ಮುಂಬಯಿ : ಮಂಗಳೂರಿನ ಮಧುರತರಂಗ ಸಂಸ್ಥಾಪಕ ಸ್ವರ ತಪಸ್ವಿ ‘ಕರ್ನಾಟಕ ಸ್ವರ ಕಂಠೀರವ’ ಜೂ.ರಾಜ್ ಕುಮಾರ್ ಖ್ಯಾತಿಯ ಜಗದೀಶ್ ಶಿವಪುರ ಇವರ ಸ್ವರ ಗಾಯನ ಲೋಕದ 50ರ ಸುವರ್ಣ ಸಂಭ್ರಮ ಆಚರಣೆಯು ದಿನಾಂಕ 24-09-2023ರ ಭಾನುವಾರ ಮುಂಬಯಿಯ ಸಾಂತಾಕ್ರೂಸ್ (ಪೂ.)ನಲ್ಲಿರುವ ಬಿಲ್ಲವ ಭವನದಲ್ಲಿ ನಡೆಯಿತು.
‘ಸ್ವರ ಕಂಠೀರವ’ ಡಾ.ರಾಜ್ ಸವಿನೆನಪು, ಡಾ.ರಾಜ್ ಕುಮಾರ್ ಅವರ ನೆನಪಿನ ಮಧುರ ಗೀತೆಗಳು ಮತ್ತು ನೃತ್ಯ ವೈಭವಗಳ ವಿಭಿನ್ನ ಕಾರ್ಯಕ್ರಮ ಇದಾಗಿತ್ತು. ಕಾರ್ಯಕ್ರಮವನ್ನು ಸವಿತಾ ಅಶೋಕ್ ಪುರೋಹಿತ್ ದೀಪ ಬೆಳಗಿಸಿ ಉದ್ಘಾಟಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ನವಿಮುಂಬಯಿಯ ಪನ್ವೇಲ್ ನಲ್ಲಿರುವ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಅಧ್ಯಕ್ಷ ಸಿ.ಎ. ಶ್ರೀಧರ್ ಆಚಾರ್ಯ ವಹಿಸಿಕೊಂಡಿದ್ದರು. ಶ್ರೀಯುತರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ “ಸಂಗೀತ ಕ್ಷೇತ್ರದಲ್ಲಿ ಅದ್ಭುತ ಸೇವೆಯನ್ನು ಮಾಡುತ್ತಾ ತನ್ನ ಕಂಠ ಸ್ವರದ ಮೂಲಕ ಡಾ.ರಾಜಕುಮಾರ್ ಅವರನ್ನು ಸದಾ ಸ್ಮರಿಸಿ, ನೆನಪಿಸಿಕೊಂಡು ಬಂದಿರುವ ಜಗದೀಶ್ ಶಿವಪುರ ಶ್ರೀ ಕಾಳಿಕಾಂಬಾ ದೇವಸ್ಥಾನದ ಭಕ್ತಿಗೀತೆಯನ್ನೂ ಹಾಡಿ ಭಕ್ತ ಜನರನ್ನು ಮುದಗೊಳಿಸಿದ್ದಾರೆ. ಮುಂಬಯಿ ನಗರದಲ್ಲಿ ಕಾರ್ಯಕ್ರಮ ನೀಡಬೇಕೆನ್ನುವ ಉತ್ಸಾಹದಿಂದ ನಗರದಲ್ಲಿ ಏಕಾಂಗಿಯಾಗಿ ಹೋರಾಟದ ರೀತಿಯಲ್ಲಿ ಎಲ್ಲಾ ಸಂಘ ಸಂಸ್ಥೆಗಳನ್ನು ಹಾಗೂ ಕಲಾವಿದರನ್ನು ಒಗ್ಗೂಡಿಸಿ ಈ ಅರ್ಥಪೂರ್ಣ ಕಾರ್ಯಕ್ರಮವನ್ನು ಆಯೋಜಿಸಿಕೊಂಡಿದ್ದಾರೆ. ಡಾ.ರಾಜಕುಮಾರ್ ಅವರನ್ನು ಅಂತರಾತ್ಮದಲ್ಲಿ ಇಟ್ಟುಕೊಂಡು ಕಲಾ ಕ್ಷೇತ್ರದ ಸೇವೆಯನ್ನು ಮಾಡಿಕೊಂಡು ಬಂದಿದ್ದಾರೆ, ಅವರ ಸೇವಾ ಕಾರ್ಯಗಳು ನಿರಂತರ ನಡೆಯುತ್ತಿರಲಿ ಅದಕ್ಕೆ ನಾವೆಲ್ಲರು ಅಗತ್ಯವಾಗಿ ಪ್ರೋತ್ಸಾಹ ನೀಡೋಣ” ಎಂದು ನುಡಿದರು.
ವಿಶೇಷ ಆಮಂತ್ರಿತರಾಗಿದ್ದ ಅಂತಾರಾಷ್ಟ್ರೀಯ ಜ್ಯೋತಿಷಿ ಅಶೋಕ್ ಪುರೋಹಿತ್ ಮಾತನಾಡುತ್ತಾ “ಡಾ.ರಾಜಕುಮಾರ್ ಅವರ ಜೀವಿತ ಕಾಲದಲ್ಲಿ ಅವರ ಮನೆಗೆ ಭೇಟಿ ನೀಡುವ ಅವಕಾಶ ನನಗೆ ಲಭಿಸಿತ್ತು. ಸಾಮಾನ್ಯರಲ್ಲಿ ಸಾಮಾನ್ಯರೆನಿಸಿಕೊಂಡ ಒಬ್ಬ ಧೀಮಂತ ಕಲಾವಿದನನ್ನು ಸ್ಮರಿಸುವ ಈ ಒಂದು ಕಾರ್ಯಕ್ರಮ ಅಧ್ಭುತವಾಗಿದೆ. ಊರಿನಿಂದ ಆಗಮಿಸಿ ಕಾರ್ಯಕ್ರಮವನ್ನು ಸಂಯೋಜಿಸಿ ಇಷ್ಟೊಂದು ಜನರನ್ನು ಸೇರಿಸಿ ಮಾಡಿರುವುದು ಅದು ಸಂಗೀತ ಕ್ಷೇತ್ರಕ್ಕೆ ಮುಂಬಯಿಯ ಕಲಾಭಿಮಾನಿಗಳು ನೀಡಿದ ಕೊಡುಗೆ. ಜಗದೀಶ್‌ರೊಂದಿಗೆ ಡಾ.ರಾಜಕುಮಾರ್ ಸದಾ ಇರುತ್ತಾರೆ.” ಎಂದು ನುಡಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಬಾಲಾಜಿ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿಯ ಕಾರ್ಯಾಧ್ಯಕ್ಷ ಜಿ.ಟಿ.ಆಚಾರ್ಯ ಮಾತನಾಡುತ್ತಾ “ಜಗದೀಶ್ ಶಿವಪುರ ಸುಮಾರು 50 ವರ್ಷಗಳಿಂದ ಡಾ.ರಾಜಕುಮಾರ್ ಅವರ ಸ್ವರವನ್ನು ಅನುಕರಣೆ ಮಾಡಿ ಕಲಾಭಿಮಾನಿಗಳನ್ನು ರಂಜಿಸುತ್ತಾ, ಒಂದು ಸಾವಿರಕ್ಕೂ ಮಿಕ್ಕಿ ಗೀತೆಗಳನ್ನು ಕಂಠಪಾಠ ಮಾಡಿರುವುದು ಅಪೂರ್ವ ಸಾಧನೆಯಾಗಿದೆ. ಅದೂ ಅಲ್ಲದೆ ಊರಿನಿಂದ ಮುಂಬಯಿಗೆ ಬಂದು ಇಲ್ಲಿ ಕಾರ್ಯಕ್ರಮವನ್ನು ಮಾಡಿರುವುದು ಸುಲಭದ ಮಾತಲ್ಲ. ಅವರು ಕಲಾವಿದರನ್ನು ಗುರುತಿಸಿ ಸನ್ಮಾನಿಸಿರುವುದು ಅವರ ಹೃದಯ ವೈಶಾಲ್ಯಕ್ಕೆ ಉದಾಹರಣೆ. ಉತ್ತಮ ಕಲಾವಿದನಾಗಬೇಕಾದರೆ ಉತ್ತಮ ಪ್ರೇಕ್ಷಕನಾಗಬೇಕು, ಕಲಾವಿದನ ಅಭಿನಯದ ಬಳಿಕ ಪ್ರೇಕ್ಷಕರು ಚಪ್ಪಾಳೆ ತಟ್ಟಿದರೆ ಅದೇ ಸನ್ಮಾನ, ಅಭಿನಂದನೆಗಳು. ಇಂಥ ಮಹಾನ್ ಕಲಾವಿದನನ್ನು ಸದಾ ನಾವು ಪ್ರೋತ್ಸಾಹಿಸುವ” ಎಂದು ನುಡಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಕರ್ನಾಟಕ ‘ಮಲ್ಲ’ ಪತ್ರಿಕೆಯ ಸಂಪಾದಕ ಚಂದ್ರಶೇಖರ್ ಪಾಲೆತ್ತಾಡಿ ಮಾತನಾಡುತ್ತಾ “ಡಾ. ರಾಜಕುಮಾರ್‌ರವರ ಅಭಿಮಾನಿಯಾಗಿ ಗುರುತಿಸಿಕೊಂಡು ಜಗದೀಶ್ ಶಿವಪುರ ಬೆಳೆದವರು. ಅದ್ಭುತ ಕಲಾವಿದ ಡಾ. ರಾಜಕುಮಾರ್ ಅವರ ಧ್ವನಿಯನ್ನು ಧ್ವನಿಸಬೇಕೆಂದರೆ ಆ ತಾಕತ್ತು ಮತ್ತು ಎದೆಗಾರಿಕೆ ಬೇಕು. ಅಂತ ಧೈರ್ಯ ಶಿವಪುರ ಅವರಲ್ಲಿದೆ. ಐವತ್ತು ವರ್ಷಗಳಿಂದ ಅವರೊಟ್ಟಿಗೆ ರಾಜಕುಮಾರ್ ಇದ್ದಾರೆ. ಇಂಥಹ ಮಹಾನ್ ಕಲಾವಿದನನ್ನು ಎಲ್ಲರೂ ಗುರುತಿಸುವಂತಾಗಲಿ” ಎಂದರು.
ಬಿಲ್ಲವರ ಎಸೊಸಿಯೇಶನ್‌ನ ನವಿಮುಂಬಯಿ ಸ್ಥಳೀಯ ಕಚೇರಿಯ ಕಾರ್ಯಾಧ್ಯಕ್ಷ ವಿ.ಕೆ.ಪೂಜಾರಿ ಮಾತನಾಡುತ್ತಾ “ಮುಂಬಯಿ ಮತ್ತು ನವಿಮುಂಬಯಿಯಲ್ಲಿ ಬಹಳಷ್ಟು ಕಾರ್ಯಕ್ರಮ ನಡೆಯುತ್ತದೆ. ಆದರೆ ಇದೊಂದು ವಿಭಿನ್ನ ಕಾರ್ಯಕ್ರಮ. ಕಲಾಕ್ಷೇತ್ರದಲ್ಲಿ ಐವತ್ತು ವರ್ಷಗಳಿಂದ ಸೇವೆ ಮಾಡುತ್ತಿರುವ ಈ ಕಲಾವಿದನಿಗೆ ಮುಂಬಯಿ ನಗರದ ಕಲಾಭಿಮಾನಿಗಳು ಪ್ರೋತ್ಸಾಹ ನೀಡಬೇಕು ಮತ್ತು ನವಿಮುಂಬಯಿಯಲ್ಲಿ ಅವರಿಗೆ ಮುಂದಿನ ದಿನಗಳಲ್ಲಿ ಕಾರ್ಯಕ್ರಮ ನೀಡಲು ಅವಕಾಶ ಮಾಡಿಕೊಡುತ್ತೇವೆ” ಎಂದು ನುಡಿದರು.
ವೇದಿಕೆಯಲ್ಲಿ ಉದ್ಯಮಿ ಮಾಧವ ಆಚಾರ್ಯ, ಹೋಟೆಲ್ ಉದ್ಯಮಿ ರಮಾನಾಥ್ ಕೋಟ್ಯಾನ್, ಕರ್ನಾಟಕ ವಿಶ್ವಕರ್ಮ ಎಸೋಸಿಯೇಶನ್ನಿನ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷ್ಯೆ ಶುಭ ಸುನಿಲ್ ಆಚಾರ್ಯ ಉಪಸ್ಥಿತರಿದ್ದರು. ‘ಸ್ವರ ತಪಸ್ವಿ’, ‘ಕರ್ನಾಟಕ ಸ್ವರ ಕಂಠೀರವ’ ಜೂ.ರಾಜ್ ಕುಮಾರ್ ಖ್ಯಾತಿಯ ಜಗದೀಶ್ ಶಿವಪುರ ಡಾ.ರಾಜ್ ಸವಿ ನೆನಪಿನ ಮಧುರ ಗೀತೆಗಳನ್ನು ಹಾಡಿದರು. ದೀಪಿಕಾ ದಿವಾಕರ್ ಆಚಾರ್ಯ ನೃತ್ಯ ವೈವಿಧ್ಯತೆ ನೀಡಿದರು. ಹಿರಿಯ ಕಲಾ ಸಾಹಿತಿ ಹೆಚ್.ಜನಾರ್ದನ ಹಂದೆ ಕೋಟ ‘ಚಂಪೂ ಕಾವ್ಯ’ ವಾಚಿಸಿದರು.
ಈ ಸಂದರ್ಭದಲ್ಲಿ ಭಾಗವತರಾದ ಪೊಲ್ಯ ಲಕ್ಷ್ಮೀ ನಾರಾಯಣ ಶೆಟ್ಟಿ, ಸಮಾಜ ಸೇವಕರಾದ ವಿ.ಕೆ. ಸುವರ್ಣ ಪಡುಬಿದ್ರೆ, ಹೊಟೇಲ್ ಉದ್ಯಮಿಯಾದ ಪ್ರಕಾಶ್ ಶೆಟ್ಟಿ ಸುರತ್ಕಲ್, ಸಂಗೀತ ಕ್ಷೇತ್ರದ ಸಾಧಕರಾದ ಪದ್ಮನಾಭ ಸಸಿಹಿತ್ಲು, ರಂಗ ವಿನ್ಯಾಸಗಾರ ಅಶೋಕ್ ಕುಮಾರ್ ಹಾಗೂ ನವಿಮುಂಬಯಿ ಪನ್ವೆಲಿನ ಸಮಾಜ ಸೇವಕ ಶೈಲೇಶ್ ಕುಮಾರ್ ಇವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮವನ್ನು ಬೆಂಗಳೂರಿನ ಉಪನ್ಯಾಸಕಿಯಾದ ಶ್ರೀಮತಿ ಮಾಧುರಿ ಶ್ರೀರಾಮ್ ನಿರೂಪಿಸಿದರು. ವಿಶೇಷ ಹಾಡಿನ ಮೂಲಕ ಜಗದೀಶ್ ಶಿವಪುರ ಒಂಭತ್ತು ಸುಮಂಗಲಿಯರಿಗೆ ಬಾಗಿನ ನೀಡುವ ಮೂಲಕ ಗೌರವಿಸಿದರು. ಕಾರ್ಯಕ್ರಮದಲ್ಲಿ ವಿಶ್ವಕರ್ಮ ಸಮುದಾಯದ ಬಂಧುಗಳು ಹಾಗೂ ಕಲಾಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡು ಜಗದೀಶ್ ಶಿವಪುರ ಸಂಗೀತ ಕಾರ್ಯಕ್ರಮಕ್ಕೆ ಸಹಕರಿಸಿದರು.