ಯಕ್ಷಗಾನ ನಮ್ಮ ಹೆಮ್ಮೆಯ ಸಂಕೇತವಾದ ಒಂದು ಶ್ರೇಷ್ಠ ಕಲೆ. ಅದು ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ಮೇರುಕಲೆ. ಇಂತಹ ಶ್ರೀಮಂತ ಕಲೆಯಲ್ಲಿ ಮಿಂಚುತ್ತಿರುವ ಕಲಾವಿದರು ಮಂಜುನಾಥ ಮೊಗವೀರ ಮತ್ಯಾಡಿ.
ಅಕ್ಕಣಿ ಮೊಗವೀರ ಹಾಗೂ ಸದಿಯ ಮೊಗವೀರ ಮತ್ಯಾಡಿ ಇವರ ಮಗನಾಗಿ 26.01.1978ರಂದು ಜನನ. ಬಿ.ಎ ಪದವಿಯನ್ನು ಪಡೆದಿರುತ್ತಾರೆ. ಯಕ್ಷಗಾನದ ಪ್ರಥಮ ಗುರುಗಳು ಶ್ರೀಯುತ ಸುಬ್ರಾಯ ಮಲ್ಯ ಹಲ್ಲಾಡಿ, ಈಗ ಪೂರ್ಣ ಗುರುಗಳಾಗಿ ತಿದ್ದಿ ತೀಡಿದವರು ಪ್ರಸಾದ್ ಕುಮಾರ್ ಮೊಗೆಬೆಟ್ಟು.
ಚಿಕ್ಕವನಿರುವಾಗ ಊರಿನ ಕಲಾ ಸಂಘ ಅಂಬಾ ಯಕ್ಷಗಾನ ಕಲಾ ಸಂಘ ಇದರ ಪ್ರದರ್ಶನ. ಅದರಲ್ಲಿ ನನ್ನ ನೆಚ್ಚಿನ ಕಲಾವಿದರು ವಾಸುದೇವ ರಾವ್ ಮತ್ಯಾಡಿ. ಇವರ ಅಭಿನಯ, ಕುಣಿತ ಮಾತು ಇದಕ್ಕೆ ತುಂಬಾ ಆಕರ್ಷಿತನಾಗಿ, ಹಾಗೆಯೇ ಅವರನ್ನೇ ಅನುಸರಿಸಿದೆ. ಅವರು ಪ್ರಸ್ತುತ ಕಾರ್ಕಳದಲ್ಲಿ ಲೆಕ್ಕ ಪರಿಶೋಧಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ತಂದೆ ತಾಯಿ ಕೂಡ ಪ್ರೇರಕರು. ಏಕೆಂದರೆ, ನಾನು ಯಕ್ಷಗಾನ ಮನೆಯಲ್ಲಿ ಕುಣಿದಾಗ ಅವರು ಸಂತೋಷ ಪಡುತ್ತಿದ್ದರು. ಅದೇ ನನಗೆ ಪ್ರೇರಣೆ.
ರಂಗಕ್ಕೆ ಹೋಗುವ ಮೊದಲು ಗುರುಗಳಲ್ಲಿ ಆ ವೇಷದ ಬಗ್ಗೆ ತಿಳಿದು, ಧೈರ್ಯದಿಂದ ನನಗೆ ತಿಳಿದದ್ದು ಪ್ರದರ್ಶಿಸುತ್ತೇವೆ ಅಷ್ಟೇ ಎಂದು ಹೇಳುತ್ತಾರೆ ಮಂಜುನಾಥ ಅವರು.
ಗದಾಯುದ್ಧ, ನಳ ದಮಯಂತಿ, ಬ್ರಹ್ಮ ಕಪಾಲ, ಕರ್ಣಾರ್ಜುನ, ಸತ್ಯ ಹರಿಶ್ಚಂದ್ರ, ಅಭಿಮನ್ಯು ಕಾಳಗ, ಹೀಗೆ ಹಲವಾರು ಇವರ ನೆಚ್ಚಿನ ಪ್ರಸಂಗಗಳು.
ಗದಾಯುದ್ಧದ ಕೌರವ, ಭೀಷ್ಮ ವಿಜಯದ ಭೀಷ್ಮ, ಬ್ರಹ್ಮ ಕಪಾಲದ ಈಶ್ವರ, ದೇವಿ ಮಹಾತ್ಮೆಯ ವಿದ್ಯುನ್ಮಾಲಿ, ಕಂಸ ದಿಗ್ವಿಜಯದ ಕಂಸ, , ಭದ್ರಸೇನ, ರಾಜಾ ಉಗ್ರಸೇನ ಹೀಗೆ ಹಲವು ಇವರ ನೆಚ್ಚಿನ ವೇಷಗಳು.
ಯಕ್ಷಗಾನದ ಇಂದಿನ ಸ್ಥಿತಿ ಗತಿ ಹಾಗೂ ಪ್ರೇಕ್ಷಕರ ಬಗ್ಗೆ ನಿಮ್ಮ ಅಭಿಪ್ರಾಯ:-
ಇಂದು ಯಕ್ಷಗಾನ ತುಂಬಾ ಶ್ರೀಮಂತವಾಗಿದೆ. ಕಾರಣ ಉತ್ತಮ ಪ್ರೇಕ್ಷಕರು ಇದ್ದಾರೆ. ಹಾಗೇ ಯಕ್ಷಗಾನಕ್ಕೆ ಅನುಭವಿ ಗುರುಗಳು ಇದ್ದಾರೆ. ಆದರೆ ಪ್ರೇಕ್ಷಕರಲ್ಲಿ ಸ್ವಲ್ಪ ಖಿನ್ನತೆ ಇದೆ. ಅಂದರೆ ಅವರಿಗೆ ಕಾರ್ಯದ ಒತ್ತಡದಿಂದ ಒಂದು ಪೂರ್ಣ ಯಕ್ಷಗಾನ ನೋಡುವವರ ಸಂಖ್ಯೆ ಕಡಿಮೆಯಾಗಿದೆ. ಆದರೆ ಅವರೆಲ್ಲರೂ ಯಕ್ಷಗಾನದ ಆಸಕ್ತರೆ ಆಗಿದ್ದಾರೆ. ಹಾಗಾಗಿ ಯಕ್ಷಗಾನ ಕಾಲಮಿತಿಗೆ ಒಳಪಡಬೇಕಾಯಿತು. ಈ ಕಾಲಮಿತಿ ಅಷ್ಟೊಂದು ಪೂರಕ ಅಲ್ಲ. ಯಾಕಂದ್ರೆ ಈ ಕಾಲಮಿತಿಯ ಒಳಗೆ ಕಲಾವಿದ ಪರಿಪೂರ್ಣವಾಗಿ ತನ್ನ ಪ್ರತಿಭೆಯನ್ನು ತೋರ್ಪಡಿಸುವುದು ಕಷ್ಟ ಸಾಧ್ಯ.
ಯಕ್ಷರಂಗದಲ್ಲಿ ನಮ್ಮ ಮುಂದಿನ ಯೋಜನೆ ಅಂದರೆ ನಮ್ಮ ಊರಿನಲ್ಲಿ ಯಕ್ಷಗಾನದಲ್ಲಿ ಬಾಲ ಪ್ರತಿಭೆ ಬೆಳೆಯಬೇಕು. ಅದಕ್ಕಾಗಿ ಈಗಾಗಲೇ ಮಕ್ಕಳಿಗಾಗಿ ಯಕ್ಷಗಾನ ತರಬೇತಿಯನ್ನು ನಮ್ಮೂರಿನ ಶಾಲೆಯಲ್ಲಿ, ದೇವಸ್ಥಾನದಲ್ಲಿ ನಡೆಸುತ್ತಾ ಇದ್ದೇವೆ. ಅದಕ್ಕೆ ಆ ಮಕ್ಕಳ ಪೋಷಕರ ಸಹಕಾರವೇ ಕಾರಣವಾಗಿದೆ.
ಪ್ರತಿ ಶಾಲೆಯಲ್ಲಿ ಯಕ್ಷಗಾನ ಪಠ್ಯವಾಗಿ ಇರಬೇಕು. ಆಗ ಮೂಲಭೂತವಾಗಿ ಯಕ್ಷಗಾನ ಸೃಷ್ಟಿಯಾಗುತ್ತದೆ ಎಂಬುವುದು ಮಂಜುನಾಥ ಅವರ ಅಭಿಪ್ರಾಯ.
ಯಾವ ಮೇಳದಲ್ಲಿಯೂ ಅನುಭವವಿಲ್ಲ, ಹವ್ಯಾಸಿ ಯಕ್ಷಗಾನ ಕಲಾವಿದ ಅಷ್ಟೆ.
ಶಾರದಾ ಕಾಲೇಜು ಬಸ್ರೂರು ಇಲ್ಲಿರುವಾಗ ಮಂಗಳೂರು ವಿಶ್ವವಿದ್ಯಾಲಯ ಮಟ್ಟದ ಅಂತರ ಕಾಲೇಜು ಮಟ್ಟದ “ಮಂದಾರ 2000″ ಎಂಬ ಕಾರ್ಕಳ ಭುವನೇಂದ್ರ ಕಾಲೇಜಿನಲ್ಲಿ ನಡೆದ ಯಕ್ಷಗಾನ ಸ್ಪರ್ಧೆಯಲ್ಲಿ “ಅತ್ತುತ್ತಮ ನಿರ್ವಾಹಕ” ಪ್ರಶಸ್ತಿ ಸಿಕ್ಕಿರುತ್ತದೆ.
ನನಗೆ ಹವ್ಯಾಸ ಅಂದರೆ ಬಹಳವಾಗಿ ಯಕ್ಷಗಾನ. ಹಾಗೇ ಕಾಲೇಜು ಜೀವನದಲ್ಲಿ ಇರುವಾಗ ಕಥೆ ಕವನ ಬರೆಯುತ್ತಿದ್ದೆ. ಆಗ ಕೋಟ ಶಿವರಾಮ ಕಾರಂತರ ಜನ್ಮ ದಿನದಂದು ಕೋಟದಲ್ಲಿ ಮಂಗಳೂರು ವಿಶ್ವವಿದ್ಯಾಲಯ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನ ನಡೆಯುತ್ತಿತ್ತು, ಆಗ ಆ ಸಮ್ಮೇಳನಕ್ಕೆ ನಾನು ಕವಿಗೋಷ್ಠಿಗೆ ಆಯ್ಕೆಯಾಗಿದ್ದೆ, ಆಗ ಸಮ್ಮೇಳನದ ಅಧ್ಯಕ್ಷರು ಅಂಬಾ ತನಯ ಮುದ್ರಾಡಿ.
ಮಂಜುನಾಥ ಮೊಗವೀರ ಮತ್ಯಾಡಿ ಅವರು 28.03.2010 ರಂದು ನಾಗರತ್ನ ಇವರನ್ನು ಮದುವೆಯಾಗಿ ಮಗ ಸುಬ್ರಹ್ಮಣ್ಯ ಹಾಗೂ ಮಗಳು ಸೃಷ್ಠೀ ಜೊತೆಗೆ ಸುಖಿ ಸಂಸಾರವನ್ನು ನಡೆಸುತ್ತಿದ್ದಾರೆ.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
- ಶ್ರವಣ್ ಕಾರಂತ್ ಕೆ., ಶಕ್ತಿನಗರ, ಮಂಗಳೂರು