ಕನ್ನಡದ ಖ್ಯಾತ ಕವಿಯಾಗಿ, ಸಾಹಿತಿಯಾಗಿ, ಸಮಾಜದ ಆದರ್ಶ ವ್ಯಕ್ತಿಯಾಗಿ ಬಾಳಿದ ದಿನಕರ ದೇಸಾಯಿಯವರು ತಮ್ಮ ಸೃಜನಶೀಲವಾದ ಚುಟುಕು ಸಾಹಿತ್ಯದ ಮೂಲಕ ಅಮರರಾದರು. “ಚುಟುಕು ಬ್ರಹ್ಮ” ಎಂಬ ಸತ್ಕೀರ್ತಿ ಅವರ ಪಾಲಿಗೆ ಸ್ಥಿರವಾಯಿತು. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಅಲಗೇರಿ ಎಂಬ ಪುಟ್ಟ ಹಳ್ಳಿಯಲ್ಲಿ 10-09-1909ರಲ್ಲಿ ಹುಟ್ಟಿದರು. ತಂದೆ ದತ್ತಾತ್ರೇಯ ದೇಸಾಯಿ ತಾಯಿ ಅಂಬಿಕಾ. ಇವರ ತಂದೆ ಶಾಲಾ ಶಿಕ್ಷಕರಾಗಿದ್ದ ಕಾರಣ ತಂದೆಯ ಪ್ರಭಾವ, ವರ್ಚಸ್ಸು ಇವರಲ್ಲಿ ರಕ್ತಗತವಾಗಿತ್ತು. ರಂಗ ರಾವ್ ಹಿರೇಕರೂರು ಎಂಬ ಪಂಡಿತರು ಇವರನ್ನು ಪ್ರತಿಭಾ ಸಂಪನ್ನರಾಗಿ ಬೆಳೆಸಿದರು.
ಧಾರವಾಡದಲ್ಲಿ ಮೆಟ್ರಿಕ್ ಪರೀಕ್ಷೆ, ಇಂಟರ್ ಮೀಡಿಯೇಟ್ ಶಿಕ್ಷಣ ಬೆಂಗಳೂರಿನಲ್ಲಿ, ಬಿ.ಎ. ಕನ್ನಡ ಮೈಸೂರಿನಲ್ಲಿ ಅಧ್ಯಯನ ಮಾಡುತ್ತಾ ಎಂ.ಎ., ಎಲ್.ಎಲ್.ಬಿ. ಪದವೀಧರರಾದರು. ಬಿ.ಎಂ.ಶ್ರೀ ಅವರ ಇಂಗ್ಲೀಷ್ ಗೀತೆಗಳ ಪ್ರಭಾವ, ಬಿ.ಎಂ. ಶ್ರೀಕಂಠಯ್ಯ, ಬಿ.ಸೀತಾ ರಾಮಯ್ಯ, ಬಿ.ಎಸ್. ವೆಂಕಣ್ಣ ಮೊದಲಾದ ಸಾಹಿತಿ ಸಾಧಕರ ಗಾಢವಾದ ಪ್ರಭಾವದಿಂದ ದಿನಕರ ದೇಸಾಯಿಯವರು ಸಮರ್ಥ ಸಾಹಿತಿಯಾಗಿ ಬೆಳೆದು ಪ್ರವರ್ಧಮಾನರಾದರು. ಮಾತ್ರವಲ್ಲ ರಾಜಕೀಯ ಧುರೀಣರಾದರು.
ಭಾರತ ಸೇವಕ ಸಮಾಜದ ಸದಸ್ಯರಾಗಿ ಕಾರ್ಮಿಕ ಸಂಘಟನೆಯ ಸೇವೆ. ದೆಹಲಿ ಸೇರಿ ಪತ್ರಿಕಾ ರಂಗದ ಸೇವೆ. ಎಮ್.ಎನ್. ಜೋಷಿಯವರ ಆದೇಶದ ಮೇರೆಗೆ ಗೋಕಾಕ್ ಗೆ ಹೋಗಿ ಗಿರಣಿಯ ಕಾರ್ಮಿಕರ ಹೋರಾಟದಲ್ಲಿ ಪಾಲುಗೊಳ್ಳುವಿಕೆ. ಆಮೇಲೆ ಉಳುವವನೇ ಭೂಮಿಯ ಒಡೆಯ ತತ್ವವನ್ನು ಸಾರಿ ಬ್ರಿಟಿಷರ ಕೋಪಕ್ಕೆ ಗುರಿಯಾದರು. ಹೀಗೆ ಅವರ ಚರಿತ್ರೆಯ ಹೆಗ್ಗುರುತುಗಳನ್ನು ನಾವು ಕಾಣಬಹುದು.
‘ಹೂ ಗೊಂಚಲು’, ‘ಕಡಲ ಕನ್ನಡ’ ಇತ್ಯಾದಿ ಕೃತಿಗಳೊಂದಿಗೆ ‘ನಾ ಕಂಡ ಪಡುವಣ’ ಪ್ರವಾಸ ಕಥನದೊಂದಿಗೆ ‘ಟಿಕ್ ಟಿಕ್ ಗೆಳೆಯಾ ಟಿಕ್ ಟಿಕ್ ಟಿಕ್’ ಎನ್ನುವ ಮಕ್ಕಳ ಪ್ರಿಯ ಕವನದೊಂದಿಗೆ ದಿನಕರ ದೇಸಾಯಿಯವರ ಹೆಸರು ಸದಾ ಹಸಿರು.
‘ದಿನಕರನ ಚೌಪದಿ’ ಕೃತಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಗೆ ಆಯ್ಕೆಯಾದುದು ಗಮನೀಯ ಅಂಶ. ಹತ್ತು ಹನ್ನೆರಡು ಕೃತಿಗಳ ಕರ್ತೃ, ಸಮಾಜದ ಬಗ್ಗೆ, ಪರಿಸರದ ಬಗ್ಗೆ, ಸಾಹಿತ್ಯದ ಬಗ್ಗೆ ಸದಾ ಕಾಳಜಿ ಇದ್ದ ದಿನಕರ ದೇಸಾಯಿಯವರನ್ನು ಕನ್ನಡ ಜನತೆ ಎಂದೂ ಮರೆಯದು. 1982ರಲ್ಲಿ ನಿಧನರಾದ ಅವರು ನಿತ್ಯ ಸ್ಮರಣೀಯರು. ‘ಮನವು ನಲಿದಾಡಲಿಕೆ ಕಡಲು ಕುಣಿದಾಡುವುದು ಹಸಿರೇ ಉಸಿರಾಡುವುದು ಎಲ್ಲ ಕಡೆಗೆ’ ದಿನಕರ ದೇಸಾಯಿಯವರ ಚುಟುಕಿನ ಎರಡು ಸಾಲುಗಳು. ಅವರ ಪರಿಸರ ಸಂರಕ್ಷಣೆಯ ಕಾಳಜಿ ನಮಗೆಲ್ಲಾ ಇರಲಿ. ‘ಹಸಿರು ಉಸಿರಾಗಲಿ ಸಾಹಿತ್ಯ ಸದಾ ಬೆಳಗಲಿ’.
ಡಾ. ದಿನಕರ್ ಎಸ್. ಪಚ್ಚನಾಡಿ, ಸಹ ಪ್ರಾಧ್ಯಾಪಕರು
ಯೆನೆಪೋಯ ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯ
ಡಾ. ದಿನಕರ್ ಎಸ್. ಪಚ್ಚನಾಡಿ ಇವರು ಯಕ್ಷಗಾನ ಕ್ಷೇತ್ರದ ಮಹಾನ್ ಸಾಧಕರಲ್ಲಿ ಒಬ್ಬರು. ಕಾಲೇಜಿನಲ್ಲಿ ಪ್ರಾಧ್ಯಾಪಕರು, ಯಕ್ಷಗಾನದ ವೇಷಧಾರಿ, ತಾಳಮದ್ದಲೆಯ ಅರ್ಥಧಾರಿ, ಆಸಕ್ತ ಮಕ್ಕಳಿಗೆ ಯಕ್ಷಗಾನದ ಕುಣಿತ ಕಲಿಸಿ, ವೇಷ ಹಾಕಿಸಿ, ರಂಗದ ಮೇಲೆ ಪ್ರದರ್ಶನಕ್ಕೆ ತಯಾರು ಮಾಡುವ ಒಬ್ಬ ಉತ್ತಮ ನಿರ್ದೇಶಕ. ಹತ್ತು ಹಲವು ಪ್ರಸಂಗಗಳನ್ನು ಬರೆದುದು ಮಾತ್ರವಲ್ಲದೆ ಪ್ರವಚನಕ್ಕೆ ಕಾವ್ಯ ರಚನೆ ಮಾಡಿದ ಹೆಗ್ಗಳಿಕೆ ಇವರದು. ಡಾ. ಎನ್.ನಾರಾಯಣ ಶೆಟ್ಟರಲ್ಲಿ ಛಂದಸ್ಸು ಅಧ್ಯಯನ ಮಾಡಿದ ಜ್ಞಾನದಾಹಿ ಪಚ್ಚನಾಡಿಯವರು. ಇವರ ‘ಯಕ್ಷಗಾನ ಮೀಮಾಂಸೆ’ ಎಂಬ ಸಂಶೋಧನಾ ಪ್ರಬಂಧಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾಲಯವು ಡಾಕ್ಟರ್ ಆಫ್ ಲಿಟ್ರೇಚರ್ ಪದವಿ ನೀಡಿ ಗೌರವಿಸಿದೆ. ಬಹುಮುಖ ಪ್ರತಿಭೆಯುಳ್ಳ ಇವರು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಒಬ್ಬ ಉತ್ತಮ ಶಿಕ್ಷಕರೂ ಹೌದು.