ಮಂಗಳಗಂಗೋತ್ರಿ : ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆ, ಕರ್ನಾಟಕ ಲೇಖಕಿಯರ ಸಂಘ, ಬೆಂಗಳೂರು ಹಾಗೂ ಕರಾವಳಿ ಲೇಖಕಿಯರ ವಾಚಕಿಯರ ಸಂಘ ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಲೇಖಕಿಯರ ಬದುಕು ಮತ್ತು ಬರಹ ಕುರಿತ ಕಾರ್ಯಕ್ರಮ ‘ಲೇಖ ಲೋಕ – 9 ಎರಡು ದಿನಗಳ ಕಾರ್ಯಕ್ರಮದ ಸಮಾರೋಪ ಸಮಾರಂಭ ದಿನಾಂಕ 30-08-2023ರಂದು ನಡೆಯಿತು.
ಈ ಕಾರ್ಯಕ್ರಮದಲ್ಲಿ ಕರ್ನಾಟಕ ಲೇಖಕಿಯರ ಸಂಘ ಬೆಂಗಳೂರು ಇದರ ಅಧ್ಯಕ್ಷೆ ಕವಯಿತ್ರಿ ಡಾ. ಎಚ್.ಎಲ್. ಪುಷ್ಪರವರು ಮಾತನಾಡುತ್ತಾ “ಪುರುಷರು ತಮ್ಮ ಖಾಸಗಿ ಬದುಕಿನ ವಿವರಗಳನ್ನು, ವೈಯಕ್ತಿಕ ಸಾಧನೆಗಳನ್ನು ದಿಟ್ಟವಾಗಿ ಹೇಳಿಕೊಂಡಾಗ ಸ್ವೀಕರಿಸುವ ಸಮಾಜ ಹೆಣ್ಣೊಬ್ಬಳು ಬರೆದುಕೊಂಡಾಗ ಅನುಮಾನದಿಂದ ಕುತ್ಸಿತ ಮನೋಭಾವದಿಂದ ನೋಡುವುದು ಯಾಕೆ? ಸ್ವಾತಂತ್ರ್ಯ ಬಂದು ದಶಕಗಳೇ ಕಳೆದರೂ ಲಿಂಗತಾರತಮ್ಯದ ಭಾವನೆ ಕಡಿಮೆಯಾಗಿಲ್ಲ. ಹೆಣ್ಣಿನ ಬದುಕಿಗೂ ಒಂದು ಘನತೆಯಿದೆ ಎಂಬುದನ್ನು ಅರ್ಥಮಾಡಿಕೊಂಡು ಗೌರವಿಸುವ ಸಮಾಜ ರೂಪುಗೊಳ್ಳಬೇಕು” ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷರಾದ ಪ್ರೊ.ಸೋಮಣ್ಣ ಮಾತನಾಡಿ “ಮಹಿಳೆಯರ ಆತ್ಮನಿರೂಪಣೆಗಳು ಹೆಣ್ಣಿನ ಸೂಕ್ಷ್ಮ ಮನಸ್ಸನ್ನು ಅನಾವರಣ ಮಾಡುವುದಲ್ಲದೇ ಶೋಷಣೆ ಅನೇಕ ಅಯಾಮಗಳನ್ನು ಹಿಡಿದಿಟ್ಟಿದೆ. ಸವಾಲುಗಳನ್ನು ಎದುರಿಸಿ ಬದುಕಿದ ಮಹಿಳೆಯರ ಬದುಕಿನ ದಾರಿ ಇತರರಿಗೆ ಪ್ರೇರಕ” ಎಂದರು.
ಕರಾವಳಿ ಲೇಖಕಿಯರ ವಾಚಕಿಯರ ಸಂಘದ ಅಧ್ಯಕ್ಷೆ ಡಾ.ಜ್ಯೋತಿ ಚೇಳ್ಯಾರ್ ಮಾತನಾಡಿದರು. ಲೇಖಕಿ ಸಂಧ್ಯಾರಾಣಿ ಎನ್. ಬೆಂಗಳೂರು ಸ್ವಾಗತಿಸಿದರು. ಕರ್ನಾಟಕ ಲೇಖಕಿಯರ ಸಂಘದ ಕಾರ್ಯದರ್ಶಿ ಭಾರತಿ ಹೆಗಡೆ ವಂದಿಸಿದರು.
ಎರಡು ದಿನಗಳ ಈ ಕಾರ್ಯಕ್ರಮದಲ್ಲಿ ತಮ್ಮ ಬದುಕು ಬರಹದ ಕುರಿತು ಕನ್ನಡ ಪ್ರಸಿದ್ಧ ಲೇಖಕಿಯರಾದ ಉಷಾ ಪಿ. ರೈ ಮಂಗಳೂರು, ಪಾರ್ವತಿ ಜಿ. ಐತಾಳ್ ಉಡುಪಿ, ಡಾ. ವಸುಂಧರಾ ಭೂಪತಿ ಬೆಂಗಳೂರು, ಡಾ. ಎಂ.ಎಸ್.ಆಶಾದೇವಿ ಬೆಂಗಳೂರು, ಸುನಂದಾ ಕಡಮೆ ಹುಬ್ಬಳ್ಳಿ, ಡಾ. ತಮಿಳ್ ಸೆಲ್ವಿ ಚೆನ್ನೈ, ಡಾ. ಶೋಭಾ ನಾಯಕ ಬೆಳಗಾವಿ, ಮಾಧವಿ ಭಂಡಾರಿ ಕೆರೆಕೋಣ ಶಿರಸಿ, ಎಂ. ಜಾನಕಿ ಬ್ರಹ್ಮಾವರ ಉಡುಪಿ ಮಾತನಾಡಿದರು. ಲೇಖಕಿ ಬಿ.ಎಂ ರೋಹಿಣಿ, ಜ್ಯೋತಿ ಗುರುಪ್ರಸಾದ್ ಕಾರ್ಕಳ, ಪ್ರೊ.ಕಿಶೋರಿ ನಾಯಕ್, ಪ್ರೊ.ಪರಿಣಿತ, ಡಾ.ಧನಂಜಯ ಕುಂಬ್ಳೆ, ದೇವಿಕಾ ನಾಗೇಶ್, ಚಂದ್ರಶೇಖರ ಎಂ.ಬಿ. ಮತ್ತಿತರರು ಸಂವಾದದಲ್ಲಿ ಭಾಗವಹಿಸಿದರು.