ಮಂಗಳೂರು : ಬೆಸಂಟ್ ಹಳೆ ವಿದ್ಯಾರ್ಥಿ ಸಂಘ ವಸಂತ ಪ್ರೇಮಿ ಮಂಡಳಿಯ ವತಿಯಿಂದ ಅಂತರ್ ಶಾಲಾ ಕರ್ನಾಟಕ ಶಾಸ್ತ್ರೀಯ ಸಂಗೀತ, ವಾದ್ಯ ಸಂಗೀತ, ಕನ್ನಡ ಭಾಷಣ ಹಾಗೂ ಭಕ್ತಿಗೀತೆ ಸ್ಪರ್ಧೆಗಳು ಬೆಸಂಟ್ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ದಿನಾಂಕ 12-09-2023ರಂದು ಅಧ್ಯಕ್ಷೆ ಕಾತ್ಯಾಯಿನಿ ರಾವ್ ಇವರ ನೇತೃತ್ವದಲ್ಲಿ ನಡೆಯಿತು.
ಬೆಸಂಟ್ ಮಹಿಳಾ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಸತೀಶ್ ಶೆಟ್ಟಿಯವರು ಸಂಸ್ಥೆಯ ಅಧ್ಯಕ್ಷ ಮಣೇಲ್ ಅಣ್ಣಪ್ಪ ನಾಯಕ್, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ. ನಾಯಕ್ ರೂಪ್ ಸಿಂಗ್, ಪ್ರೌಢ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ತ್ರಿವೇಣಿ ಮತ್ತು ಅಧ್ಯಕ್ಷೆ ಕಾತ್ಯಾಯಿನಿ ರಾವ್ ಇವರೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಪ್ರಾಥಮಿಕ ಶಾಲೆಗೆ ರೂ.10,000/- ದೇಣಿಗೆಯನ್ನೂ ಹಾಗೂ ಹೈಸ್ಕೂಲ್ ವಿಭಾಗದಿಂದ ಇಬ್ಬರು ಮತ್ತು ಕಾಲೇಜು ವಿಭಾಗದಿಂದ ಇಬ್ಬರಿಗೆ ವಿದ್ಯಾರ್ಥಿ ವೇತನ ನೀಡಲಾಯಿತು. ಕಾರ್ಯಕ್ರಮವನ್ನು ಹರಿಣಿ ಜೆ. ಮತ್ತು ಭಾರತಿ ಗಣೇಶ್ ನಿರೂಪಿಸಿ, ವಸಂತಿ ದೇವೇಂದ್ರ ವಂದಿಸಿದರು.
ಸ್ಪರ್ಧಾ ವಿಜೇತರು:
ಕರ್ನಾಟಕ ಶಾಸ್ತ್ರೀಯ ಸಂಗೀತ ಸ್ಪರ್ಧೆ ವಿಜೇತರು
1. ಮೇಧಾ ಉಡುಪ, ಕೆನರಾ ಪಿಯುಸಿ
2. ಅನಘಾ ರಾವ್, ಶಾರದ ವಿದ್ಯಾಲಯ
ವಾದ್ಯ ಸಂಗೀತ ಸ್ಪರ್ಧೆ
1. ಮೇಧಾ ಉಡುಪ, ಕೆನರಾ ಪಿಯುಸಿ
2. ಧನಶ್ರೀ ಪ್ರಭು, ಕೆನರಾ ಪಿಯುಸಿ
ಗಿರಿಧರ್ ರಾವ್ ಭಕ್ತಿ/ಭಜನಾ ಸ್ಪರ್ಧೆ
1. ಆಯುಷ್ ಪ್ರೇಮ್, ಸೈಂಟ್ ಅಲೋಶಿಯಸ್ ಹೈಸ್ಕೂಲ್, ಕೊಡಿಯಾಲ್ ಬೈಲ್
2. ಮಾನ್ಯತಾ ಕಾರಂತ್, ಶಾರದಾ ವಿದ್ಯಾಲಯ
ಭಾಷಣ ಸ್ಪರ್ಧೆ “ಆಧುನಿಕ ಯುಗದಲ್ಲಿ ಜಾಲತಾಣಗಳ ಪಾತ್ರ”
1. ವೈಷ್ಣವಿ ಭಟ್, ಬೆಸೆಂಟ್ ಪ್ರೌಢಶಾಲೆ, ಕನ್ನಡ ಮಾಧ್ಯಮ
2. ಅಂಕಿತ, ಬೆಸೆಂಟ್ ಪ್ರೌಢಶಾಲೆ, ಕನ್ನಡ ಮಾಧ್ಯಮ
ದಿ. ಡಾ. ಕೆ. ಗಿರಿಧರ ರಾವ್ ಇವರ ಬಗ್ಗೆ :
ಡಾ. ಕೆ. ಗಿರಿಧರ ರಾವ್ ಬೆಸಂಟ್ ಆಡಳಿತ ಮಂಡಳಿಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದವರು. ವೈದ್ಯರಾದ ಇವರು ಅಪಾರ ದೈವ ಭಕ್ತರಾಗಿದ್ದು, ಮಂಗಳೂರಿನ ವೆಂಕಟರಮಣ ದೇವಾಲಯದ ಟ್ರಸ್ಟಿಗಳಲ್ಲಿ ಒಬ್ಬರಾಗಿದ್ದರು. ಇವರ ಒಬ್ಬಳೇ ಮಗಳು ವೈದ್ಯೆಯಾಗಿದ್ದು, ಶ್ವೇತ ವಸ್ತ್ರಧಾರಿಯಾದ ಡಾ. ರಾಧಾ, ತಂದೆಯ ನಿಧನಾ ನಂತರ ಅವರ ಸ್ಮರಣಾರ್ಥ ಭಕ್ತಿಗೀತೆ, ಭಜನಾ ಸ್ಪರ್ಧೆಯನ್ನು ಅಂತರ್ ಶಾಲಾ ಮಟ್ಟದಲ್ಲಿ ಆಯೋಜಿಸಲು ನಿಧಿಯನ್ನು ಸ್ಥಾಪಿಸಿದ್ದು, ಈಗ ಪ್ರತೀ ವರ್ಷ ಡಾ. ಕೆ. ಗಿರಿಧರ ರಾವ್ ಸ್ಮಾರಕ ಭಕ್ತಿಗೀತೆ, ಭಜನಾ ಸ್ಪರ್ಧೆ ಅಂತರ್ ಶಾಲಾ ಮಟ್ಟದಲ್ಲಿ ನಡೆಯುತ್ತಿದೆ.
ದಿ. ಶ್ರೀ ಬಿ. ಕೃಷ್ಣಪ್ಪ ಇವರ ಬಗ್ಗೆ :
ಶ್ರೀಮತಿ ರಾಧಾ ಎಲ್. ರಾವ್ ಬೆಸಂಟ್ ಪ್ರೌಢ ಶಾಲೆಯಲ್ಲಿ ಅತ್ಯಂತ ಹೆಚ್ಚು ವರ್ಷಗಳ ಕಾಲ ಮುಖ್ಯೋಪಾಧ್ಯಾಯಿನಿಯಾಗಿ ಕರ್ತವ್ಯ ನಿರ್ವಹಿಸಿ ವಿದ್ಯಾರ್ಥಿಗಳ ಪ್ರೀತಿಗೆ ಪಾತ್ರರಾದ ಇವರು ಶಿಸ್ತಿನ ಸಿಪಾಯಿಯಾಗಿದ್ದು, ತಮ್ಮ ಕಾಲದಲ್ಲಿ ಬೆಸಂಟಿನ ಖ್ಯಾತಿಯನ್ನು ಉನ್ನತಮಟ್ಟಕ್ಕೆ ಏರಿಸಿದವರು. ರಾಧಾ ಎಲ್. ರಾವ್ ಇವರು ತನ್ನ ಪತಿಯ ತಂದೆ ವಿದ್ವಾಂಸರಾದ ಬಿ. ಕೃಷ್ಣಪ್ಪ ಇವರ ಹೆಸರಿನಲ್ಲಿ ಅಂತರ್ ಶಾಲಾ ಭಾಷಣ ಸ್ಪರ್ಧೆಯನ್ನು ಆಯೋಜಿಸಿ, ನಡೆಸುತ್ತಾ ಬಂದಿದ್ದು, ಪ್ರಸ್ತುತ ಈ ಸ್ಪರ್ಧೆಗಳನ್ನು ಬೆಸೆಂಟಿನ ವಸಂತ ಪ್ರೇಮಿ ಮಂಡಳಿ ಮುನ್ನಡೆಸುತ್ತಿದೆ.
ದಿ. ಶ್ರೀ ಕೃಷ್ಣ ಉಡುಪರ ಬಗ್ಗೆ :
ಶ್ರೀಯುತ ಕೃಷ್ಣ ಉಡುಪರು 1919ರಲ್ಲಿ ಬೆಸಂಟ್ ಪ್ರೌಢ ಶಾಲೆಯಲ್ಲಿ ಸಂಗೀತ ಅಧ್ಯಾಪಕರಾಗಿ ವೃತ್ತಿ ಜೀವನ ಆರಂಭಿಸಿದವರು. ವಿದ್ಯಾರ್ಥಿನಿಯರ ವಾದ್ಯ ತಂಡವನ್ನು ರಚಿಸಿ, ಹಾರ್ಮೋನಿಯಂ, ತಬಲಾ ವೀಣೆ ಇತ್ಯಾದಿ ನುಡಿಸುವ ಬಗ್ಗೆ ಮತ್ತು ಸುಶ್ರಾವ್ಯವಾಗಿ ಹಾಡುವ ಬಗ್ಗೆ ವಿದ್ಯಾರ್ಥಿನಿಯರಿಗೆ ತರಬೇತಿ ನೀಡಿದರು. ಇವರ ನಂತರ ಸಂಗೀತ ಶಿಕ್ಷಕರಾಗಿ ಬಂದ ಇವರ ಸುಪುತ್ರ ಶ್ರೀನಿವಾಸ ಉಡುಪರು ಒಂದು ನಿರ್ದಿಷ್ಟ ಮೊತ್ತದ ನಿಧಿಯನ್ನು ಸ್ಥಾಪಿಸಿ ತಮ್ಮ ತಂದೆಯ ಸ್ಮರಣಾರ್ಥ ವಾದ್ಯ ಸಂಗೀತ ಮತ್ತು ಕರ್ನಾಟಕ ಶಾಸ್ತ್ರೀಯ ಸಂಗೀತ ಸ್ಪರ್ಧೆಗಳನ್ನು ನಡೆಸಲು ಚಾಲನೆ ನೀಡಿದರು. ಈ ಸ್ಪರ್ಧೆಗಳು ಪ್ರೌಢ ಶಾಲೆ ಮತ್ತು ಪದವಿ ಪೂರ್ವ ಕಾಲೇಜಿನ ಹಂತದ ವಿದ್ಯಾರ್ಥಿಗಳಿಗಾಗಿ ನಡೆಯುತ್ತದೆ.