ಕಾಸರಗೋಡು : ಚಿನ್ಮಯ ವಿದ್ಯಾಲಯ, ವಿದ್ಯಾನಗರದ ತೇಜಸ್ ಸಭಾಂಗಣದಲ್ಲಿ ದಿನಾಂಕ 21-09-2023ರಂದು ಪ್ರಸಿದ್ಧ ಒಡಿಸ್ಸಿ ನೃತ್ಯ ಕಲಾವಿದೆ ಆರುಷಿ ಮುದುಗಲ್ ಪ್ರಸ್ತುತಪಡಿಸಿದ ಒಡಿಸ್ಸಿ ನೃತ್ಯ ಪ್ರದರ್ಶನವು ಸಾವಿರಾರು ಪ್ರೇಕ್ಷಕರನ್ನು ರಂಜಿಸಿತು. ಒಡಿಸ್ಸಿ ನೃತ್ಯದ ಆರಂಭಿಕ ಅಧ್ಯಯನ ಹಾಗೂ ತಾಂತ್ರಿಕ ಕೌಶಲಗಳನ್ನು ಇವರು ದೆಹಲಿಯ ಮಹಾವಿದ್ಯಾಲಯದಲ್ಲಿ ಗುರು ಮಾಧವಿ ಮುದಗಲ್ ಅವರಿಂದ ಅಭ್ಯಸಿಸಿ ಭಾರತದ ಶ್ರೇಷ್ಠ ಹತ್ತು ಒಡಿಸ್ಸಿ ಕಲಾವಿದರಲ್ಲಿ ಒಬ್ಬರೆನಿಸಿದ್ದಾರೆ. ಜರ್ಮನಿ, ಫ್ರಾನ್ಸ್, ಆಸ್ಟ್ರೇಲಿಯ, ಯು.ಕೆ., ಬೆಲ್ಜಿಯಂ ಮೊದಲಾದ ದೇಶಗಳಲ್ಲಿ ನಡೆದ ಅಂತಾರಾಷ್ಟ್ರೀಯ ನೃತ್ಯೋತ್ಸವಗಳಲ್ಲಿ ಪ್ರದರ್ಶನ ನೀಡಿದ ಆರುಷಿ ಮುದಗಲ್ ಸ್ಪಿಕ್ ಮೆಕೆ ಸಂಘಟನೆಯ ಭಾಗವಾಗಿದ್ದು, ಯುವ ಜನರಲ್ಲಿ ಭಾರತೀಯ ಶಾಸ್ತ್ರೀಯ ಸಂಗೀತ ಕಲೆ ಹಾಗೂ ಸಂಸ್ಕೃತಿಯನ್ನು ಪರಿಚಯಿಸುವ ಉದ್ದೇಶವನ್ನಿಟ್ಟುಕೊಂಡಿರುವರು. ಸಂಗೀತ ನಾಟಕ ಅಕಾಡೆಮಿಯಿಂದ ಉಸ್ತಾದ್ ಬಿಸ್ಮಿಲ್ಲ ಖಾನ್ ಪುರಸ್ಕಾರಕ್ಕೆ ಭಾಜನರಾದ ಇವರು ಎಫ್.ಐ.ಸಿ.ಸಿ.ಯಿಂದ ‘ಯುವ ವನಿತೆಯ ಸಾಧನೆ’, ಗುರು ಕೇಳು ಚರಣ್ ಮಹಾ ಪಾತ್ರರಿಂದ ‘ಯುವ ಪ್ರತಿಭಾ ಸಮ್ಮಾನ್’, ರಾಷ್ಟ್ರಪತಿಯಿಂದ ‘ಬಾಲಶ್ರೀ ಪುರಸ್ಕಾರ’, ರಾಜೀವ್ ಗಾಂಧಿ ಎಕ್ಸಲೆನ್ಸ್ ಪುರಸ್ಕಾರ ಮೊದಲಾದ ಗೌರವಗಳಿಗೆ ಪಾತ್ರರಾಗಿರುವರು.
ಯಾವುದೇ ಕಲೆ ಅದರದ್ದೇ ಆದ ಭಾಷೆಯಲ್ಲಿ ಕಥೆಯನ್ನು ಹೇಳುತ್ತದೆ. ಒಡಿಸ್ಸಿ ನೃತ್ಯದ ಆಂಗಿಕ ಅಭಿನಯ, ಮುದ್ರೆಗಳು, ಹಾವಭಾವಗಳ ಮೂಲಕ ನರ್ತಕಿ ಗಣೇಶ ಸ್ತುತಿಯೊಂದಿಗೆ ಪ್ರಾರಂಭಿಸಿ ರಾಧಾಕೃಷ್ಣ ಪ್ರಣಯ ಸಲ್ಲಾಪ, ದೇವರೊಂದು ನಾಮ ಹಲವು – ಅಹಂ ಬ್ರಹ್ಮಾಸ್ಮಿ ಮುಂತಾದ ಅದ್ಭುತ ಲೀಲೆಗಳನ್ನು ಪ್ರದರ್ಶಿಸಿದರು. ಕಲಾವಿದೆ ಆರುಷಿ ಮುದಗಲ್ ಅವರ ನೃತ್ಯಕ್ಕೆ ಸವಾನಿ ಮುದಗಲ್ ಹಾಗೂ ಕುಶಲ್ ಶರ್ಮ ಸಂಗೀತದಲ್ಲೂ, ರಜತ್ ಪ್ರಸನ್ನ ಮತ್ತು ಖರಕ್ ಸಿಂಗ್ ಕೊಳಲಿನಲ್ಲೂ ಸಾಥ್ ನೀಡಿದರು.
ಚಿನ್ಮಯ ಮಿಷನ್ ಕೇರಳ ರಾಜ್ಯದ ಮುಖ್ಯಸ್ಥ ಸ್ವಾಮಿ ವಿವಿಕ್ತಾನಂದ ಸರಸ್ವತೀ, ಬ್ರಹ್ಮಚಾರಿಣಿ ರೋಜಿಷಾಜಿ, ಪ್ರಾಂಶುಪಾಲ ಸುನಿಲ್ ಕುಮಾರ್ ಕೆ.ಎಸ್., ಉಪ ಪ್ರಾಂಶುಪಾಲ ಪ್ರಶಾಂತ್ ಬಿ, ಮುಖ್ಯೋಪಾಧ್ಯಾಯಿನಿಯರಾದ ಪೂರ್ಣಿಮ ಎಸ್.ಆರ್., ಸಿಂಧು ಶಶೀಂದ್ರನ್, ಅಧ್ಯಾಪಕ ವೃಂದದವರು, ವಿದ್ಯಾರ್ಥಿಗಳು ನೃತ್ಯ ಪ್ರದರ್ಶನಕ್ಕೆ ಸಾಕ್ಷಿಗಳಾದರು. ಕು. ಅಜಾ ಫಾತಿಮ ಸ್ವಾಗತಿಸಿ, ಕು. ಲೀನ ವಂದಿಸಿ, ಶ್ರೀಯ ಅಡಿಗ ನಿರೂಪಿಸಿದರು.