ಶಿಕ್ಷಣ ಹಾಗೂ ಕಲೆಯ ಮೂಲಕ ವಿದ್ಯಾರ್ಥಿಗಳಲ್ಲಿ ಜೀವನ ಮೌಲ್ಯಗಳನ್ನು ಅರಳಿಸುವ ಪ್ರಭಾವೀ ಕುಟುಂಬ ‘ಹಂದಟ್ಟು ಪಟೇಲರ ಮನೆ’. ಉಡುಪಿ ಜಿಲ್ಲೆ ಕೋಟ ಪರಿಸರದ ಈ ಕುಟುಂಬದಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದ ಶಿಕ್ಷಕರಿದ್ದಾರೆ. ಅಂತರಾಷ್ಟ್ರೀಯ ಮನ್ನಣೆ ಪಡೆದ ಕಲಾವಿದರಿದ್ದಾರೆ. ಈ ಕುಟುಂಬ ಸೃಜನಶೀಲತೆಗೆ ಒಂದು ಮಾದರಿ ಕುಟುಂಬ. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಶ್ರೀ ಶ್ರೀಧರ ಹಂದೆ ಹಾಗೂ ಶ್ರೀಮತಿ ವಸುಮತಿ ಹಂದೆ ದಂಪತಿಯ ಸುಪುತ್ರನಾಗಿರುವ ಶ್ರೀ ಸುಜಯೀಂದ್ರ ಹಂದೆಯವರು ‘ಪಟೇಲರ ಮನೆ’ಯ ಕಲಾ ಪರಂಪರೆಗೆ ದಿವ್ಯ ಮೆರುಗು ನೀಡುತ್ತಿರುವ ಪ್ರಬುದ್ಧ ಕಲಾವಿದ, ಶ್ರೇಷ್ಟ ಉಪನ್ಯಾಸಕ. ತಾ.22-07-1974ರಲ್ಲಿ ಜನಿಸಿದ ಇವರು ಪ್ರಾಥಮಿಕ ವಿದ್ಯಾಭ್ಯಾಸವನ್ನು ಕೋಟ ಶಾಲೆ ಹಾಗೂ ಗಿಳಿಯಾರು ಶಾಲೆಗಳಲ್ಲಿ ಮುಗಿಸಿ ಹೈಸ್ಕೂಲು ಹಾಗೂ ಪದವಿ ಪೂರ್ವ ಶಿಕ್ಷಣವನ್ನು ವಿವೇಕ ವಿದ್ಯಾ ಸಂಸ್ಥೆಗಳಲ್ಲಿ ಪೂರೈಸಿದರು. ತಮ್ಮ ಪದವಿಯನ್ನು ಭಂಡಾರ್ಕರ್ಸ್ ಕಾಲೇಜಿನಲ್ಲಿ ಮುಗಿಸಿ ಮಂಗಳೂರು ವಿಶ್ವ ವಿದ್ಯಾನಿಲಯದಿಂದ ಎಂ.ಎ. ಪದವಿಯನ್ನು ಪಡೆದರು. ತಮ್ಮ ಐದನೆಯ ವಯಸ್ಸಿನಲ್ಲಿಯೇ ಯಕ್ಷಗಾನ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ ಇವರು ಯಕ್ಷರಂಗದ ಅಗ್ರಗಣ್ಯ ಕಲಾವಿದರೊಂದಿಗೆ ವೇಷ ಹಾಕಿರುವುದು ಮಾತ್ರವಲ್ಲ ಹಲವಾರು ತಾಳಮದ್ದಳೆಗಳಲ್ಲಿ ಅರ್ಥಧಾರಿಯಾಗಿ ಭಾಗವಹಿಸುತ್ತಿದ್ದಾರೆ.
ಬಾಲ್ಯದಿಂದಲೇ ಬಣ್ಣದ ಒಲವನ್ನು ಬೆಳೆಸಿಕೊಂಡಿರುವ ಶ್ರೀಯುತರು ಯಕ್ಷಗಾನ ರಂಗದ ಎಲ್ಲಾ ಕಲೆಗಳನ್ನೂ ಕರಗತ ಮಾಡಿಕೊಂಡವರು. ಕರ್ನಾಟಕ, ದೆಹಲಿ, ಒರಿಸ್ಸಾ, ಮಧ್ಯಪ್ರದೇಶ, ಆಂದ್ರ ಪ್ರದೇಶ, ಚೆನ್ನೈ, ಕೇರಳ, ಗೋವಾ ಮತ್ತು ಮಹಾರಾಷ್ಟ್ರ ಮುಂತಾದ ಕಡೆ ಪ್ರದರ್ಶನಗಳನ್ನು ನೀಡಿದ್ದು ಮಾತ್ರವಲ್ಲದೆ ಬೆಹರಿನ್, ಲಂಡನ್, ಮೆಂಚೆಸ್ಟರ್, ಕುವೈಟ್, ಮೊದಲಾದ ವಿದೇಶದ ನೆಲದಲ್ಲೂ ಯಕ್ಷಗಾನ ಪ್ರದರ್ಶನ ನೀಡಿದವರು. ಏಕಪಾತ್ರಾಭಿನಯ, ನಾಟಕ, ಹಾಡುಗಾರಿಕೆ ಹೀಗೆ ಹಲವು ಕಲೆಗಳನ್ನು ಮೈಗೂಡಿಸಿಕೊಂಡವರು. ಕನ್ನಡ ಉಪನ್ಯಾಸಕನಾಗಿ ಪ್ರಸ್ತುತ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜು ಗಂಗೊಳ್ಳಿಯಲ್ಲಿ ಸೇವೆ ಸಲ್ಲಿಸುತ್ತಿರುವ ಇವರು ವಿದ್ಯಾರ್ಥಿಗಳ ನೆಚ್ಚಿನ ಗುರು ಹಾಗೂ ಸಹೋದ್ಯೋಗಿಗಳ ಆಪ್ತ ಸ್ನೇಹಿತ. ನಾಲ್ಕು ದಶಕಗಳ ಇತಿಹಾಸವಿರುವ ವಿಶ್ವವಿಖ್ಯಾತ ಸಾಲಿಗ್ರಾಮ ಮಕ್ಕಳ ಮೇಳದ ನಿರ್ದೇಶಕರೂ ಆಗಿದ್ದಾರೆ.
ಸಂಪ್ರದಾಯಬದ್ಧ ಯಕ್ಷವೇಷಕ್ಕೆ ಪ್ರಸಿದ್ಧಿ ಪಡೆದಿರುವ ಶ್ರೀ ಸುಜಯೀಂದ್ರ ಹಂದೆಯವರು ಪರಂಪರೆಯ ಯಕ್ಷಗಾನ ಪ್ರದರ್ಶನವನ್ನು ನೀಡುತ್ತಲೇ ಬಂದಿದ್ದಾರೆ. ಕುಂದಾಪುರ ಗಮಕ ಕಲಾ ಪರಿಷತ್ತಿನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ಹಂದೆಯವರು ನಾಡಿನ ಅನೇಕ ಕಡೆ ಗಮಕ ವಾಚನ ಮತ್ತು ವ್ಯಾಖ್ಯಾನಗಳನ್ನು ನೀಡಿದ್ದಾರೆ. ‘ಸ್ಪಿಕ್ ಮೆಕೆ’, ನ್ಯಾಷನಲ್ ಸ್ಕೂಲ್ ಆಫ್ ಡಾನ್ಸ್ ವೇದಿಕೆಗಳಲ್ಲಿ ಯಕ್ಷಗಾನ ಪ್ರಾತ್ಯಕ್ಷಿಕೆಗಳನ್ನು ನೀಡಿದ ಖ್ಯಾತಿ ಶ್ರೀ ಹಂದೆಯವರದ್ದು.
ಕನ್ನಡ ಸಾರಸ್ವತ ಲೋಕದಲ್ಲೂ ಇವರ ಸಾಹಿತ್ಯ ಕೃತಿಗಳು ಹೆಸರು ಮಾಡಿವೆ. ‘ಬಂಜೆ ಹೆತ್ತ ನೋವು’, ‘ಯಕ್ಷಗಾನದ ಮಿಂಚು ಹಾರಾಡಿ ಕುಷ್ಟ ಗಾಣಿಗ’ ‘ಯಕ್ಷಗಾನ ಗುರು ಪ್ರಾಚಾರ್ಯ ನಾರಾಯಣ ಉಪ್ಪುರ’ ಹಾಗೂ ಇತರ ಕೃತಿಗಳು ಪ್ರಕಟವಾಗಿವೆ. ಯಕ್ಷಗಾನದ ಪ್ರಸಂಗಕರ್ತರಾದ ಇವರು ‘ರುರು ಪ್ರಮದ್ವರಾ’ ಪ್ರಕಟಿತ ಕೃತಿ ಮತ್ತು ‘ರಾಜಾ ದ್ರುಪದ’ ಅಪ್ರಕಟಿತ ಕೃತಿಗಳನ್ನು ರಚಿಸಿದ್ದಾರೆ. ಭ್ರಮರ, ಸಿಂಚನ, ಅರಳು, ದೃಷ್ಟಿ, ನುಡಿ ಸೊಡರ್ ಮತ್ತು ಭಾಮಿನಿ ಇತ್ಯಾದಿ ಇವರ ಸಂಪಾದಿತ ಕೃತಿಗಳು. ಹಲವು ಕವಿಗೋಷ್ಠಿಗಳಲ್ಲಿ ಕವನವಾಚನ ಮತ್ತು ಯಕ್ಷಗಾನ, ನಾಟಕ, ಸಂಗೀತ, ನಾಟ್ಯ ಕಲೆಗಳ ಬಗ್ಗೆ ವಿಚಾರ ಸಂಕಿರಣ ಹಾಗೂ ಕಮ್ಮಟ ಸಮ್ಮೇಳನಗಳಲ್ಲಿ ವಿಚಾರ ಮಂಡನೆ ಮಾಡಿದ್ದಾರೆ. ಮುಖವಾಡ ರಚನೆ ಮತ್ತು ತರಬೇತಿ ಶಿಬಿರ, ಯಕ್ಷಗಾನ ಮತ್ತು ನಾಟಕಗಳಿಗೆ ಪ್ರಸಾದನ, ಪರಿಣಾಮಕಾರಿ ಭಾಷಣ ಮತ್ತು ಸಂವಹನ ಕಲೆಯ ಕುರಿತಂತೆ ತರಬೇತಿ ಕಮ್ಮಟ ನಡೆಸಿದ್ದಾರೆ. ವಿವಿಧ ಶೈಕ್ಷಣಿಕ ಸಂಸ್ಥೆಗಳಲ್ಲಿ ಸಾಹಿತ್ಯ, ಕಲೆ, ಜೀವನ ಮೌಲ್ಯ, ಸಂವಹನ ಕೌಶಲ್ಯಗಳ ಕುರಿತಂತೆ ಉಪನ್ಯಾಸ ಮಾಡಿರುವ ಸುಜಯೀಂದ್ರ ಹಂದೆಯವರು ತಮ್ಮ ವಿದ್ಯಾರ್ಥಿಗಳ ಕಲಾಸಕ್ತಿಯನ್ನು ಪೋಷಿಸುತ್ತಲೇ ಬಂದಿದ್ದಾರೆ. ಪ್ರತಿ ವರ್ಷ ಕಾಲೇಜಿನಲ್ಲಿ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಯಕ್ಷಗಾನ ತರಬೇತಿ ಮತ್ತು ಪ್ರದರ್ಶನವನ್ನು ಆಯೋಜಿಸುವ ಇವರು ತರಗತಿಯ ನಂತರದ ಅವಧಿಯಲ್ಲಿ ಯಕ್ಷಗಾನ ಅಭ್ಯಾಸವನ್ನು ನೀಡುತ್ತಾರೆ. ವಿದ್ಯಾರ್ಥಿಗಳಲ್ಲಿ ಅಡಗಿರುವ ಸುಪ್ತ ಆಸಕ್ತಿಗಳನ್ನು ಬೆಳಕಾಗಿಸಿ, ಮಕ್ಕಳ ಅಭಿರುಚಿಯನ್ನು ಬಲವಾಗಿಸುವಲ್ಲಿ ಶ್ರಮವಹಿಸುತ್ತಿರುವ ಅಪೂರ್ವ ಉಪನ್ಯಾಸಕ ಶ್ರೀ ಸುಜಯೀಂದ್ರ ಹಂದೆಯವರು. ತಮ್ಮ ಪತ್ನಿ ವಿನಿತಾ ಹಾಗೂ ಪುತ್ರಿ ಕಾವ್ಯಳ ಜೊತೆಗೂಡಿ ಹುಟ್ಟುಹಾಕಿದ ಸಾಂಸ್ಕೃತಿಕ ಸಂಸ್ಥೆ ‘ಸುವಿಕಾ’ ಹಲವಾರು ವಿಭಿನ್ನ-ವಿಶಿಷ್ಟ ಪ್ರಯೋಗಗಳನ್ನು ಸಮಾಜಕ್ಕೆ ಅರ್ಪಿಸುತ್ತಾ ಬಂದಿದೆ. ಇವರ ಕಲಾ ಸೇವೆ, ಸಾಹಿತ್ಯ ಕೃಷಿ, ಶೈಕ್ಷಣಿಕ ಕೈಂಕರ್ಯಗಳಿಗೆ ಸಂದ ಪ್ರಶಸ್ತಿ ಪುರಸ್ಕಾರಗಳು ಹಲವಾರು.
ಅದರಲ್ಲಿ ಮುಖ್ಯವಾಗಿ ಬೆಹರಿನ್ ಮತ್ತು ಇಂಗ್ಲೆಂಡಿನ ಮ್ಯಾಂಚೆಸ್ಟರ್ ಕನ್ನಡ ಸಂಘದಿಂದ “ಬಾಲ ಕಲಾವಿದ ಪುರಸ್ಕಾರ”, ಕುವೈಟ್ ತುಳು ಕೂಟದಿಂದ “ಕಲಾ ಗೌರವ ಪುರಸ್ಕಾರ”, ದೆಹಲಿ ಕನ್ನಡ ಸಂಘದಿಂದ ಪರಸ್ಕಾರ, ಮುಂಬೈ ಕನ್ನಡ ಸಂಘದಿಂದ ‘ಯುವ ಕವಿ ಪ್ರಶಸ್ತಿ’, ರೋಟರಿ ಕುಂದಾಪುರದವರಿಂದ ‘ಜಿಲ್ಲಾ ಅತ್ಯುತ್ತಮ ಯಕ್ಷ ಪುರುಷ ವೇಷ ಪ್ರಶಸ್ತಿ’, ಚೆನೈ, ಹೈದರಾಬಾದ್, ತ್ರಿವೆಂಡ್ರಮ್ ಕನ್ನಡ ಸಂಘದವರಿಂದ ಗೌರವ ಪುರಸ್ಕಾರಗಳು, ಮಂಗಳೂರು ಕಲ್ಕೂರ ಪ್ರತಿಷ್ಠಾನ ವತಿಯಿಂದ ‘ಕಲಾ ಗೌರವ ಪ್ರಶಸ್ತಿ’, ‘ಮಯ್ಯಾಸ್’ ಡಾ. ಸದಾನಂದ ಮಯ್ಯ ಕಲಾ ಪುರಸ್ಕಾರ, ಅಂಬಲಪಾಡಿ ಯಕ್ಷಗಾನ ಸಂಘದಿಂದ ಅರುವತ್ತರ ಸಂಭ್ರಮದಲ್ಲಿ ‘ಉತ್ತಮ ಹವ್ಯಾಸಿ ಕಲಾವಿದ’ನೆಂಬ ಗೌರವ ಪುರಸ್ಕಾರ, ಕೋಟ ಶಿವರಾಮ ಕಾರಂತ ಪ್ರತಿಷ್ಠಾನ ಕಾರಂತ ಟ್ರಸ್ಟ್ ಕೋಟ ಪಂಚಾಯತ್ ವತಿಯಿಂದ ‘ಕೋಟ ವೈಕುಂಠ ಯಕ್ಷ ಸೌರಭ ಪುರಸ್ಕಾರ’, ಕೂಟ ಮಹಾ ಜಗತ್ತು ಸಾಲಿಗ್ರಾಮ ಇವರಿಂದ ಗೌರವ ಪುರಸ್ಕಾರ, ಸ್ಥಳೀಯ ಸಂಘ-ಸಂಸ್ಥೆಗಳು ಸಾಕಷ್ಟು ಕಲಾ-ಸಾಹಿತ್ಯ ಗೌರವ ಸನ್ಮಾನಗಳನ್ನು ನೀಡಿ ಗೌರವಿಸಿದೆ.
ಹೀಗೆ ವೃತ್ತಿಯಲ್ಲಿ ಉಪನ್ಯಾಸಕನಾಗಿ ಪ್ರವೃತ್ತಿಯಲ್ಲಿ ಅಪ್ಪಟ ಪಾರಂಪರಿಕ ಕಲಾವಿದನಾಗಿ, ಯಕ್ಷ ಗುರುವಾಗಿ, ನಿರ್ದೇಶಕನಾಗಿ, ಭಾಗವತನಾಗಿ, ಗಮಕ ಗಾಯಕನಾಗಿ, ಸಂಘಟಕನಾಗಿ, ಸಾಹಿತಿಯಾಗಿ, ನಟನಾಗಿ, ವಾಗ್ಮಿಯಾಗಿ, ಪ್ರೀತಿಯ ಸ್ನೇಹಿತನಾಗಿ, ಒಲವಿನ ಕೌಟುಂಬಿಕ ಬಂಧುವಾಗಿ ಸುಜಯೀಂದ್ರ ಹಂದೆಯವರು ಏಕಮೇವ ಅದ್ವಿತೀಯ ವ್ಯಕ್ತಿತ್ವ. ಇವರ ಕಲಾಕ್ಷೇತ್ರದ ಕೈಂಕರ್ಯ ಹೀಗೆ ಮುಂದುವರಿಯುತ್ತಿರಲಿ. ಶೈಕ್ಷಣಿಕ ಸೇವೆ ನಿರಂತರವಾಗಿರಲಿ ಎಂದು ರೂವಾರಿ ತುಂಬು ಮನದಿಂದ ಹಾರೈಸುತ್ತದೆ.
12 Comments
Very nicely covered all aspects of his career
Abhinandanegalu sir. Namma hemme Neevu. 🙏
ಹಂದೆಯವರ ಕಲಆಕಐಂಕರ್ಯವಐಭವಓಪಏತವಆಗಇ ನಿರಂತರ ವಿಜೃಂಭಿಸಿ ಎಂದು ನಾವು ಹಾರೈಸುತ್ತೇವೆ.ರೂವಾರಿಗೂ ಶುಭಾಶಯಗಳು.
ಸಹೃದಯೀ ಸಹೋದ್ಯೋಗಿಗೆ ಶುಭಾಶಯಗಳು 💐
‘ಆತ್ಮತೃಪ್ತಿಯೊಂದಿಗೆ ಸಮಾಜವನ್ನೂ ಸಂತೃಪ್ತವಾಗಿಡುವ ‘ ತಮ್ಮ ಕಲೋಪಾಸನೆಯು ಅಜರಾಮರವಾಗಲಿ…..🌹🙏💐📚📚
ಎಳವೆಯಿಂದಲೂ ಸಾಕಷ್ಟು ತಿದ್ದಿ ತೀಡಿ ಬೆಳೆಸಿದ ಮಗು ಸುಜಿಯೇಂದ್ರ. ತಂದೆಪ್ರಖ್ಯಾತ ಹಿಂದಿ ಅಧ್ಯಾಪಕರು. ತಾಯಿ ಉತ್ತಮ ಗೃಹಿಣಿ ಮತ್ತು ಸಾಹಿತ್ಯ ಪೋಷಕರು. ಅಕ್ಕತಂಗಿಯರು ಸಮಾಜದಲ್ಲಿ ಸಾಕಷ್ಟು ಹೆಸರುಗಳಿಸಿದವರು. ಮನೆತನ ಅತ್ಯಂತ ಉತ್ತಮ ಸಂಸ್ಕತಿ ಯನ್ನು ಒಳಗೊಂಡದ್ದು. ಇಂತಹ ಸನ್ನಿವೇಶದಲ್ಲಿ ಬೆಳೆದ ಸುಜೀಂದ್ರ ಸಾಹಿತ್ಯ ಮತ್ತು ಸಮಾಜದ ಸೇವೆಗಾಗಿ ತನ್ನನ್ನು ಮುಡಿಪಾಗಿರಿಸಿಕೊಂಡಿದ್ದಾನೆ. ಮೊದಲ ನೋಟದಲ್ಲಿಯೇ ಯಾರನ್ನಾದರೂ ವಿಶೇಷವಾಗಿ ಮಂತ್ರ ಮುಗ್ಧಗೊಳಿಸುವ ಪ್ರತಿಭೆ ಇವನಿಗಿದೆ. ವಿವೇಕ ಕಾಲೇಜಿನ ನಿವೃತ್ತ ಉಪನ್ಯಾಸಕನಾಗಿ ಈತನಿಗೆ ನಿರಂತರ ಯಶಸ್ಸು ಸಿಗುತ್ತಿರಲಿ ಎಂದು ಮನತುಂಬಿ ಹಾರೈಸುತ್ತಿದ್ದೇನೆ.♥️
ಖ್ಯಾತ ಪಟೇಲರ ಮನೆತನಕ್ಕೆ ನೀವು ಮುಕುಟ ಮಣಿ. 🙏🏽
ಅಭಿನಂದನೆಗಳು 👏👏🙏🏽.
ನೀವು ಇನ್ನೂ ಉತ್ತುಂಗಕ್ಕೆರಲೀ ಅಂತ ದೇವರಲ್ಲಿ ನನ್ನ ಪ್ರಾರ್ಥನೆ 🙏🏽
ಹೆಮ್ಮೆಯ ತಮ್ಮನ ಸವಿಸ್ತಾರ ಪರಿಚಯ, ತುಂಬಾ ಚೆನ್ನಾಗಿ ಮೂಡಿಬಂದಿದೆ ಮೇಡಂ.
ಉಪನ್ಯಾಸಕ, ಕಲಾವಿದ, ಸಾಹಿತಿ, ನಟ……….. ಪ್ರತಿಭಾನ್ವಿತ ಸುಜಯೀಂದ್ರ ಹಂದೆ ಸರ್, ತುಂಬು ಹೃದಯದ ಅಭಿನಂದನೆಗಳು ತಮಗೆ. ಶುಭವಾಗಲಿ
👏🏻👏🏻👏🏻🌹🌹🌹💐💐💐
Congratulations Suji 💐
Congratulation sir 🎉
ಅದ್ವಿತೀಯ,ಅಸಾಧಾರಣ ಪ್ರತಿಭೆಯಾದ ನಿಮ್ಮ ಸಾದನೆ ಇನ್ನೂ ಹೆಚ್ಚಿನ ಸ್ತರದಲ್ಲಿ ಗುರುತಿಸಲ್ಪಡಲಿ ಎಂದು ಹಾರೈಸುತೇನೆ.
ನೀವು ನಮ್ಮ ಹೆಮ್ಮೆ.
ಡಾ.ಉತ್ತಮ ಕುಮಾರ್ ಶೆಟ್ಟಿ
ಕುಂದಾಪುರ.
ಅದ್ವಿತೀಯ,ಅಸಾಧಾರಣ ಪ್ರತಿಭೆಯಾದ ನಿಮ್ಮ ಸಾದನೆ ಇನ್ನೂ ಹೆಚ್ಚಿನ ಸ್ತರದಲ್ಲಿ ಗುರುತಿಸಲ್ಪಡಲಿ ಎಂದು ಹಾರೈಸುತೇನೆ.
ನೀವು ನಮ್ಮ ಹೆಮ್ಮೆ.
ಪದವಿಯಲ್ಲಿ ನನಗಿಂತ ಎರಡು ವರ್ಷ ಕಿರಿಯನಾಗಿರುವ ಸುಜಯಿನ್ದ್ರ ಬೆಳೆದಿರುವ ಎತ್ತರವನ್ನು ಓದಿ ಸಂತೋಷವಾಯಿತು. ಅವರ ಪ್ರದರ್ಶನವನ್ನು ನೋಡುವ ಹಂಬಲವಾಗುತ್ತಿದೆ. ಅವರು ಹೀಗೆ ಬೆಳೆಯುತ್ತ ನಾದ ನುಡಿಯ ಸೇವೆ ಮಾಡುತ್ತಿರಲಿಯೆಂದು ಹಾರೈಸುತ್ತೇನೆ