ಅಪರಾಧ ಮಾಡಿದ ವ್ಯಕ್ತಿಯ ಪತ್ತೆಗೆ ಕಾರಣವಾಗುವ ಸುಳಿವುಗಳನ್ನು ಒಬ್ಬ ಪತ್ತೇದಾರಿ ಹುಡುಕುತ್ತಾನೆ. ಅದೇ ರೀತಿ ಒಬ್ಬ ಸಾಹಿತಿಯಾದವನು ತನ್ನ ಪತ್ತೇದಾರಿ ಸಾಹಿತ್ಯದಲ್ಲಿ ‘ಪತ್ತೇದಾರಿ’ ಎನ್ನುವ ಪಾತ್ರಕ್ಕೆ ಪ್ರಾಮುಖ್ಯತೆ ನೀಡಿ ಮೊದಲಿನಿಂದ ಕೊನೆಯವರೆಗೆ ಓದುಗನೊಬ್ಬನನ್ನು ಸೆರೆ ಹಿಡಿಯುವುದೆಂದರೆ ಸುಲಭದ ಮಾತಲ್ಲ. ಪ್ರತಿಕ್ಷಣ ಪ್ರತಿ ಹಂತದಲ್ಲೂ ರೋಚಕತೆ, ಕುತೂಹಲ, ಉತ್ಸುಕತೆ ತುಂಬಲು ಅಂತಹ ಸನ್ನಿವೇಶಗಳನ್ನು ಆತನ ಬರವಣಿಗೆಯಲ್ಲಿ ಸೃಷ್ಟಿಸಿರಬೇಕಾಗುತ್ತದೆ. ಈ ನಿಟ್ಟಿನಲ್ಲಿ ಓದುಗರನ್ನು ತನ್ನದೇ ಶೈಲಿಯಲ್ಲಿ ಮೋಡಿ ಮಾಡಿದ ಕೀರ್ತಿ ಖಂಡಿತವಾಗಿಯೂ ಎನ್. ನರಸಿಂಹಯ್ಯನವರಿಗೆ ಸಲ್ಲುತ್ತದೆ.
ಎನ್. ನರಸಿಂಹಯ್ಯನವರ ಕುರಿತಾದ ಬರಹ ಎಂಬ ವಿಚಾರ ಬಂದಾಗ ಅವರ ಬಗೆಗೆ ತಿಳಿದುಕೊಳ್ಳುವ ಸಲುವಾಗಿ ಜಾಲಾಡಿದಾಗ ನನಗೆ ದೊರೆತ ಹಾಗೂ ಮನಸ್ಸಿಗೆ ತೋಚಿದ ಕೆಲವೊಂದು ವಿಚಾರಗಳನ್ನು ಬರೆಯುವುದಕ್ಕೆ ಮುಂದಾದೆ. ಎನ್. ನರಸಿಂಹಯ್ಯನವರು ತಮ್ಮ ಪತ್ತೇದಾರಿ ಕಾದಂಬರಿಗಳಲ್ಲಿ ಓದುಗರನ್ನು ಸೆರೆ ಹಿಡಿಯುವಲ್ಲಿ ಹೇಗೆ ಯಶಸ್ಸನ್ನು ಕಂಡುಕೊಂಡಿದ್ದರು ಎಂಬುದಕ್ಕೆ ಅವರ ಓದುಗ ಅಭಿಮಾನಿಯೊಬ್ಬರು ಪ್ರಮುಖ ಪತ್ತೇದಾರಿ ಸಾಹಿತಿಗಳ ಹೆಸರಿನ ಪಟ್ಟಿಯನ್ನು ಮುಂದಿಡುತ್ತಾ, ಇವರೆಲ್ಲಾ ಪತ್ತೇದಾರಿ ಸಾಹಿತ್ಯವನ್ನು ಬರೆದರೂ “ಎನ್. ನರಸಿಂಹಯ್ಯನವರು ಕಾಡಿದಷ್ಟು ಬೇರೆ ಯಾರೂ ನನ್ನನ್ನು ಕಾಡಲಿಲ್ಲ. ಕಾಡಿಸಿ ಓದಿಸಲಿಲ್ಲ” ಎಂಬುದಾಗಿ ತಮ್ಮ ಲೇಖನದಲ್ಲಿ ಪ್ರಸ್ತಾಪಿಸಿದ ವಿಚಾರ ಬಹಳಷ್ಟು ಹಿಡಿಸಿತು.
ಎನ್. ನರಸಿಂಹಯ್ಯನವರು 1925ರ ಸೆಪ್ಟೆಂಬರ್ 18ರಂದು ಬೆಂಗಳೂರಿನಲ್ಲಿ ಜನಿಸಿದರು. ತಂದೆ ಸಿ. ನಂಜಪ್ಪ ಹಾಗೂ ತಾಯಿ ಯಲ್ಲಮ್ಮ. ತಂದೆ ಹಾಗೂ ಅಜ್ಜಿ ಕವಿಯಾಗಿದ್ದರಿಂದ ಎಳವೆಯಲ್ಲೇ ಸಾಹಿತ್ಯದ ರುಚಿ ಅವರ ಪಾಲಿಗೆ ದೊರಕಿತು. ತಂದೆಯನ್ನು ಬಾಲ್ಯದಲ್ಲೇ ಕಳಕೊಂಡಾಗ ಚಿಕ್ಕಪ್ಪನ ಆಶ್ರಯ ದೊರೆಯಿತು. ದುರಾದೃಷ್ಟವೆನ್ನುವಂತೆ ಮರು ವರ್ಷವೇ ಅವರೂ ವಿಧಿವಶರಾದಾಗ ಇವರ ವಿದ್ಯಾಭ್ಯಾಸ ಅಲ್ಲಿಗೆ ನಿಂತು ಹೋಗುತ್ತದೆ.
ಮುಂದಿನ ಜೀವನ ನಿರ್ವಹಣೆಗೆ ಕುಟುಂಬ ಸಮೇತ ಚಿಕ್ಕಮಗಳೂರಿಗೆ ವಲಸೆ ಬಂದಾಗ ಸಣ್ಣ ಪ್ರಾಯದಲ್ಲೇ ಕಾಫಿ ತೋಟದ ಕೆಲಸ ಮಾಡುತ್ತಾರೆ. ಮುಂದೆ ಪ್ರಿಂಟಿಂಗ್ ಪ್ರೆಸ್ ನಲ್ಲಿ ಕೆಲಸ, ಟೈಲರಿಂಗ್, ಬಸ್ ಕ್ಲೀನರ್, ಕೊನೆಗೆ ಕಂಡಕ್ಟರ್ ಅಗಿಯೂ ಕಾರ್ಯ ನಿರ್ವಹಿಸುತ್ತಾರೆ. ಪ್ರಿಂಟಿಂಗ್ ಪ್ರೆಸ್ ನಲ್ಲಿರುವಾಗ ಓದಿದ ಎಮ್. ರಾಮಮೂರ್ತಿಯವರ ಪತ್ತೇದಾರಿ ಸಾಹಿತ್ಯ ಇವರನ್ನು ತಾನೂ ಕೂಡಾ ಬರೆಯುವಂತೆ ಪ್ರೇರೇಪಿಸುತ್ತದೆ. ನಾಗರತ್ನಮ್ಮನವರ ವಿವಾಹದ ನಂತರ ಅವರ ಸಾಹಿತ್ಯ ಕೃಷಿಗೆ ಮತ್ತಷ್ಟು ಪ್ರೋತ್ಸಾಹ ದೊರೆಯಿತು.
ಅಪರಾಧಿ ಮಾಹಿತಿ, ಕೋರ್ಟ್ ಕಲಾಪಗಳು ಇವೇ ಮೊದಲಾದ ಸೂಕ್ಷ್ಮ ವಿಚಾರಗಳ ಬಗ್ಗೆಯೂ ಮುಂದಿನ ದಿನಗಳಲ್ಲಿ ತಿಳಿದುಕೊಳ್ಳುವ ಸಂದರ್ಭ ಅವರ ಪಾಲಿಗೆ ಸಿಕ್ಕಿದರಿಂದಲೋ ಏನೋ, ತಮ್ಮ ಕಾದಂಬರಿಯ ಕಥಾವಸ್ತುಗಳನ್ನು ವಿಭಿನ್ನವಾಗಿ ಆರಿಸಿಕೊಂಡ ನಿಗರ್ವಿ, ವಿನಯಶೀಲ ವ್ಯಕ್ತಿ ಎನ್. ನರಸಿಂಹಯ್ಯನವರು. ಇಂಗ್ಲೀಷ್ ಸಾಹಿತ್ಯ ಹೆಚ್ಚಾಗಿ ಓದಿಲ್ಲದಿದ್ದರೂ ಇಂಗ್ಲೀಷ್ ಸಾಹಿತ್ಯದಲ್ಲಿ ಬರುವ ಶರ್ಲಾಕ್ ಹೋಮ್ಸ್ ನನ್ನು ಹೋಲುವ ಕಥೆಗಳನ್ನು ಕನ್ನಡದಲ್ಲಿ ತಂದ ವ್ಯಕ್ತಿ. ಇವರ ಕಾದಂಬರಿಗಳಲ್ಲಿ ದೇಸಿ ಸೊಗಡು ಹಾಗೂ ಮಣ್ಣಿನ ವಾಸನೆಯನ್ನು ಕಾಣಬಹುದಾಗಿದೆ.
‘ಭಯಂಕರ ಬೈರಾಗಿ’ ಹಾಗೂ ‘ಭಯಂಕರ ಭವಾನಿ’ ಜನಪ್ರಿಯ ಕಾದಂಬರಿಗಳಾದರೆ, ‘ವಿಚಿತ್ರ ವಿಲಾಸಿನಿ’, ‘ಮಾಯಾಂಗನೆಯ ಮರ್ಮ’, ‘ಎಂಟು ಕೊಲೆಯ ಭಂಟ’, ‘ಮಾರ್ಜಾಲ ಮಾಯ’, ‘ಅರಿಂಜಯ’, ‘ಭೂಪತಿರಂಗ’ ಮುಂತಾದ ಕಾದಂಬರಿಗಳನ್ನು, ‘ಮುತ್ತುಗದ ಹೂ’, ‘ಹಾದಿ ತಪ್ಪಿದ ಹೆಣ್ಣು’, ‘ಜೀವನ ಸಂಗಾತಿ’, ‘ಪಂಚವರ್ಣದ ಗಿಣಿ’ ಮೊದಲಾದ ಸಾಮಾಜಿಕ ಕಾದಂಬರಿಗಳನ್ನೂ ರಚಿಸಿದ ಹೆಗ್ಗಳಿಕೆ ಇವರದು.
‘ಪತ್ತೇದಾರಿ ಕಾದಂಬರಿಗಳ ಜನಕ’ ಎಂಬ ಶಿರೋನಾಮೆಯನ್ನು ಹೊತ್ತ ನರಸಿಂಹಯ್ಯನವರು 1952ರಲ್ಲಿ ತಮ್ಮ ಪ್ರಥಮ ಪತ್ತೇದಾರಿ ಕಾದಂಬರಿ ‘ಪತ್ತೇದಾರ ಪುರುಷೋತ್ತಮ’ ಬರೆದರು. ಅದನ್ನು ಟಿ. ನಾರಾಯಣ ಅಯ್ಯಂಗಾರ್ ರವರು ಪ್ರಕಟಿಸಿದರು. ಇಲ್ಲಿಯವರೆಗೆ ಮುನ್ನೂರೈವತ್ತಕ್ಕೂ ಹೆಚ್ಚು ಪತ್ತೇದಾರಿ ಕಾದಂಬರಿಗಳನ್ನು, ಐವತ್ತಕ್ಕೂ ಹೆಚ್ಚು ಸಮಾಜಿಕ ಕಾದಂಬರಿಗಳನ್ನು ನೀಡಿದ್ದಾರೆ. ಐವತ್ತು/ ಅರವತ್ತರ ದಶಕದಲ್ಲಿ ಹದಿಹರೆಯದ ಹುಡುಗರು ನರಸಿಂಹಯ್ಯನವರ ಕಾದಂಬರಿಗಳಿಂದಾಗಿ ಕನ್ನಡ ಪುಸ್ತಕ ಓದುವ ಹವ್ಯಾಸ ಪ್ರಾರಂಭಿಸುತ್ತಿದ್ದರಂತೆ. ಇದು ಅವರ ಪ್ರತಿಭಾಶಕ್ತಿಗೆ ಹಿಡಿದ ಕೈಗನ್ನಡಿ.
‘ಮನೆಯಂಗಳದಲ್ಲಿ ಮಾತುಕತೆ ಕಾರ್ಯಕ್ರಮ’ ಎಂಬ ಸಂವಾದ ಕಾರ್ಯಕ್ರಮದಲ್ಲಿ ತಮ್ಮ ಅನಿಸಿಕೆಗಳನ್ನು ಓದುಗರಿಗೆ ತಿಳಿಸುತ್ತಾ, ಪ್ರತಿದಿನವೂ ಬರುತ್ತಿದ್ದ ಸುಮಾರು 50ರಿಂದ 100 ಪತ್ರಗಳನ್ನು ಓದಿ ಉತ್ತರಿಸುವುದರಲ್ಲಿ ಸಂತೋಷವನ್ನು ಕಾಣುತ್ತಿದ್ದ ವ್ಯಕ್ತಿತ್ವ ಅವರದು. ದಾವಣಗೆರೆಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ (1992), ರಾಜ್ಯೋತ್ಸವ ಪ್ರಶಸ್ತಿ (1997) ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (2006)ಗಳು ಶ್ರೀಯುತರಿಗೆ ಲಭಿಸಿವೆ. ಅಪರಾಧ ಜಗತ್ತಿನ ವಿವಿಧ ಮೂಲೆಗಳನ್ನೂ ಶೋಧಿಸಿ ಅಪರಾಧಿಯ ಚಾಣಾಕ್ಷತೆಯನ್ನೂ ಒಂದೆಡೆ ಪ್ರತಿಬಿಂಬಿಸುತ್ತಾ ಬಂದರೂ ಕಾನೂನುಬದ್ಧ ಹಾಗೂ ನೈತಿಕ ಜಗತ್ತಿಗೆ ಗೆಲುವು ಎಂಬ ಆಶಯವನ್ನು ಹೊತ್ತ ಈ ಪತ್ತೇದಾರಿ ಜನಕ 2011ರಲ್ಲಿ ವಿಧಿವಶರಾದರು.
- ಪದ್ಮಪ್ರಿಯಾ ಎಂ.ಹೆಚ್.
ಇವರು ಕನ್ನಡ ಉಪನ್ಯಾಸಕಿಯಾಗಿ ಸುಮಾರು 16 ವರ್ಷಗಳ ಕಾಲ ಕಾರ್ಯನಿರ್ವಹಿಸಿರುತ್ತಾರೆ. ಈ ಅವಧಿಯಲ್ಲಿ ಅನೇಕ ವಿದ್ಯಾರ್ಥಿಗಳನ್ನು ಪ್ರಬಂಧ ಮತ್ತು ಭಾಷಣ ಕಲೆಗೆ ತರಬೇತುಗೊಳಿಸಿ ಅವರು ಕ್ಲಸ್ಟರ್, ತಾಲೂಕು, ಜಿಲ್ಲಾ ಮಟ್ಟದ ಪ್ರಶಸ್ತಿಗಳನ್ನು ಪಡೆಯುವಲ್ಲಿ ಸಹಕರಿಸಿದ್ದಾರೆ. ಕನ್ನಡ ಪದಬಂಧ ರಚನೆಯಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸಿಕೊಳ್ಳುವಂತೆ ಮಾಡಿ ಅವರ ಕನ್ನಡ ಶಬ್ದ ಭಂಡಾರಕ್ಕೆ ಹೆಚ್ಚು ಶಬ್ದಗಳು ಸೇರಿ ಸಾಹಿತ್ಯ ಜ್ಞಾನ ಹೆಚ್ಚುವಲ್ಲಿ ಶ್ರಮಿಸಿದ್ದಾರೆ. ಇವರು ಕನ್ನಡ ಭಾಷಾ ಸಂವಹನ ಕಾರ್ಯಕ್ರಮ ಮತ್ತು ಮೌಲ್ಯಧಾರಿತ ಸ್ಪರ್ಧೆಗಳಲ್ಲಿ ಭಾಗವಹಿಸಿರುತ್ತಾರೆ.