ಬೆಂಗಳೂರು: ಪ್ರಕೃತಿ ಪ್ರತಿಯೊಬ್ಬರಿಗೂ ಒಂದೊಂದು ಕಾಯಕವನ್ನು ಕಲ್ಪಿಸಿದೆ. ಅದನ್ನು ಪ್ರಾಮಾಣಿಕವಾಗಿ, ನಿಯತ್ತಾಗಿ ಮಾಡಿದಲ್ಲಿ ಅದು ಒಂದು ರೀತಿಯ ಸಾರ್ಥಕ ಬದುಕೇ ಸರಿ. ಇದಕ್ಕೆ ಉದಾಹರಣೆ ಎಂಬಂತೆ ಸಾಫ್ಟ್ ವೇರ್ ಸಂಸ್ಥೆಗಳಲ್ಲಿ, ಜಾಹೀರಾತು ಸಂಸ್ಥೆಗಳಲ್ಲಿ ಮತ್ತು ಇತರ ವಿವಿಧ ಸಂಸ್ಥೆಗಳಲ್ಲಿ ಉದ್ಯೋಗದಲ್ಲಿದ್ದ ‘ದಾವಣಗೆರೆ ಕಲಾಶಾಲೆಯ ಹಳೆಯ ವಿದ್ಯಾರ್ಥಿಗಳ ಸಂಘಟನೆ’ ಬೆಂಗಳೂರು ನಗರದಲ್ಲಿ ಕಲಾಪ್ರದರ್ಶನ ಹಮ್ಮಿಕೊಂಡಿತ್ತು. “ದಾಕಹವಿಸ” ಅಂತಲೇ ಕಲಾವಲಯದಲ್ಲಿ ಪ್ರಸಿದ್ಧಿಯನ್ನು ಪಡೆದಿರುವ 40 ಕಲಾವಿದರಿರುವ ಈ ಸಂಘಟನೆ ಕಲೆಯ ಮೇಲಿನ ಪ್ರೀತಿಯಿಂದಾಗಿ ದಿನಾಂಕ 09-09-2023ರಿಂದ ಮೂರು ದಿನಗಳ ಕಾಲ ಚಿತ್ರಕಲಾ ಪರಿಷತ್ತಿನಲ್ಲಿ ‘Artspring’ ಎಂಬ ಹೆಸರಿನಲ್ಲಿ ಚಿತ್ರಕಲಾ ಪ್ರದರ್ಶನವನ್ನು ನಡೆಸಿತು.
ವಿವಿಧ ಮಾಧ್ಯಮಗಳನ್ನು ಉಪಯೋಗಿಸಿ ಕಲೆಯಲ್ಲಿ ಹೊಸ ನಾವೀನ್ಯತೆಯನ್ನು ತೋರಿಸಿದ್ದಾರೆ. ಪೇಪರ್ ರಟ್ಟನ್ನು ಇಟ್ಟಿಗೆಯಂತೆ ಸಿದ್ಧಗೊಳಿಸಿ ಅದರಲ್ಲಿ ರೇಖಾಚಿತ್ರಗಳನ್ನು ವರ್ಣಚಿತ್ರಗಳನ್ನು ಮೂಡಿಸಿ ಆ ಸೃಷ್ಟಿಸಿದ ಚಿತ್ರದ ರೂಪ ನೋಡುಗರನ್ನು ಗಮನ ಸೆಳೆಯುವಲ್ಲಿ ಶೀಲವಂತ ಯಾದಗಿರಿಯವರ ಕೆಲಸ ಸಾರ್ಥಕವಾಗಿತ್ತು. ವಿನೋದ್ ಕುಮಾರವರ 4×8 ಅಡಿ ಬೃಹತ್ ವುಡ್ ಪಟ್ಟಿಯ ಮೇಲೆ ಕೆತ್ತಿದ ಹಂಪಿಯ ಚಿತ್ರಗಳು ಹಾಗೂ ಗ್ಲಾಸು ತುಣುಕುಗಳನ್ನು ಒಂದಕ್ಕೊಂದು ಮೆತ್ತಿ ಅದರ ಹೊಳಪಿನಿಂದ ಮೈವಳಿಕೆ ತೋರಿಸುವ “You too mask up” ಉದಯ ಜೈನ್ ಅವರ ಕಲಾಕೃತಿಗಳು, ಶಾಂತಿ ಅಶಾಂತಿಯ ತಳಮಳ ಆನಂದ ಮೊದಲಾದ ಭಾವನೆ ಮೂಡಿಸುವ ವಿಶ್ವನಾಥ್ ಹೆಗಡೆಯವರ Corrosion field ಕಲಾಕೃತಿಗಳು, ರಂಗಸ್ವಾಮಿ ಅವರ ಶಿಲ್ಪಗಳು, ಈಗಾಗಲೇ ಕಲಾವಲಯದಲ್ಲಿ ಗುರುತಿಸಿಕೊಂಡಿದ್ದ ಕೃಷ್ಣ ಸೆಟ್ಟಿ, ಗಣಪತಿ ಎಸ್. ಹೆಗಡೆ, ಶ್ರೀನಾಥ್ ಬಿದರೆ, ಗಣೇಶ ಧಾರೇಶ್ವರ, ಗಣೇಶ ದೊಡ್ಡಮನಿ, ಬಾಬು ಜತ್ಕಾರ ಒಳಗೊಂಡಂತೆ ಅನೇಕ ಕಲಾವಿದರ ಕಲಾಕೃತಿಗಳು ಪ್ರದರ್ಶನದ ಯಶಸ್ಸಿಗೆ ಕಾರಣವಾದವು.
ಇದೇ ಸಂದರ್ಭದಲ್ಲಿ ಶ್ರೀ ಕೃಷ್ಣ ಸೆಟ್ಟಿಯವರಿಗೆ 70 ವರ್ಷದ ಸಂಭ್ರಮವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಶ್ರೀ ಚಿರಂಜೀವ್ ಸಿಂಗ್, ಹಿರಿಯ ಕಲಾವಿದರಾದ ಶ್ರೀ ಪ.ಸ. ಕುಮಾರ, ಕವಿಗಳಾದ ಶ್ರೀ ಹೆಚ್.ಎಸ್. ಶಿವಪ್ರಕಾಶ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮುನ್ನೂರಕ್ಕೂ ಹೆಚ್ಚು ಜನರು ಕಲಾಭಿಮಾನಿಗಳು ಭಾಗವಹಿಸಿದ್ದು ವಿಶೇಷವಾಗಿತ್ತು. 40 ಜನ ಕಲಾವಿದರ 55ಕ್ಕೂ ಹೆಚ್ಚು ಕಲಾಕೃತಿಗಳು ನೋಡುಗರ ಮನಸೂರೆಗೊಂಡಿತು. ವಿವಿಧ ಮಾಧ್ಯಮಗಳೊಂದಿಗೆ ವಿವಿಧ ಶೈಲಿಗಳಲ್ಲಿ ವಿಭಿನ್ನವಾಗಿ ನೋಡುಗರಿಗೆ ಇದೊಂದು ಶ್ರೇಷ್ಠಮಟ್ಟದ ಪ್ರದರ್ಶನವಾಗಿ ಹೊರಹೊಮ್ಮಿತ್ತು. ಇದೊಂದು ಒಳ್ಳೆಯ ಕಲಾಪ್ರದರ್ಶನ ಎಂಬುದು ಎಲ್ಲ ಕಲಾವಿದರ, ಕಲಾಪ್ರಿಯರ ಅಭಿಪ್ರಾಯವಾಗಿದೆ.