ಉಡುಪಿ : ಉಡುಪಿ ಮತ್ತು ಶಾರದಾ ಪ್ರತಿಷ್ಠಾನ ಮಾಗಡಿ ಇವರ ಸಂಯುಕ್ತ ಆಶ್ರಯದಲ್ಲಿ ಕೃತಿ ಬಿಡುಗಡೆ ಸಮಾರಂಭವು ದಿನಾಂಕ 03-09-2023ರಂದು ಉಡುಪಿಯ ಎಂ.ಜಿ.ಎಂ ಕಾಲೇಜಿನ ಗೀತಾಂಜಲಿ ಸಭಾಭವನದಲ್ಲಿ ನಡೆಯಿತು.
ಡಾ.ಬೇಲೂರು ರಘುನಂದನ್ ಇವರ ‘ರಕ್ತವರ್ಣೆ’ ಕನ್ನಡ ನಾಟಕವನ್ನು ಕೊಂಕಣಿಯ ಕವಿ ಸಾಹಿತಿ ವೆಂಕಟೇಶ ನಾಯಕ್ ಇವರು ಕೊಂಕಣಿಗೆ ಅನುವಾದಿಸಿದ ‘ರಕ್ತವರ್ಣೆ’ ಮತ್ತು ಹಿರಿಯ ಸಾಹಿತಿ ಡಾ.ನಾ.ಮೊಗಸಾಲೆ ಇವರ ‘ಧರ್ಮಯುದ್ಧ’ ಕಾದಂಬರಿಯನ್ನು ಲೇಖಕ ಅಂಶುಮಾಲಿ ನಾಟಕಕ್ಕೆ ರೂಪಾಂತರಗೊಳಿಸಿದ್ದು, ಈ ಕೃತಿಗಳನ್ನು ಡಾ.ನಾ.ಮೊಗಸಾಲೆ ದಂಪತಿಗಳು ಲೋಕಾರ್ಪಣೆಗೊಳಿಸಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಡಾ.ಬೇಲೂರು ರಘುನಂದನ್ “ಇಂದಿನ ಯುವ ಜನತೆ ತ್ವರಿತ ಗತಿಯ ಆಕಾಂಕ್ಷೆಗಳ ಹಿಂದೆ ಬಿದ್ದು ಸಾಮಾಜಿಕ ಜಾಲತಾಣಗಳ ಮೂಲಕ ಪ್ರಸಿದ್ದಿ ಪಡೆಯಲು ಹಂಬಲಿಸುವುದನ್ನು ಕಾಣಬಹುದು. ಅದು ತಪ್ಪೇನು ಅಲ್ಲ ಆದರೆ ಸಾಹಿತ್ಯ ಪರಂಪರೆಯಲ್ಲಿ ಕಾಯುವುದು ಎಂದರೆ ತಪಸ್ಸಿನಂತೆ. ತನ್ಮೂಲಕ ಕೃತಿ ಲೋಕಾರ್ಪಣೆ ಯಾಗುವುದೇ ಯಶಸ್ಸು” ಎಂದು ಹೇಳಿದರು. ಶಾರದಾ ಪ್ರತಿಷ್ಠಾನದ ಪ್ರಕಾಶಕರಾದ ಗಿರೀಶ್ ಮಾಗಡಿ ಉಪಸ್ಥಿತರಿದ್ದರು.
ಸಂತ ಅಲೋಶಿಯಸ್ ಕಾಲೇಜಿನ ಕೊಂಕಣಿ ವಿಭಾಗದ ಮುಖಸ್ಥರಾಗಿರುವ ಶ್ರೀಮತಿ ಫ್ಲೋರಾ ಕ್ಯಾಸ್ತೆಲಿನೊ ಕೃತಿ ಪರಿಚಯ ಮಾಡಿದರು. ಎಂ.ಜಿ.ಎಂ ಕಾಲೇಜಿನ ಪ್ರಾಂಶುಪಾಲರಾದ ಲಕ್ಷ್ಮೀ ನಾರಾಯಣ ಕಾರಂತ ಅಧ್ಯಕ್ಷತೆ ವಹಿಸಿದ್ದರು. ಮಲ್ಲಿಕಾ ಕಾರ್ಯಕ್ರಮ ನಿರೂಪಿಸಿ, ವಿನಾಯಕ ಪೈ ಧನ್ಯವಾದ ಸಮರ್ಪಿಸಿದರು.