ಉಡುಪಿ : ರಂಗಭೂಮಿ (ರಿ.) ಉಡುಪಿ ಇವರು ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಉಡುಪಿಯ ಎಂ.ಜಿ.ಎಂ ಕಾಲೇಜಿನ ಸಹಕಾರದಲ್ಲಿ ಆಯೋಜಿಸುವ ‘ರಂಗ ನಮನ’ ಹಿರಿಯರ ನೆನಪಲಿ ರಂಗೋತ್ಸವ ಕಾರ್ಯಕ್ರಮವು ದಿನಾಂಕ 13-10-2023 ರಿಂದ 15-10-2023ರವರೆಗೆ ಉಡುಪಿಯ ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯಲಿದೆ.
ದಿನಾಂಕ 13-10-2023 ಶುಕ್ರವಾರದಂದು ಪಿ.ವಾಸುದೇವ ರಾವ್ ಹಾಗೂ ಯು. ಉಪೇಂದ್ರ ಇವರ ಸಂಸ್ಮರಣೆಯಲ್ಲಿ ನಡೆಯಲಿರುವ ಮೊದಲ ದಿನದ ಕಾರ್ಯಕ್ರಮವನ್ನು ಮಾಹೆಯ ಸಹ ಕುಲಾಧಿಪತಿಗಳಾದ ಡಾ. ಶರತ್ ಕುಮಾರ್ ರಾವ್ ಉದ್ಘಾಟಿಸಲಿದ್ದು, ರಂಗಭೂಮಿ ಉಡುಪಿಯ ಗೌರವಾಧ್ಯಕ್ಷರಾದ ಡಾ. ಹೆಚ್.ಎಸ್. ಬಲ್ಲಾಳ್ ಅಧ್ಯಕ್ಷತೆ ವಹಿಸಲಿರುವರು. ಅತಿಥಿಗಳಾಗಿ ಕಾರ್ಕಳದ ಉದ್ಯಮಿಯಾದ ಶ್ರೀ ಮುನಿಯಾಲ್ ಉದಯಕುಮಾರ್ ಶೆಟ್ಟಿ, ಎಂ.ಜಿ.ಎಂ ಕಾಲೇಜು ಉಡುಪಿಯ ಪ್ರಾಂಶುಪಾಲರಾದ ಪ್ರೊ. ಲಕ್ಷ್ಮೀನಾರಾಯಣ ಕಾರಂತ, ಉಡುಪಿಯ ನಿವೃತ್ತ ಶಿಕ್ಷಕಿಯಾದ ಶ್ರೀಮತಿ ಶ್ಯಾಮಲ ಉಪೇಂದ್ರ ಭಾಗವಹಿಸಲಿರುವರು. ಇದೇ ಸಂದರ್ಭದಲ್ಲಿ ಹಿರಿಯ ರಂಗಕರ್ಮಿ ಹಾಗೂ ಸಾಹಿತಿಯಾದ ಶ್ರೀ ಚಿತ್ರಪಾಡಿ ಉಪೇಂದ್ರ ಸೋಮಯಾಜಿ ಇವರಿಗೆ ‘ದಿ. ಪಿ.ವಾಸುದೇವ ರಾವ್ ಸಂಸ್ಮರಣ ರಂಗಭೂಮಿ ಸಂಮಾನ’ ಹಾಗೂ ಲಾವಣ್ಯ ಬೈಂದೂರಿನ ಹಿರಿಯ ರಂಗಕರ್ಮಿಯಾದ ಶ್ರೀ ಗಣೇಶ್ ಕಾರಂತ್ ಇವರಿಗೆ ‘ದಿ. ಯು.ಉಪೇಂದ್ರ ಸಂಸ್ಮರಣ ರಂಗಭೂಮಿ ಸಂಮಾನ’ ನಡೆಯಲಿರುವುದು. ಸಭಾ ಕಾರ್ಯಕ್ರಮದ ಬಳಿಕ ಶಿವಮೊಗ್ಗದ ಹೊಂಗಿರಣ ಪ್ರಸ್ತುತಿಯಲ್ಲಿ ಶ್ರುತಿ ಆದರ್ಶ ಅಭಿನಯಿಸುವ, ಡಾ.ಸಾಸ್ವೆಹಳ್ಳಿ ಸತೀಶ್ ರಂಗರೂಪ ಹಾಗೂ ನಿರ್ದೇಶನದ ಏಕವ್ಯಕ್ತಿ ಪ್ರದರ್ಶನ ‘ನಿರಾಕರಣೆ’ ಪ್ರಸ್ತುತಗೊಳ್ಳಲಿದೆ.
ದಿನಾಂಕ 14-10-2023 ಶನಿವಾರದಂದು ಶ್ರೀನಿವಾಸ ಎಸ್ ಶೆಟ್ಟಿಗಾರ್ ಮತ್ತು ಎಂ. ನಂದಕುಮಾರ್ ಇವರ ಸಂಸ್ಮರಣೆಯಲ್ಲಿ ನಡೆಯಲಿರುವ ಎರಡನೇ ದಿನದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಂಗಭೂಮಿ ಉಡುಪಿ ಇದರ ಅಧ್ಯಕ್ಷರಾದ ಡಾ.ತಲ್ಲೂರು ಶಿವರಾಮ ಶೆಟ್ಟಿ ಇವರು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಆಶಾ ಜ್ಯುವೆಲ್ಲರ್ ಉಡುಪಿಯ ಶ್ರೀ ರವಿಶಂಕರ್ ಶೇಟ್, ಮಲ್ಪೆಯ ನಾರಾಯಣಗುರು ಆಂಗ್ಲ ಮಾಧ್ಯಮ ಶಾಲೆ ಮತ್ತು ಬಿಲ್ಲವರ ಸೇವಾ ಸಂಘ (ರಿ.) ಇದರ ಅಧ್ಯಕ್ಷರಾದ ಶ್ರೀ ಗೋಪಾಲ ಸಿ. ಬಂಗೇರ, ರಥಬೀದಿ ಗೆಳೆಯರು (ರಿ.) ಉಡುಪಿ ಇದರ ಪ್ರಧಾನ ಕಾರ್ಯದರ್ಶಿಯಾದ ಶ್ರೀ ಸುಬ್ರಹ್ಮಣ್ಯ ಜೋಷಿ, ಕಾರ್ಪೋರೇಶನ್ ಬ್ಯಾಂಕಿನ ನಿವೃತ್ತ ಉದ್ಯೋಗಿಯಾದ ಶ್ರೀಮತಿ ಅಹಲ್ಯಾ ನಂದಕುಮಾರ್ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಕೋಶಿಕಾ ರಂಗತಂಡ ಚೇರ್ಕಾಡಿಯ ಹಿರಿಯ ರಂಗಕರ್ಮಿ ಶ್ರೀಮತಿ ಭಗವತಿ ಆನಗಳ್ಳಿ ಇವರಿಗೆ ‘ದಿ. ಶ್ರೀನಿವಾಸ್ ಎಸ್. ಶೆಟ್ಟಿಗಾರ್ ಸಂಸ್ಕರಣ ರಂಗಭೂಮಿ ಸಂಮಾನ’ ಹಾಗೂ ಉಡುಪಿಯ ತುಳುಕೂಟ (ರಿ.) ಇದರ ಪ್ರಧಾನ ಕಾರ್ಯದರ್ಶಿ ಹಾಗೂ ನಾಟಕಕಾರರಾದ ಶ್ರೀ ಗಂಗಾಧರ ಕಿದಿಯೂರು ಇವರಿಗೆ ‘ದಿ. ಎಂ. ನಂದಕುಮಾರ್ ಸಂಸ್ಕರಣ ರಂಗಭೂಮಿ ಸಂಮಾನ’ ನಡೆಯಲಿರುವುದು. ಸಭಾ ಕಾರ್ಯಕ್ರಮದ ಬಳಿಕ ಸುರಭಿ (ರಿ.) ಬೈಂದೂರು ಪ್ರಸ್ತುತಪಡಿಸುವ ಡಾ.ಕೋಟ ಶಿವರಾಮ ಕಾರಂತರ ಕಾದಂಬರಿ ಆಧಾರಿತ ‘ಚೋಮನ ದುಡಿ’ ನಾಟಕ ಪ್ರದರ್ಶನಗೊಳ್ಳಲಿದೆ.
ದಿನಾಂಕ 15-10-2023 ಭಾನುವಾರದಂದು ಯು.ದುಗ್ಗಪ್ಪ ಹಾಗೂ ಮೇಟಿ ಮುದಿಯಪ್ಪ ಇವರ ಸಂಸ್ಮರಣೆಯಲ್ಲಿ ನಡೆಯಲಿರುವ ಮೂರನೇ ದಿನದ ಕಾರ್ಯಕ್ರಮದಲ್ಲಿ ಬ್ರಹ್ಮಾವರದ ಯಕ್ಷೋನ್ನತಿ ಕಲಾ ತಂಡ ಪ್ರಸ್ತುತಪಡಿಸುವ ಯಕ್ಷಗುರು ಶ್ರೀ ಪ್ರಸಾದ್ ಕುಮಾರ್ ಮೊಗೆಬೆಟ್ಟು ಇವರ ರಚನೆ, ನಿರ್ದೇಶನ ಮತ್ತು ಭಾಗವತಿಕೆಯ ಯಕ್ಷಗಾನ ರೂಪಕ ‘ಚಿತ್ರ ಪಲ್ಗುಣ’ ಪ್ರದರ್ಶನಗೊಳ್ಳಲಿದೆ. ಈ ರೂಪಕದಲ್ಲಿ ಕಲಾವಿದರಾದ ಶ್ರೀ ಶಶಾಂಕ್ ಪಟೇಲ್ ಕೆಳಮನೆ ಹಾಗೂ ಶ್ರೀಮತಿ ಶೃತಿ ಕಾಶಿ ಅಭಿನಯಿಸಲಿದ್ದಾರೆ. ಬಳಿಕ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ರಂಗಭೂಮಿ ಉಡುಪಿ ಇದರ ಅಧ್ಯಕ್ಷರಾದ ಡಾ.ತಾಲ್ಲೂರು ಶಿವರಾಮ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಉಡುಪಿಯ ಹಿರಿಯ ವೈದ್ಯರಾದ ಡಾ.ಆರ್.ಎನ್. ಭಟ್, ಸಂಚುರಿ ಫಾರ್ಮ್ಸ್ ಉಡುಪಿಯ ಶ್ರೀ ರಾಜರಾಮ್ ಭಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿಯ ಸಹಾಯಕ ನಿರ್ದೇಶಕರಾದ ಶ್ರೀಮತಿ ಪೂರ್ಣಿಮಾ ಹಾಗೂ ಶ್ರೀ ಆದಿತ್ಯ ದುಗ್ಗಪ್ಪ ಮಲ್ಪೆ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಉಡುಪಿಯ ಹಿರಿಯ ಗಾಯಕರಾದ ಶ್ರೀ ಕೃಷ್ಣ ಕಾರಂತ್ ಇವರಿಗೆ ‘ದಿ.ಯು. ದುಗ್ಗಪ್ಪ ಸಂಸ್ಮರಣ ರಂಗಭೂಮಿ ಸಂಮಾನ’ ಹಾಗೂ ಬಾಷಾ ಆರ್ಟ್ಸ್ ಉಡುಪಿಯ ಶ್ರೀ ಸುಹಿಲ್ ಇವರಿಗೆ ‘ದಿ. ಮೇಟಿ ಮುದಿಯಪ್ಪ ಸಂಸ್ಮರಣೆ ರಂಗಭೂಮಿ ಸಂಮಾನ’ ನಡೆಯಲಿರುವುದು. ಸಭಾ ಕಾರ್ಯಕ್ರಮದ ಬಳಿಕ ಸುವಿಕಾ ಸಾಂಸ್ಕೃತಿಕ ಸಂಘಟನೆ ಪ್ರಸ್ತುತಪಡಿಸುವ ಡಾ. ಶ್ರೀಪಾದ್ ಭಟ್ ಪರಿಕಲ್ಪನೆ, ವಿನ್ಯಾಸ ಮತ್ತು ನಿರ್ದೇಶನದ ಕಾವ್ಯಾ ಹಂದೆ ಎಚ್. ಅಭಿನಯದ ಏಕವ್ಯಕ್ತಿ ರಂಗ ಪ್ರಯೋಗ ‘ಹಕ್ಕಿ ಮತ್ತು ಅವಳು’ ಕಾವ್ಯಾಭಿನಯ ಪ್ರಸ್ತುತಗೊಳ್ಳಲಿದೆ.