ಮೈಸೂರು : ‘ಪರಿವರ್ತನ ರಂಗ ಸಮಾಜ’ ಪ್ರಸ್ತುತ ಪಡಿಸುವ ಪ್ರೊ. ಎಸ್.ಆರ್. ರಮೇಶ್ ವಿನ್ಯಾಸ ಮತ್ತು ನಿರ್ದೇಶನದ ‘ಅಂಗಳದಲ್ಲಿ ಮಂಗಳ ಹಕ್ಕಿಯ ನೆರಳು’ ನಾಟಕ ಪ್ರದರ್ಶನವು ದಿನಾಂಕ 16-09-2023 ಮತ್ತು 17-09-2023ರಂದು ಮೈಸೂರಿನ ನಮನ ಕಲಾ ಮಂಟಪದಲ್ಲಿ ಸಂಜೆ ಗಂಟೆ 6-30ಕ್ಕೆ ನಡೆಯಲಿದೆ.
ನಾಟಕ ‘ಅಂಗಳದಲ್ಲಿ ಮಂಗಳ ಹಕ್ಕಿಯ ನೆರಳು’ ಜಗತ್ತಿನ ಶ್ರೇಷ್ಠ ನಾಟಕಕಾರರಲ್ಲಿ ಒಬ್ಬರಾದ ಅತೊಲ್ ಫುಗಾರ್ಡ್ 2014ರಲ್ಲಿ ರಚಿಸಿದ ‘ದಿ ಶಾಡೋ ಆಫ್ ದಿ ಹಮ್ಮಿಂಗ್ ಬರ್ಡ್’ ನಾಟಕದಿಂದ ಪ್ರೇರಿತ ಕೃತಿ. ಸ್ವತಃ ಅತೊಲ್ ಫುಗಾರ್ಡ್ ನಟಿಸಿರುವ ಈ ಕೃತಿಗೆ ಮುಖ್ಯ ಪ್ರೇರಣೆ ಅವರು ಅಮೆರಿಕದಲ್ಲಿ ನೆಲೆಸಿರುವಾಗ ಕಂಡ ಹಮ್ಮಿಂಗ್ ಬರ್ಡಿನ ನೆರಳು. ಪ್ಲೇಟೋ ರಚಿಸಿದ ‘ದಿ ರಿಪಬ್ಲಿಕ್’ ಕೃತಿ ಕೇಂದ್ರ ಬಿಂದು ಸಹ ನೆರಳು. ಪ್ಲೇಟೋನ ತಾತ್ವಿಕ ರೂಪಕ ಹಾಗೂ ಫುಗಾರ್ಡ್ ಕಂಡ ಹಕ್ಕಿಯ ನೆರಳಿನ ನಡುವಿನ ಜಿಜ್ಞಾಸೆ ‘ದಿ ಶಾಡೋ ಆಫ್ ಹಮ್ಮಿಂಗ್ ಬರ್ಡ್’. ಈ ಕೃತಿಯನ್ನು ಮೂಲವಾಗಿಟ್ಟುಕೊಂಡು ಕನ್ನಡದ ನೆಲೆಗೆ ತಕ್ಕಂತೆ ಮೈಸೂರಿನ ರಂಗ ನಿರ್ದೇಶಕ ಎಸ್.ಆರ್. ರಮೇಶ್ ‘ಅಂಗಳದಲ್ಲಿ ಮಂಗಳ ಹಕ್ಕಿಯ ನೆರಳು’ ರಚಿಸಿದ್ದಾರೆ.
ಖಾಲಿ ಹಾಳೆಯ ಮೇಲೆ ಮೂಡುವ ಚಿತ್ರ ಹೇಗೆ ಒಂದು ವಸ್ತುವಿನ ಸಂಕೇತವಾಗಿಯೂ ಸ್ವತಃ ಸ್ವತಂತ್ರ ಕೃತಿಯೂ ಆಗುವುದೋ ಹಾಗೆಯೇ ನಮ್ಮ ನಮ್ಮ ಸಂಬಂಧಗಳು ಸೃಷ್ಟಿಸುವ ಭ್ರಮೆ ಹಾಗೂ ವಾಸ್ತವಗಳ ನಡುವಿನ ಸಂಕೀರ್ಣ ಚಿತ್ರಣವನ್ನು ಈ ನಾಟಕ ನೀಡುತ್ತದೆ. ವ್ಯಕ್ತಿಯ ವೃತ್ತಿ ಹಾಗೂ ಆಸಕ್ತಿಯ ವಲಯಗಳು ಅವನು ಜಗತ್ತನ್ನು ಗ್ರಹಿಸುವ ಬಗೆ ಹಾಗೂ ತನ್ನ ವೈಯಕ್ತಿಕ ಸಂಬಂಧಗಳನ್ನು ನಿರ್ವಹಿಸುವ ರೀತಿಗಳನ್ನು ಈ ಕೃತಿ ಒರೆಗೆ ಹಚ್ಚುತ್ತವೆ. ವೃತ್ತಿಪರ ಪತ್ರಕರ್ತ ನಿಜಗುಣ ಪ್ರಸಾದನ ಆಸಕ್ತಿವಲಯ ಹಕ್ಕಿ ಪ್ರಪಂಚ. ಓದು, ಹುಡುಕಾಟ ಹಾಗೂ ಅವನ ಅಲೆಮಾರಿ ಜೀವನ ಹೇಗೆ ಅವನ ಮತ್ತು ಅವನು ಇಷ್ಟಪಟ್ಟ ಗಾಯತ್ರಿಯ ನಡುವಿನ ಆಂತರಿಕ ಸಂಬಂಧಗಳನ್ನು ಗಾಳಿಗೆ ತೂರುತ್ತದೆ. ಅವನ ಅಂತಃಕರಣ ಹಾಗೂ ವಾತ್ಸಲ್ಯದ ಭಾವಗಳನ್ನು ಚಿಗುರಿಸುವ ಅವನ ಅಣ್ಣನ ಮಗಳು ಸೀಮಂತಿಯ ನಡುವಿನ ಭಾವ ಸೇತುವೆ ಈ ನಾಟಕ. ವಾಸ್ತವ ಮತ್ತು ಭ್ರಮೆಗಳ ಜಾದೂ ಮೋಡಿ. ಕಾಲದ ತೂಗುಯ್ಯಾಲೆಯಲ್ಲಿ ಜೋಕಾಲಿ ಆಟ.