ಶಕ್ತಿನಗರ : 25ನೇ ಅಖಿಲ ಭಾರತ ಕೊಂಕಣಿ ಸಾಹಿತ್ಯ ಸಮ್ಮೇಳನದ ಲಾಂಛನ ಬಿಡುಗಡೆ ಸಮಾರಂಭವು ವಿಶ್ವ ಕೊಂಕಣಿ ಕೇಂದ್ರದಲ್ಲಿ ದಿನಾಂಕ 04-10-2023ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ 25ನೇ ಅಖಿಲ ಭಾರತ ಕೊಂಕಣಿ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೊಂಕಣಿ ಕವಿ ಟೈಟಸ್ ನೊರೊನ್ಹಾ ಇವರು ಮಾತನಾಡುತ್ತಾ “ಸಾಹಿತ್ಯ ಸಮ್ಮೇಳನಗಳು ಭಾಷೆ ಮತ್ತು ಸಾಹಿತ್ಯದ ವೈವಿಧ್ಯತೆಯನ್ನು ಸಂಭ್ರಮಿಸುವ ಹಬ್ಬಗಳಾಗಿವೆ. 1939ರಲ್ಲಿ ಕುಮಟಾದ ವಕೀಲ ಮಾಧವ ಮಂಜುನಾಥ ಶಾನುಭಾಗರ ದೂರದೃಷ್ಟಿಯ ಫಲಶ್ರುತಿ ಅಖಿಲ ಭಾರತ ಕೊಂಕಣಿ ಪರಿಷತ್ ಈವರೆಗೆ ದೇಶದ ವಿವಿಧ ಭಾಗಗಳಲ್ಲಿ 24 ರಾಷ್ಟ್ರ ಮಟ್ಟದ ಕೊಂಕಣಿ ಸಾಹಿತ್ಯ ಸಮ್ಮೇಳನಗಳನ್ನು ಆಯೋಜಿಸಲಾಗಿದೆ. ದಿನಾಂಕ 04-11-2023 ಮತ್ತು 05-11-2023ರಂದು ಮಂಗಳೂರಿನ ಶಕ್ತಿನಗರದ ವಿಶ್ವ ಕೊಂಕಣಿ ಕೇಂದ್ರದಲ್ಲಿ 25ನೇ ಅಖಿಲ ಭಾರತ ಕೊಂಕಣಿ ಸಾಹಿತ್ಯ ಸಮ್ಮೇಳನ ನಡೆಯಲಿದೆ. ದೇಶದ ವಿವಿಧ ಭಾಗಗಳಿಂದ ಸುಮಾರು 800 ಪ್ರತಿನಿಧಿಗಳು ಸಮ್ಮೇಳನದಲ್ಲಿ ಭಾಗವಹಿಸುವ ನಿರೀಕ್ಷೆಯಿದ್ದು, ವಿದ್ಯಾರ್ಥಿಗಳಿಗೆ ವಿಶೇಷ ವಿನಾಯತಿ ನೀಡಲಾಗಿದೆ. ಪ್ರತಿನಿಧಿಗಳಿಗೆ ವಸತಿ, ಊಟದ ವ್ಯವಸ್ಥೆ ಮಾಡಲಾಗಿದ್ದು, ಆನ್ ಲೈನ್ ಮೂಲಕ ನೋಂದಣಿ ಆರಂಭಿಸಲಾಗಿದೆ ಎಂದು ಹೇಳಿದರು.
ಸಂತ ಅಲೋಶಿಯಸ್ ಕಾಲೇಜಿನ ಕೊಂಕಣಿ ಸಂಸ್ಥೆಯ ಸಂಚಾಲಕ ಖ್ಯಾತ ಕಲಾವಿದ ಪಿಂಟೊ ವಾಮಂಜೂರ್ ಅವರು ಸಮ್ಮೇಳನದ ಲಾಂಛನವನ್ನು ತಯಾರಿಸಿದ್ದಾರೆ. 1974ರಲ್ಲಿ ಕರ್ನಾಟಕದಲ್ಲಿ, ಕೊಂಕಣಿ ಭಾಷಾ ಮಂಡಳದ ಸ್ಥಾಪನೆಗಾಗಿ ಶ್ರಮಿಸಿದ ಹಿರಿಯ ಪತ್ರಕರ್ತ ಮತ್ತು ವಿಮಲಾ ವಿ. ಪೈ ಜೀವನ ಸಿದ್ಧಿ ಪ್ರಶಸ್ತಿ ಪುರಸ್ಕೃತ ಫಾ. ಮಾರ್ಕ್ ವಾಲ್ಡರ್ ಸಮ್ಮೇಳನದ ಲಾಂಛನ ಅನಾವರಣಗೊಳಿಸಿದರೆ, ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ನಂದಗೋಪಾಲ ಶೆಣೈ ಮಾಹಿತಿ ಪುಸ್ತಕ ಲೋಕಾರ್ಪಣೆ ಮಾಡಿದರು. ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಹಿರಿಯ ಸಾಹಿತಿ ಗೋಕುಲದಾಸ ಪ್ರಭು ನೋಂದಣಿ ಪುಸ್ತಕ ಬಿಡುಗಡೆ ಮಾಡಿದರು.
ಕಥೊಲಿಕ್ ಸಭಾ ಮಂಗಳೂರು ಪ್ರದೇಶ ಅಧ್ಯಕ್ಷರಾದ ಆಲ್ವಿನ್ ಡಿ’ಸೋಜಾ ಪಾನೀರ್ ಕ್ಯೂ ಆರ್ ಕೋಡ್ ಮೂಲಕ ಆನ್ ಲೈನ್ ನೋಂದಣಿಗೆ ವಿದ್ಯುಕ್ತ ಚಾಲನೆ ನೀಡಿದರು. ಅಖಿಲ ಭಾರತ ಕೊಂಕಣಿ ಪರಿಷತ್ ಅಧ್ಯಕ್ಷ ಅರುಣ್ ಉಭಯ್‌ಕರ್ ಮೊದಲಾದವರು ಉಪಸ್ಥಿತರಿದ್ದರು. ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷ ಎಚ್.ಎಂ. ಪೆರ್ನಾಲ್ ಸ್ವಾಗತಿಸಿ ಸಾಹಿತ್ಯ ಅಕಾಡೆಮಿ ಹೊಸದಿಲ್ಲಿ ಕಾರ್ಯಕಾರಿ ಸಮಿತಿ ಸದಸ್ಯ, ಕೊಂಕಣಿ ಭಾಷಾ ಮುಖ್ಯಸ್ಥ ಮೆಲ್ವಿನ್ ರೊಡ್ರಿಗಸ್ ನಿರೂಪಿಸಿ, ವಿಶ್ವಕೊಂಕಣಿ ಕೇಂದ್ರದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗುರುದತ್ತ ಬಂಟ್ವಾಳ್‌ಕರ್ ವಂದಿಸಿದರು.