ಮಂಗಳೂರು : ಮಂಗಳೂರಿನ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ವಠಾರದಲ್ಲಿ ಶ್ರೀಕಾಳಿಕಾಂಬಾ ವಿನಾಯಕ ಯಕ್ಷಗಾನ ತರಬೇತಿ ಕೇಂದ್ರದ ವಿದ್ಯಾರ್ಥಿಗಳಿಂದ ‘ಶ್ರೀದೇವಿ ಮಹಿಷಮರ್ದಿನಿ’ ಎನ್ನುವ ಯಕ್ಷ ಕಥಾನಕವನ್ನು ದಿನಾಂಕ 17-09-2023ರ ಶ್ರೀವಿಶ್ವಕರ್ಮ ಪೂಜಾ ಮಹೋತ್ಸವದ ಸಂದರ್ಭದಲ್ಲಿ ಪ್ರದರ್ಶಿಸಲಾಯಿತು.
ಯಕ್ಷ ಗುರು ಡಾ. ದಿನಕರ್ ಪಚ್ಚನಾಡಿಯವರ ನಿರ್ದೇಶನದಲ್ಲಿ ಪ್ರದರ್ಶಿಸಲ್ಪಟ್ಟ ಈ ಪ್ರಸಂಗದ ಹಿಮ್ಮೇಳದಲ್ಲಿ ಭಾಗವತರಾಗಿ ಭವ್ಯಶ್ರೀ ಮಂಡೆಕೋಲು ಅತ್ಯುತ್ತಮ ಸ್ವರ ಮಾಧುರ್ಯದ ಮೂಲಕ ಅಪಾರ ಜನ ಮೆಚ್ಚುಗೆಗೆ ಪಾತ್ರರಾದರು. ಹಾಗೆಯೇ ವಿದ್ಯಾರ್ಥಿಗಳು ಪ್ರಥಮ ಬಾರಿಗೆ ಪ್ರದರ್ಶನವನ್ನು ನೀಡಿದರೂ ಕೂಡ ಯಾವುದೇ ವೃತ್ತಿಪರರಿಗೆ ಕಡಿಮೆ ಇಲ್ಲದಂತೆ ತಮ್ಮ ಆಂಗಿಕ – ವಾಚಿಕ-ಶಾರೀರಿಕ ಅಭಿನಯದ ಮೂಲಕ ಕಲಾಸಕ್ತರ
ಮನಸೂರೆಗೊಂಡರು. ಈ ಸಂದರ್ಭದಲ್ಲಿ ಯಕ್ಷ ತರಬೇತಿ ನೀಡಿದ ದಿನಕರ್ ಪಚ್ಚನಾಡಿಯವರನ್ನು ಅಭಿನಂದಿಸಲಾಯಿತು. ಶ್ರೀಕಾಳಿಕಾಂಬಾ ವಿನಾಯಕ ದೇವಸ್ಥಾನದ ಸದಸ್ಯರಾದ ಕೆ. ಕೆ. ವಿಠ್ಠಲ್ ಹಾಗೂ ಜಯಕರ ಟಿ ಉಪಸ್ಥಿತರಿದ್ದರು. ಯಕ್ಷಗಾನ ಕೇಂದ್ರದ ಅಧ್ಯಕ್ಷರಾದ ಶ್ರೀ ಗುರುರಾಜ್ ಕೆ ಜೆ, ಸಂಚಾಲಕರಾದ ನಾಗರಾಜ್ ಆಚಾರ್ ಹಾಗೂ ಕಾರ್ಯದರ್ಶಿ ಪ್ರದೀಪ್ ಆಚಾರ್ಯ ಉರ್ವ ಉಪಸ್ಥಿತರಿದ್ದು ಮಕ್ಕಳಿಗೆ ಮಾರ್ಗದರ್ಶನವನ್ನು ನೀಡಿದರು. ಸಂತೋಷ್ ಪಂಜಿಕಲ್ ಸ್ವಾಗತಿಸಿ, ಬಿ.ಜಿ ರಮೇಶ್ ಆಚಾರ್ ಕಾರ್ಯಕ್ರಮ ನಿರೂಪಿಸಿದರು.