ಮಂಗಳೂರಿನ ಹಲವಾರು ರಂಗ ಸಂಘಟನೆಗಳು ಜೊತೆಯಾಗಿ, ಸಂತ ಅಲೋಷಿಯಸ್ ಕಾಲೇಜಿನ ಸಹೋದಯ ಸಭಾಂಗಣದಲ್ಲಿ ‘ಗಾಯಗಳು’ ಎಂಬ ಸುಂದರ ನಾಟಕ ಪ್ರದರ್ಶನವನ್ನು ದಿನಾಂಕ 28-09-2023ರಂದು ಆಯೋಜನೆ ಮಾಡಿದ್ದರು. ಶ್ರೀರಂಗಪಟ್ಟಣದ ‘ನಿರ್ದಿಗಂತ’ ನಾಟಕ ತಂಡ ಅಭಿನಯಿಸಿದ ಈ ನಾಟಕದ ಪರಿಕಲ್ಪನೆ ಮತ್ತು ನಿರ್ದೇಶನ ಖ್ಯಾತ ರಂಗ ನಿರ್ದೇಶಕರಾದ ಡಾ.ಶ್ರೀಪಾದ ಭಟ್ ಅವರದ್ದು.
ಗಾಯಗಳು ರಂಗಪ್ರಯೋಗ ಆಳವಾದ ಅನುಭವ ನೀಡಿದ ನಾಟಕ. ಒಂದೇ ನಾಟಕದೊಳಗೆ ನಾಲ್ಕು ಕತೆಗಳಿವೆ ನಾಲ್ಕೂ ಮನಸ್ಸಿಗಾದ ಗಾಯದ ಕತೆಗಳು. ದೇಶದ ಯುದ್ಧಕ್ಕಾಗಿ ತಮ್ಮ ಮಕ್ಕಳನ್ನು ಸೈನ್ಯಕ್ಕೆ ಕಳುಹಿಸಿ, ಅವರು ಹಿಂದಿರುಗಿ ಬರುತ್ತಾರೋ, ಇಲ್ಲವೋ ಎಂದು ಕಾಯುತ್ತಾ ಪರಿತಪಿಸುವ ತಂದೆ ತಾಯಂದಿರು. ತಮ್ಮ ಮಕ್ಕಳನ್ನು ದೇಶಕ್ಕಾಗಿ ತ್ಯಾಗ ಮಾಡಿದ್ದೇವೆ ಎಂದು ಗರ್ವದಿಂದ ಎದೆ ಉಬ್ಬಿಸಿಕೊಳ್ಳುತ್ತಲೇ ಒಳಗೊಳಗೇ ಕೊರಗುವ ನೋವನ್ನು ಅನುಭವಿಸುವ ಪೋಷಕರು. ಮಹಾಭಾರತದ ಸ್ಮಶಾನ ಕುರುಕ್ಷೇತ್ರ ಪ್ರಸಂಗದಲ್ಲಿ ಸತ್ತು ಹೋದ ತಮ್ಮ ಮಕ್ಕಳನ್ನು ಹುಡುಕುತ್ತಿರುವ ಕೌರವ ಮತ್ತು ಪಾಂಡವ ಪಡೆಯ ಪೋಷಕರು ತಮ್ಮ ಮಕ್ಕಳ ಹೆಣವನ್ನು ಕಂಡಾಗ ನೋವಿಗೆ ದುಃಖಕ್ಕೆ ಪಕ್ಷ ಬೇಧ ಇರಲಿಲ್ಲ. ಸಾದತ್ ಹಸನ್ ಮಾಂಟೋ, ಬರೆದ ವಿಭಜನೆಯ ಕಥೆಗಳಿಂದ ಆಯ್ದ ಆ ಒಂದು ಕಥೆ. ಅದನ್ನು ನೋಡಿದಾಗ ಉತ್ತರವಿಲ್ಲದೆ ಉಳಿಯಬೇಕಾಗುತ್ತದೆ. ಹಿಂಸೆ ಮತ್ತಷ್ಟು ಹಿಂಸೆಗೆ ಪ್ರಚೋದನೆ ನೀಡುತ್ತದೆ ಎಂಬುದನ್ನು ಆ ಕಥೆ ಗಾಢವಾಗಿ ಹೇಳಿತು. ಕೊನೆಯದ್ದು ಟಿಪ್ಪುವಿನ ಸೈನ್ಯದ ದಳವಾಯಿಯೊಬ್ಬನ ಕಥೆ . ಯುದ್ಧ ಗೆದ್ದಾಗ ಎಲ್ಲ ಸೈನಿಕರು ಒಂದೇ ರೀತಿ ಲೂಟಿ ಮಾಡುತ್ತಾರೆ ಎಂಬ ಮಾತು ಕ್ರೌರ್ಯದ ಇನ್ನೊಂದು ಮುಖವನ್ನು ತೋರಿಸಿದಂತಿತ್ತು.
ಆದರೆ ಈ ಎಲ್ಲ ಗಾಯಗಳನ್ನು ಅನುಭವಿಸುವವರು ಯುದ್ಧದಲ್ಲಿ ಉಳಿದವರು ಹಾಗೂ ಅವರ ಮನೆಯವರು, ಮಡದಿ ಮಕ್ಕಳು. ಪ್ರಭುತ್ವಕ್ಕೆ ಈ ನೋವು ತಟ್ಟುವುದಿಲ್ಲ. ಈ ನೋವಿನ ಗಾಯಗಳನ್ನು ನಾವು ಮಾಗಿಸಬೇಕಿದೆ ನಮ್ಮ ನಡುವಿನ ಈ ಕಸವನ್ನು ಗುಡಿಸಿ ಸ್ವಚ್ಛಗೊಳಿಸಬೇಕಿದೆ ಎಂಬ ಅರ್ಥದ ನಾಟಕ ಮನಮುಟ್ಟಿತ್ತು. ಕಸಗುಡಿಸುವ ಇಬ್ಬರು ಹುಡುಗರ ನಿರೂಪಣೆಯಲ್ಲಿ ಸೊಗಸಾಗಿ ಸಾಗುವ ಈ ನಾಟಕ ಮತ್ತು ನಟರ ಅಭಿನಯ ಬಹಳ ದಿನ ಮನದಲ್ಲಿ ಉಳಿಯುವಂತದ್ದು. ನಾವೆಲ್ಲರೂ ದ್ವೇಷ ಎಂಬ ಕಸವನ್ನು ಗುಡಿಸಿ ಸ್ವಚ್ಛಗೊಳಿಸಬೇಕಿದೆ, ಜೊತೆಯಾಗಿ ಬಾಳಬೇಕಿದೆ, ದ್ವೇಷ ಹಿಂಸೆ ಮತ್ತಷ್ಟು ಹಿಂಸೆಗೆ ಪ್ರಚೋದನೆ ಕೊಡುತ್ತದೆ. ಗಾಯಗಳನ್ನು ಮತ್ತೆ ಕೆದಕುವುದು ಎಷ್ಟು ಸರಿ ಇಂದು ನಾವು ಜೊತೆಯಾಗಿ ಬದುಕುವ ದಾರಿಯನ್ನು ಕಂಡುಕೊಳ್ಳಬೇಕಿದೆ ಎಂಬ ಮಾತು ನಾಟಕವನ್ನು ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುವಂತೆ ಮಾಡಿತು.
ನಾಟಕಕ್ಕೆ ಸಹ ನಿರ್ದೇಶಕಿಯಾಗಿ ಶ್ವೇತಾರಾಣಿ ಹಾಸನ, ಸಂಗೀತದಲ್ಲಿ ಅನುಷ್ ಶೆಟ್ಟಿ, ಮುನ್ನ, ಸುನ್ನತ ಮೈಸೂರು ಹಾಗೂ ಕಲೆಯಲ್ಲಿ ಖಾಜು ಗುತ್ತಲ ಸಹಕರಿಸಿದ್ದಾರೆ.
- ಅರವಿಂದ ಕುಡ್ಲ, ಅಧ್ಯಾಪಕರು, ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ,
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
1 Comment
ನಾಟಕ ನನಗೂ ತುಂಬಾ ಇಷ್ಟ ಆಯ್ತು..ನಾಟಕದ ಬಗೆಗಿನ ನಿಮ್ಮ ಲೇಖನವೂ ಇಷ್ಟವಾಯಿತು..
ತುಂಬಾ ದಿನಗಳ ನಂತರ ಒಂದೊಳ್ಳೆ ಪ್ರದರ್ಶನ ನೋಡುವಂತಾಯಿತು. ಸಂತ ಅಲೋಸಿಸ್ ಕಾಲೇಜಿನ ರಂಗ ಅಧ್ಯಯನ ಕೇಂದ್ರ ಅಸ್ತಿತ್ವ ,ಕ್ರಿಸ್ತಿಯ ಬಳಗ ಎಲ್ಲರಿಗೂ ಅಭಿನಂದನೆಗಳನ್ನು ಹೇಳಲೇಬೇಕು..
ರಂಗ ಮಂದಿರ ತಕ್ಕಮಟ್ಟಿಗೆ ಹೊಸ ರೂಪ ಪಡೆದಿರುವುದು ಮತ್ತು ಬೆಳಕು ಹಾಗೂ ಧ್ವನಿವರ್ಧಕದ ಶಾಶ್ವತ ವ್ಯವಸ್ಥೆ ಮಾಡಿರುವುದು ಮಂಗಳೂರಿನ ಪ್ರಾಯೋಗಿಕ ರಂಗಭೂಮಿಯ ರಂಗಕರ್ಮಿಗಳಿಗೆ ಒಂದು ಸಮಾಧಾನದ ನಿಟ್ಟಿಸಿರು ಬಿಡುವಂತಾಗಿರುವುದು ಅಷ್ಟೇ ಸತ್ಯ ..ದೊಡ್ಡ ಸಭಾಂಗಣದಲ್ಲಿ ಈ ರೀತಿಯ ಪ್ರಾಯೋಗಿಕ ನಾಟಕಗಳು ಪ್ರೇಕ್ಷಕರಿಗೆ ತಲುಪುವುದು ತುಸು ಕಷ್ಟವೇ..ಹಾಗಾಗಿ ಈ ರಂಗ ಮಂದಿರ ನಮ್ಮಂತ ಬಡ ರಂಗಕರ್ಮಿಗಳಿಗೆ ಆಶಾಕಿರಣವನ್ನು ಮೂಡಿಸಿದೆ..