ಮಂಗಳೂರು : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟಿನಿಂದ ದಿನಾಂಕ 09-09-2023ರಿಂದ 17-09-2023ರವರೆಗೆ ಯುರೋಪ್ ಯಕ್ಷಗಾನ ಅಭಿಯಾನ ನಡೆಯಲಿದೆ. ಈ ಅಭಿಯಾನದಲ್ಲಿ ತೆಂಕುತಿಟ್ಟಿನ ರಾಜವೇಷ, ಬಣ್ಣದ ವೇಷ, ಪಗಡಿ ವೇಷ, ಸ್ತ್ರೀವೇಷ, ಹಾಸ್ಯ ವೇಷಗಳು ರಾರಾಜಿಸಲಿವೆ. ಯು.ಕೆ., ಜರ್ಮನಿ, ಫ್ರಾನ್ಸ್ ಹಾಗೂ ಸ್ವಿಜರ್ ಲ್ಯಾಂಡ್‌ಗಳಲ್ಲಿ 10 ದಿನಗಳಲ್ಲಿ 7 ಯಕ್ಷಗಾನ ಕಾರ್ಯಕ್ರಮ ಪ್ರದರ್ಶನಗೊಳ್ಳಲಿದೆ ಎಂದು ಫೌಂಡೇಶನ್ ಅಧ್ಯಕ್ಷ, ಭಾಗವತ ಪಟ್ಲ ಸತೀಶ್ ಶೆಟ್ಟಿಯವರು ತಿಳಿಸಿದ್ದಾರೆ.
ಸೆಪ್ಟೆಂಬರ್ 9ರಂದು ಜರ್ಮನಿಯ ಫ್ರಾಂಕ್ ಫರ್ಟ್, 11ರಂದು ಯುಕೆಯ ಮಿಲ್ಟನ್ ಕೇಯ್ಸ್ನ್, 12ರಂದು ಯುಕೆಯ ಬಾಸಿಲ್ಡನ್, 13ರಂದು ಯುಕೆಯ ಸೆಂಟ್ರಲ್ ಲಂಡನ್, 14ರಂದು ಸ್ಲೋಗ್, 16ರಂದು ಫ್ರಾನ್ಸ್ ನ ಪ್ಯಾರಿಸ್, 17ರಂದು ಸ್ವಿಜರ್ ಲ್ಯಾಂಡ್‌ನ ಝರಿಚ್‌ನಲ್ಲಿ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ಒಂದು ಪ್ರಸಂಗ ಪ್ರದರ್ಶನದ ಅವಧಿ ಎರಡರಿಂದ ಎರಡೂವರೆ ಗಂಟೆ ನಿಗದಿಯಾಗಿದೆ. ಹೆಚ್ಚಾಗಿ ‘ಶ್ರೀದೇವಿ ಚರಿತಾಮೃತ’ ಪ್ರಸಂಗದ ಪ್ರದರ್ಶನಕ್ಕೆ ಬೇಡಿಕೆ ಬಂದಿದೆ.
ಈ ತಂಡದಲ್ಲಿ 8 ಮಂದಿ ಕಲಾವಿದರಿದ್ದಾರೆ, ಹಿಮ್ಮೇಳದಲ್ಲಿ ಪಟ್ಲ ಸತೀಶ್ ಶೆಟ್ಟಿ, ಪದ್ಮನಾಭ ಉಪಾಧ್ಯಾಯ, ಚೈತನ್ಯ ಕೃಷ್ಣ ಪದ್ಯಾಣ, ಮುಮ್ಮೇಳದಲ್ಲಿ ಪ್ರೊ. ಎಂ.ಎಲ್. ಸಾಮಗ, ಚಂದ್ರಶೇಖರ ಧರ್ಮಸ್ಥಳ, ಮಹೇಶ ಮಣಿಯಾಣಿ, ಪ್ರಶಾಂತ್ ನೆಲ್ಯಾಡಿ, ಮೋಹನ ಬೆಳ್ಳಿಪ್ಪಾಡಿ ಸಹಕರಿಸಲಿದ್ದಾರೆ. ಈ ಕಲಾವಿದರೆಲ್ಲ ದಿನಾಂಕ 06-09-2023ರಂದು ಮಂಗಳೂರಿನಿಂದ ತೆರಳಿದ್ದಾರೆ.
ಭಾರತದ ಸಾಂಸ್ಕೃತಿಕ ಮಂಡಲಿ ಐ.ಸಿ.ಸಿ.ಆರ್. ಈ ಕಾರ್ಯಕ್ರಮಕ್ಕೆ ಸಾಥ್ ನೀಡುತ್ತಿದೆ. ಭಾರತದ ಸಂಸ್ಕೃತಿಯನ್ನು ವಿದೇಶದಲ್ಲಿ ಪಸರಿಸುವ ಏಕೈಕ ಕೇಂದ್ರ ವಿಶ್ವ ಪ್ರಸಿದ್ಧ ಲಂಡನ್‌ನ ನೆಹರೂ ಕೇಂದ್ರದಲ್ಲಿ ಇದೇ ಮೊದಲ ಬಾರಿಗೆ ತೆಂಕುತಿಟ್ಟು ಯಕ್ಷಗಾನ ಪ್ರದರ್ಶನ ನೀಡುವ ಹೆಗ್ಗಳಿಕೆ ನಮ್ಮದು. ಅಲ್ಲಿ ಕನ್ನಡಿಗರಲ್ಲದೆ, ಕನ್ನಡೇತರರೂ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಯಾವುದೇ ರೀತಿಯ ಭಾಷೆಯ ತೊಡಕು ಉಂಟಾಗದು. ಯಕ್ಷಗಾನ ಪ್ರದರ್ಶನ, ಪ್ರಸಂಗದ ವಿವರವುಳ್ಳ ಸಣ್ಣ ಕರಪತ್ರ ನೀಡಲಾಗುತ್ತದೆ.