ತೆಕ್ಕಟ್ಟೆ: ತೆಕ್ಕಟ್ಟೆ ಹಯಗ್ರೀವದಲ್ಲಿ ಯಶಸ್ವೀ ಕಲಾವೃಂದ (ರಿ.)ಕೊಮೆ, ತೆಕ್ಕಟ್ಟೆ ಹಾಗೂ ತೆಕ್ಕಟ್ಟೆ ರೋಟರಿ ಕ್ಲಬ್ ಸಂಸ್ಥೆಯ ಜಂಟಿ ಆಶ್ರಯದಲ್ಲಿ ಯುವ ಅರ್ಥಧಾರಿಗಳ ವೇದಿಕೆಯಾದ ‘ಅರ್ಥಾಂಕುರ-4’ ಕಾರ್ಯಕ್ರಮವು ದಿನಾಂಕ 08-10-2023 ರಂದು ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಅರ್ಥಧಾರಿ ಹಾಗೂ ನಿರ್ದೇಶಕರಾದ ಡಾ.ಜಗದೀಶ್ ಶೆಟ್ಟಿ ಕಾರ್ಯಕ್ರಮವನ್ನು ಉದ್ದೇಶಿಸಿ “ಅರ್ಥಾಂಕುರ-4, ನಾಲ್ಕುನೂರು- ನಾಲ್ಕು ಸಾವಿರ, ನಾಲ್ಕು ಲಕ್ಷವಾಗಲಿ. ತನ್ಮೂಲಕ ಈ ಭಾಗದಲ್ಲಿ ಅನೇಕ ಕಲಾವಿದರು ಪ್ರಬುದ್ಧರಾಗಿ ಕಾರ್ಯಕ್ರಮ ನೀಡಲು ಸಿದ್ಧರಾಗಲಿ. ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ವೇದಿಕೆಯನ್ನು ಸಂಸ್ಥೆ ಸಿದ್ಧಗೊಳಿಸಿದೆ. ಪ್ರಬುದ್ಧ ಕಲಾವಿದರಾಗುವ ಆಸೆಯುಳ್ಳ ಕಲಾವಿದರು ತಮ್ಮ ಹೆಸರನ್ನು ಸಂಸ್ಥೆಯಲ್ಲಿ ನೋಂದಾಯಿಸಿಕೊಂಡು ಅರ್ಥಾಂಕುರದಲ್ಲಿ ತಾಳಮದ್ದಳೆಯ ತಯಾರಿ ನಡೆಸಲು ಸಿದ್ಧರಾಗಲಿ. ಈ ಸುವರ್ಣ ಅವಕಾಶದಿಂದ ಯಾರೂ ವಂಚಿತರಾಗದಿರಿ” ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಕೊಮೆ-ಕೊರವಡಿ ವಿವಿದೋದ್ಧೇಶ ಸಹಕಾರಿ ಸಂಘದ ಕಾರ್ಯನಿರ್ವಹಣಾಧಿಕಾರಿಯಾದ ಗೋಪಾಲ ಪೂಜಾರಿ ರಾಜು ತೋಟದಬೆಟ್ಟು ಅವರನ್ನು ಸಮ್ಮಾನಿಸಿ ಮಾತನ್ನಾಡುತ್ತಾ “ಸಾಮಾಜಿಕ ಸೇವೆಗಾಗಿ ಹಲವಾರು ಸಂಘ ಸಂಸ್ಥೆಗಳಲ್ಲಿ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿ, ಸಾರ್ವಜನಿಕ ಕಳಕಳಿಗೆ ಸ್ಪಂದಿಸಿ, ಪ್ರಾಮಾಣಿಕ ಸೇವೆ ಸಲ್ಲಿಸುತ್ತಾ ಬಂದವರು ಶ್ರೀಯುತ ರಾಜು ತೋಟದಬೆಟ್ಟು. ಸದಾ ಸಾರ್ವಜನಿಕರ ಸೇವೆಗಳಲ್ಲಿ ನಿರತನಾಗುತ್ತಾ ಸೇವಾ ಮನೋಭಾವವನ್ನು ಹೊಂದಿದ ಇವರು ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡು ಇದೀಗ ಬೀಜಾಡಿ ಮೀನುಗಾರಿಕಾ ಸಹಕಾರಿ ಸಂಘದಲ್ಲಿ ಉಪಾಧ್ಯಕ್ಷರಾಗಿ ಉತ್ತುಂಗಕ್ಕೇರಿರುವುದು ಸಾಮಾಜಿಕ ಬದ್ಧತೆಗೆ ಸಿಕ್ಕಿದ ಗೌರವ. ಇಂತಹ ಗೌರವಾನ್ವಿತರನ್ನು ಸಂಸ್ಥೆ ಗುರುತಿಸಿರುವುದು ನಿಜಕ್ಕೂ ಶ್ಲಾಘನೀಯ” ಎಂದರು.
ತೆಕ್ಕಟ್ಟೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಶೇಖರ ಕಾಂಚನ್, ಕೃಷಿಕರಾದ ಕೃಷ್ಣ ಪೂಜಾರಿ ಕೊರವಡಿ, ಗುರುಗಳಾದ ಲಂಬೋದರ ಹೆಗಡೆ ನಿಟ್ಟೂರು ಉಪಸ್ಥಿತರಿದ್ದರು. ತೆಕ್ಕಟ್ಟೆ ರೋಟರಿ ಕ್ಲಬ್ ಅಧ್ಯಕ್ಷರಾದ ಸುಧಾಕರ ಶೆಟ್ಟಿ ಸ್ವಾಗತಿಸಿ, ಯಶಸ್ವೀ ಕಲಾವೃಂದದ ಅಧ್ಯಕ್ಷ ಮಲ್ಯಾಡಿ ಸೀತಾರಾಮ ಶೆಟ್ಟಿ ಧನ್ಯವಾದಗೈದು, ಹೆರಿಯ ಮಾಸ್ಟರ್ ಕಾರ್ಯಕ್ರಮವನ್ನು ನಿರ್ವಹಿಸಿದರು.
ಬಳಿಕ ಅರ್ಥಾಂಕುರ-4 ಅಂಗವಾಗಿ “ಪಾರ್ಥ ಸಾರಥ್ಯ” ಯಕ್ಷಗಾನ ತಾಳಮದ್ದಳೆ ರಂಗದಲ್ಲಿ ಪ್ರಸ್ತುತಿಗೊಂಡಿತು.