ಮಂಗಳೂರು : ಬಂಟರ ಯಾನೆ ನಾಡವರ ಮಾತೃ ಸಂಘ, ಶ್ರೀ ಸಿದ್ಧಿವಿನಾಯಕ ಪ್ರತಿಷ್ಠಾನ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಹಾಗೂ ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳ ಬಂಟರ ಸಂಘಗಳ ಸಹಭಾಗಿತ್ವದಲ್ಲಿ ಗಣೇಶೋತ್ಸವದ ಅಂಗವಾಗಿ ಬಂಟ್ಸ್ ಹಾಸ್ಟೇಲ್ ನ ಓಂಕಾರ ನಗರದಲ್ಲಿ ಆಯೋಜಿಸಿದ್ದ ‘ಬಂಟ ಕಲಾ ಸಂಭ್ರಮ’ ಭಾರತ ದರ್ಶನ ಕಲ್ಪನೆಯ ಸ್ಪರ್ಧೆಯು ದಿನಾಂಕ 03-09-2023ರಂದು ನಡೆಯಿತು.
ಶ್ರೀಮತಿ ರಾಜೇಶ್ವರಿ ಡಿ. ಶೆಟ್ಟಿ ನಿರ್ದೇಶನದಲ್ಲಿ ಸುರತ್ಕಲ್ ಬಂಟರ ಸಂಘ ಪ್ರದರ್ಶಿಸಿದ ‘ಭಾರತ ದರ್ಶನ’ ಪ್ರಹಸನವು ಪ್ರಥಮ ಸ್ಥಾನದೊಂದಿಗೆ ರೂ.1 ಲಕ್ಷ ಬಹುಮಾನ ಪಡೆದುಕೊಂಡಿತು. ಬಂಟರ ಯಾನೆ ನಾಡವರ ಮಾತೃ ಸಂಘ ಹಾಗೂ ಸಿದ್ಧಿವಿನಾಯಕ ಪ್ರತಿಷ್ಠಾನದ ಟ್ರಸ್ಟಿ ಅಜಿತ್ ಕುಮಾರ್ ರೈ ಪ್ರಶಸ್ತಿ ವಿತರಿಸಿದರು. ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಲೋಕಯ್ಯ ಶೆಟ್ಟಿ ಮುಂಚೂರು, ಕಾರ್ಯದರ್ಶಿ ಲೀಲಾಧರ ಶೆಟ್ಟಿ ಮತ್ತು ನಿಕಟಪೂರ್ವ ಅಧ್ಯಕ್ಷ ಸುಧಾಕರ ಪೂಂಜ ಹಾಗೂ ಪದಾಧಿಕಾರಿಗಳು ಪ್ರಶಸ್ತಿಯನ್ನು ಸ್ವೀಕರಿಸಿದರು.
ಸಮಾರಂಭದಲ್ಲಿ ಮಾತೃ ಸಂಘದ ಉಪಾಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಕೆ.ಎಂ. ಶೆಟ್ಟಿ, ಕೋಶಾಧಿಕಾರಿ ರಾಮಮೋಹನ್ ರೈ, ನಿಟ್ಟೆಗುತ್ತು ರವಿರಾಜ ಶೆಟ್ಟಿ, ಭಂಡಾರಿ ಬಿಲ್ಡರ್ಸ್ ಮಾಲಕ ಲಕ್ಷ್ಮೀಶ ಭಂಡಾರಿ, ಶ್ರೀ ಡೆವಲಪರ್ಸ್ ಸಂಸ್ಥೆಯ ಮಾಲಕ ಗಿರೀಶ್ ಶೆಟ್ಟಿ ಕಟೀಲು, ಗಣೇಶೋತ್ಸವ ಸಮಿತಿಯ ಜಿಲ್ಲಾ ಸಂಚಾಲಕ ನಾಗರಾಜ ಶೆಟ್ಟಿ, ಮುನಿಯಾಲ್ ಉದಯಕುಮಾರ್ ಶೆಟ್ಟಿ, ಸುಧಾಕರ ಪೂಂಜ, ಆಶಾಜ್ಯೋತಿ ರೈ ಮೊದಲಾದವರು ಉಪಸ್ಥಿತರಿದ್ದರು.
ಮೈಮ್ ರಮೇಶ್ ರಂಗಾಯಣ, ಸುರೇಂದ್ರನಾಥ ಶೆಟ್ಟಿ ಮಾರ್ನಾಡ್ ಹಾಗೂ ಅವಿನಾಶ್ ಕಾಮತ್ ತೀರ್ಪುಗಾರರಾಗಿದ್ದರು. ಕಿರಣ್ ಪಕ್ಕಳ ಮತ್ತು ಸತೀಶ್ ಶೆಟ್ಟಿ ಕೊಡಿಯಾಲ್ ಬೈಲ್ ನಿರ್ವಹಿಸಿದರು.
ಸ್ಪರ್ಧೆಯಲ್ಲಿ ಸುರತ್ಕಲ್ ಬಂಟರ ಸಂಘ ಪ್ರಥಮ, ಬೆಳ್ತಂಗಡಿ ಬಂಟರ ಸಂಘ ದ್ವಿತೀಯ ಹಾಗೂ ಉಳ್ಳಾಲ ಬಂಟರ ಸಂಘ ತೃತೀಯ ಪ್ರಶಸ್ತಿಯನ್ನು ಪಡೆಯಿತು. ಸುರತ್ಕಲ್ ಬಂಟರ ಸಂಘ ತುಂಗಭದ್ರಾ ಹೆಸರಿನಲ್ಲಿ ಪ್ರಸ್ತುತ ಪಡಿಸಿದ ಕಲಾಹಂದರದಲ್ಲಿ ಭರತರಾಜನಿಂದ ನಮ್ಮ ರಾಷ್ಟ್ರ ಭಾರತವಾಯಿತು ಎಂಬ ನೃತ್ಯದ ಮೂಲಕ ಪ್ರಾರಂಭಗೊಂಡು, ದೇಶದಲ್ಲಿರುವ ಬುಡಕಟ್ಟು ಸಮುದಾಯಗಳನ್ನು ಮುಖ್ಯ ವಾಹಿನಿಗೆ ತರುವ ಜವಾಬ್ದಾರಿಯನ್ನು ನಾಗರಿಕ ಸಮಾಜ ಹೊರಬೇಕು, ಜೊತೆಗೆ ಆಧುನಿಕತೆಯ ಸೋಗಿನಲ್ಲಿ ಬುಡಕಟ್ಟು ಜನಾಂಗದವರ ಸಾಂಸ್ಕೃತಿಕ ವೈಭವ ನಶಿಸಿ ಹೋಗಬಾರದು ಎಂಬ ಸಂದೇಶವನ್ನು ಸಮಾಜಕ್ಕೆ ನೀಡಲಾಯಿತು. ಇಪ್ಪತ್ತು ನಿಮಿಷ ಅವಧಿಯ ‘ಭಾರತ ದರ್ಶನ’ದಲ್ಲಿ ಎಪ್ಪತ್ತು ಮಂದಿ ಮಕ್ಕಳೂ ಸೇರಿ ಒಟ್ಟು 205 ಕಲಾವಿದರು ಭಾಗವಹಿಸಿದ್ದರು.