ಬೆಂಗಳೂರು: ಕನ್ನಡ ಶಾಲೆಗಳನ್ನು ಉಳಿಸಿ ಬೆಳಸಬೇಕು. ಮಕ್ಕಳಲ್ಲಿ ಕನ್ನಡ ಪ್ರಜ್ಞೆಯನ್ನು ಬೆಳೆಸಬೇಕು, ಜೊತೆಗೆ ಕನ್ನಡ ಭಾಷೆಯ ಮಹತ್ವ ಅರಿವಾಗಬೇಕು. ಕನ್ನಡ ಸಾಹಿತ್ಯ ಓದುವ ಹವ್ಯಾಸ ಮಕ್ಕಳಲ್ಲಿ ಆರಂಭಿಸುವ ಹಿನ್ನೆಲೆಯಲ್ಲಿ, ಕನ್ನಡ ಶಾಲೆಗಳಿಗೆ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಪ್ರಕಟವಾಗಿರುವ ಮೌಲ್ಯಯುತ ಪುಸ್ತಕಗಳನ್ನು ಉಚಿತವಾಗಿ ವಿತರಿಸಲು ಕನ್ನಡ ಸಾಹಿತ್ಯ ಪರಿಷತ್ತು ವಿಶೇಷ ಯೋಜನೆಯೊಂದನ್ನು ಅಳವಡಿಸಿಕೊಂಡಿದೆ.
ಯೋಜನೆಯ ಬಗ್ಗೆ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ “ಕನ್ನಡ ಸಾಹಿತ್ಯ ಪರಿಷತ್ತು ತನ್ನ ವ್ಯಾಪ್ತಿಯಲ್ಲಿ ಬಂದಿರುವ ವಿವಿಧ ಲೇಖಕರ ಬುಹುತೇಕ ಮೌಲ್ಯಯುತ ಪುಸ್ತಕಗಳನ್ನು ಪ್ರಕಟಿಸಿ ಕನ್ನಡ ಸಾರಸ್ವತ ಲೋಕಕ್ಕೆ ನೀಡುತ್ತಾ ಬಂದಿದೆ. ಪರಿಷತ್ತಿನ 108ವರ್ಷಗಳ ಇತಿಹಾಸದಲ್ಲಿ ಸಾವಿರಾರು ಪುಸ್ತಕಗಳನ್ನು ಪ್ರಕಟಿಸುವ ಮೂಲಕ ಅಕ್ಷರಲೋಕಕ್ಕೆ ದೊಡ್ಡ ಕೊಡುಗೆಯನ್ನು ನೀಡುತ್ತಾ ಬಂದಿದೆ. ಜೊತೆಗೆ ಹೊಸ ತಲೆಮಾರಿನ ಬರಹಗಾರರ ಪುಸ್ತಕಗಳನ್ನು ಸಹ ಪ್ರಕಟಿಸಿರುವ ಹೆಮ್ಮೆ ಕನ್ನಡ ಸಾಹಿತ್ಯ ಪರಿಷತ್ತಿಗೆ ಇದೆ. ಕನ್ನಡ ಸಾಹಿತ್ಯದ ಅಘಾದತೆ ಮತ್ತು ಮಹತ್ವವನ್ನು ಕಾಲ ಕಾಲಕ್ಕೆ ಜನರಿಗೆ ತಿಳಿಸುವ ಕೆಲಸವನ್ನು ಪರಿಷತ್ತು ಮಾಡುತ್ತ ಬಂದಿದೆ. ತೀರಾ ಅಪರೂಪ ಎನ್ನಲಾಗುವ ಹಸ್ತ ಪ್ರತಿಗಳನ್ನು ರಕ್ಷಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತ ಬಂದಿದೆ. ಕನ್ನಡ-ಕನ್ನಡಿಗ-ಕರ್ನಾಟಕದ ಸರ್ವತೋಮುಖ ಅಭಿವೃದ್ಧಿಯ ಕನಸನ್ನು ಹೊಂದಿರುವ ಕನ್ನಡ ಸಾಹಿತ್ಯ ಪರಿಷತ್ತು ಮೊದಲು ʻಕನ್ನಡ ಶಾಲೆಗಳನ್ನು ಉಳಿಸಿ-ಬೆಳೆಸಬೇಕುʼ ಎನ್ನುವ ಮಹತ್ವದ ಉದ್ದೇಶದಿಂದ ಕನ್ನಡ ಶಾಲೆಗಳ ಸ್ಥಿತಿಗತಿಗಳ ಕುರಿತು ನಾಡಿನ ಹಿರಿಯ ಚಿಂತಕರು, ಮಠಾಧೀಶರು, ವಿಶ್ರಾಂತ ನ್ಯಾಯಾಧೀಶರು, ಹಿರಿಯ ಸಾಹಿತಿಗಳು, ಶಿಕ್ಷಣತಜ್ಞರು, ಸರಕಾರದ ಶಿಕ್ಷಣ ಮಂತ್ರಿಗಳು ಹಾಗೂ ಅಧಿಕಾರಿಗಳು ಸೇರಿದಂತೆ ಅನೇಕ ಮಹನೀಯರನ್ನೊಳಗೊಂಡ ʻದುಂಡು ಮೇಜಿನ ಸಭೆʼಯನ್ನು ಮಾಡಿ, ಕನ್ನಡ ಶಾಲೆಗಳ ಉಳಿವಿಗೆ ಕೈಗೊಳ್ಳಬೇಕಾದ ಮಹತ್ವದ ನಿರ್ಣಯಗಳನ್ನು ಸರಕಾರಕ್ಕೆ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಕನ್ನಡ ಶಾಲಾ ಮಟ್ಟದಲ್ಲಿಯೇ ಮಕ್ಕಳಲ್ಲಿ ಕನ್ನಡ ಓದುವ ಹವ್ಯಾಸ ಹುಟ್ಟಿಕೊಳ್ಳಬೇಕು ಎನ್ನುವ ಉದ್ದೇಶದಿಂದ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಶಾಲೆಗಳಿಗೆ ಮೌಲ್ಯಯುತ ಪುಸ್ತಗಳನ್ನು ಉಚಿತವಾಗಿ ನೀಡಲು ಯೋಜನೆ ರೂಪಿಸಿಕೊಂಡಿದೆ.” ಎಂದು ಹೇಳಿದರು.
ಈ ಯೋಜನೆಯ ಮೊದಲ ಹಂತವಾಗಿ 100ಶಾಲೆಗಳಿಗೆ ಪರಿಷತ್ತು ಪ್ರಕಟಿಸಿರುವ ಮೌಲ್ಯಯುತ 240 ಪುಸ್ತಕಗಳನ್ನು ವಿತರಿಸಲು ತೀರ್ಮಾನಿಲಾಗಿದೆ. ಈ ಯೋಜನೆಯ ಲಾಭವನ್ನು ಅಕ್ಟೋಬರ್ 2ರಿಂದ ಆರಂಭವಾಗಿ ಅಕ್ಟೋಬರ್ 30 ರವರೆಗೆ ಪಡೆಯಬಹುದಾಗಿದೆ. ಕನ್ನಡ ಶಾಲೆಗಳ ಆಡಳಿತ ಮಂಡಳಿ ಅಥವಾ ಶಿಕ್ಷಕರು ಶಾಲಾ ದಾಖಲೆಯೊಂದಿಗೆ ಖುದ್ದಾಗಿ ಕನ್ನಡ ಸಾಹಿತ್ಯ ಪರಿಷತ್ತಿಗೆ ಬಂದು ಪುಸ್ತಗಳನ್ನು ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಪುಸ್ತಕಗಳ ಸಾಗಾಣಿಕಾ ವೆಚ್ಚವನ್ನು ಕಡ್ಡಾಯವಾಗಿ ಆಯಾ ಶಾಲೆಯವರೇ ಭರಿಸಿಕೊಳ್ಳಬೇಕು. ಖುದ್ಧಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಕಚೇರಿಗೆ ಸೂಕ್ತ ದಾಖಲೆಗಳೊಂದಿಗೆ ಬರುವ ಮೊದಲ 100ಶಾಲೆಗಳಿಗೆ ಮಾತ್ರ ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿರುವ ಮೌಲ್ಯಯುತ ಪುಸ್ತಕಗಳನ್ನು ನೀಡಲಾಗುವುದು. ಮೊದಲು ಬಂದವರಿಗೆ ಮೊದಲ ಆದ್ಯತೆ ನೀಡಲಾಗುವುದು. ದೂರವಾಣಿ, ಮೇಲ್ ಮೂಲಕ ಅಥವಾ ಅಂಚೆಮೂಲಕ ಪುಸ್ತಕಗಳನ್ನು ಪಡೆಯಲು ಅಥವಾ ಕಾಯ್ದಿರಿಸಲು ಈ ಯೋಜನೆಯಲ್ಲಿ ಅವಕಾಶ ಇರುವುದಿಲ್ಲ. ಖುದ್ದಾಗಿ ಶಾಲೆಯ ಅಧಿಕೃತ ದಾಖಲೆಯೊಂದಿಗೆ ಬಂದು ಪಸ್ತಕಗಳನ್ನು ಪಡೆದುಕೊಳ್ಳಬಹುದು.