ನಮ್ಮ ನಾಡಿನ ಗಂಡುಕಲೆ ಯಕ್ಷಗಾನ. ಹಿಮ್ಮೇಳದಲ್ಲಿ ಭಾಗವತರ ಭಾಗವತಿಕೆಗೆ ಮುಮ್ಮೇಳದ ಕಲಾವಿದರು ಭಾರೀ ವೇಷಧರಿಸಿ ನಾಟ್ಯ ಹಾಗೂ ಮಾತುಗಾರಿಕೆಯೊಂದಿಗೆ ಅಭಿನಯಿಸುವ ಅಬ್ಬರದ ಕಲೆ ಇದಾಗಿದೆ. ತಲೆತಲಾಂತರಗಳಿಂದ ಪುರುಷರೇ ಈ ಕಲೆಯನ್ನು ಅರಸಿಕೊಂಡು ಬಂದಿರುವರು. ಆದರೆ ಈಗ ಕಾಲ ಬದಲಾಗಿದೆ. ಸ್ತ್ರೀಯರು ಸಹ ಎಲ್ಲಾ ಕ್ಷೇತ್ರದಲ್ಲಿ ಮುಂದುವರಿದು ಇಂದು ಯಕ್ಷಗಾನದಲ್ಲೂ ಅನನ್ಯ ಪ್ರತಿಭೆಯಾಗಿ ಹೊರಹೊಮ್ಮುತ್ತಿರುವರು.
ಅಂತಹ ಅನನ್ಯ ಯಕ್ಷಗಾನ ಪ್ರತಿಭೆಯಲ್ಲಿ ನಾವಿಂದು ಓರ್ವ ಮಹಿಳಾ ಯಕ್ಷಗಾನ ಕಲಾವಿದೆಯ ಬಗ್ಗೆ ತಿಳಿಯೋಣ.
ದಕ್ಷಿಣ ಕನ್ನಡ ಜಿಲ್ಲೆಯ ಪೇಜಾವರ ಟಿ.ಆರ್. ಸುಂದರ್ ಭಟ್ ಹಾಗೂ ಶ್ರೀಮತಿ ವಾರಿಜ ಎಸ್. ಭಟ್ ಇವರ ಮಗಳಾಗಿ 01.09.1974ರಂದು ಪೂರ್ಣಿಮಾ ಪ್ರಶಾಂತ್ ಶಾಸ್ತ್ರಿ ಅವರ ಜನನ. ಬಿ.ಎ. ಇನ್ ಹೋಂ ಸೈನ್ಸ್ ಇವರ ವಿದ್ಯಾಭ್ಯಾಸ. ಪೂರ್ಣಿಮಾ ಅವರು ಯಕ್ಷಗಾನ ರಂಗಕ್ಕೆ ಬರಲು ಮೂಲ ಪ್ರೇರಣೆ ಇವರ ತಂದೆ.
ಯಕ್ಷಗಾನ ಗುರುಗಳು:-
ಶ್ರೀ ಬಾಲಸುಬ್ರಮಣ್ಯ ಭಟ್, ರಾಮಚಂದ್ರ ಭಟ್ ಎಲ್ಲೂರು, ರವಿ ಅಲೆವೂರಾಯ, ಶ್ರೀಮತಿ ಪೂರ್ಣಿಮಾ ಯತೀಶ್ ರೈ.
ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯ ತಯಾರಿ ಮಾಡಿಕೊಳ್ಳುತ್ತೀರಿ:-
ಗುರುಗಳಲ್ಲಿ, ಭಾಗವತರಲ್ಲಿ, ಸಹಕಲಾವಿದರಲ್ಲಿ ಪ್ರಸಂಗದ ನಡೆಯ ಬಗ್ಗೆ ವಿವರಗಳನ್ನು ತಿಳಿದುಕೊಂಡು ರಂಗಸ್ಥಳಕ್ಕೆ ಹೋಗುತ್ತೇನೆ.
ದೇವಿ ಮಹಾತ್ಮೆ, ಪುರಾಣ ಪ್ರಸಂಗಗಳು ಇವರ ನೆಚ್ಚಿನ ಪ್ರಸಂಗಗಳು. ಬಣ್ಣದ ವೇಷ, ಹಾಸ್ಯ, ರಾಜವೇಷ ನೆಚ್ಚಿನ ವೇಷಗಳು.
ಯಕ್ಷಗಾನದ ಇಂದಿನ ಸ್ಥಿತಿ ಗತಿ:-
ಯಕ್ಷಗಾನ ಇಂದು ಒಳ್ಳೆಯ ಸ್ಥಿತಿಯಲ್ಲಿ ಇದೆ. ಅನೇಕ ಮಕ್ಕಳು ಕೂಡ ಇದರ ಕಡೆಗೆ ಆಸಕ್ತಿ ತಳೆದು ಆ ಮೂಲಕ ನಮ್ಮ ಸಂಸ್ಕೃತಿ, ಪುರಾಣಗಳ ಅರಿಯುವಲ್ಲಿ ಮಹತ್ತರ ಪಾತ್ರ ಪಡೆಯುತ್ತಿದೆ. ಕೆಲವು ಕಡೆ ಮಾತ್ರ ಅದನ್ನು ಬಹಳ ಹೀನಾಯವಾಗಿ ಬಳಸಿಕೊಳ್ಳುತ್ತಿರುವುದು ಬಹಳ ವಿಶಾದನೀಯ.
ಯಕ್ಷಗಾನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ಒಳ್ಳೆಯ ಅಭಿರುಚಿಯ ಪ್ರೇಕ್ಷಕರು ಹೆಚ್ಚುತ್ತಿರುವುದು ಸಂತೋಷದ ವಿಷಯ.
ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆ:-
ಆದಷ್ಟು ಎಲ್ಲಾ ಶಾಲೆಯಲ್ಲಿ ಯಕ್ಷ ಶಿಕ್ಷಣ ಒಂದು ಪಠ್ಯ ಚಟುವಟಿಕೆಯಾಗಿ ಸೇರ್ಪಡೆಯಾಗಬೇಕು. ಇದು ನನ್ನ ಆಶಯ.
ಸನ್ಮಾನ ಹಾಗೂ ಪ್ರಶಸ್ತಿ:-
ಸರಯೂ ಯಕ್ಷ ಪ್ರಶಸ್ತಿ.
ಕಲಾ ರತ್ನ ಪ್ರಶಸ್ತಿ.
ಶ್ರೀ ವಾಸುಕಿ ಯಕ್ಷಗಾನ ಮಂಡಳಿ, ಸುಬ್ರಹ್ಮಣ್ಯ, ಮಹಿಳಾ ಯಕ್ಷ ಕೂಟ ಕದ್ರಿ ಹಾಗೂ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ, ಕಾಟಿಪಳ್ಳ ಮೇಳದಲ್ಲಿ ತಿರುಗಾಟವನ್ನು ಮಾಡಿದ ಅನುಭವ.
ಇತ್ತೀಚೆಗೆ ದುಬೈ ಯಲ್ಲಿ ನಡೆದ ವಿಶ್ವ ಪಟ್ಲಸಂಭ್ರಮದಲ್ಲಿ ವೇಷ ನಿರ್ವಹಿಸಿದ ಹೆಗ್ಗಳಿಕೆ.
ಯಕ್ಷಗಾನ, ಭಜನೆ, ನೃತ್ಯ, ಎಲ್ಲರನ್ನು ನಗಿಸುವುದು ಇವರ ಹವ್ಯಾಸಗಳು.
ಪೂರ್ಣಿಮಾ ಅವರು 21.02.1992ರಂದು ಪ್ರಶಾಂತ್. ವಿ.ಶಾಸ್ತ್ರಿ ಅವರನ್ನು ಮದುವೆಯಾಗಿ ಸಂತೃಪ್ತಿಯ ಜೀವನ ನಡೆಸುತ್ತಿದ್ದಾರೆ.
ನನ್ನ ಇಂದಿನವರೆಗಿನ ಕಿಂಚಿತ್ ಕಲಾ ಸಾಧನೆಗೆ ನನ್ನ ಹೆತ್ತವರು, ಒಡಹುಟ್ಟಿದವರು, ನನ್ನ ಗಂಡ ಪ್ರಶಾಂತ ಶಾಸ್ತ್ರೀ , ಮಾವ ವಿಠ್ಠಲ್ ಶಾಸ್ತ್ರಿ, ಅತ್ತೆ ಶ್ಯಾಮಲಾ ಶಾಸ್ತ್ರಿ, ನನ್ನ ಮಾರ್ಗದರ್ಶಕರು ಪ್ರಭಾಕರ್ ರಾವ್ ಪೇಜಾವರ ಹಾಗೂ ಪೂರ್ಣಿಮಾ ಪ್ರಭಾಕರ್ ರಾವ್ ಪೇಜಾವರ ದಂಪತಿಗಳು ಹಾಗೂ ನನ್ನ ಎಲ್ಲಾ ಸ್ನೇಹಿತರು, ಬಂಧು ಮಿತ್ರರು ಇವರೆಲ್ಲರಿಗೂ ನಾನು ಚಿರಋಣಿ.
ನಾನು ಸಕ್ರಿಯವಾಗಿ ತೊಡಗಿಸಿಕೊಂಡ ಯಕ್ಷ ಧ್ರುವ ಪಟ್ಲ ಫೌಂಡೇಶನ್, ಯಕ್ಷ ಅಭಿಮಾನಿ ಬಳಗ ಸುರತ್ಕಲ್, ಯಕ್ಷ ಸಂಗಮ ಉಪ್ಪಿನಂಗಡಿ, ಯಕ್ಷಮಂಜುಳಾ ಮಹಿಳಾ ತಾಳಮದ್ದಳೆ ಬಳಗ ಕದ್ರಿ ಬಳಗಕ್ಕೆ ಚಿರಋಣಿ ಎಂದು ಹೇಳುತ್ತಾರೆ ಪೂರ್ಣಿಮಾ ಶಾಸ್ತ್ರಿಯವರು.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
- ಶ್ರವಣ್ ಕಾರಂತ್ ಕೆ., ಶಕ್ತಿನಗರ, ಮಂಗಳೂರು