ಬೆಂಗಳೂರು : ‘ಕನ್ನಡ ನನ್ನ ಮೊದಲ ಪ್ರೀತಿ, ಎರಡನೆಯ ಪ್ರೀತಿಯೂ ಅದೇ’ ಎಂದು ಕನ್ನಡಕ್ಕಾಗಿ ಜೀವನಪರ್ಯಂತ ದುಡಿದು ತಮ್ಮ ಬರಹದ ಮೂಲಕ ಕನ್ನಡ ಚಿಂತನೆಗೆ ಘನತೆ ತಂದು ಕೊಟ್ಟ ಡಾ. ಹಾ.ಮಾ. ನಾಯಕ ಹೆಸರಿನಲ್ಲಿ ‘ಹಾಮಾನಾ ಕನ್ನಡ ಜಾಗೃತಿ ಪುಸ್ತಕ ಬಹುಮಾನ’ವಾಗಿ ನಗದು ಪ್ರಶಸ್ತಿಯನ್ನು ನೀಡಲು ನಿರ್ಧರಿಸಿರುವ ಕನ್ನಡ ಗೆಳೆಯರ ಬಳಗವು ಕನ್ನಡ ನಾಡು, ನುಡಿ, ಸಂಸ್ಕೃತಿಗಳನ್ನು ಕುರಿತು ರಚಿಸಿರುವ ಪುಸ್ತಕಗಳನ್ನು ಆಹ್ವಾನಿಸಿದೆ. ಪ್ರತಿ ವರ್ಷದಂತೆ ಈ ವರ್ಷವು ಅತ್ಯುತ್ತಮ ಪುಸ್ತಕಕ್ಕೆ ಪ್ರಥಮ ಪ್ರಶಸ್ತಿಯಾಗಿ ಐದು ಸಾವಿರ ರೂಪಾಯಿ ನಗದು ಬಹುಮಾನ ಮತ್ತು ಎರಡನೇ ಪುಸ್ತಕಕ್ಕೆ ಸಮಾಧಾನಕರ ಪ್ರಶಸ್ತಿಯಾಗಿ ಎರಡು ಸಾವಿರ ರೂಪಾಯಿ ನಗದು ಬಹುಮಾನವನ್ನು ನೀಡಲಾಗುವುದು.
ಈ ಪ್ರಶಸ್ತಿಗೆ ಪುಸ್ತಕ ಕಳುಹಿಸಲು ಇಚ್ಛಿಸುವವರು ಎರಡು ಪ್ರತಿಗಳನ್ನು ದಿನಾಂಕ 01-11-2023ರೊಳಗೆ ರಾ.ನಂ.ಚಂದ್ರಶೇಖರ, ಸಂಚಾಲಕ, ಕನ್ನಡ ಗೆಳೆಯರ ಬಳಗ, ನಂ.1, ‘ಶ್ರೀನಿಲಯ’ ಮಾರಮ್ಮ ದೇವಸ್ಥಾನದ ರಸ್ತೆ, ಕತ್ರಗುಪ್ಪೆ, ಬೆಂಗಳೂರು -560085 ಇಲ್ಲಿಗೆ ಕಳುಹಿಸಿಕೊಡಲು ತಿಳಿಸಿದೆ. ನವೆಂಬರ್ ತಿಂಗಳ ಕೊನೆಯ ವಾರದಲ್ಲಿ ನಡೆಯುವ ಕನ್ನಡ ಗೆಳೆಯರ ಬಳಗದ ವಾರ್ಷಿಕ ಪ್ರಶಸ್ತಿಗಳ ಪ್ರದಾನ ‘ಚಿಮೂ ಕನ್ನಡ ಸಂಸ್ಕೃತಿ ಪ್ರಶಸ್ತಿ’ ನೀಡುವ ಸಮಾರಂಭದಲ್ಲಿ ‘ಹಾಮಾನಾ ಕನ್ನಡ ಜಾಗೃತಿ ಪುಸ್ತಕ ಬಹುಮಾನ’ವನ್ನು ಸಹ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ 080-26794508 ಸಂಪರ್ಕಿಸಬಹುದು.