ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಪ್ರೊ. ಜಿ.ವೆಂಕಟಸುಬ್ಬಯ್ಯನವರ 110ನೆಯ ಜನ್ಮ ದಿನವನ್ನು ದಿನಾಂಕ 23-08-2023ರಂದು ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಆಚರಿಸಲಾಯಿತು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿ ಇವರು “ಪ್ರೊ.ಜಿ.ವೆಂಕಟಸುಬ್ಬಯ್ಯನವರಿಗೆ ಸಿಗಬೇಕಾದ ಗೌರವಗಳು ಯಾವುದೂ ಸಕಾಲಕ್ಕೆ ಸಿಗಲಿಲ್ಲ. ಅವರಿಗೆ 92ನೆಯ ವರ್ಷಕ್ಕೆ ನಾಡೋಜ, ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದಾಗ 98ವರ್ಷ, ಪಂಪ ಪ್ರಶಸ್ತಿ ಬಂದಾಗ 101ವರ್ಷ, ಪದ್ಮಶ್ರೀ ಬಂದಾಗ 104 ವರ್ಷ, ಕೇಂದ್ರ ಸರ್ಕಾರದ ಭಾಷಾ ಸಮ್ಮಾನ ಗೌರವ ಬಂದಾಗ 105ವರ್ಷ, ಜಿ.ವಿಯವರು ಇದರ ಕುರಿತು ಎಂದಿಗೂ ಆಕ್ಷೇಪ ವ್ಯಕ್ತಪಡಿಸದೆ ಇನ್ನೂ ಕನ್ನಡದ ಸೇವೆ ಮಾಡುವ ಅವಕಾಶಕ್ಕಾಗಿ ಹಾತೊರೆಯುತ್ತಿದ್ದ ಕನ್ನಡದ ಕಟ್ಟಾಳು. 1954ರಲ್ಲಿ ಮೊದಲು ಅವರು ಗೌರವ ಕಾರ್ಯದರ್ಶಿಗಳಾಗಿದ್ದು ಮತ್ತು 1964ರಲ್ಲಿ ಅಧ್ಯಕ್ಷರಾದರು. ಆಗ ಪರಿಷತ್ತು ಆರ್ಥಿಕ ಸಂಕಷ್ಟದಲ್ಲಿದ್ದಾಗ ಜಿದ್ದಿನಿಂದ ಓಡಾಡಿ ಹಿರಿಯರಿಂದ, ಕನ್ನಡ ಪ್ರೇಮಿಗಳಿಂದ ಅನುದಾನ ತಂದರು. ನಿಘಂಟು ತಜ್ಞರಾಗಿ ಹೆಸರು ಮಾಡಿದ ವೆಂಕಟಸುಬ್ಬಯ್ಯನವರು ಕನ್ನಡ ಸಾಹಿತ್ಯ ಪರಿಷತ್ತಿಗೂ ದೊಡ್ಡ ಪ್ರಮಾಣದ ಕೊಡುಗೆಯನ್ನು ನೀಡಿದ್ದಾರೆ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಕಟಣಾ ವಿಭಾಗದ ಸಂಚಾಲಕರಾಗಿದ್ದರು.” ಎಂದು ಹೇಳಿದರು.
ಪ್ರೊ.ಎನ್.ಎಸ್.ಶ್ರೀಧರ ಮೂರ್ತಿ ಇವರು ಮಾತನಾಡಿ “ಪ್ರೊ.ಜಿ.ವೆಂಕಟಸುಬ್ಬಯ್ಯನವರು ಹಲವು ಶ್ರೇಷ್ಠ ತಲೆಮಾರುಗಳ ಕೊಂಡಿಯಾಗಿ ನಮ್ಮ ಯುಗದವರಿಗೆ ಪ್ರೇರಕ ಶಕ್ತಿಯಾಗಿದ್ದವರು. ನಮ್ಮ ಕನ್ನಡವನ್ನು ತಿದ್ದಿ ಬರವಣಿಗೆಯ ಮಾದರಿಗಳನ್ನು ಕಲಿಸಿದವರು. ಕನ್ನಡ ನಿಘಂಟುಗಳ ಪರಂಪರೆಯನ್ನೇ ರೂಪಿಸಿದ ಅವರು ಎರವಲು ಪದಕೋಶದಂತಹ ವಿಶಿಷ್ಟ ಪ್ರಯೋಗವನ್ನು ಮಾಡಿದ್ದರು. ಪತ್ರಕರ್ತರಿಗೂ ಪದಕೋಶ ಬೇಕು ಎನ್ನುವ ಉದ್ದೇಶದಿಂದ ಅವರು ರೂಪಿಸಿದ ʻಪತ್ರಿಕಾ ಪದಕೋಶʼ ಇಂದಿಗೂ ಮಾದರಿಯಾಗಿದೆ. ಹಿರಿಯರು ಯಾರು ಎಂದರೆ ಕಿರಿಯರ ಏಳಿಗೆಯಲ್ಲಿ ಸಂತೋಷ ಕಾಣುವವರು ಎನ್ನುವುದು ಇಂದಿಗೂ ನನಗೆ ಮಾರ್ಗದರ್ಶಿಯಾಗಿದೆ.” ಎಂದು ನೆನಪು ಮಾಡಿ ಕೊಂಡರು.
ಪರಿಷತ್ತಿನ ಕಾರ್ಯದರ್ಶಿಗಳಾದ ಶ್ರೀ ನೇ.ಭ.ರಾಮಲಿಂಗ ಶೆಟ್ಟಿ, ಡಾ.ಪದ್ಮಿನಿ ನಾಗರಾಜು, ಕೋಶಾಧ್ಯಕ್ಷರಾದ ಡಾ. ಬಿ.ಎಂ. ಪಟೇಲ್ ಪಾಂಡು, ಪ್ರಕಟಣಾ ವಿಭಾಗದ ಸಂಚಾಲಕರಾದ ಪ್ರೊ.ಎನ್.ಎಸ್.ಶ್ರೀಧರ ಮೂರ್ತಿ ವಿಶೇಷ ಆಡಳಿತಾಧಿಕಾರಿ ಶ್ರೀ ಚಿಕ್ಕತಿಮ್ಮಯ್ಯ ಸಿ. ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.