ಮುಂಬೈ : ಮಧುರತರಂಗ (ರಿ.) ದಕ್ಷಿಣ ಕನ್ನಡ, ಮಂಗಳೂರು, ಮಹಾರಾಷ್ಟ್ರದ ಕನ್ನಡ ಕಲಾಭಿಮಾನಿಗಳಿಗೆ ಹೃದಯಸ್ಪರ್ಶಿ ನಮನಗಳೊಂದಿಗೆ ಜಗದೀಶ್ ಶಿವಪುರ ಇವರ ಸಂಯೋಜನೆಯಲ್ಲಿ 50ರ ಸುವರ್ಣ ಸಂಭ್ರಮ ‘ಸ್ವರಕಂಠೀರವ’ ಡಾ. ರಾಜ್ ಸವಿನೆನಪು ಕಾರ್ಯಕ್ರಮವು ದಿನಾಂಕ 24-09-2023ನೇ ಭಾನುವಾರ ಸಂಜೆ ಗಂಟೆ 4ಕ್ಕೆ ಮುಂಬೈ, ಸಾಂತಕ್ರೂಸ್ (ಈಸ್ಟ್)ನ ಬಿಲ್ಲವರ ಅಸೋಸಿಯೇಶನ್ಸ್ ಆಡಿಟೋರಿಯಂನಲ್ಲಿ ನಡೆಯಲಿದೆ.
ಇದೇ ಸಂದರ್ಭದಲ್ಲಿ ‘ಸ್ವರತಪಸ್ವಿ’, ‘ಕರ್ನಾಟಕ ಸ್ವರಕಂಠೀರವ’ ಜ್ಯು. ರಾಜ್‌ಕುಮಾರ್ ಖ್ಯಾತಿಯ ಜಗದೀಶ ಶಿವಪುರ ಇವರಿಂದ ಡಾ.ರಾಜ್ ಸವಿನೆನಪಿನ ಮಧುರ ಗೀತೆಗಳು ಮತ್ತು ಶ್ರೀಮತಿ ದೀಪಿಕಾ ದಿವಾಕರ್ ಆಚಾರ್ಯ ಇವರ ‘ನೃತ್ಯ ವೈವಿಧ್ಯತೆ’ ಪ್ರದರ್ಶನಗೊಳ್ಳಲಿದೆ.
ಶ್ರೀ ಜಗದೀಶ್ ಶಿವಪುರ ಇವರ ಸ್ವಾಗತ ಪ್ರಸ್ತಾವನೆಯೊಂದಿಗೆ ಪ್ರಾರಂಭಗೊಳ್ಳಲಿರುವ ಈ ಸಮಾರಂಭಕ್ಕೆ ಶ್ರೀಮತಿ ಸವಿತಾ ಅಶೋಕ್ ಪುರೋಹಿತ್ ದೀಪ ಪ್ರಜ್ವಲನೆ ಮಾಡಲಿದ್ದಾರೆ. ನವಿ ಮುಂಬೈಯ ಪನ್‌ವೆಲ್ ನಲ್ಲಿರುವ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಅಧ್ಯಕ್ಷರಾದ ಸಿ.ಎ. ಶ್ರೀ ಶ್ರೀಧರ ಆಚಾರ್ಯ ಸಮಾರಂಭದ ಸಭಾಧ್ಯಕ್ಷತೆ ವಹಿಸಿದ್ದು, ‘ಕರ್ನಾಟಕ ಮಲ್ಲ’ ದಿನಪತ್ರಿಕೆಯ ಸಂಪಾದಕರಾದ ಶ್ರೀ ಚಂದ್ರಶೇಖರ್ ಪಾಲೆತ್ತಾಡಿ ಶುಭಾಶಂಸನೆಗೈಯಲಿದ್ದಾರೆ. ಮುಂಬೈಯ ಕಲಾಜಗತ್ತು ಸ್ಥಾಪಕಾಧ್ಯಕ್ಷರಾದ ತೋನ್ಸೆ ಶ್ರೀ ವಿಜಯಕುಮಾರ್ ಶೆಟ್ಟಿ, ಮುಂಬಯಿ ಶ್ರೀ ಬಾಲಾಜಿ ಕೋ-ಆಪರೇಟಿವ್ ಸೊಸೈಟಿಯ ಕಾರ್ಯಾಧ್ಯಕ್ಷರಾದ ಶ್ರೀ ಜಿ.ಟಿ. ಆಚಾರ್ಯ ಮತ್ತು ಸಂಘಟಕರಾದ ಶ್ರೀ ಮೋಹನ್ ರೈ ಕರ್ನೂರು ಇವರುಗಳು ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡಲಿದ್ದಾರೆ. ಹಿರಿಯ ಕಲಾ ಸಾಹಿತಿಯಾದ ಶ್ರೀ ಹೆಚ್. ಜನಾರ್ದನ ಹಂದೆ ಕೋಟ ಇವರಿಂದ ‘ಚಂಪು ಕಾವ್ಯ’ ಪ್ರಸ್ತುತಿ ನಡೆಯಲಿದೆ. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಗೌರವಿಸಿ ಸನ್ಮಾನಿಲಾಗುವುದು.
ಈ ಕಾರ್ಯಕ್ರಮದ ನಿರೂಪಣೆಯನ್ನು ಬೆಂಗಳೂರಿನ ಉಪನ್ಯಾಸಕಿ ಶ್ರೀಮತಿ ಮಾಧುರಿ ಶ್ರೀರಾಮ್ ನಿರ್ವಹಿಸಲಿದ್ದಾರೆ. ಮಧುರತರಂಗದ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು ಈ ಕಾರ್ಯಕ್ರಮಕ್ಕೆ ತಮ್ಮೆಲ್ಲರಿಗೂ ಆದರದ ಸ್ವಾಗತ ಕೋರಿದ್ದಾರೆ.