ಸುರತ್ಕಲ್ : ಮಣಿ ಕೃಷ್ಣಸ್ವಾಮಿ ಅಕಾಡಮಿ (ರಿ.) ಆಯೋಜಿಸುವ ಕರ್ನಾಟಕ ಶಾಸ್ತ್ರೀಯ ಸಂಗೀತ ತರಗತಿಗಳ ಉದ್ಘಾಟನಾ ಸಮಾರಂಭವು ದಿನಾಂಕ 17-09-2023ರ ಭಾನುವಾರದಂದು ಸಂಜೆ 6.05ಕ್ಕೆ ಸುರತ್ಕಲ್ಲಿನ ಸಿಟಿ ಗಾರ್ಡನ್ ಕ್ರಾಸ್ ರಸ್ತೆಯಲ್ಲಿರುವ ಭಾಗ್ಯ ರೆಸಿಡೆನ್ಸಿಯಲ್ಲಿ ನಡೆಯಲಿದೆ.
ಆಧ್ಯಾತ್ಮಿಕವಾಗಿ ಅತ್ಯಂತ ಶ್ರೀಮಂತವೆನಿಸಿಕೊಂಡಿರುವ ಭಾರತದ ರಕ್ಷಣೆ ಈ ದೇಶದ ಪ್ರತಿಯೊಬ್ಬ ಪ್ರಜೆಯ ಜವಾಬ್ದಾರಿ ಮತ್ತು ಕರ್ತವ್ಯ. ರಕ್ಷಣೆ ಅನ್ನುವಾಗ ಮೂರು ವಿಷಯಗಳನ್ನು ಉಲ್ಲೇಖಿಸಬಹುದಾಗಿದೆ. ಮೊದಲನೆಯದಾಗಿ ಭೌಗೋಳಿಕವಾದ ಭಾರತದ ಗಡಿಯ ರಕ್ಷಣೆ, ಇದನ್ನು ರಕ್ಷಿಸಿಕೊಂಡು ಬರುತ್ತಿರುವವರು ನಮ್ಮ ವೀರ ಯೋಧರು. ಎರಡನೆಯದು ನಮಗೆಲ್ಲರಿಗೂ ಹೊಟ್ಟೆಗೆ ಹಿಟ್ಟು ಇಕ್ಕುವ ನಮ್ಮ ಹೆಮ್ಮೆಯ ರೈತರು. ಮೂರನೆಯದೇ ನಾವೆಲ್ಲರೂ ಹೆಮ್ಮೆಪಡುವಂತಹ ಭಾರತೀಯ ಕಲೆಗಳು ಮತ್ತು ಈ ಕಲೆಯನ್ನು ಸಾಧನೆಯ ಮೂಲಕ ಮೈಗೂಡಿಸಿಕೊಂಡ ನಮ್ಮ ಗೌರವದ ಕಲಾವಿದರು.
ಪ್ರತಿಯೊಬ್ಬನಿಗೂ ಯೋಧನಾಗುವುದು ಮತ್ತು ರೈತನಾಗುವುದು ಅಸಾಧ್ಯವಾಗಬಹುದು. ಆದರೆ ಚಿತ್ರ, ನೃತ್ಯ, ಸಂಗೀತದಂತಹ ಲಲಿತ ಕಲೆಗಳನ್ನು ಅಭ್ಯಸಿಸಿ ಉತ್ತಮ ಪ್ರಜೆಯಾಗುವುದರ ಜೊತೆಗೆ ಸ್ವಾಸ್ಥ್ಯ ಸಮಾಜವನ್ನು ಕಟ್ಟುವ ಅವಕಾಶ ಕಲಾವಿದನಿಗೆ ಮಾತ್ರ ಲಭ್ಯವಾಗಬಹುದಾದ ಸಂಪತ್ತು. ಇಂತಹ ಅವಕಾಶವನ್ನು ಯುವ ಜನಾಂಗಕ್ಕೆ ನೀಡುವ ಶ್ರೇಷ್ಠ ಉದ್ದೇಶವನ್ನು ಇರಿಸಿಕೊಂಡು ಕರ್ನಾಟಕ ಶಾಸ್ತ್ರೀಯ ಸಂಗೀತ ತರಗತಿಯನ್ನು ಪ್ರಾರಂಭಿಸಲು ನಿಶ್ಚಯಿಸಲಾಗಿದೆ.
ನಿಯಮಗಳು :
ಇದು ತಂಡಗಳಿಗೆ ಕಲಿಸುವ ತರಗತಿ.(group class). ತರಗತಿಗೆ ಸೇರಲು ಇಚ್ಚಿಸುವವರಿಗೆ ಜಾತಿ, ಧರ್ಮ, ಲಿಂಗದ ಭೇದವಿರುವುದಿಲ್ಲ. ಕನಿಷ್ಠ 8 ವರ್ಷ ವಯಸ್ಸಾಗಿರಬೇಕು ಮತ್ತು ವಯಸ್ಸಿಗೆ ಗರಿಷ್ಠ ಮಿತಿ ಇರುವುದಿಲ್ಲ. ವಾರಕ್ಕೊಂದು ತರಗತಿಯು ನಿಗದಿತ ದಿನ ಹಾಗೂ ಸಮಯದಲ್ಲಿ ನಡೆಯಲಿದೆ. ತರಗತಿಯ ಅವಧಿ ಒಂದು ಗಂಟೆ, ಪ್ರತಿಯೊಬ್ಬ ವಿದ್ಯಾರ್ಥಿಗೆ ತಿಂಗಳ ಶುಲ್ಕ ರೂ 500.00. ಒಂದು ಮನೆಯಿಂದ ಒಬ್ಬರಿಗಿಂತ ಹೆಚ್ಚು ವಿದ್ಯಾರ್ಥಿಗಳಿದ್ದಲ್ಲಿ ಶುಲ್ಕದಲ್ಲಿ ರಿಯಾಯಿತಿ ನೀಡಲಾಗುವುದು. ಶುಲ್ಕವನ್ನು ತಿಂಗಳ ಪ್ರಾರಂಭದಲ್ಲಿ ನೀಡಬೇಕು. ಯಾವುದೇ ಕಾರಣದಿಂದ ವಿದ್ಯಾರ್ಥಿ ತರಗತಿಗೆ ಗೈರು ಹಾಜರಾದಲ್ಲಿ ಶುಲ್ಕದಲ್ಲಿ ಯಾವುದೇ ರಿಯಾಯಿತಿ ಇರುವುದಿಲ್ಲ. ವಿದ್ಯಾರ್ಥಿಗಳು ತರಗತಿಯಲ್ಲಿ ಸಮಯಕ್ಕೆ ಮುಂಚಿತವಾಗಿ ಹಾಜರಿರಬೇಕು ಮತ್ತು ತರಗತಿ ಮುಗಿದ ಬಳಿಕವೇ ನಿರ್ಗಮಿಸಬೇಕು. ಯಾವುದೇ ಸ್ಪರ್ಧೆ ಅಥವಾ ಪ್ರದರ್ಶನಗಳಲ್ಲಿ ಭಾಗವಹಿಸಲು ವಿದ್ಯಾರ್ಥಿಗಳಿಗೆ ಸಂಘಟಕರ ಅನುಮತಿ ಬೇಕಾಗಿಲ್ಲ. ವಿದ್ಯಾರ್ಥಿಗಳ ಹೆತ್ತವರಿಗೆ ತರಗತಿಯಲ್ಲಿ ಕುಳಿತುಕೊಳ್ಳುವ ಅವಕಾಶವಿದೆ ಆದರೆ ಅವರ ಉಪಸ್ಥಿತಿ ಯಾವುದೇ ತರಗತಿಗೆ ತೊಂದರೆಯಾಗ ಕೂಡದು. ಕಲಿಸಿಕೊಡಬೇಕಾದ ವಿಷಯ ಸಂಪೂರ್ಣವಾಗಿ ಗುರುಗಳ ಆಯ್ಕೆ ಆಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ 7406043003, 9663698398 ಈ ಸಂಖ್ಯೆಗಳನ್ನು ಸಂಪರ್ಕಿಸಬಹುದು.