ಬಂಟ್ವಾಳ : ಬಂಟ್ವಾಳ ತಾಲೂಕಿನ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ 2023-24ರ ಅವಧಿಯಲ್ಲಿ ಸಮಿತಿಯ ಜವಾಬ್ದಾರಿ ಘೋಷಣಾ ಕಾರ್ಯಕ್ರಮವು ಕೂಟ ಪ್ರಮುಖ್ ಅಶೋಕಕುಮಾರ ಕಲ್ಯಾಟೆಯವರ ನಿರೂಪಣೆಯಲ್ಲಿ ಕಲ್ಲಡ್ಕ ಪ್ರಭಾಕರ ಭಟ್ಟರಿಂದ ವಿದ್ಯುಕ್ತವಾಗಿ ದಿನಾಂಕ 02-09-2023ರಂದು ಉದ್ಘಾಟಣೆಗೊಂಡಿತು.
ಪ್ರಾರಂಭದಲ್ಲಿ ಕಲ್ಲಡ್ಕ ಶ್ರೀ ರಾಮ ವಿದ್ಯಾಕೇಂದ್ರದ ವಿದ್ಯಾರ್ಥಿ ವಿದ್ಯಾರ್ಥಿನಿಯರಾದ ಕಾರ್ತಿಕ್ (ದ್ವಿತೀಯ ವಾಣಿಜ್ಯ ವಿಭಾಗ), ಸಾತ್ವಿಕ್ (ದ್ವಿತೀಯ ವಾಣಿಜ್ಯ), ಲಿಖಿತ್ ನಾಯಕ್ (ದ್ವಿತೀಯ ವಾಣಿಜ್ಯ), ಚಿನ್ಮಯ್ (ದ್ವಿತೀಯ ವಾಣಿಜ್ಯ), ಕುಮಾರಿ ಪ್ರೇರಣಾ (ಪ್ರಥಮ ವಾಣಿಜ್ಯ), ಹರ್ಷಿತ್ (ಪ್ರಥಮ ವಾಣಿಜ್ಯ), ಭರತನಾಟ್ಯದಲ್ಲಿ ದಾಕ್ಷಾಯಿಣಿ (ದ್ವಿತೀಯ ವಾಣಿಜ್ಯ), ದೀಪ್ತಿ (ದ್ವಿತೀಯ ವಾಣಿಜ್ಯ) ಇವರುಗಳ ಅಭೂತಪೂರ್ವವಾಗಿ ಸೇಕ್ಸೋಫೋನ್ ವಾದನ, ಭರತ ನಾಟ್ಯ ಮತ್ತು ಗೀತ ಗಾಯನ ಪ್ರದರ್ಶಿಸಿದರು. ಈ ಮಧ್ಯೆ ವಿದ್ಯಾರ್ಥಿನಿಯರು ಹಿರಿಯರಿಗೆ ರಕ್ಷಾ ಬಂಧನ ಮಾಡಿ ಸೋದರತೆ ಮೆರೆದರು.
ಭಾರತಾಂಬೆಗೆ ಪುಷ್ಪಾರ್ಚನೆ ಸಹಿತ ಪ್ರಾರ್ಥನೆಯ ನಂತರ ದೀಪ ಬೆಳಗಿ ಸಮಿತಿಗೆ ಚಾಲನೆ ಕೊಟ್ಟ ಡಾ.ಪ್ರಭಾಕರ ಭಟ್ ಅವರು “ಸಾಹಿತ್ಯವು ಬಹಳ ಪುರಾತನವಾಗಿದ್ದು, ಭಾಷೆಗೊಂದು ಚೊಕ್ಕ ಆವರಣ ಕೊಡುವಂಥದ್ದಾಗಿದೆ. ಹಲವು ಪ್ರಕಾರಗಳಲ್ಲಿ ಹಲವು ವಿಚಾರಗಳನ್ನು ಹಲವು ಭಾವಗಳಿಂದ ವ್ಯಕ್ತಪಡಿಸುತ್ತಾ ಜನ ಜೀವನದ ಮೇಲೆ ಬೆಳಕು ಚೆಲ್ಲುವ ಸಾಮರ್ಥ್ಯ ಸಾಹಿತ್ಯಕ್ಕೆ ಇದೆ. ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು ಅಖಂಡ ಹಿಂದೂಸ್ಥಾನದ ಸಕಲ ಭಾಷಿಗರನ್ನು ಒಳಗೊಂಡಿದ್ದು, ಕೇವಲ ಕನ್ನಡಕ್ಕೇ ಸೀಮಿತವಾಗಿಲ್ಲ. ಈ ನಿಟ್ಟಿನತ್ತ ಪರಿಷತ್ತು ಭಾಷಾ ಸಂಸ್ಕಾರಕ್ಕೆ ಕೊಡುಗೆಯಾಗಲಿ. ಬಂಟ್ವಾಳ ತಾಲೂಕಿನ ಸಮಿತಿಯು ಸಹ ದ್ವಿತೀಯ ಬಾರಿಗೆ ಬಂಟ್ವಾಳ ತಾಲೂಕಿನವರೇ ಆದ ಡಾ.ಸುರೇಶ ನೆಗಳಗುಳಿಯವರ ಸಾರಥ್ಯದಲ್ಲಿ ಚೆನ್ನಾಗಿ ಕೆಲಸ ಮಾಡಲು ಎಲ್ಲರೂ ಸಹಕರಿಸಲು” ಕರೆಯಿತ್ತರು.
ಮಂಗಳೂರು ವಿಭಾಗ ಮುಖ್ಯಸ್ಥ ಸುಂದರ ಶೆಟ್ಟಿಯವರಿಂದ ಆಶಯ ಭಾಷಣ ಮತ್ತು ನೂತನ ಸಮಿತಿಯ ಅಧ್ಯಕ್ಷರಾಗಿ ನೇಮಕಗೊಂಡ ಡಾ ಸುರೇಶ ನೆಗಳಗುಳಿ, ಉಪಾಧ್ಯಕ್ಷರು – ಈಶ್ವರ ಪ್ರಸಾದ್, ಕಾರ್ಯದರ್ಶಿ – ಚೇತನ್ ಮುಂಡಾಜೆ, ಜೊತೆ ಕಾರ್ಯದರ್ಶಿ – ಸೀತಾ ಲಕ್ಷ್ಮೀ ವರ್ಮಾ, ಕೋಶಾಧಿಕಾರಿ – ಪ್ರಶಾಂತ್ ಕಡ್ಯ, ಕೂಟ ಪ್ರಮುಖ್ – ಅಶೋಕ ಕುಮಾರ್ ಕಲ್ಯಾಟೆ, ಮಾಧ್ಯಮ ಪ್ರಮುಖ್ – ಚಿನ್ನಪ್ಪ ಎಮ್. ಮತ್ತು ಸದಸ್ಯರಾದ ಉದಯ ಸಂತೋಷ್, ಬಾಲಕೃಷ್ಣ ಕೇಪುಳು, ರಮೇಶ್ ಬಾಯಾರ್, ಜಯರಾಮ ಪಡ್ರೆ, ಕುಮಾರಸ್ವಾಮಿ ಕನ್ಯಾನ, ಚಂದ್ರಶೇಖರ ಕೈಯಾಬೆ, ರಶ್ಮಿತಾ ಸುರೇಶ ಜೋಗಿಬೆಟ್ಟು, ಚೈತನ್ಯ ಪ್ರಕಾಶ್ ಕೆದಿಲ, ಗೋವಿಂದ ನಾರಾಯಣ ಇವರುಗಳಿಗೆ ನಾಮ ಘೋಷದ ಜೊತೆಗೆ ಶಾಲು, ಅಭಿನಂದನಾ ಪತ್ರ, ಪುಸ್ತಕ ಮತ್ತು ಹಾರ ಸಮರ್ಪಿತವಾಯಿತು. ಅವರು ಪರಿಷತ್ತಿನ ಧ್ಯೇಯೋದ್ದೇಶಗಳ ದಿಕ್ಸೂಚಿ ಭಾಷಣ ಮಾಡಿದರು.
ಮುಖ್ಯ ಅಭ್ಯಾಗತ ದಕ್ಷಿಣ ಕನ್ನಡ ಜಿಲ್ಲಾ ಪರಿಷತ್ತಿನ ಅಧ್ಯಕ್ಷ ಶ್ರೀ ಪಿ.ಬಿ.ಹರೀಶರವರು ಶುಭಾಶಂಸನೆ ಮಾಡಿದರು. ಸಭಾಧ್ಯಕ್ಷರಾಗಿದ್ದ ಡಾ. ಸುರೇಶ ನೆಗಳಗುಳಿಯವರು ಸರ್ವರ ಸಹಕಾರ ಕೋರುತ್ತಾ ಅದ್ವಿತೀಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಆಶಯ ವ್ಯಕ್ತಪಡಿಸುತ್ತಾ, ದ್ವಿತೀಯ ಬಾರಿಗೆ ಪರಿಷತ್ತು ಅಧ್ಯಕ್ಷತೆ ಕೊಡ ಮಾಡಿದ ಬಗ್ಗೆ ಜವಾಬ್ದಾರಿ ಮರೆಯದೇ ಇರಬೇಕಾದ ಅಗತ್ಯವನ್ನು ಸ್ಮರಿಸಿಕೊಂಡರು.
ಬಾಲಕೃಷ್ಣ ಕೇಪುಳು ಅವರಿಂದ ಸ್ವಾಗತ ಹಾಗೂ ಪ್ರಶಾಂತ ಕಡ್ಯರಿಂದ ಧನ್ಯವಾದ ಸಮರ್ಪಣೆಯಾಯಿತು. ಬಳಿಕ ರೇಮಂಡ್ ಡಿಕುನ್ಹರವರ ಅಧ್ಯಕ್ಷತೆಯಲ್ಲಿ ವಿದ್ಯಾರ್ಥಿಗಳಿಂದ ‘ಕವಿಗೋಷ್ಠಿ’ ನಡೆಯಿತು. ಹಲವಾರು ವಿದ್ಯಾರ್ಥಿ ವಿದ್ಯಾರ್ಥಿನಿಯರು ಸ್ವರಚಿತ ಕವನವಾಚನ, ಗಾಯನ ಮಾಡಿದರು. ರೇಮಂಡ್ ಡಿಕುನ್ಹರವರು ವಿದ್ಯಾರ್ಥಿ ದೆಸೆಯಲ್ಲಿ ಮೆದುಳಿನ ಪಕ್ವತೆಗೆ ಈ ರೀತಿಯ ಗೋಷ್ಠಿಗಳಲ್ಲಿ ಸಕ್ರಿಯರಾಗುವುದು ಉತ್ತಮ ಬೆಳವಣಿಗೆ ಎನ್ನುತ್ತಾ ಉಪಮೆ, ಪ್ರತಿಮೆಗಳು ಸಾಹಿತ್ಯದ ತಿರುಳುಗಳಾಗಿದ್ದು ಹರಿಶ್ಚಂದ್ರ ಕಾವ್ಯದ ಲಲನೆ ಮೂಗಿನೊಳುಸುರನಳ್ಳೆಯೊಳು ಎಂಬ ಭಾಗದ ಉದಾಹರಣೆ ನೀಡಿದರು. ಅನಂತರ ಪರಿಷತ್ತಿನ ಗೌರವ ಸಲಹೆಗಾರ ಜಯಾನಂದ ಪೆರಾಜೆಯವರ ಅಧ್ಯಕ್ಷತೆಯಲ್ಲಿ ರಶ್ಮಿತಾ ಸುರೇಶ್ ಜೋಗಿಬೆಟ್ಟು ಅವರ ನಿರೂಪಣೆಯಲ್ಲಿ ಅಂತಾರಾಜ್ಯ ಮಟ್ಟದ ಹಿರಿಯರ ಕವಿಗೋಷ್ಠಿ ನಡೆಯಿತು.
ಹಿರಿಯರ ಅಂತಾರಾಜ್ಯ ಕವಿಗೋಷ್ಠಿಯಲ್ಲಿ ಚೈತನ್ಯ ಪ್ರಕಾಶ್ ಕೆದಿಲ, ಕೊಳಚಪ್ಪೆ ಸತ್ಯವತಿ ಭಟ್, ಸೌಮ್ಯ ರಾಮ್ ಕಲ್ಲಡ್ಕ, ನಾರಾಯಣ ನಾಯ್ಕ ಕುದುಕೋಳಿ, ಮಾನಸ ವಿಜಯ್ ಕೈಂತಜೆ, ಐಡಾ ಲೋಬೊ, ಪ್ರಶಾಂತ್ ಕಡ್ಯ, ವೀಣಾ ಕಾರಂತ್ ತೀರ್ಥಹಳ್ಳಿ, ಕೊಳಚಪ್ಪೆ ಗೋವಿಂದ ಭಟ್, ಅಶೋಕ ಎನ್. ಕಡೆಶಿವಾಲಯ, ಬಾಲಕೃಷ್ಣ ಕೇಪುಳು, ಸೀತಾಲಕ್ಷ್ಮೀ ವರ್ಮ ವಿಟ್ಲ, ಪೂವಪ್ಪ ನೇರಳಕಟ್ಟೆ, ಚೇತನ್ ಮುಂಡಾಜೆ, ರೇಮಂಡ್ ಡಿಕೂನ ತಾಕೋಡೆ, ರಶ್ಮಿತಾ ಸುರೇಶ್ ಜೋಗಿಬೆಟ್ಟು ಮತ್ತು ಸಮಿತಾ ಶೆಟ್ಟಿ ಭಾಗವಹಿಸಿ ಸ್ವರಚಿತ ಕವನ ವಾಚನ ಮಾಡಿದರು.
ಜಯಾನಂದ ಪೆರಾಜೆಯವರು ಅಧ್ಯಕ್ಷರ ಭಾಷಣ ಮಾಡುತ್ತಾ “ನೆರೆಕರೆಯವರು ಮಾತ್ರವಲ್ಲದೆ ದೂರದ ಜಿಲ್ಲೆ, ಕೇರಳ ರಾಜ್ಯದಿಂದ ಸಹ ಆಗಮಿಸಿ ವಾಚಿಸಿದ ಕವಿಗಳು ಅಭಿನಂದನೀಯರು ಮತ್ತು ಇದೊಂದು ಅಂತಾರಾಜ್ಯ ಗೋಷ್ಠಿಯಾಯಿತು ಎನ್ನುತ್ತಾ ವೈವಿಧ್ಯಮಯ ಭಾವಗಳ ಹೂರಣದಿಂದೊಡಗೂಡಿದ ಕಾವ್ಯಗಳು ಇಂದಿಲ್ಲಿ ಪ್ರತಿಧ್ವನಿಸಿದವು” ಎಂದರು. ದ.ಕ ಜಿಲ್ಲಾ ಸಮಿತಿಯ ಕಾರ್ಯದರ್ಶಿ ಶ್ರೀಮತಿ ಪರಿಮಳಾ ಮಹೇಶ್ ಮತ್ತಿತರ ಪರಿಷತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.