ಸಾಸುವೆಯಲ್ಲಿ ಸಮುದ್ರ ದರ್ಶನವಾಗಬೇಕಾದರೆ ನೀವು ಕನ್ನಡ ಸಣ್ಣ ಕಥೆಗಳನ್ನು ಓದಬೇಕು.
ಕನ್ನಡದ ಕಥೆಗಳ ಬಗೆಗಿನ ಚಿಂತನ ಮಂಥನ ಕಾರ್ಯಕ್ರಮ ‘ಕಥೆಗಿಣಿಚ’ ದಿನಾಂಕ 01-10-2023ರ ಭಾನುವಾರ ಬೆಂಗಳೂರಿನ ಡಾಲೋರ್ಸ್ ಕಾಲೋನಿಯಲ್ಲಿ ನಡೆಯಿತು. ಕನ್ನಡದ ಕಥೆಗಾರರು, ಕಥೆ ಅನುಸಂಧಾನಗಾರರ ಜೊತೆ ನಡೆದ ವಿವಿಧ ಪ್ರಕಾರದ ಕಥೆಗಳ ಬಗೆಗಿನ ಈ ಕಾರ್ಯಕ್ರಮ ಕವಿ ರಾಜ್ ಆಚಾರ್ಯ ಕಂಡಂತೆ ನಿಮ್ಮ ಮುಂದೆ.
ಇಪ್ಪತ್ತು ಮತ್ತು ಇಪ್ಪತ್ತೊಂದನೆಯ ಶತಮಾನಗಳು ಅಸ್ತಿತ್ವವಾದಿ ಆಧುನಿಕ ಸಂವೇದನೆಯ ಕಾಲಘಟ್ಟಗಳು. ಅರ್ಥ-ಅನರ್ಥಗಳ ನಡುವಿನ ಅರ್ಥಾಂತರಗಳ, ಸಂಕೀರ್ಣವಲ್ಲದ ಸೂಕ್ಷ್ಮ, ಅತಿ ಸೂಕ್ಷ್ಮ ಸಾಹಿತ್ಯ ಅಸಂಗತಗಳಾಚೆ ತನ್ನ ನೆಲೆ ಮತ್ತು ಬೆಲೆಯನ್ನು ಕಂಡುಕೊಂಡದ್ದು ಈ ಶತಮಾನಗಳು ಕಂಡ ವಿಸ್ಮಯಗಳಲ್ಲೊಂದು.
ಆಧುನಿಕ ಸಾಹಿತ್ಯ ಮಾನವ ಕೇಂದ್ರೀಕೃತವಾದರೂ ದೇಶಕಾಲಾದಿಗಳನ್ನು ಮೀರಿ ನಿಂತು ತನ್ನ ಸರ್ವವ್ಯಾಪಿತ್ವದಿಂದ ಓದುಗರ ಸಂವೇದನೆ ಮತ್ತು ಪ್ರಜ್ಞೆಗಳನ್ನು ಬಡಿದೆಬ್ಬಿಸಿ ಹೊಸತೊಂದು ಸಾಹಿತ್ಯ ಸಂಸ್ಕೃತಿಗೆ ನಾಂದಿ ಹಾಡಿತು. ಸುಸಂಗತದಲ್ಲಿ ಇದೇ ಜ್ಞಾನದಾಯಕವಾಗಿ, ಸತ್ಯಾನ್ವೇಷಣೆಯ ಮಾರ್ಗವಾಗಿ ಹೊಸಹೊಸ ಸಾಧ್ಯತೆಗಳನ್ನು ತೆರೆದಿಟ್ಟಿತು. ಕಾಲ ಮತ್ತು ಸಂದರ್ಭಗಳು ತಂದೊಡ್ಡಿದ ಒತ್ತಾಯಗಳ ಹೊರತಾಗಿಯೂ ವಿವೇಚನಾತ್ಮಕ ಮೌಲ್ಯಗಳನ್ನು ಎತ್ತಿಹಿಡಿದದ್ದು ವಿಶೇಷ.
ಇದರದೇ ಭಾಗವಾದ ಕಥಾ ಸಾಹಿತ್ಯ ಮೌಖಿಖಾಮೌಖಿಕ ನೆಲೆಗಳನ್ನು ದಾಟಿ ಪ್ರಜ್ಞಾವಾಹಿಯಂತೆ ಪಸರಿಸಿ ಜಾಗತಿಕವಾಗಿ ತನ್ನ ಬೇರುಗಳನ್ನು ಆಳವಾಗಿ ಊರಿ ನೆಲೆನಿಂತದ್ದು ಈಗ ಇತಿಹಾಸ. ಈ ಕಾಲಘಟ್ಟದ ಅಸಂಗತತೆ, ಅಸಹಾಯಕತೆ, ಸೂತ್ರತಪ್ಪಿದ ಬದುಕು, ಅನಾಥಪ್ರಜ್ಞೆ, ಅಪರಾಧ ಪ್ರಜ್ಞೆ, ಸಂಬಂಧಗಳ ಸಂಕೀರ್ಣತೆ, ಅಮಾನುಷತೆ, ಧರ್ಮಾಂಧತೆ, ಅಸಹಿಷ್ಣುತೆ, ಫ್ಯೂಡಲಿಸಂ, ರಾಜಕೀಯ ವ್ಯವಸ್ಥೆ ಮತ್ತು ಅರಾಜಕತೆ ಹೀಗೆ ಹತ್ತು ಹಲವು ಸಂಕೀರ್ಣತೆಗಳ ಆಖ್ಯಾನದ ವ್ಯಾಖ್ಯಾನವಾಗಿ ಆಧುನಿಕ ಕಥಾ ಸಾಹಿತ್ಯ ಕಾಣಸಿಗುತ್ತದೆ.
ನನ್ನ ಭಾವಕೋಶಕ್ಕೆ ನಿಲುಕಿದಂತೆ ಮನುಷ್ಯನ ಮೂಲ ಪ್ರವೃತ್ತಿಗಳನ್ನು (basic Instinct) ಒಳಗೊಂಡಂತೆ ಕೇಳರಿಯದಂಥ (unheard-of) ಅಸ್ತಿತ್ವವಾದಿ ನೆಲೆಯ ರೂಪಕನಿಷ್ಠ, ಅನ್ಯೋಕ್ತಿವಿಲಾಸ, ಭ್ರಾಮಕ ಕಲ್ಪನೆ, ಇವೇ ಮೊದಲಾದ ವ್ಯಂಜನಗಳನ್ನು ಕಥಾ ಖಾದ್ಯಗಳಂತೆ ಉಣಬಡಿಸುತ್ತಿರುವ ಎಲ್ಲ ಬರವಣಿಗೆಯ ಬಾಣಸಿಗರಿಗೆ ನನ್ನ ಅಭಿವಂದನೆ ಹೇಳದೆ ಮುಂದುವರಿಯಲಾರೆ.
ಕನ್ನಡದ ಕಥಾ ಸಾಹಿತ್ಯ ಜಾಗತಿಕವಾಗಿ ಅತ್ಯಂತ ಸಮೃದ್ಧವಾದದ್ದು. ಇಲ್ಲಿಯ ಕಥೆಗಳು ನೆಲದ ಮಣ್ಣಿನೊಂದಿಗೆ ಮೈದಳೆದು ಸಾಹಿತ್ಯಕವಾಗಿ, ಸಾಂಸ್ಕೃತಿಕವಾಗಿ, ರಾಜಕೀಯವಾಗಿ, ಶೈಕ್ಷಣಿಕವಾಗಿ ತಾತ್ವಿಕವಾಗಿ ಪರಂಪರೆಯೊಂದಿಗೆ ಮುಖಾಮುಖಿಯಾಗಿ ಸಾಗಿ ಬಂದಿದೆ. ಅಲ್ಲದೆ ಅಸಮಾನತೆ, ಅಧಿಪತ್ಯಗಳಿಗೆ ಸವಾಲೊಡ್ಡುವ ಚಳುವಳಿಯಾಗಿಯೂ ಕನ್ನಡ ಕಥಾ ಸಾಹಿತ್ಯ ಮಹತ್ವ ಪಡೆದುಕೊಂಡಿದೆ.
“Inside each of us is a natural-born storyteller, waiting to be released.” ಅನ್ನುವ ಮಾತಿದೆ. ಜನಪ್ರಿಯತೆಯಲ್ಲಿ ಕಾವ್ಯದ ನಂತರದ ಸ್ಥಾನವನ್ನು ಕಥಾ ಸಾಹಿತ್ಯ ಗಳಿಸಲು ಕನ್ನಡದ ಕಥೆಗಾರರ ಕೊಡುಗೆ ಅಗಣಿತವಾದುದು. ಅಸಾಮಾನ್ಯವಾದುದು. ಚಾರಿತ್ರಿಕವಾಗಿ ಕನ್ನಡದ ನವೋದಯ, ಪ್ರಗತಿಶೀಲ, ಬಂಡಾಯ, ದಲಿತ, ನವ್ಯ ಮತ್ತು ನವ್ಯೋತ್ತರ ಕಥೆಗಾರರು ಆಯಾ ಕಾಲಘಟ್ಟದ ಸಾಕ್ಷಿಪ್ರಜ್ಞೆಗಳಂತೆ ಕೆಲಸ ಮಾಡಿದ್ದು ಸತ್ಯಾತಿಸತ್ಯ.
ಸಾಹಿತ್ಯವನ್ನು ಸಾಹಿತ್ಯವಾಗಿಯೇ ಓದುವ ಪ್ರಕ್ರಿಯೆಯಾಗಿ ಸಾಗಿ, ಸಾಮಾಜಿಕ ಅಧ್ಯಯನವನ್ನು ದಾಟಿ, ಸಾಮಾಜಿಕ ಸಂದರ್ಭ-ರಾಜಕೀಯ ಸಿದ್ಧಾಂತ ಸಾಹಿತ್ಯಗಳ ಸಂಬಂಧವನ್ನು ವಿಶ್ಲೇಷಿಸುತ್ತ ಸಾಗುವಾಗ ಕನ್ನಡದ ಅನೇಕ ಕಥೆಗಾರರು ನನ್ನ ಮೇಲೆ ಪ್ರಭಾವ ಬೀರಿದ್ದಾರೆ. ಕೆಲ ಹೆಸರುಗಳನ್ನು ಇಲ್ಲಿ ಸಂದರ್ಭಾನುಸಾರ ಹೇಳುವುದಾದರೆ ಮಾಸ್ತಿ ವೆಂಕಟೇಶ ಅಯ್ಯಂಗಾರ್, ಎ.ಆರ್.ಕೃಷ್ಣಶಾಸ್ತ್ರಿ, ಆನಂದ, ಕುವೆಂಪು, ಅಶ್ವತ್ಥ, ಚದುರಂಗ, ಕಟ್ಟೀಮನಿ, ತ.ರಾ.ಸು., ನಿರಂಜನ, ರಾಮಚಂದ್ರ ಶರ್ಮ, ಯಶವಂತ ಚಿತ್ತಾಲ, ಎ.ಕೆ.ರಾಮಾನುಜನ್, ಶಾಂತಿನಾಥ ದೇಸಾಯಿ, ಯು.ಆರ್.ಅನಂತಮೂರ್ತಿ, ಪಿ.ಲಂಕೇಶ್, ಪೂರ್ಣಚಂದ್ರ ತೇಜಸ್ವಿ, ಶ್ರೀಕೃಷ್ಣ ಆಲನಹಳ್ಳಿ, ದೇವನೂರ ಮಹಾದೇವ, ಎಸ್. ದಿವಾಕರ್, ಅಮರೇಶ ನುಗಡೋಣಿ ಹೀಗೆ ಹಲವರ ಕಥೆಗಳು ನನ್ನ ಓದನ್ನು ವಿಸ್ತರಿಸಿವೆ. ನನ್ನನ್ನು ರೂಪಿಸಿವೆ.
ಕಥೆಗಳು ಸಣ್ಣದಾದ ಕಾಲಕ್ಕೆ ವ್ಯಥೆಗಳು ದೊಡ್ಡವುಗಳಾಗಿ ಕಾಡುತಿರುವ ದುರಿತ ಕಾಲದಲ್ಲಿ ಮಿನಿ ಕಥೆಗಳು, ಮೈಕ್ರೋ ಕಥೆಗಳು, ನ್ಯಾನೋ ಕಥೆಗಳು ಹೀಗೆ ನಾನಾ ರೂಪ ನಾನಾ ವೇಷ ಧರಿಸಿ ಹೊರಬರುತ್ತಿವೆ. ಸಣ್ಣ ಕಥೆಗಳು ಲಂಗತೊಟ್ಟ ದೊರೆಸಾನಿ ಎಂಬುದು ನಿಜವೆ. ಹಾಗೆಯೆ ಓದುವ ಸಂಸ್ಕೃತಿಗೆ ಧಕ್ಕೆ ಬಂದೊದಗಿದ ಕಾಲಕ್ಕೆ ಸವಾಲೆಸೆದು ರೂಪಾಂತರವಾದ (Metamorphosis) ಕಥಾ ಸಾಹಿತ್ಯದ ಮರು ಓದು, ಚರ್ಚೆಯ ಅಗತ್ಯಗಳನ್ನು ಮನಗಾಣಬೇಕಿದೆ.
ಕನ್ನಡ ಕಥೆಗಳು ಪ್ರತಿಪಾದಿಸುವ ಜೀವ-ಜೀವನ ಪ್ರೀತಿ,ಸಹಿಷ್ಣುತೆ, ಸಾಮಾಜಿಕ ನ್ಯಾಯ, ಸಮಾನತೆ, ವೈಚಾರಿಕತೆ ಇವುಗಳನ್ನು ಮರು ಓದಿನ ಮೂಲಕ ಮತ್ತಷ್ಟು ಹಿಗ್ಗಿಸುವ ಜರೂರಿದೆ. ಬಹುಮುಖ್ಯವಾಗಿ ಉಪೇಕ್ಷೆಗೆ ಒಳಗಾಗುತ್ತಿರುವ ನನ್ನ ಕಾಲದ ಕವಿ, ಲೇಖಕ, ಬರಹಗಾರರನ್ನು ಮುನ್ನೆಲೆಗೆ ತರುವ ಮಹತ್ವಾಕಾಂಕ್ಷೆ ನಮ್ಮೆಲ್ಲೆರಲ್ಲಿ ಬರಬೇಕಿದೆ.
ಹಿಂದಿನವರು ಬರೆದಿದ್ದೇ ಶ್ರೇಷ್ಠ ಮುಂದಿನವರದೆಲ್ಲ ಕನಿಷ್ಠ ಎನ್ನುವಂಥಹ ತಥಾಕಥಿತ ವಾದಸರಣಿಗಳನ್ನು ಹಿಂದಿಕ್ಕಿ ಮುನ್ನಡೆಯಬೇಕಿದೆ. ಏನಕೇನ ಹೊಗಳುವುದಾದರೆ ಹೇಳು, ಟೀಕಿಸುವುದಾದರೆ ಸುಮ್ಮನಿರು ಎಂಬ ವಿಮರ್ಶೆಯ ನೆಲೆಗಳನ್ನು ಮರೆತ ಈಗಿನ ಕಾಲದ ಕೆಲ ಹವ್ಯಾಸಿ (amateur) ಬರಹಗಾರರು ಪರಂಪರೆಯೊಂದಿಗೆ ಸಂಲಗ್ನತೆ ಸಾಧಿಸಲು ದಾರಿಗಳನ್ನು ನಾವೇ ಹುಡುಕಿಕೊಡಬೇಕಿದೆ.
ಈ ದಿಸೆಯಲ್ಲಿ ಸಣ್ಣ ಕಥೆಯನ್ನು ಒಂದು ಗಮನಾರ್ಹ ಮಾಧ್ಯಮವಾಗಿ ನೆಲೆಗೊಳಿಸುವುದರೊಂದಿಗೆ ಅದಕ್ಕೆ ವಿಶಿಷ್ಟ ಮೂರ್ತ-ಸ್ವರೂಪಕೊಟ್ಟ ಎಲ್ಲ ಪೂರ್ವಸೂರಿಗಳಿಗೆ ನೆನಹಿನಲ್ಲಿ ಕನ್ನಡ ಕಥಾ ಸಾಹಿತ್ಯದ ಮರು ಓದು ಮತ್ತು ಮನನಕ್ಕೆ ಗೆಳೆಯ ಮತ್ತು ಸಾಹಿತ್ಯ ಸಹವರ್ತಿಗಳಾದ ಶಂಕರ್ ಸಿಹಿಮೊಗ್ಗೆ ಮತ್ತು ಸೂರ್ಯಕೀರ್ತಿ ವೇದಿಕೆಯೊಂದನ್ನು ಕಳೆದ ಭಾನುವಾರ ಎಲ್ಲ ಕನ್ನಡ ಕಥಾ ಸಾಹಿತ್ಯ ಪ್ರಿಯರಿಗೆ ಒದಗಿಸಿಕೊಟ್ಟಿದ್ದರು.
ದಿನಾಂಕ 01-10-2023ರ ಭಾನುವಾರ ‘ಕಥೆಗಿಣಿಚ’ ಶೀರ್ಷಿಕೆಯಡಿಯಲ್ಲಿ ಸಮಕಾಲೀನ ಕಥೆಗಳ ಚಿಂತನ-ಮಂಥನ ಕಾರ್ಯಕ್ರಮವು ಅರ್ಥಪೂರ್ಣವಾಗಿ ನಡೆಯಿತು. ಕನ್ನಡ ಸಾಹಿತ್ಯದ ಮಟ್ಟಿಗೆ ಇದೊಂದು ಹೊಸಪ್ರಯೋಗವೆಂದೇ ಹೇಳಬಹುದು. ಅನೌಪಚಾರಿಕವಾಗಿ ಒಂದೆಡೆ ಕಲೆತು ಔಪಚಾರಿಕವಾದ ಸಾಹಿತ್ಯವನ್ನು ಪರಾಮರ್ಶಿಸುವ ಅವರ ಸದುದ್ದೇಶ ಸಫಲವಾಗಿದೆ ಎಂದೇ ಹೇಳಬೇಕು. ಸಾಮಾನ್ಯವಾಗಿ ವೇದಿಕೆಯ ಕಾರ್ಯಕ್ರಮಗಳು ಗಂಟೆ ಕಳೆದರೂ ಸಾಕು, ತಲೆನೋವು ಬರಲು ಆರಂಭವಾಗುತ್ತದೆ. ಆದರೆ ಇಲ್ಲಿ ಯಾವುದೇ ವೇದಿಕೆ ಇರದೆ ಪರಸ್ಪರ ಸಂವಾದ ಚರ್ಚೆಯು ಆಪ್ತವಾಗಿದ್ದರಿಂದ ನಾಲ್ಕು ಗಂಟೆಗಳು ಕಳೆದದ್ದು ಗಮನಕ್ಕೆ ಕೂಡ ಬರಲಿಲ್ಲ.
- ರಾಜ್ ಆಚಾರ್ಯ, ಕವಿಗಳು, ಬೆಂಗಳೂರು