂಜನಾಕ್ಷರದ ಬಗ್ಗೆ ಸಾಕಷ್ಟು ಮಾಹಿತಿ ಉಳ್ಳ ಹರಿಶ್ಚಂದ್ರ ಮೆಂಡನ್ ಪೊಲಿಪು ಮತ್ತು ಅನಂದ ಸುವರ್ಣ ಉಳ್ಳಾಲ ದಾಖಲೀಕರಣಕ್ಕೆ ಸ್ವರ ನೀಡಿದರು. ಬಳಿಕ ಇಬ್ಬರನ್ನೂ ಸನ್ಮಾನಿಸಲಾಯಿತು.
ಮೂಲ್ಕಿ ಸೀಮೆ ಅರಸರಾದ ದುಗ್ಗಣ್ಣ ಸಾವಂತರು ಅಧ್ಯಕ್ಷತೆ ವಹಿಸಿದರೆ, ಸಸಿಹಿತ್ಲು ಶ್ರೀ ಭಗವತೀ ದೇವಳದ ಅನುವಂಶಿಕ ಆಡಳಿತ ಮೊಕ್ತೇಸರ ಶ್ರೀನಿವಾಸ ಯಾನೆ ಅಪ್ಪು ಪೂಜಾರಿ ಆಶೀರ್ವಚಿಸಿದರು. ಮಂಗಳೂರು ಸಂತ ಅಲೋಸಿಯಸ್ ಕಾಲೇಜಿನ ಪ್ರಾಧ್ಯಾಪಕ ಡಾ.ಮಹಾಲಿಂಗ ಭಟ್ ಕೆ. ಗ್ರಂಥ ಪರಿಚಯಿಸಿದರು.
ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷರಾದ ಶ್ರೀ ಜಯ ಸಿ.ಕೋಟ್ಯಾನ್, ಬಗ್ವಾಡಿ ಹೋಬಳಿ ಮೊಗವೀರ ಮಹಾಜನ ಸಂಘದ ಶಾಖಾಧ್ಯಕ್ಷ ಉದಯ ಕುಮಾರ್ ಹಟ್ಟಿಯಂಗಡಿ, ಮಹಾಜನ ಸಂಘದ ಮಹಿಳಾ ವಿಭಾಗದ ಅಧ್ಯಕ್ಷೆ ಉಷಾರಾಣಿ ಡಿ.ಕೆ. ಬೋಳೂರು, ಬಪ್ಪನಾಡು ದೇವಳದ ಆಡಳಿತ ಮೊಕ್ತೇಸರ ಎನ್.ಎಸ್. ಮನೋಹರ ಶೆಟ್ಟಿ, ಮಂಗಳೂರು ವಿವಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳು ಪೀಠದ ಡಾ.ಮಾಧವ ಎಂ.ಕೆ., ಉದ್ಯಮಿ ನಾರಾಯಣ ರಾವ್, ಸಾಹಿತಿ ಡಾ. ಜೆ.ಪಿ. ಕುಸುಮಾ, ಮೂಲ್ಕಿ ನಾಲ್ಕುಪಟ್ಟ ಮೊಗವೀರ ಮಹಾಸಭಾ ಅಧ್ಯಕ್ಷ ಸುಜಿತ್ ಎಸ್. ಸಾಲ್ಯಾನ್ ಉಪಸ್ಥಿತರಿದ್ದರು.
ಕದಿಕೆ ಓಡಿ ಮರಕಾಲ ಕುಟುಂಬಸ್ಥರು ಮತ್ತು ಕುರಲ್ ಇಸ್ಟೆರ್ ಕುಡ್ಲದ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ರಂಥ ರಚನೆಕಾರರಾದ ಡಾ.ವಿ.ಕೆ. ಯಾದವ್ ಸಸಿಹಿತ್ಲು ಬೆಲ್ಲ ನೀರು, ವೀಳ್ಯ ನೀಡಿ ಅತಿಥಿಗಳನ್ನು ಸ್ವಾಗತಿಸಿ, ಎಸ್.ಆರ್.ಪ್ರಭಾತ್ ನಿರೂಪಿಸಿ, ಎಸ್.ಆರ್. ಪ್ರದೀಪ್ ವಂದಿಸಿದರು.