ಮಂಗಳಗಂಗೋತ್ರಿ : ಮಂಗಳೂರು ವಿವಿ ಪ್ರಸಾರಾಂಗ ಪ್ರಕಟಿಸಿದ ಕೊಡವ ಸಾಂಸ್ಕೃತಿಕ ಅಧ್ಯಯನ ಪೀಠ ಸಿದ್ಧಪಡಿಸಿದ ಶ್ರೀ ನಾಗೇಶ್ ಕಾಲೂರು ಇವರ ‘ಶ್ರೀಕಾವೇರಿ ದರ್ಶನಂ’ ಮತ್ತು ಅವರೇ ಅನುವಾದಿಸಿದ ‘ಕೊಡಗಿನಿಂದ ಗಿರಿತನಕ’ ಎಂಬ ಎರಡು ಕೃತಿಗಳು ಸಿಂಡಿಕೇಟ್ ಸಭಾಂಗಣದಲ್ಲಿ ದಿನಾಂಕ 15-09-2023ರಂದು ಬಿಡುಗಡೆಗೊಂಡಿತು.
ಈ ಕಾರ್ಯಕ್ರಮದಲ್ಲಿ ಕೃತಿ ಲೋಕಾರ್ಪಣೆಗೊಳಿಸಿದ ಮಂಗಳೂರು ವಿವಿಯ ಕುಲಪತಿ ಪ್ರೊ. ಜಯರಾಜ್ ಅಮೀನ್ ಇವರು ಮಾತನಾಡುತ್ತಾ “ವಿಶ್ವವಿದ್ಯಾನಿಲಯಗಳಲ್ಲಿ ಅಧ್ಯಯನ, ಸಂಶೋಧನೆ ಹಾಗೂ ಪ್ರಕಟಣೆಯಂತಹ ಶೈಕ್ಷಣಿಕ ಕಾರ್ಯಗಳಿಗೆ ಆದ್ಯತೆ ಸಿಗಬೇಕೇ ಹೊರತು ಇತರ ವಿಷಯಗಳಿಗಲ್ಲ. ವಿವಿಯ ಪ್ರಕಟಣೆಗಳು ಸಮಾಜಕ್ಕೆ ಉಪಯುಕ್ತವಾಗುವಂತಿದ್ದು ಸಾಮಾಜಿಕ ಸಾಂಸ್ಕೃತಿಕ ಮತ್ತು ವೈಚಾರಿಕ ಪ್ರಜ್ಞೆಯನ್ನು ಉತ್ತಮಪಡಿಸಬೇಕು. ಕಾವೇರಿ ನಮಗೆ ನದಿ ಮಾತ್ರವಲ್ಲ. ಅದರೊಂದಿಗೆ ನಮಗೊಂದು ಭಾವನಾತ್ಮಕವಾದ ನಂಟಿದೆ. ಅದರ ಒಳಹೊರಗನ್ನು ಕಾವ್ಯಾತ್ಮಕವಾಗಿ ಶ್ರೀಕಾವೇರಿ ದರ್ಶನಂ ಕಾವ್ಯ ಹಿಡಿದಿಟ್ಟಿದೆ. ಪ್ರಸಾರಾಂಗ ಇಂತಹ ಮೌಲಿಕ ಕೃತಿಗಳ ಪ್ರಕಟಣೆಯ ಮೂಲಕ ವಿವಿಯ ಗೌರವವನ್ನು ಹೆಚ್ಚಿಸಿದೆ” ಎಂದು ಹೇಳಿದರು.
ಸಮಾರಂಭದಲ್ಲಿ ವಿವಿಗೆ ನೂತನ ಕುಲಸಚಿವರಾಗಿ ಬಂದು ಅಧಿಕಾರ ಸ್ವೀಕರಿಸಿದ ಕೆ.ರಾಜು ಕೆ.ಎ.ಎಸ್. ಇವರು ಭಾಗವಹಿಸಿ ಮಾತನಾಡಿ “ಅಭಿವೃದ್ಧಿಪರ ಕೆಲಸಗಳು ಸಾಮೂಹಿಕ ಪ್ರಯತ್ನದಿಂದಷ್ಟೇ ಸಾಧ್ಯ. ಪ್ರಸಾರಾಂಗದ ಪ್ರಕಟಣೆಗಳು ಬೌದ್ಧಿಕ ಬೆಳವಣಿಗೆಗೆ ಪೂರಕ. ಓದುವ ಹವ್ಯಾಸವನ್ನು ಉತ್ತೇಜಿಸುವ ಇಂತಹ ಪ್ರಯತ್ನಗಳು ಅಭಿನಂದನೀಯ” ಎಂದರು.
ಸಮಾರಂಭದಲ್ಲಿ ಮಂಗಳೂರು ವಿವಿ ಪರೀಕ್ಷಾಂಗ ಕುಲಸಚಿವರಾದ ಪ್ರೊ.ರಾಜುಕೃಷ್ಣ ಚಲ್ಲಣ್ಣನವರ್, ಹಣಕಾಸು ಅಧಿಕಾರಿ ಪ್ರೊ.ವೈ ಸಂಗಪ್ಪ ಉಪಸ್ಥಿತರಿದ್ದರು. ಕೊಡವ ಸಾಂಸ್ಕೃತಿಕ ಅಧ್ಯಯನ ಪೀಠದ ಸಂಯೋಜಕಿ ಡಾ. ಮೀನಾಕ್ಷಿ ಎಂ.ಎಂ. ಕೃತಿ ಪರಿಚಯ ಮಾಡಿದರು. ಪ್ರಸಾರಾಂಗದ ನಿರ್ದೇಶಕರಾದ ಪ್ರೊ. ಸೋಮಣ್ಣ ಸ್ವಾಗತಿಸಿ, ಪ್ರಸಾರಾಂಗದ ಸಹಾಯಕ ನಿರ್ದೇಶಕರಾದ ಡಾ. ಧನಂಜಯ ಕುಂಬ್ಳೆ ನಿರೂಪಿಸಿದರು.