ಮಂಗಳೂರು : ಕುಂದೇಶ್ವರ ಪ್ರತಿಷ್ಠಾನ ಮಂಗಳೂರು ಘಟಕ ವತಿಯಿಂದ ದಿನಾಂಕ 04-09-2023ರ ಸೋಮವಾರ ಸಂಜೆ 6 ಗಂಟೆಗೆ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ‘ಶ್ರೀಪ್ರಾಪ್ತಿ ಕಲಾವಿದೆರ್ ಕುಡ್ಲ’ ತಂಡ ಅಭಿನಯಿಸುವ ಕಲಾಸವ್ಯಸಾಚಿ ಪ್ರಶಾಂತ ಸಿ.ಕೆ. ವಿರಚಿತ ‘ಮಣೆ ಮ೦ಚೊದ ಮಂತ್ರಮೂರ್ತಿ’ ನಾಟಕದ ಉದ್ಘಾಟನಾ ಪ್ರದರ್ಶನ ನಡೆಯಲಿದೆ.
ಇದೇ ಸಂದರ್ಭದಲ್ಲಿ ತುಳು, ಕೊಂಕಣಿ, ಕನ್ನಡ, ತೆಲುಗು ಸಿನಿಮಾ ಮತ್ತು ರಂಗಭೂಮಿ ದಿಗ್ಗಜ ಕಲಾವಿದ ಗೋಪಿನಾಥ್ ಭಟ್ ಅವರಿಗೆ ‘ಕುಂದೇಶ್ವರ ಕಲಾಭೂಷಣ ಪ್ರಶಸ್ತಿ’ ಪ್ರದಾನ ಮಾಡಲಾಗುವುದು. ಗೋಪಿನಾಥ್ ಭಟ್ ಅವರು ರಂಗಭೂಮಿಯಲ್ಲಿ 100ಕ್ಕೂ ಹೆಚ್ಚು ಪಾತ್ರ ನಿರ್ವಹಿಸಿ 750ಕ್ಕೂ ಹೆಚ್ಚು ಪ್ರದರ್ಶನ ನೀಡಿದ್ದಾರೆ. ವೀರಮದಕರಿ ಸಹಿತ 45ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ದಟ್ಸ್ ಆಲ್ ಯುವರ್ ಆನರ್ ನಾಟಕಕ್ಕೆ ರಾಜ್ಯಮಟ್ಟದ ಪ್ರಶಸ್ತಿ ಗೆದ್ದುಕೊಂಡಿರುವ ಭಟ್ ಅವರು ಕೊಂಕಣಿ ಅಕಾಡೆಮಿ ಗೌರವ ಪ್ರಶಸ್ತಿಗೂ ಭಾಜನರಾಗಿದ್ದಾರೆ.
ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಡಿ.ವೇದವ್ಯಾಸ ಕಾಮತ್, ನಿವೃತ್ತ ಸೇನಾಧಿಕಾರಿ ಕ್ಯಾ. ಬ್ರಿಜೇಶ್ ಚೌಟ, ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್, ಕಲಾಮಾಣಿಕ್ಯ ವಿಜಯಕುಮಾರ್ ಕೊಡಿಯಾಲಬೈಲ್, ಯು.ಟಿ.ಫರೀದ್ ಫೌಂಡೇಶನ್ ಅಧ್ಯಕ್ಷರಾದ ಡಾ. ಯು.ಟಿ. ಇಫ್ತಿಕರ್ ಮತ್ತಿತರರು ಈ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ಕಲಾ ಸವ್ಯಸಾಚಿ ಪ್ರಶಾಂತ್ ಸಿ.ಕೆ. ನಿರ್ದೆಶನದಲ್ಲಿ ಪಾಡ್ದನ ಆಧಾರಿತ ತುಳು ನಾಟಕ ‘ಮಣೆ ಮ೦ಚೊದ ಮಂತ್ರಮೂರ್ತಿ’ ಚೊಚ್ಚಲ ಪ್ರದರ್ಶನ ಆಯೋಜಿಸಲಾಗಿದ್ದು, ಇದೇ ಸಂದರ್ಭ ಹಿರಿಯ ದೈವಾರಾಧಕ ಸೀನ ಶೆಡ್ಯ ಅವರಿಗೆ ಗೌರವ ಸನ್ಮಾನ ನಡೆಯಲಿದೆ.