ಕಾಸರಗೋಡು : ಕಾಸರಗೋಡಿನ ರಂಗ ಚಿನ್ನಾರಿ ಹಾಗೂ ಮಹಿಳಾ ಘಟಕ ನಾರಿ ಚಿನ್ನಾರಿಯ ಸಹಯೋಗದೊಂದಿಗೆ ಆಯೋಜಿಸುವ ವಿನೂತನ ಕಾರ್ಯಕ್ರಮ ‘ಸ್ವರ ಚಿನ್ನಾರಿ’ ಇದರ ಉದ್ಘಾಟನಾ ಸಮಾರಂಭ ಹಾಗೂ ‘ಈ ನೆಲ ಈ ಸ್ವರ’ ಭಾವಗೀತೆ ಗಾಯನ ಕಾರ್ಯಕ್ರಮವು ದಿನಾಂಕ 09-09-2023ರ ಶನಿವಾರದಂದು ಸಂಜೆ ಘಂಟೆ 4.30ಕ್ಕೆ ಕಾಸರಗೋಡಿನ ಪಿಲಿಕುಂಜೆಯ ಮುನ್ಸಿಪಲ್ ಕಾನ್ಸರೆನ್ಸ್ ಹಾಲ್ ನಲ್ಲಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ಖ್ಯಾತ ಕವಿಗಳು ಹಾಗೂ ಸ್ವರಚಿನ್ನಾರಿಯ ಗೌರವಾಧ್ಯಕ್ಷರಾದ ಶ್ರೀ ಕೃಷ್ಣಯ್ಯ ಅನಂತಪುರ ಇವರು ಸ್ವಾಗತ ಹಾಗೂ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದು, ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಪುರಸ್ಕೃತರಾದ ಡಾ. ನಾ.ದಾಮೋದರ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ಗೌರವಾಧ್ಯಕ್ಷರು ಹಾಗೂ ಖ್ಯಾತ ಗಾಯಕರಾದ ವೈ.ಕೆ. ಮುದ್ದುಕೃಷ್ಣ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಖ್ಯಾತ ಚಲನಚಿತ್ರ ನಟರು ಮತ್ತು ಅಂತರಾಷ್ಟ್ರೀಯ ಖ್ಯಾತಿಯ ಮಿಮಿಕ್ರಿ ಕಲಾವಿದರಾದ ಮಿಮಿಕ್ರಿ ದಯಾನಂದ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎಸ್.ವಿ.ಭಟ್ ಹಾಗೂ ಧಾರ್ಮಿಕ ಮುಂದಾಳು ಮತ್ತು ಖ್ಯಾತ ನೇತ್ರ ತಜ್ಞರಾದ ಡಾ. ಅನಂತ ಕಾಮತ್ ಉಪಸ್ಥಿತರಿರುವರು. ಇದೇ ಸಂದರ್ಭದಲ್ಲಿ ವಿಶೇಷ ಆಕರ್ಷಣೆಯಾಗಿ ಮಿಮಿಕ್ರಿ ದಯಾನಂದ್ ಇವರಿಂದ ಮಿಮಿಕ್ರಿ ಕಾರ್ಯಕ್ರಮ ನಡೆಯಲಿದೆ.
ಸಭಾ ಕಾರ್ಯಕ್ರಮದ ಬಳಿಕ ನಾಡಿನ ಖ್ಯಾತ ಸಾಹಿತಿಗಳಾದ ದಿ.ರಾಷ್ಟ್ರಕವಿ ಗೋವಿ೦ದ ಪೈ, ದಿ. ಕಯ್ಯಾರ ಕಿನ್ನಣ್ಣ ರೈ, ದಿ. ಕೆ.ವಿ ತಿರುಮಲೇಶ, ದಿ.ವೆಂಕಟರಾಜ ಪು೦ಚಿತ್ತಾಯ, ದಿ. ಬಿ ಕೃಷ್ಣ ಪೈ, ಡಾ.ರಮಾನಂದ ಬನಾರಿ, ಡಾ| ನಾ.ದಾಮೋದರ ಶೆಟ್ಟಿ, ಶ್ರೀಕೃಷ್ಣಯ್ಯ ಅನಂತಪುರ, ರಾಧಾಕೃಷ್ಣ ಉಳಿಯತಡ್ಕ, ಡಾ. ಯು.ಮಹೇಶ್ವರಿ, ವಿಜಯಲಕ್ಷ್ಮಿ ಶಾನಭೋಗ್, ಸ್ನೇಹಲತಾ ದಿವಾಕರ್, ಅನ್ನಪೂರ್ಣ ಬೆಜಪ್ಪ, ಸರ್ವಮಂಗಳ ಜಯ ಪುಣಿಂಚಿತ್ತಾಯ, ಸೌಮ್ಯಾ ಪ್ರವೀಣ್ ಇವರು ರಚಿಸಿದ ಹಾಡುಗಳನ್ನು ಗಾಯಕರಾದ ಕಿಶೋರ್ ಪೆರ್ಲ, ರತ್ನಾಕರ್ ಓಡಂಗಲ್ಲು, ಗಣೇಶ್ ನಾಯಕ್, ಪ್ರತಿಜ್ಞಾ ರಂಜಿತ್, ಅಕ್ಷತಾ ಪ್ರಕಾಶ್ ಹಾಗೂ ಬಬಿತಾ ಆಚಾರ್ಯ ಪ್ರಸ್ತುತಪಡಿಸಲಿದ್ದಾರೆ. ವಾದ್ಯ ಸಂಗೀತದಲ್ಲಿ ಪುರುಷೋತ್ತಮ್ ಕೊಪ್ಪಲ್, ಸತ್ಯನಾರಾಯಣ ಐಲಾ, ಗಿರೀಶ್ ಪೆರ್ಲ, ಪ್ರಭಾಕರ ಮಲ್ಲ ಹಾಗೂ ಶರತ್ ಪೆರ್ಲ ಸಹಕರಿಸಲಿದ್ದಾರೆ.
ಸ್ವರ ಚಿನ್ನಾರಿ :
ಕಾಸರಗೋಡಿನ ಸಾಂಸ್ಕೃತಿಕ ಪರಂಪರೆ ಬಹಳ ದೊಡ್ಡದು. ಇದು ಯಕ್ಷಗಾನದಂತಹ ಸವ್ಯಸಾಚಿ ಕಲೆಯನ್ನು ನೆಟ್ಟು ಬೆಳೆಸಿದ ಪಾರ್ತಿಸುಬ್ಬನ ನಾಡು, ಕವಿಗಳು, ಗಾಯಕರು, ವಿದ್ವಾಂಸರು, ಬಹುಮುಖೀ ಕಲಾವಿದರು ಕಟ್ಟಿಬೆಳೆಸಿದ ಕನ್ನಡನಾಡು, ಗತವೈಭವವನ್ನು ಮತ್ತೆ ಪಡೆಯುವ ಉದ್ದೇಶವನ್ನು ಸಾರ್ಥಕಗೊಳಿಸುವ ನಿಟ್ಟಿನಲ್ಲಿ ಹಲಬಗೆಯ ಪ್ರಯತ್ನಗಳು ಈ ಮಣ್ಣಿನಲ್ಲಿ ಆಗುತ್ತಲೇ ಇದೆ.
ಕಳೆದ 17 ವರುಷಗಳಿಂದ ಕಾಸರಗೋಡಿನ ಸಾಹಿತ್ಯಕ ಸಾಂಸ್ಕೃತಿಕ ಸಂಸ್ಥೆ ರಂಗಚಿನ್ನಾರಿ ತನ್ನ ಮಹಿಳಾ ಘಟಕ “ನಾರಿಚಿನ್ನಾರಿ” ಜೊತೆಗೆ ನಿರ೦ತರ ಕಾಯಕದಲ್ಲಿ ತೊಡಗಿದೆ.ಈ ಮಣ್ಣಿನಲ್ಲಿ ಅನೇಕ ಪ್ರತಿಭಾನ್ವಿತ ಗಾಯಕರಿದ್ದಾರೆ, ಹಾಡು ರಚಿಸುವವರಿದ್ದಾರೆ, ವಾದ್ಯ ಸಂಗೀತ ಕಲಾವಿದರಿದ್ದಾರೆ. ಅವರೆಲ್ಲರನ್ನು ಒಂದೆಡೆ ಸೇರಿಸಿ ಸುಗಮ ಸಂಗೀತ ಕ್ಷೇತ್ರಕ್ಕೆ ನಮ್ಮ ಮಣ್ಣಿನ ಕೊಡುಗೆಯನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ರಂಗಚಿನ್ನಾರಿ ಕಂಡುಕೊಂಡ ಹೊಸ ರಹದಾರಿಯೇ “ಸ್ವರಚಿನ್ನಾರಿ”
‘ಈ ನೆಲ ಈ ಸ್ವರ’ದ ಮುಖ್ಯವಾಣಿಯೊಂದು ಕಾಸರಗೋಡಿನ “ಸ್ವರಚಿನ್ನಾರಿ”ಯ ಕನ್ನಡ ಕೊರಳಲ್ಲಿ ಸ್ವರವಾಗಿ ಹೊಮ್ಮಿ ಕನ್ನಡ ವೀಣಾಪಾಣಿಗೆ ಅರ್ಪಣೆಗೊಳ್ಳಲು ಕಾಯುತ್ತಿದೆ. ಕಾಸರಗೋಡಿನ ನೆಲದ ಹಾಡು ಎಲ್ಲೆ ಮೀರಿ ಮೊಳಗಿ, ನಾಡಿನಾದ್ಯಂತ ಪಸರಿಸುವ ಕನಸು ನಮ್ಮದು.