Art Houz ತನ್ನ ಒಂಬತ್ತನೇ ವರ್ಷದ ವಾರ್ಷಿಕೋತ್ಸವದ ಸಂಭ್ರಮ ಮತ್ತು ನೂರನೇ ಕಲಾಪ್ರದರ್ಶನದ ಅಂಗವಾಗಿ ಮೂವತ್ತು ಮೂರು ಹಿರಿಯ ಕಲಾವಿದರ ಕಲಾಪ್ರದರ್ಶನವನ್ನು ಹಮ್ಮಿಕೊಂಡಿದೆ.”Transformative Legacies and Studio Stories” ಹೆಸರಿನಲ್ಲಿ ಈ ಕಲಾ ಪ್ರದರ್ಶನ ನಡೆಯುತ್ತಿದೆ. ದಿನಾಂಕ 23-09-2023ರಂದು ಪ್ರಖ್ಯಾತ ಪ್ರಿಂಟ್ ಮೇಕರ್ ಕಲಾವಿದರಾದ ಶ್ರೀ ದೇವರಾಜ್ ದಾಕೋಜಿ ಅವರಿಂದ ಈ ಪ್ರದರ್ಶನ ಉದ್ಘಾಟನೆಗೊಂಡಿತು. ಭಾಗವಹಿಸಿದ ಕಲಾವಿದರೆಲ್ಲ ನವ್ಯಕಲೆಯ ಅಲೆಯೆಬ್ಬಿಸುತ್ತಲೇ ಕನ್ನಡ ನಾಡಿನ ಕಲೆಯನ್ನು ಶ್ರೀಮಂತಗೊಳಿಸಿದವರು. ಕಾಲಕ್ಕೆ ಸರಿಯಾಗಿ ಹೊಸತನ ಬೆಳೆಸಿಕೊಂಡವರು. ಆಧುನಿಕ ಕಾಲಘಟ್ಟದಲ್ಲಿ ರಾಷ್ಟ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದವರು.
ಶ್ರೀ ಎಸ್.ಜಿ. ವಾಸುದೇವ್, ಶ್ರೀ ಜಸು ರಾವಲ್, ಶ್ರೀ ವಿ.ಜಿ. ಅಂದಾನಿ, ಶ್ರೀ ಜೆ.ಎಸ್. ಖಂಡೇರಾವ್, ಶ್ರೀ ಚಂದ್ರನಾಥ ಆಚಾರ್ಯ, ಶ್ರೀ ಭಾಸ್ಕರ್ ರಾವ್, ಶ್ರೀ ಚಿ.ಸು. ಕೃಷ್ಣ ಸೆಟ್ಟಿ ಹೀಗೆ ಹಲವಾರು ಹಿರಿಯ ಕಲಾವಿದರ ಕಲಾ ವಿದ್ವಾಂಸರ ಶ್ರೇಷ್ಠ ಕಲಾಕೃತಿಗಳ ಸಮೂಹವೇ ಇದರಲ್ಲಿ ಇದೆ. ಇವರೆಲ್ಲ ತಮ್ಮ ಕಲ್ಪನಾ ವಿಲಾಸವನ್ನು ಮುಕ್ತವಾಗಿ ಹರಿದುಬಿಟ್ಟು ಕಲೆಯ ಸೃಷ್ಟಿಯಲ್ಲಿ, ಸೃಜನಶೀಲ ಕೊಡುಗೆಯಲ್ಲಿ 50ಕ್ಕೂ ಹೆಚ್ಚು ವರ್ಷ ತಮ್ಮನ್ನು ತೊಡಗಿಸಿಕೊಂಡಿರುವವರೇ ಆಗಿದ್ದಾರೆ. ಇವೆಲ್ಲ ಈ ಶತಮಾನದ ಕಲಾಪ್ರಜ್ಞೆ, ಕಲೆಯ ಬಗ್ಗೆ ಬೆಳಕು ಚೆಲ್ಲುವ ಕಲಾಕೃತಿಗಳು. ಕಲಾ ಪರಂಪರೆಯನ್ನು ಮುಂದಿನ ತಲೆಮಾರಿಗೆ, ಪೀಳಿಗೆಗೆ, ಸಾಗಿಸುವ, ಉನ್ನತ ಕಲಾ ಅರಿವು ಮೂಡಿಸುವ ಶ್ರೇಷ್ಠ ಕಲಾಕೃತಿಗಳಾಗಿ ಗೋಚರಿಸುತ್ತವೆ. 33 ಕೊಟಿ ದೇವತೆಗಳನ್ನು ನೆನಪಿಸುವಂತೆ 33 ಕಲಾವಿದರು ಚಿತ್ರಸೂತ್ರಗಳ ದೃಷ್ಟಾರರಂತೆ ಗೋಚರಿಸುತ್ತಾರೆ. ಗಂಭೀರವಾದ, ಮಹೋನ್ನತವಾದ ಕಲಾಕೃತಿಗಳ ಬಗ್ಗೆ ಸದಾ ಅರಿವು, ಅಭಿರುಚಿ ,ಅಭಿಮಾನ ಮೂಡಿಸುವುದು ಒಂದು ಸಾಧನಾ ಕೈಂಕರ್ಯವೇ ಸರಿ. Art Houzನ ಕಲಾಪ್ರದರ್ಶನದ ಸಂಯೋಜಕಿ ಜಯಂತಿ ಶೇಖರ ಅವರ ಇಂತಹ ಕಾರ್ಯ ಅತ್ಯಂತ ಶ್ಲಾಘನೀಯವಾದದ್ದು. ಶತ ಎಂದರೆ ಅನೇಕ ಎಂಬ ಅರ್ಥವನ್ನು ನೀಡುತ್ತದೆ. ಹಾಗಾಗಿ ಇಂತಹ ಅನೇಕ ಕಲಾಪ್ರದರ್ಶನದ ಕಾರ್ಯಕ್ರಮಗಳು ಇಲ್ಲಿ ಸದಾ ನಡೆಯುವಂತಾಗಲಿ ಎಂದು ಈ ಸಂದರ್ಭದಲ್ಲಿ ಹಾರೈಸೋಣ. ದಿನಾಂಕ 21-10-2023ರ ತನಕ ಈ ಪ್ರದರ್ಶನ ನಡೆಯಲಿದೆ.
- ಗಣಪತಿ ಎಸ್. ಹೆಗಡೆ , ಕಲಾ ವಿಮರ್ಶಕರು, ಬೆಂಗಳೂರು