ಬೆಂಗಳೂರು : ಹಿರಿಯ ಪತ್ರಕರ್ತ, ಸಾಹಿತಿ, ನಾಟಕಕಾರ, ಅನುವಾದಕ ಜಿ.ಎನ್. ರಂಗನಾಥ ರಾವ್ ಅವನು ದಿನಾಂಕ 09-10-2023ರಂದು ನಿಧನ ಹೊಂದಿದ್ದಾರೆ. ಮೃತರು ಪುತ್ರ ಮತ್ತು ಪುತ್ರಿಯನ್ನು ಆಗಲಿದ್ದಾರೆ. 1942ರಲ್ಲಿ ಬೆಂಗಳೂರು ಜಿಲ್ಲೆಯ ಹಾರೋಹಳ್ಳಿಯಲ್ಲಿ ಹುಟ್ಟಿದ ಇವರು ಹೊಸಕೋಟೆ ಹಾಗೂ ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿದರು. 1962ರಲ್ಲಿ ತಾಯಿನಾಡು ನಂತರ ‘ಸಂಯುಕ್ತ ಕರ್ನಾಟಕ’ ಬೆಂಗಳೂರು ಆವೃತ್ತಿಯಲ್ಲಿ ಉಪಸಂಪಾದಕರಾಗಿ ಪತ್ರಿಕೋದ್ಯಮದಲ್ಲಿ ವೃತ್ತಿ ಜೀವನ ಪ್ರಾರಂಭಿಸಿ, ನಂತರ ಪ್ರಜಾವಾಣಿ ಸೇರಿ ಕಾರ್ಯನಿರ್ವಾಹಕ ಸಂಪಾದಕರಾಗಿ ನಿವೃತ್ತರಾದರು. ಬಹುಮುಖ ವ್ಯಕ್ತಿತ್ವ ಹೊಂದಿದ್ದ ಅವರು ‘ನವರಂಗ’ ಎಂಬ ಕಾವ್ಯನಾಮದಲ್ಲಿ ಕಾದಂಬರಿಗಳು, ಸಣ್ಣ ಕಥೆಗಳು, ನಾಟಕಗಳು, ವಿಮರ್ಶಾತ್ಮಕ ಪ್ರಬಂಧಗಳನ್ನು ಬರೆದಿದ್ದಾರೆ. ಕವಿಯಾಗಿ ಅವರು ಉದಯೋನ್ಮುಖ ಕವಿಗಳಿಗೆ ಪ್ರೋತ್ಸಾಹ ನೀಡುತ್ತಿದ್ದರು. ನಾಟಕಗಳ ಬಗ್ಗೆ ಅಪಾರ ಆಸಕ್ತಿ ಇತ್ತು. ರಾಜ್ಯದ ಹಲವು ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ್ದ ಅವರು ಕಾದಂಬರಿ, ಸಣ್ಣಕತೆ, ನಾಟಕ, ಪ್ರಬಂಧ, ವಿಮರ್ಶಾ ಕೃತಿಗಳನ್ನು ರಚಿಸಿದ್ದಾರೆ. ರಂಗನಾಥರಾವ್ ಅವರು 2018ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ಹಾಗೂ ಇತರ ಅನೇಕ ಪ್ರಶಸ್ತಿಗಳಿಗೂ ಭಾಜನರಾಗಿದ್ದರು.
ತಾಯಿನಾಡು ಪತ್ರಿಕೆಯ ಮೂಲಕ ಮಾಧ್ಯಮ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿ ಸಂಯುಕ್ತ ಕರ್ನಾಟಕ ಮತ್ತು ಪ್ರಜಾವಾಣಿ ಪತ್ರಿಕೆ ಮೂಲಕ ತನ್ನ ಜ್ಞಾನ ಭಂಡಾರದ ಬಾಗಿಲು ತೆರೆದವರು ಮತ್ತೆ ಸಂಪಾದಕರಾಗಿ ಸಾಂಸ್ಕೃತಿಕ ಲೋಕದಲ್ಲಿ ತನ್ನ ಬರಹದ ಮೂಲಕ ಜನಮನವನ್ನು ಗೆದ್ದವರು. ರಂಗನಾಥ ರಾಯರ ಬರಹದ ಶೈಲಿ ಬೇರೆ, ನಾಟಕಕ್ಕೆ ಮೊದಲ ಆದ್ಯತೆ ನೀಡುವ ಇವರು ವಿಮರ್ಶೆಗೆ ನಂತರದ ಸ್ಥಾನ ನೀಡಿದ್ದಾರೆ. ಪ್ರಬಂಧ, ವ್ಯಕ್ತಿ ಚಿತ್ರಗಳ ಕಡೆಗೂ ಗಮನ. ಕನ್ನಡ ರಂಗ ಭೂಮಿಯಲ್ಲಿ ಬ್ರೆಕ್ಟ್ ಸಾಹಿತಿಯ ಕೃತಿಗಳನ್ನು ಅನುವಾದಿಸಿದ್ದು ಇವರ ಹೆಗ್ಗಳಿಕೆ. ಗಾಂಧೀಜಿ ಅವರ ಮೊಮ್ಮಗ ರಾಜ ಮೋಹನ್ ಗಾಂಧಿ ವಿರಚಿತ ಗಾಂಧಿ ಬದುಕಿನ ಇಂಗ್ಲೀಷ್ ಕೃತಿಯನ್ನು ಲೋಕ ಶಿಕ್ಷಣ ಟ್ರಸ್ಟಿಗೆ ಅನುವಾದಿಸಿ ನೀಡಿ ಇಡೀ ಕನ್ನಡಿಗರಿಗೆ ತಲುಪುವಂತೆ ಮಾಡಿದ್ದು ಇವರ ದೊಡ್ಡ ಸಾಧನೆ. ಅವರು ನಮ್ಮ ನಡುವೆ ಇಲ್ಲದಿದ್ದರೂ ಅವರ ಕೃತಿಗಳು ಅವರನ್ನು ಜೀವಂತವಾಗಿಟ್ಟಿವೆ.