ಕಾರ್ಕಳ : ಕನ್ನಡ ಸಂಘ ಕಾಂತಾವರ ಹಾಗೂ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕಾರ್ಕಳ ತಾಲೂಕು ಘಟಕ ಜಂಟಿಯಾಗಿ ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ನಡೆಯುವ ತಿಂಗಳ ಉಪನ್ಯಾಸ ಕಾರ್ಯಕ್ರಮ ‘ಅರಿವು -ತಿಳಿವು’ ದಿನಾಂಕ 23-09-2023 ರಂದು ಕಾರ್ಕಳದ ಸರಕಾರಿ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಇವರು “ಬಿ.ಜಿ.ಎಲ್ ಸ್ವಾಮಿ ಎಂಬ ಗಿಡಮರಗಳ ಒಡನಾಡಿ” ಈ ವಿಷಯದಲ್ಲಿ ಉಪನ್ಯಾಸ ನೀಡುತ್ತಾ “ಕನ್ನಡ ಶಾಸನಗಳಿಂದ ಮೊತ್ತಮೊದಲಿಗೆ ಸಸ್ಯ ಸಂಕುಲಗಳ ಕುರಿತು ಅಧ್ಯಯನ ಮಾಡಿದ ಹೆಗ್ಗಳಿಕೆ ಡಾ.ಬಿ.ಜಿ ಎಲ್. ಸ್ವಾಮಿಯವರಿಗೆ ಸಲ್ಲುತ್ತದೆ. ‘ಹಸಿರು ಹೊನ್ನು’ ಕೃತಿ ಸಾಹಿತ್ಯ ಲೋಕದಲ್ಲಿ ಸಸ್ಯ ಶಾಸ್ತ್ರಗಳ ಕುರಿತಂತೆ ಇರುವ ಪ್ರಸಿದ್ಧ ಮತ್ತು ವೈಶಿಷ್ಯಪೂರ್ಣ ಕೃತಿಯಾಗಿದೆ. ಡಿ.ವಿ.ಜಿ.ಯವರು ಮಾನವ ಜಗತ್ತಿನ ಭಾವಗಳನ್ನು ಕುರಿತು ಬರೆದರೆ ಮಗ ಬಿ.ಜಿ.ಎಲ್ ಸ್ವಾಮಿಯವರು ಸಸ್ಯ ಸಂಕುಲಗಳ ಹೃದಯಗಳ ಹಾಗೂ ಭಾವಗಳ ಜೊತೆ ಬೆರೆತು ಅರಿತರು. ತಂದೆ ಡಿ.ವಿ.ಜಿ.ಯವರಿಂದ ಶಿಸ್ತುಬದ್ಧ ಬದುಕಿನೊಂದಿಗೆ ಹಾಸ್ಯ ವಿನೋದ ಪ್ರವೃತ್ತಿಯಿಂದಲೇ ವಿಡಂಬನೆಗಳನ್ನೂ ಮಾಡಿದವರು. ಅವರು ಒಬ್ಬ ಒಳ್ಳೆಯ ಪಿಟೀಲು ವಾದಕರಾಗಿ, ವರ್ಣರಂಜಿತ ಕಸೂತಿ ಕಲಾಕರರಾಗಿಯೂ ಇದ್ದರು” ಎಂದು ಬಿ. ಜಿ.ಎಲ್ ಸ್ವಾಮಿಯವರ ಜೀವನ ದರ್ಶನವನ್ನು ಪರಿಚಯಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಭಾಸಾಪದ ರಾಜ್ಯಾಧ್ಯಕ್ಷ ಸಾಹಿತಿ ಡಾ.ನಾ.ಮೊಗಸಾಲೆಯವರು ವಹಿಸಿದ್ದು, ಅಭಾಸಾಪ ತಾಲೂಕು ಸಮಿತಿಯ ಗೌರವಾಧ್ಯಕ್ಷ ಎಸ್.ನಿತ್ಯಾನಂದ ಪೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕೋಶಾಧಿಕಾರಿ ಸುಧಾಕರ ಶಾನುಭೋಗರು ಪ್ರಾರ್ಥಿಸಿ, ಕಾರ್ಯದರ್ಶಿ ಗಣೇಶ್ ಜಾಲ್ಸೂರು ಸ್ವಾಗತಿಸಿ, ಜತೆಕಾರ್ಯದರ್ಶಿ ವೀಣಾ ರಾಜೇಶ್ ಉಪನ್ಯಾಸಕಾರರನ್ನು ಪರಿಚಯಿಸಿ, ಸದಸ್ಯರಾದ ಬಾಲಕೃಷ್ಣ ರಾವ್ ಕಾರ್ಯಕ್ರಮವನ್ನು ನಿರೂಪಿಸಿ, ಅಭಾಸಾಪ ತಾಲೂಕು ಸಮಿತಿಯ ಅಧ್ಯಕ್ಷೆ ಮಿತ್ರಪ್ರಭಾ ಹೆಗ್ಡೆಯವರು ವಂದಿಸಿದರು. ನಿವೃತ್ತ ಪ್ರಾಂಶುಪಾಲೆ ಇಂದಿರಾ.ಕೆ ಇವರ ಸಹಕಾರದಲ್ಲಿ ಕಾರ್ಯಕ್ರಮವು ಶಾಂತಿ ಮಂತ್ರದೊಂದಿಗೆ ಸುಸಂಪನ್ನಗೊಂಡಿತು.