ಬೆಂಗಳೂರು : ಬೆಂಗಳೂರಿನ ವೀರಲೋಕ ದೇಸೀ ಜಗಲಿ ಬಳಗ ಮತ್ತು ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘದ ಆಶ್ರಯದಲ್ಲಿ ಬಾಯಿಕಟ್ಟೆಯ ಶ್ರೀ ಲಕ್ಷ್ಮೀ ಮಿಲ್ಸ್ ಸಭಾ ಭವನದಲ್ಲಿ ಎರಡು ದಿನಗಳ ಜಿಲ್ಲಾ ಮಟ್ಟದ ಕಥಾ ಕಮ್ಮಟವು ದಿನಾಂಕ 23-09-2023 ಮತ್ತು 24-09-2023ರಂದು ಜರಗಿತು. ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಖ್ಯಾತ ಸಂಶೋಧಕ, ಅನುವಾದಕ ಡಾ. ಮೋಹನ ಕುಂಟಾರ್ ಇವರು “ಸಾಹಿತ್ಯದ ಬರವಣಿಗೆಗೆ ತೆರೆದ ಸಮಾಜವೇ ಪಠ್ಯ. ಸಾಹಿತ್ಯ ಅನುಭವ ಜನ್ಯ ಎಂಬುದು ನಿಜವಾದರೂ ಅನುಭವ ಇರುವವರೆಲ್ಲ ಲೇಖಕರಾಗುವುದಿಲ್ಲ. ಅನುಭವವನ್ನು ಅಭಿವ್ಯಕ್ತಿಸುವ ಕಲೆ ಸಿದ್ಧಿಸಿದವರು ಮಾತ್ರ ಸಾಹಿತಿ ಎನಿಸಿಕೊಳ್ಳುತ್ತಾರೆ. ಬದುಕಿನ ಗೊಂದಲಗಳ ನಡುವೆ ಹುಟ್ಟುವ ತೀಕ್ಷ್ಣ ಭಾವ ಬರಹಗಾರರನ್ನು ಸೃಷ್ಟಿಸುತ್ತದೆ. ಜೀವನದ ಸತ್ಯಗಳನ್ನು ಸೆರೆಹಿಡಿಯಲು ನೆರವಾಗುತ್ತದೆ. ಮನುಷ್ಯ ಮನಸ್ಸಿನ ಮೂಲ ರಾಗ ಭಾವಗಳನ್ನು ಹೊಂದಿದ ಸಾಹಿತ್ಯ ಎಂದಿಗೂ ಜೀವಂತವಾಗಿರುತ್ತದೆ” ಎಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಖ್ಯಾತ ಲೇಖಕಿ ಡಾ. ಪ್ರಮೀಳ ಮಾಧವ ಅವರು “ಲೇಖಕನಾದವನಿಗೆ ಪ್ರತಿಭೆಯ ಕಣ್ಣು ಇರಬೇಕು. ಉತ್ತಮ ಕತೆಗಳಿಗೆ ಅಡ್ಡಗೋಡೆಗಳು ಇಲ್ಲ. ಸಾಹಿತ್ಯವು ಹಿತವಾಗಿದ್ದು ಸಂಸ್ಕಾರ ಭರಿತವಾಗಿರಬೇಕು. ನಿರಂತರ ಬರವಣಿಗೆಯ ಮೂಲಕ ಕೈ ಪಳಗಬೇಕು. ಸದಾ ಹೊಸತನ್ನು ಕಾಣುವ, ಹೊಸತನ್ನು ಕಟ್ಟುವ ಕಲೆಯನ್ನು ಹೊಂದಿರಬೇಕು” ಎಂದು ನುಡಿದರು.
ಅಧ್ಯಕ್ಷತೆಯನ್ನು ವಹಿಸಿದ ಪ್ರಸಿದ್ಧ ಕವಿ, ಪತ್ರಕರ್ತ ರಾಧಾಕೃಷ್ಣ ಉಳಿಯತ್ತಡ್ಕ ಸಾಹಿತ್ಯವು ಜನ ಸಾಮಾನ್ಯರ ಬದುಕಿಗೆ ಸ್ಪಂದಿಸಬೇಕು. ಶ್ರಮ ಸಂಸ್ಕೃತಿಯ ಸೂಕ್ಷ್ಮಗಳ ಪ್ರತಿಪಾದನೆ ಕಾಣಿಸಿಕೊಳ್ಳಬೇಕು. ವರದಿಯಾಗಿ, ಘೋಷಣೆಯಾಗಿ ಮತ್ತು ಬರೇ ಸ್ವಗತವಾಗಿ ಮೂಡಿಬಂದರೆ ಅದು ಸಾಹಿತ್ಯವೆನಿಸಲಾರದು. ಚಿಂತನೆಗೆ ಹಚ್ಚುವ, ವೈಚಾರಿಕ ನೆಲೆಗಟ್ಟಿನಲ್ಲಿ ಸಮಕಾಲೀನ ಸ್ಥಿತಿಗತಿಗಳಿಗೆ ಕನ್ನಡಿಯನ್ನು ಹಿಡಿಯುವ ಕತೆಗಳ ರಚನೆಯಾಗಬೇಕು. ವಾಸ್ತವ ಸತ್ಯವನ್ನು ಒಳಗೊಂಡಿರಬೇಕು ಎಂದರು. ಎಸ್.ಎಲ್. ಮಂಜುನಾಥ್ ಬೆಂಗಳೂರು, ಸುಂದರ ಬಾರಡ್ಕ, ನಿವೃತ್ತ ಮುಖ್ಯೋಪಾಧ್ಯಾಯ ಶ್ರೀನಿವಾಸ ಬಂಗೇರ ಉಪಸ್ಥಿತರಿದ್ದರು.
ಶಿಬಿರಾರ್ಥಿಗಳು ತಾವು ಬರೆದ ಕತೆಗಳನ್ನು ಓದಿದರು. ಸಂವಾದಕ್ಕೆ ಚಾಲನೆಯನ್ನು ನೀಡಿದ ಡಾ. ಎಸ್.ಎಲ್. ಮಂಜುನಾಥ್ ಅವರು “ಕತೆಗಳನ್ನು ಕೂಲಂಕಷವಾಗಿ ವಿಮರ್ಶಿಸಿ, ಪ್ರೀತಿ ಪ್ರೇಮ ಪ್ರಣಯ ಮತ್ತು ಕೇವಲ ಕಾಲ್ಪನಿಕ ವಿಚಾರಗಳಲ್ಲಿ ಲೀನವಾಗದೆ ಆಧುನಿಕ ಸಮಾಜವು ಎದುರಿಸುವ ಭಾವನಾತ್ಮಕ ತಳಮಳಗಳನ್ನು ಸ್ಪರ್ಶಿಸುವ, ಸಮಕಾಲೀನ ತಲ್ಲಣಗಳನ್ನು ಸಂಕೀರ್ಣವಾಗಿ ಅಭಿವ್ಯಕ್ತಿಸುವ ಕತೆಗಳನ್ನು ರಚಿಸುವ ಮೂಲಕ ಶಿಬಿರಾರ್ಥಿಗಳು ಪ್ರಾಯಕ್ಕೆ ಮೀರಿದ ಪ್ರಬುದ್ಧತೆ ಮತ್ತು ಪ್ರೌಢಿಮೆಯನ್ನು ವ್ಯಕ್ತ ಪಡಿಸಿದ್ದಾರೆ” ಎಂದು ಅಭಿಪ್ರಾಯಪಟ್ಟರು.
ಶಿವಮೊಗ್ಗ ಕರ್ನಾಟಕ ಸಂಘದ ಕಥಾ ಪ್ರಶಸ್ತಿ ವಿಜೇತ ಕತೆಗಾರ್ತಿ ಸ್ನೇಹಲತಾ ದಿವಾಕರ್ ತಾವು ಕತೆಗಾರ್ತಿಯಾಗಿ ಬೆಳೆದು ಬಂದ ಹಿನ್ನೆಲೆ ಮತ್ತು ಅದರ ಆಧಾರದಲ್ಲಿ ರೂಪು ತಳೆದ ಕತೆಗಳನ್ನು ಉದಾಹರಿಸಿ ಮಾತನಾಡಿದರು. ಶಿಬಿರಾರ್ಥಿಗಳು ಕಮ್ಮಟದ ಬಗ್ಗೆ ಅಭಿಪ್ರಾಯಗಳನ್ನು ಮಂಡಿಸಿದರು. ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘದ ಕಾರ್ಯಾಧ್ಯಕ್ಷರಾದ ಹಿರಿಯ ಸಾಹಿತಿ ಪ್ರೊ. ಪಿ.ಎನ್. ಮೂಡಿತ್ತಾಯ ಸಮಾರೋಪದ ನುಡಿಗಳನ್ನಾಡಿದರು. ಜಿಲ್ಲಾ ಸಂಚಾಲಕರಾದ ಡಾ. ಸುಭಾಷ್ ಪಟ್ಟಾಜೆ ಸ್ವಾಗತಿಸಿ ವಂದಿಸಿದರು.
1 Comment
Pingback: ಕಾರ್ಯಕ್ರಮ ವಿಮರ್ಶೆ - ಕಾಸರಗೋಡಿನ ಕಥಾ ಕಮ್ಮಟ | ಕಥೆಯಾದ ಕಥಾ ಶಿಬಿರ - ಪ್ರೊl ಪಿ ಎನ್ ಮೂಡಿತ್ತಾಯ - Roovari