ಬೆಂಗಳೂರು : ಜಿ.ಬಿ. ಜೋಶಿ ಮೆಮೋರಿಯಲ್ ಟ್ರಸ್ಟ್ ಧಾರವಾಡ ಹಾಗೂ ಕ್ಷಮತಾ ಹುಬ್ಬಳ್ಳಿ ಪ್ರಸ್ತುತಪಡಿಸುವ ‘ವಸುಂಧರಾ’ ಮಹಿಳಾ ವಿದ್ವನ್ಮಣಿಗಳ ದಿನಪೂರ್ತಿ ಸಂಗೀತ ಸಮ್ಮೇಳನವು ದಿನಾಂಕ 02-10-2023ರಂದು ಬೆಂಗಳೂರಿನ ಜಯನಗರದ ಯುವಪಥ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಬೆಂಗಳೂರಿನ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ, ರೋಟರಿ ಕ್ಲಬ್ ಸಖಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕೇಂದ್ರ ಸರ್ಕಾರದ ಸಂಸ್ಕೃತಿ ಇಲಾಖೆ, ಅನಾಮಿಕ ಸಂಸ್ಥೆ, ಕಾಮತ್ ಮತ್ತು ಕಾಮತ್ ಸಹೋದರರು, ಪುಣೆಯ ನಾನಾಸಾಹೇಬ ಅಳವಣಿ ಟ್ರಸ್ಟ್ ಹಾಗೂ ಬಾಗಲಕೋಟೆಯ ನಟರಾಜ ಸಂಗೀತ ವಿದ್ಯಾಲಯ ಮತ್ತು ಕಲಾಸಂಘಗಳ ಸಹಪ್ರಾಯೋಜಕತ್ವದಲ್ಲಿ ವನಿತೆಯರ ಸಂಗೀತ ಸಮ್ಮೇಳನ ದಿನಪೂರ್ತಿ ನಡೆಯಲಿದೆ. ಇದರಲ್ಲಿ ಸಹಕಲಾವಿದರಾದಿಯಾಗಿ ಭಾಗವಹಿಸುವ ಎಲ್ಲರೂ ಮಹಿಳೆಯರೇ ಇರುವುದು ವಿಶೇಷವಾಗಿದೆ. ಹಿಂದುಸ್ತಾನಿ ಹಾಗೂ ಕರ್ನಾಟಕ ಸಂಗೀತಗಳ ನಾದಲಹರಿ ಈ ಸಮ್ಮೇಳನದಲ್ಲಿ ಮೊಳಗಲಿದೆ.
ಬೆಂಗಳೂರಿನ ವಿದುಷಿ ಪೂರ್ಣಿಮಾ ಭಟ್ ಕುಲಕರ್ಣಿ ಅವರ ಗಾಯನದೊಂದಿಗೆ ಸಂಗೀತೋತ್ಸವಕ್ಕೆ ಚಾಲನೆ ದೊರೆಯಲಿದೆ. ನಂತರ ಶ್ರೀದೇವಿ ಹಾಗೂ ಡಾ. ಗಂಗಾ ಕಾಮತ್ ಅವರಿಂದ ದ್ವಂದ್ವ ವೀಣಾವಾದನ ಮೂಡಿಬರಲಿದೆ. ಫ್ಲ್ಯೂಟ್ ಸಿಸ್ಟರ್ಸ್ ಖ್ಯಾತಿಯ ವೀಣಾ ಕಾಮತ್ ಹಾಗೂ ಮಿನಾಕ್ಷಿ ಕಾಮತ್ ಅವರಿಂದ ಕೊಳಲು ವಾದನದ ನಿನಾದ ರಿಂಗಣಿಸಲಿದೆ. ಕೋಲ್ಕತ್ತಾದ ಸೇನಿಯಾ-ಮೈಹಾರ್ ಘರಾಣೆಯ ಸರೋದ್ ವಿದುಷಿಯರಾದ ಟ್ರೊಯ್ಲಿ ಮತ್ತು ಮೊಯ್ಸಿಲಿ ದತ್ತಾ ಅವರು ಮಧ್ಯಾಹ್ನದ ರಾಗಗಳೊಂದಿಗೆ ಸರೋದ ತಂತುಗಳ ಝೇಂಕಾರವನ್ನು ಹರಿಸಲಿದ್ದಾರೆ. ಪುಣೆಯ ರುಚಿರಾ ಕೇದಾರ ಅವರು ತಮ್ಮ ಸುಮಧುರ ಕಂಠದಿಂದ ಅಪರಾಹ್ನದ ರಾಗಗಳನ್ನು ಪ್ರಸ್ತುತಪಡಿಸಲಿದ್ದಾರೆ. ಇನ್ನು ಸಂಜೆ ರಾಂಪುರ ಸೇನಿಯಾ ಘರಾಣೆಯ ವಿದುಷಿ ಸಹನಾ ಬ್ಯಾನರ್ಜಿ ಅವರಿಂದ ಸಿತಾರ ವಾದನ ಹೊರಹೊಮ್ಮಲಿದೆ. ನಂತರ ಪ್ರಸ್ತುತಗೊಳ್ಳುವ ಮುಂಬೈನ ವಿದುಷಿ ಚೇತನಾ ಪಾಠಕ್ ಅವರ ಗಾನಸುಧೆಯೊಂದಿಗೆ ‘ವಸುಂಧರಾ’ ಸಂಗೀತ ಸಮ್ಮೇಳನಕ್ಕೆ ತೆರೆ ಬೀಳಲಿದೆ.
ಸಹಕಲಾವಿದೆಯರಾಗಿ ನವದೆಹಲಿಯ ಪಾರೋಮಿತಾ ಮುಖರ್ಜಿ ಹಾರ್ಮೋನಿಯಂ, ಮುಂಬೈನ ಮುಕ್ತಾ ರಾಸ್ತೆ, ಪುಣೆಯ ಸಾವನಿ ತಳವಲಕರ ತಬಲಾ ಹಾಗೂ ಬೆಂಗಳೂರಿನ ಜ್ಯೋತ್ಸ್ನಾ ಹೆಬ್ಬಾರ ಮೃದಂಗದ ಸಾಥ್ ಸಂಗತ್ ಮಾಡಲಿದ್ದಾರೆ. ಧಾರವಾಡದ ವಿವಿಡ್‌ಲಿಪಿ ಸಂಸ್ಥೆಯ ಕಾರ್ಯಕ್ರಮದ ನೇರಪ್ರಸಾರವನ್ನು Facebook Live: https://www.facebook.com/vividlipi/live ಮತ್ತು Youtube Live: https://www.youtube.com/vividlipi/live ಮಾಡಲಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಸಮೀರ್ ಜೋಶಿ – 98454 47002 ಅನಂತ ಹರಿಹರ – 94488 38339
ಸಮ್ಮೇಳನದಲ್ಲಿ ಭಾಗವಹಿಸುವ ಕಲಾವಿದೆಯರು
ಬೆಳಗಿನ ಅವಧಿಯಲ್ಲಿ (9.45ರಿಂದ ಮಧ್ಯಾಹ್ನ 1 ಗಂಟೆಯವರೆಗೆ)
ಗಾಯನ – ಪೂರ್ಣಿಮಾ ಭಟ್ ಕುಲಕರ್ಣಿ, ಬೆಂಗಳೂರು
ಮೂಲತಃ ಧಾರವಾಡದವರಾದ ಪೂರ್ಣಿಮಾ ಭಟ್ ಕುಲಕರ್ಣಿ ಅವರು ನಾಡಿನ ಪ್ರಬುದ್ಧ ಗಾಯಕಿಯರಲ್ಲಿ ಒಬ್ಬರು. ಬಾಲ್ಯದಿಂದಲೂ ಸಂಗೀತದತ್ತ ಆಸಕ್ತಿ ಹೊಂದಿದ್ದ ಇವರು ತಮ್ಮ 12ನೇ ವಯಸ್ಸಿನಲ್ಲಿ ವಿದುಷಿ ಉಷಾ ದಾತಾರ್ ಅವರಲ್ಲಿ ಪ್ರಾರಂಭಿಕ ಹಂತದ ಶಿಕ್ಷಣ ಪಡೆದರು. ಮುಂದಿನ ದಿನಗಳಲ್ಲಿ ಸುರ್ ಸಿಂಗಾರ್ ಸಂಸ್ಥೆಯಲ್ಲಿ ಮುಂದುವರಿಸಿದರು. ನಂತರ ಅವರಿಗೆ ಗಾನಮಾಂತ್ರಿಕ ಪಂ. ಬಸವರಾಜ ರಾಜಗುರುಗಳ ಪದತಲದಲ್ಲಿ ಕುಳಿತು ಕಲಿಯುವ ಸೌಭಾಗ್ಯ ಒದಗಿಬಂತು. ಪಂ. ರಾಜಗುರುಗಳಿಂದ ದೊರೆತ ಅನೇಕ ವರ್ಷಗಳ ಆಳವಾದ ಮಾರ್ಗದರ್ಶನವು ಪೂರ್ಣಿಮಾ ಅವರನ್ನು ಉದಯೋನ್ಮುಖ ಗಾಯಕಿಯಾಗಿ ಹೊರಹೊಮ್ಮಿಸಿತು.
ನಂತರ ಹಾರ್ಮೋನಿಯಂ ಮಾಂತ್ರಿಕ ಪಂ. ವಸಂತ ಕನಕಾಪುರ ಹಾಗೂ ವಿದುಷಿ ಕುಸುಮ ಶೇಂಡೆ ಅವರಲ್ಲಿ ಸುಗಮ ಸಂಗೀತದ ಮಾರ್ಗದರ್ಶನ ಪಡೆದರು. ಮುಂದಿನ ದಿನಗಳಲ್ಲಿ ಪುಣೆಯ ಕುಸುಮ ಶೇಂಡೆ, ಉಷಾ ಚಿಪ್ಪಲಕಟ್ಟಿ ಹಾಗೂ ಮುಂಬೈನ ಮುರಳಿ ಮನೋಹರ ಶುಕ್ಲಾ ಅವರಲ್ಲಿ ಶಾಸ್ತ್ರೀಯ ಸಂಗೀತದ ಆಳವಾದ ಮಾರ್ಗದರ್ಶನ ಪಡೆದರು. ಹೀಗಾಗಿ ಈ ಗಾಯಕಿಯಲ್ಲಿ ಗ್ವಾಲಿಯರ್, ಕಿರಾನಾ, ಜೈಪುರ-ಅತ್ರೌಲಿ ಘರಾಣೆಗಳ ಶೈಲಿಯು ಮೇಳೈಸಿದೆ.
ಆಕಾಶವಾಣಿಯ ಎ ಗ್ರೇಡ್ ಕಲಾವಿದೆಯಾಗಿರುವ ಪೂರ್ಣಿಮಾ ಭಟ್ ಅವರು ಶಾಸ್ತ್ರೀಯ ಸಂಗೀತವಲ್ಲದೇ ಸುಗಮ ಸಂಗೀತ, ಠುಮರಿ, ಕಜರಿ, ಚೈತಿ, ಝೂಲಾ, ಮರಾಠಿ ಅಭಂಗಗಳು, ಭಾವಗೀತೆ, ನಾಟ್ಯಗೀತೆ, ವಚನಗಳನ್ನು ಪ್ರಸ್ತುತಪಡಿಸುವಲ್ಲಿ ಪ್ರಬುದ್ಧತೆ ಸಾಧಿಸಿದ್ದಾರೆ. ಧಾರವಾಡ, ಪುಣೆ, ಮುಂಬೈ, ಪಣಜಿ, ನವದೆಹಲಿ ಹೀಗೆ ವಿವಿಧೆಡೆಗಳ ಪ್ರತಿಷ್ಠಿತ ಸಂಗೀತೋತ್ಸವಗಳಲ್ಲಿ ತಮ್ಮ ಸಂಗೀತ ಸುಧೆಯನ್ನು ಹರಿಸಿದ್ದಾರೆ.
ಸಹಕಲಾವಿದರು : ಮುಕ್ತಾ ರಾಸ್ತೆ, ಮುಂಬೈ (ತಬಲಾ), ಪಾರೋಮಿತಾ ಮುಖರ್ಜಿ, ನವದಹೆಲಿ (ಹಾರ್ಮೋನಿಯಂ)
ವೀಣೆ ಹಾಗೂ ಕೊಳಲುಗಳ ವಾದನ
ಶ್ರೀದೇವಿ ಜೆ. ಕಾಮತ್ ಹಾಗೂ ಡಾ. ಗಂಗಾ ಕಾಮತ್ ಕುಡ್ವಾ (ವೀಣಾ ವಾದನ) ಇಲ್ಲಿ ತಾಯಿ-ಮಗಳ ಪ್ರತಿಭೆಯ ಅನಾವರಣಗೊಂಡಿದೆ. ವೀಣಾ ಜೆ. ಕಾಮತ್ ಹಾಗೂ ಮೀನಾಕ್ಷಿ ಜೆ. ಕಾಮತ್ (ಕೊಳಲು ವಾದನ) ಫ್ಲ್ಯೂಟ್ ಸಿಸ್ಟರ್ಸ್ ನಿಂದ ಕೊಳಲಿನ ನಿನಾದ
ಶ್ರೀದೇವಿ ಕಾಮತ್ : ಬೆಂಗಳೂರಿನ ಖ್ಯಾತ ವಕೀಲರಾದ ಮೆ. ಕಾಮತ್ & ಕಾಮತ್ ಸಂಸ್ಥೆಯ ಕೆ.ಜೆ. ಕಾಮತ್ ಅವರ ಮಡದಿ ಶ್ರೀದೇವಿ ಕಾಮತ್ ಅವರು ಪ್ರತಿಭಾವಂತ ವೀಣಾ ವಾದಕಿ. ತಮ್ಮ 8ನೇ ವಯಸ್ಸಿನಲ್ಲಿಯೇ ವೀಣೆಯನ್ನು ಕಲಿಯಲು ಆರಂಭಿಸಿದರು. ಮಂಗಳೂರಿನ ವಿದ್ವಾನ್ ಶ್ರೀನಿವಾಸ ಅವರು ಆರಂಭದಲ್ಲಿ ಸರಿಗಮಗಳ ಶ್ರೀಕಾರ ಹಾಕಿದರು. ನಂತರ ಬೆಂಗಳೂರಿನ ಡಾ. ಸುಮಾ ಸುಧೀಂದ್ರ ಅವರಲ್ಲಿ ಮುಂದುವರಿಸಿ ಆಳವಾದ ಮಾರ್ಗದರ್ಶನ ಪಡೆದು ಪ್ರಬುದ್ಧ ವೀಣಾ ವಾದಕಿಯಾಗಿ ಹೊರಹೊಮ್ಮಿದರು. ಮೂರುಸಾವಿರ ಕಲಾವಿದರುಳ್ಳ ಒಂದೇ ವೇದಿಕೆಯಲ್ಲಿ ವೀಣೆಯನ್ನು ನುಡಿಸಿ ಗಿನ್ನೆಸ್ ಬುಕ್ ರೆಕಾರ್ಡ್ಸ್ ಮಾಡಿ ಸಾಧನೆಗೈದಿರುವ ಶ್ರೀದೇವಿ ಕಾಮತ್ ಅವರು ಮೈಸೂರು ಯುವ ದಸರಾ, ರಾಜಭವನ, ವಿಧಾನಸೌಧ, ಆರ್ಟ್ ಆಫ್ ಲಿವಿಂಗ್, ಗಾಯನ ಸಮಾಜ ಹೀಗೆ ವಿವಿಧ ಪ್ರತಿಷ್ಠಿತ ವೇದಿಕೆಗಳಲ್ಲಿ ತಮ್ಮ ನಾದಸುಧೆಯನ್ನು ಹರಿಸಿದ್ದಾರೆ. ಮಾಜಿ ರಾಷ್ಟ್ರಪತಿ, ವಿಜ್ಞಾನಿ ಡಾ. ಎ.ಪಿ.ಜೆ ಅಬ್ದುಲ್ ಕಲಾಮ್ ಅವರಿಂದ ಸನ್ಮಾನಿತಗೊಂಡಿದ್ದಾರೆ.
ಡಾ. ಗಂಗಾ ಕಾಮತ್ ಕುಡ್ವಾ: ವೃತ್ತಿಯಿಂದ ವೈದ್ಯೆಯಾಗಿರುವ ಡಾ. ಗಂಗಾ ಕಾಮತ್ ಅವರು ಪ್ರವೃತ್ತಿಯಿಂದ ವೀಣಾ ವಾದನ ನುಡಿಸುವ ಪ್ರತಿಭಾವಂತ ಕಲಾವಿದೆ. ತಮ್ಮ 6ನೇ ವಯಸ್ಸಿನಿಂದಲೇ ವಿದುಷಿ ಸುಮಾ ಸುಧೀಂದ್ರ ಅವರಲ್ಲಿ ಆಳವಾದ ಮಾರ್ಗದರ್ಶನ ಪಡೆದು ಪ್ರಬುದ್ಧ ವೀಣಾವಾದಕರಾಗಿ ಹೊರಹೊಮ್ಮಿದವರು. ಇವರೂ ಕೂಡ ಮೂರುಸಾವಿರ ಕಲಾವಿದರುಳ್ಳ ಒಂದೇ ವೇದಿಕೆಯಲ್ಲಿ ವೀಣೆಯನ್ನು ನುಡಿಸಿ ಗಿನ್ನೆಸ್ ಬುಕ್ ರೆಕಾರ್ಡ್ಸ್ ಮಾಡಿ ಸಾಧನೆಗೈದಿದ್ದಾರೆ. ಡಾ. ಗಂಗಾ ಕಾಮತ್ ಅವರು ಹಂಪಿ ಉತ್ಸವ, ಅಂತರ್ರಾಷ್ಟ್ರೀಯ ಸಮ್ಮೇಳಗಳು, ಇಸ್ಕಾನ್ ಟೆಂಪಲ್, ರಾಜಭವನ, ವಿಧಾನಸೌಧ, ಆರ್ಟ್ ಆಫ್ ಲಿವಿಂಗ್, ಗಾಯನ ಸಮಾಜ ಹೀಗೆ ವಿವಿಧ ಪ್ರತಿಷ್ಠಿತ ವೇದಿಕೆಗಳಲ್ಲಿ ತಮ್ಮ ನಾದಸುಧೆಯನ್ನು ಹರಿಸಿದ್ದಾರೆ. ಮಾಜಿ ರಾಷ್ಟ್ರಪತಿ, ವಿಜ್ಞಾನಿ ಡಾ. ಎ.ಪಿ.ಜೆ ಅಬ್ದುಲ್ ಕಲಾಮ್ ಅವರಿಂದ ಸನ್ಮಾನಿತಗೊಂಡಿದ್ದಾರೆ.
ವೀಣಾ ಜೆ. ಕಾಮತ್ : ವೃತ್ತಿಯಿಂದ ವಕೀಲೆಯಾಗಿರುವ ವೀಣಾ ಕಾಮತ್ ಅವರು ಪ್ರತಿಭಾನ್ವಿತ ಕೊಳಲು ವಾದಕಿ. ಇಂಗ್ಲೆಂಡಿನ ಆಕ್ಸ್ ಫರ್ಡ್ ವಿಶ್ವವಿದ್ಯಾಲಯದಿಂದ ಕಾನೂನುಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡಿರುವ ಇವರಿಗೆ ಭರತನಾಟ್ಯ ನೃತ್ಯ ಹಾಗೂ ಕೊಳಲುವಾದನಗಳಲ್ಲಿ ಅತೀವ ಆಸಕ್ತಿ. ಹಿಂದುಸ್ತಾನಿ ಹಾಗೂ ಕರ್ನಾಟಕಿ ಸಂಗೀತ ಶೈಲಿಗಳಲ್ಲಿ ಕೊಳಲು ವಾದನವನ್ನು ಪ್ರಸ್ತುತಪಡಿಸುವಲ್ಲಿ ಸಿದ್ಧಹಸ್ತರು. ಬೆಂಗಳೂರಿನ ವಿದ್ವಾನ್ ಮೊಕಾಶಿ ಹಾಗೂ ವಿದುಷಿ ಅಶ್ವಿನಿ ವರ್ಗೂರು ಅವರಿಂದ ಕೊಳಲಿನ ಮಾರ್ಗದರ್ಶನ ಪಡೆದರು. ನೂಪುರ ಅಕ್ಯಾಡೆಮಿಯಲ್ಲಿ ಭರತನಾಟ್ಯವನ್ನು ಕಲಿತರು. ವಿದುಷಿ ಲಲಿತಾ ಶ್ರೀನಿವಾಸನ್ ಅವರಿಂದ ಆಳವಾದ ನೃತ್ಯ ಮಾರ್ಗದರ್ಶನ ಪಡೆದರು. ಎರಡೂ ಕಲೆಗಳಲ್ಲಿಯೂ ಪಾರಂಗತವನ್ನು ಸಾಧಿಸಿದ ವೀಣಾ ಕಾಮತ್ ಅವರು ದೇಶ ವಿದೇಶಗಳಲ್ಲಿ ತಮ್ಮ ಪ್ರತಿಭೆಯನ್ನು ಮೆರೆದಿದ್ದಾರೆ.
ಮೀನಾಕ್ಷಿ ಕಾಮತ್ : ಕಥಕ್ ನೃತ್ಯ ಕಲಾಪ್ರವೀಣೆಯಾಗಿರುವ ಮೀನಾಕ್ಷಿ ಕಾಮತ್ ಅವರು ಉದ್ಯಮಿ. ಉತ್ತಮ ಕೊಳಲು ವಾದಕಿ ಕೂಡ. ಇಂಗ್ಲೆಂಡಿನ ಆಕ್ಸ್ ಫರ್ಡ್ ಬ್ರೂಕ್ಸ್ ವಿಶ್ವವಿದ್ಯಾಲಯದಿಂದ ಮಾರುಕಟ್ಟೆ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡಿರುವ ಇವರಿಗೆ ಕೊಳಲುವಾದನದಲ್ಲಿಯೂ ಕೂಡ ಅತೀವ ಆಸಕ್ತಿ. ಹೀಗಾಗಿ ಕರ್ನಾಟಕಿ ಶೈಲಿಯಲ್ಲಿ ವಿದುಷಿ ಅಶ್ವಿನಿ ವರ್ಗೂರು ಅವರಿಂದ ಆಳವಾದ ಅಭ್ಯಾಸ ಮಾಡಿದರು. ನೃತ್ಯವಿದುಷಿಯರಾದ ನಂದಿನಿ ಮೆಹತಾ ಹಾಗೂ ಡಾ. ಮಾಯಾ ರಾವ್ ಅವರಿಂದ 11 ವರ್ಷಗಳ ನಿರಂತರ ನೃತ್ಯ ಅಭ್ಯಾಸಗೈದು ಅತ್ಯುತ್ತಮ ಕಲಾವಿದೆಯಾಗಿ ಹೊರಹೊಮ್ಮಿದರು. ಮುಂಬೈನ ಗಂಧರ್ವ ಮಹಾವಿದ್ಯಾಲಯದಿಂದ ಕಥಕ್‌ನಲ್ಲಿ ಮಧ್ಯಮಪೂರ್ಣ ಪದವಿಯನ್ನು ಪಡೆದಿದ್ದಾರೆ. ಬೆಂಗಳೂರಿನ ಗಣೇಶ ಉತ್ಸವ, ಅಂತರ್ರಾಷ್ಟ್ರೀಯ ಚಲನಚಿತ್ರ ಹಬ್ಬ, ಇಸ್ರೋ ಸಮಾವೇಶ, ಮಂತ್ರಾಲಯ, ಸೂರತ್, ಉಡುಪಿ, ಉಜ್ಜಯನಿ, ಮುಂಬೈ, ಪುಣೆ ಹೀಗೆ ದೇಶದ ವಿವಿಧೆಡೆಗಳಲ್ಲಿ ತಮ್ಮ ನೃತ್ಯ-ಸಂಗೀತ ಸುಧೆಯನ್ನು ಹರಿಸಿದ್ದಾರೆ.
ಸಹಕಲಾವಿದರು : ಜ್ಯೋತ್ಸ್ನಾ ಹೆಬ್ಬಾರ (ಮೃದಂಗ)
ಮಧ್ಯಾಹ್ನದ ಅವಧಿಯಲ್ಲಿ (ಮಧ್ಯಾಹ್ನ 2.00ರಿಂದ ಸಂಜೆ 4.45 ಗಂಟೆಯವರೆಗೆ)
ದ್ವಂದ್ವ ಸರೋದ್ ವಾದನ – ಕೋಲ್ಕತ್ತಾದ ವಿದುಷಿ ಟ್ರೊಯ್ಲಿ ದತ್ತ ಮತ್ತು ವಿದುಷಿ ಮೊಯ್ಸಿಲಿ ದತ್ತ ಇವರಿಂದ
ಸೇನಿಯಾ-ಮೈಹಾರ್ ಘರಾಣೆಯ ಸರೋದ್ ವಿದುಷಿಯರಾದ ಟ್ರೊಯ್ಲಿ ದತ್ತ ಮತ್ತು ಮೊಯ್ಸಿಲಿ ದತ್ತ ಅವರು ಸರೋದ್ ಸಿಸ್ಟರ್ಸ್ ಎಂದೇ ಖ್ಯಾತಿ ಹೊಂದಿದವರು. ಉಸ್ತಾದ್ ಅಲಿ ಅಕ್ಬರ್ ಖಾನ ಹಾಗೂ ಸಂಗೀತಾಚಾರ್ಯ ಪಂಡಿತ್ ಶ್ಯಾಮ ಗಂಗೂಲಿ ಅವರ ಶಿಷ್ಯ ಪಂಡಿತ್ ಕಮಲ್ ಮಲ್ಲಿಕ್‌ರಿಂದ ಸರೋದ್ ವಾದನದ ತರಬೇತಿ ಪಡೆದವರು. ಕೆಲವು ವರ್ಷಗಳ ಕಾಲ ಸೇನಿಯಾ-ಷಹಜಾನ್‌ಪುರ ಘರಾಣೆಯ ಸಿತಾರ ವಾದಕ ಪಂಡಿತ್ ಸಂಜಯ ಬಂಡೋಪಾಧ್ಯಾಯ ಅವರಲ್ಲಿ ಅಭ್ಯಾಸ ನಡೆಯಿತು. ಪ್ರಸ್ತುತವಾಗಿ ಸರೋದ್ ಮಾಂತ್ರಿಕ ಪಂಡಿತ್ ಪಾರ್ಥಸಾರಥಿ ಅವರಲ್ಲಿ ಹೆಚ್ಚಿನ ಅಧ್ಯಯನಗೈಯ್ಯುತ್ತಿರುವ ಸರೋದ್ ಸಹೋದರಿಯರು ಭರವಸೆಯ ಕಲಾವಿದೆಯರಾಗಿ ಹೊರಹೊಮ್ಮಿದ್ದಾರೆ.
ಟ್ರೊಯ್ಲಿ ಅವರು ಸಂಗೀತದಲ್ಲಿ ಸ್ನಾತಕೋತ್ತರ ಪದವೀಧರೆ. ಚಿನ್ನದ ಪದಕ ವಿಜೇತೆ. ಕೇಂದ್ರ ಸರ್ಕಾರದ ಸಂಸ್ಕೃತಿ ಇಲಾಖೆಯಿಂದ ವಿದ್ಯಾರ್ಥಿ ವೇತನ ಪಡೆದವರು. ಆಕಾಶವಾಣಿಯ ‘ಬಿ’ ಹೈ ಗ್ರೇಡ್ ಕಲಾವಿದೆ. ಇನ್ನು ಅವರ ಸಹೋದರಿ ಮೊಯ್ಸಿಲಿ ಅವರು ಭೌತಶಾಸ್ತ್ರದ ಸ್ನಾತಕೋತ್ತರ ಪದವೀಧರೆಯಾಗಿದ್ದಾರೆ. ಪ್ರಸ್ತುತ ಜಾಧವಪುರ ವಿಶ್ವವಿದ್ಯಾಲಯದಲ್ಲಿ ಸಹಾಯಕ ಸಂಶೋಧನಾ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಇಬ್ಬರು ಸಹೋದರಿಯರು ನವದೆಹಲಿ, ಬೆಂಗಳೂರು, ಮೈಸೂರು, ಡೆಹ್ರಾಡೂನ್, ಕೋಲ್ಕತ್ತಾ ಅಲ್ಲದೇ ವಿದೇಶಗಳಲ್ಲೂ ಸರೋದ್ ತಂತುಗಳ ನಿನಾದವನ್ನು ಹರಿಸಿದ್ದಾರೆ.
ಸಹಕಲಾವಿದರು : ಮುಕ್ತಾ ರಾಸ್ತೆ (ತಬಲಾ)
ಗಾಯನ – ರುಚಿರಾ ಕೇದಾರ, ಪುಣೆ
ದೇಶದ ಪ್ರಬುದ್ಧ ಗಾಯಕಿಯರ ಸಾಲಿನಲ್ಲಿ ಕಾಣಿಸಿಕೊಳ್ಳುವ ರುಚಿರಾ ಕೇದಾರ ಅವರು ಮೂಲತಃ ಪುಣೆಯವರು. ತಂದೆ ದಿಲೀಪ ಕಾಳೆ ಅವರು ಸರಿಗಮಗಳ ಶ್ರೀಕಾರ ಹಾಕಿದಾಗ ರುಚಿರಾಗೆ ಆಗಿನ್ನೂ 10 ವರ್ಷ. ನಂತರ ಖ್ಯಾತ ಗಾಯಕಿ ಪುಣೆಯ ಅಲಕಾದೇವ್ ಮರೂಳ್ಕರ ಅವರಿಂದ ಆಳವಾದ ಮಾರ್ಗದರ್ಶನ ದೊರಕಿ ಉದಯೋನ್ಮುಖ ಗಾಯಕಿಯಾಗಿ ಹೊರಹೊಮ್ಮಿದರು. ಮುಂದಿನ ದಿನಗಳಲ್ಲಿ ಕೋಲ್ಕತ್ತಾ ಐಟಿಸಿ ಸಂಗೀತ ರಿಸರ್ಚ್ ಅಕಾಡೆಮಿಯಲ್ಲಿ ಪಂಡಿತ್ ಉಲ್ಲಾಸ ಕಶಾಳಕರ ಅವರಲ್ಲಿ ಐದು ವರ್ಷಗಳ ಉನ್ನತ ಮಾರ್ಗದರ್ಶನ ಪಡೆದರು. ಇದೇ ಸಂದರ್ಭದಲ್ಲಿ ವಿದುಷಿ ಗಿರಿಜಾ ದೇವಿ ಅವರಿಂದ ಠುಮರಿ ಗಾಯನದ ಅಭ್ಯಾಸ ಮಾಡಿದರು. ದೇಶದ ವಿವಿಧೆಡೆಗಳಲ್ಲಿ ತಮ್ಮ ಗಾನಸುಧೆಯನ್ನು ಹರಿಸಿರುವ ರುಚಿರಾ ಕೇದಾರ ಅವರಿಗೆ ಉಸ್ತಾದ್ ಬಿಸ್ಮಿಲ್ಲಾ ಖಾನ ಪುರಸ್ಕಾರ, ಸಂಗೀತ ನಾಟಕ ಅಕಾಡೆಮಿ ಹೀಗೆ ವಿವಿಧ ಪುರಸ್ಕಾರಗಳು ಸಂದಿವೆ.
ಸಹಕಲಾವಿದರು : ಸಾವನಿ ತಳವಲಕರ, ಪುಣೆ (ತಬಲಾ), ಪಾರೋಮಿತಾ ಮುಖರ್ಜಿ, ನವದೆಹಲಿ (ಹಾರ್ಮೋನಿಯಂ)
ಸಂಜೆಯ ಅವಧಿಯಲ್ಲಿ (ಸಂಜೆ 5.15ರಿಂದ ರಾತ್ರಿ 8 ಗಂಟೆಯವರೆಗೆ)
ಸಿತಾರ ವಾದನ – ವಿದುಷಿ ಸಹನಾ ಬ್ಯಾನರ್ಜಿ
ರಾಂಪುರ ಸೇನಿಯಾ ಘರಾಣೆಯ ಸಿತಾರವಾದಕಿ ವಿದುಷಿ ಸಹನಾ ಬ್ಯಾನರ್ಜಿ ಪ್ರತಿಭಾವಂತ ಕಲಾವಿದೆ. ಸಂಗೀತಮಯ ಪರಿಸರದಲ್ಲಿ ಜನಿಸಿದ ಸಹನಾ, ತಮ್ಮ ನಾಲ್ಕನೇ ವಯಸ್ಸಿನಿಂದಲೇ ಸಿತಾರ ವಾದನದತ್ತ ಒಲವು ತೋರಿಸಿದವರು. ತಂದೆ ಸಂತೋಷ ಬ್ಯಾನರ್ಜಿಯವರು ಅತ್ಯುತ್ತಮ ಸಿತಾರ ಹಾಗೂ ಸುರಬಹಾರ್ ವಾದನ ಕಲಾವಿದರು. ರವೀಂದ್ರ ಭಾರತಿ ವಿಶ್ವವಿದ್ಯಾಲಯದ ವಾದ್ಯಸಂಗೀತ ವಿಭಾಗದ ಮುಖ್ಯಸ್ಥರಾಗಿದ್ದವರು. ತಂದೆಯವರಿಂದ ಸಿತಾರ ವಾದನದ ಆಳವಾದ ಮಾರ್ಗದರ್ಶನ ಪಡೆದ ಸಹನಾ ಬ್ಯಾನರ್ಜಿ ಉದಯೋನ್ಮುಖ ಕಲಾವಿದೆಯಾಗಿ ಹೊರಹೊಮ್ಮಿದರು. ತಾಯಿ ಛಬಿ ಬ್ಯಾನರ್ಜಿ ಅವರಿಂದ ಗಾಯನದ ತರಬೇತಿಯನ್ನು ಪಡೆದರು. 1990ರಲ್ಲಿ ಪಂಡಿತ್ ನಿಖಿಲ್ ಬ್ಯಾನರ್ಜಿ ಪ್ರಶಸ್ತಿಯನ್ನು ಪಡೆದ ಸಹನಾ ಅವರು ಆಕಾಶವಾಣಿ ಹಾಗೂ ದೂರದರ್ಶನಗಳ ‘ಎ’ ಶ್ರೇಣಿಯ ಕಲಾವಿದರು. ದೇಶದ ಪ್ರತಿಷ್ಠಿತ ಸಂಗೀತೋತ್ಸವಗಳಲ್ಲದೆ ಯುರೋಪ್ ದೇಶಗಳಲ್ಲಿ ತಮ್ಮ ಸಿತಾರ ತಂತುಗಳನ್ನು ನಿನಾದವನ್ನು ಹರಿಸಿದ್ದಾರೆ.
ಸಹಕಲಾವಿದರು : ಸಾವನಿ ತಳವಲಕರ (ತಬಲಾ)
ಗಾಯನ – ವಿದುಷಿ ಚೇತನಾ ಪಾಠಕ್, ಮುಂಬೈ
ಅಂತಾರಾಷ್ಟ್ರೀಯ ಖ್ಯಾತಿಯ ಕಿರಾನಾ ಘರಾಣೆಯ ಸಂಗೀತ ವಿದುಷಿ ಪದ್ಮಭೂಷಣ ಡಾ. ಪ್ರಭಾ ಅತ್ರೆ ಅವರ ಶಿಷ್ಯೆ ಚೇತನಾ ಪಾಠಕ್ ಅವರು ಮೂಲತಃ ರಾಜಸ್ಥಾನದ ಉದಯಪುರದವರು. ತಂದೆ ರಾಮ ನಾರಾಯಣ, ತಾಯಿ ಮದನಾ ಬನಾವತ್ ಅವರು ಸಂಗೀತಗಾರರು. ಸಂಗೀತಗಾರರ ಮನೆತನದಲ್ಲಿ ಬೆಳೆದ ಚೇತನಾ ಅವರಿಗೆ ಚಿಕ್ಕಂದಿನಿಂದಲೇ ಸಂಗೀತದತ್ತ ಆಸಕ್ತಿ ಮೂಡಿತು. ತಂದೆ-ತಾಯಿಯಲ್ಲಿ ಪ್ರಾಥಮಿಕ ಹಂತದ ಶಾಸ್ತ್ರೀಯ ಸಂಗೀತದ ಅಧ್ಯಯನದ ನಂತರ ಗ್ವಾಲಿಯರ್ ಘರಾಣೆಯ ಸಂಗೀತ ದಿಗ್ಗಜ ದಿ. ಪಂಡಿತ್ ಬಾಳಾಸಾಹೇಬ ಪೂಂಛವಾಲೆ ಅವರಲ್ಲಿ ಟಪ್ಪಾ ಗಾಯಕಿಯ ಕುರಿತು ವಿಶೇಷ ಅಭ್ಯಾಸಗೈದ ಚೇತನಾ ಓರ್ವ ಪ್ರತಿಭಾವಂತ ಗಾಯಕಿಯಾಗಿ ಹೊರಹೊಮ್ಮಿದರು.
ನಂತರ ಕಿರಾನಾ ಘರಾಣೆಯ ಪದ್ಮಭೂಷಣ ಡಾ. ಪ್ರಭಾ ಅತ್ರೆ ಅವರ ಶಿಷ್ಯತ್ವ ಪಡೆದರು. ಅವರಲ್ಲಿ ಆಳವಾದ ಅಧ್ಯಯನ ಮಾಡಿದ ಚೇತನಾ, ಕಿರಾನಾ ಘರಾಣೆಯ ವಿಶೇಷ ಗುಣಲಕ್ಷಣಗಳನ್ನು ತಮ್ಮ ಗಾಯನದಲ್ಲಿ ಅಳವಡಿಸಿಕೊಂಡರು. ಶಾಸ್ತ್ರೀಯ, ಲಘು ಶಾಸ್ತ್ರೀಯ ಸಂಗೀತ, ಠುಮರಿ, ದಾದರಾ, ಟಪ್ಪಾ ಗಾಯಕಿಯಲ್ಲಿ ಪರಿಣಿತಿಯನ್ನು ಸಾಧಿಸಿದ್ದಾರೆ. ಆಕಾಶವಾಣಿಯ ಕಲಾವಿದೆಯಾಗಿರುವ ಚೇತನಾ ಅವರಿಗೆ ಮಹಾರಾಣಾ ಫತೇಹಸಿಂಗ್ ಪ್ರಶಸ್ತಿ, ದಾಗರ್ ಪುರಸ್ಕಾರಗಳಿಗೆ ಪಾತ್ರರಾಗಿದ್ದು, ದೇಶದ ನಾನಾ ಸಂಗೀತ ಸಮ್ಮೇಳನಗಳಲ್ಲಿ ಭಾಗವಹಿಸಿದ್ದಾರೆ.
ಸಹಕಲಾವಿದರು : ಮುಕ್ತಾ ರಾಸ್ತೆ (ತಬಲಾ), ಪಾರೋಮಿತಾ ಮುಖರ್ಜಿ, ನವದೆಹಲಿ (ಹಾರ್ಮೋನಿಯಂ)
ಭಾಗವಹಿಸುವ ಸಹಕಲಾವಿದರು –
ಮುಕ್ತಾ ರಾಸ್ತೆ, ಮುಂಬೈ – ತಬಲಾ
ಹಿಂದುಸ್ತಾನಿ ಸಂಗೀತ ಲೋಕದಲ್ಲಿ ಪ್ರಸ್ತುತ ಯುವ ಪ್ರತಿಭಾವಂತ ತಬಲಾ ವಾದಕಿಯರಲ್ಲಿ ಮುಂಬೈನ ಮುಕ್ತಾ ರಾಸ್ತೆ ಅವರದ್ದು ಬಹುವಾಗಿ ಕೇಳಿಬರುತ್ತಿರುವಂಥ ಹೆಸರು. ಸಂಗೀತ ಮತ್ತು ಸಾಂಸ್ಕೃತಿಕ ಮನೆತನದ ಹಿನ್ನೆಲೆಯಿಂದ ಬಂದ ಮುಕ್ತಾ ಅವರ ಸಂಗೀತ ಕಲಿಕೆ ಆರಂಭಗೊಂಡಿದ್ದು ಗಾಯನದೊಂದಿಗೆ. ನಂತರ ಹಾರ್ಮೋನಿಯಂ ವಾದನವನ್ನು ಕಲಿತರು. ಆದರೆ ಮುಂದೆ ಅವರ ಚಿತ್ತ ಹರಿದಿದ್ದು ತಬಲಾ ವಾದನದತ್ತ. ಅವರ ದೊಡ್ಡಪ್ಪ ಸಂಜಯ ಕರಂದಿಕರ ಅವರಲ್ಲಿ ಆಳವಾದ ಅಧ್ಯಯನಗೈದು ಯುವ ಕಲಾವಿದೆಯಾಗಿ ಹೊರಹೊಮ್ಮಿದರು.
ಸಿಸಿಆರ್‌ಟಿಯಿಂದ ಶಿಷ್ಯವೇತನವನ್ನು ಪಡೆದಿರುವ ಮುಕ್ತಾ ರಾಸ್ತೆ ಅವರು ಗಂಧರ್ವ ಮಹಾವಿದ್ಯಾಲಯದಿಂದ ತಬಲಾ ವಿಶಾರದ ಪದವಿಯನ್ನು ಪಡೆಕೊಂಡಿದ್ದಾರೆ. ಅನೇಕ ಸಂಗೀತ ಸಮ್ಮೇಳನಗಳಲ್ಲಿ ಸೋಲೊ ಕಾರ್ಯಕ್ರಮಗಳನ್ನು ನೀಡಿದ್ದಾರಲ್ಲದೆ ವಿದುಷಿ ಮಂಜರಿ ಅಳೇಗಾಂವಕರ, ಆರತಿ ಅಂಕಲೀಕರ, ಕೀರ್ತಿ ಶಿಲೇದಾರ, ಅನುರಾಧಾ ಕುಬೇರ, ಸುಚಿತ್ರಾ ಭಾಗವತ, ನೀಲಾ ಭಾಗವತ, ಪಂಡಿತ್ ಪ್ರಭಾಕರ ಕರಂದೀಕರ, ಅಮರೇಂದ್ರ ಜ್ಞಾನೇಶ್ವರ, ಶಹಾನಾ ಬ್ಯಾನರ್ಜಿ, ಮೀತಾ ನಾಗ ಅವರೊಂದಿಗೆ ತಬಲಾ ಸಾಥ್ ಸಂಗತ್ ಮಾಡಿರುವ ಹಿರಿಮೆ ಮುಕ್ತಾ ರಾಸ್ತೆಯವರದ್ದಾಗಿದೆ.
ಪಾರೋಮಿತಾ ಮುಖರ್ಜಿ, ನವದೆಹಲಿ – ಹಾರ್ಮೋನಿಯಂ
ದೇಶದ ಬೆರಳೆಣಿಕೆಯ ಪ್ರಬುದ್ಧ ಹಾರ್ಮೋನಿಯಂ ವಾದಕಿಯರಲ್ಲಿ ನವದೆಹಲಿಯ ಪಾರೋಮಿತಾ ಮುಖರ್ಜಿ ಅವರೂ ಒಬ್ಬರು. ಪಂಡಿತ್ ವಿ.ಜಿ. ಜೋಗ, ಉಸ್ತಾದ್ ಆಶೀಸ್ ಖಾನ್ ಹಾಗೂ ಆಮೀನಾ ಪೆರೇರಾ ಅವರ ಶಿಷ್ಯೆ. ಹಾರ್ಮೋನಿಯಂ ವಾದನದಲ್ಲಿ ಪರಿಣತಿ ಸಾಧಿಸಿರುವ ಪಾರೋಮಿತಾ ಅವರು ಆಕಾಶವಾಣಿ ದೂರದರ್ಶನಗಳ ‘ಎ’ ಶ್ರೇಣಿಯ ಕಲಾವಿದೆ. ವಯೋಲಿನ್ ವಾದನದಲ್ಲಿ ಪದವಿಯನ್ನು ಪಡೆದುಕೊಂಡಿರುವ ಪಾರೋಮಿತಾ ಅವರು ರವೀಂದ್ರ ಭಾರತಿ ವಿಶ್ವವಿದ್ಯಾಲಯದಿಂದ ಗಾಯನದ ಅಭ್ಯಾಸ ಮಾಡಿದರು. ಪಂಡಿತ್ ಜಸ್ ರಾಜ್, ಪಂಡಿತ್ ರಾಜನ-ಸಾಜನ ಮಿಶ್ರಾ, ಅಜಯ ಚಕ್ರವರ್ತಿ, ಅಜಯ ಪೋಹಣಕರ, ಉಸ್ತಾದ್ ರಶೀದ ಖಾನ್, ಪಂಡಿತ್ ವೆಂಕಟೇಶಕುಮಾರ, ವಿದುಷಿ ಪ್ರಭಾ ಅತ್ರೆ, ಗಿರಿಜಾ ದೇವಿ, ಪರವೀನ ಸುಲ್ತಾನಾ, ಅಶ್ವಿನಿ ಭಿಡೆ ದೇಶಪಾಂಡೆ ಇನ್ನೂ ಅನೇಕ ದಿಗ್ಗಜ ಕಲಾವಿದರಿಗೆ ಹಾರ್ಮೋನಿಯಂ ಸಾರ್ಥ ಸಂಗತ್ ಮಾಡಿರುವ ಕೀರ್ತಿ ಪಾರೋಮಿತಾ ಮುಖರ್ಜಿಯವರಿಗಿದೆ. ಅಪ್ಪಾ ಜಲಗಾಂವಕರ ಪ್ರಶಸ್ತಿ, ಗಿರಿಜಾ ಶಂಕರ ಚಕ್ರವರ್ತಿ ಪುರಸ್ಕಾರಗಳಿಗೆ ಇವರು ಪಾತ್ರರಾಗಿದ್ದಾರೆ.
ಸಾವನಿ ತಳವಲಕರ ಪುಣೆ -ತಬಲಾ
ಸಾವನಿ ತಳವಲಕರ, ದೇಶಕಂಡ ಯುವ ಭರವಸೆಯ ತಬಲಾ ವಾದಕಿ. ಸಂಗೀತಗಾರರ ಮನೆತನದಲ್ಲಿ ಜನಿಸಿದ ಸಾವನಿ ಅವರಿಗೆ ಸಹಜವಾಗಿ ಬಾಲ್ಯದಿಂದಲೆ ಸಂಗೀತದತ್ತ ಒಲವು ಮೂಡಿತು. ಅದರಲ್ಲೂ ತಬಲಾ ವಾದನದಲ್ಲಿ ಅತೀವ ಆಸಕ್ತಿ. ಇದು ಸಹಜವೇ ಸರಿ. ತಾಯಿ ಪದ್ಮಾ ತಳವಲಕರ, ತಂದೆ ತಾಳಯೋಗಿ ಪಂಡಿತ್ ಸುರೇಶ ತಳವಲಕರ ಅವರು ಸುಪ್ರಸಿದ್ಧ ತಬಲಾ ವಾದಕರು. ಅಣ್ಣ ಸತ್ಯಜಿತ ತಳವಲಕರ ಕೂಡ ತಬಲಾ ವಾದನ ಪ್ರತಿಭೆ. ತಂದೆಯವರಿಂದ ದೊರೆತ ತಬಲಾ ಶಿಕ್ಷಣದಿಂದಾಗಿ ಸಾವನಿಯವರು ಅತ್ಯಂತ ಕಡಿಮೆ ಸಮಯದಲ್ಲಿ ಪ್ರತಿಭಾವಂತ ಯುವ ತಬಲಾ ವಾದಕಿಯಾಗಿ ಹೊರಹೊಮ್ಮಿದರು.
ಸಾವನಿ ತಳವಲಕರ ಅವರು ಅತ್ಯುತ್ತಮ ತಬಲಾ ಸೋಲೊ ಕಲಾವಿದರೂ ಕೂಡ. ಅನೇಕ ಹಿರಿಯ ಹಿಂದುಸ್ತಾನಿ ಸಂಗೀತಗಾರರಿಗೆ ತಬಲಾ ಸಾಥ್ ಸಂಗತ್ ಮಾಡಿದ್ದಾರೆ. ಅವರ ಕಡಿಮೆ ಅವಧಿಯ ಹೆಚ್ಚಿನ ಸಾಧನೆಗೆ ಡಾ. ವಸಂತರಾವ್ ದೇಶಪಾಂಡೆ ಪುರಸ್ಕಾರ, ಉಸ್ತಾದ್ ಬಿಸ್ಮಿಲ್ಲಾಖಾನ ಯುವ ಪುರಸ್ಕಾರಗಳು ಸಂದಿವೆ. ದೇಶದ ನಾನಾ ಭಾಗಗಳಲ್ಲಿ ತಮ್ಮ ತಬಲಾ ವಾದನದ ಝೇಂಕಾರವನ್ನು ಮೊಳಗಿಸಿದ್ದಾರೆ.
ಜ್ಯೋತ್ಸ್ನಾ ಹೆಬ್ಬಾರ – ಮೃದಂಗ ವಾದಕಿ
ನಾಡಿನ ಯುವ ಭರವಸೆಯ ಮೃದಂಗ ವಾದಕಿ ಜ್ಯೋತ್ಸ್ನಾ ಹೆಬ್ಬಾರ ಅವರು ಖ್ಯಾತ ವೀಣಾವಾದಕಿ ವಿದುಷಿ ಜ್ಯೋತಿ ಚೇತನ ಅವರ ಮಗಳು. ತಂದೆ ಚೇತನ ರಾಘವೇಂದ್ರ. ಮನೆಯಲ್ಲಿ ಸಂಗೀತಯ ವಾತಾವರಣ. ಹೀಗಾಗಿ ತಾಯಿಯಿಂದಲೇ ಕರ್ನಾಟಕಿ ಸಂಗೀತದ ಸರಿಗಮಗಳ ಮಾರ್ಗದರ್ಶನ ದೊರೆಯಿತು. ಆರಂಭದಲ್ಲಿ ಅವರು ವೀಣಾ ವಾದನದ ಕಲಿಕೆಯೊಂದಿಗೆ ತಮ್ಮ ಸಂಗೀತಯಾನವನ್ನು ಆರಂಬಿಸಿದರು. 14ನೇ ವಯಸ್ಸಿನಲ್ಲಿ ಮೃದಂಗ ಕಲಿಯುವ ಇಚ್ಛೆ ಉಂಟಾಯಿತು. ಆಗ ಎಚ್.ಎಸ್. ಸುಧೀಂದ್ರ ಅವರಲ್ಲಿ ಆಳವಾದ ಅಧ್ಯಯನಗೈದು ಉದಯೋನ್ಮುಖ ಮೃದಂಗ ವಾದಕಿಯಾಗಿ ಹೊರಹೊಮ್ಮಿದರು; ವೀಣಾ ವಾದನದಲ್ಲೂ ಅಷ್ಟೇ ಪ್ರಬುದ್ಧತೆಯನ್ನು ಸಾಧಿಸಿದರು.
ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದ ಜ್ಯೋತ್ಸ್ನಾ ಅವರು ವೀಣಾ ವಾದನ ಸೀನಿಯರ್‌ನಲ್ಲಿ ಉತ್ತೀರ್ಣರಾಗಿದ್ದಾರೆ. ಸಿಸಿಆರ್‌ಟಿ ಹಾಗೂ ಕರ್ನಾಟಕ ನೃತ್ಯ ಅಕ್ಯಾಡೆಮಿಯಿಂದ ಶಿಷ್ಯವೇತನವನ್ನು ಪಡೆದಿರುವ ಇವರು ನಾಡಿನ ವಿವಿದೆಡೆಗಳಲ್ಲಿ ಮೃದಂಗ ಹಾಗೂ ವೀಣಾವಾದನಗಳ ಕಚೇರಿಗಳನ್ನು ನೀಡಿದ್ದಾರೆ.