ಮಂಗಳೂರು : ನವಕರ್ನಾಟಕ ಪ್ರಕಾಶನ ಬೆಂಗಳೂರು ಪ್ರಕಟಿತ ಡಾ. ರೇಶ್ಮಾ ಉಳ್ಳಾಲ್ ಇವರ ಸಂಶೋಧನಾ ಕೃತಿ ‘ಬಿಂಬದೊಳಗೊಂದು ಬಿಂಬ’ ಇದರ ಬಿಡುಗಡೆ ಸಮಾರಂಭವು ದಿನಾಂಕ 19-10-2023ರ ಬೆಳಿಗ್ಗೆ ಘಂಟೆ 9.30ಕ್ಕೆ ನಡೆಯಲಿದೆ.
ಮಂಗಳೂರಿನ ವೆಲೆನ್ಸಿಯದ ರೋಶನಿ ನಿಲಯ ಸ್ಕೂಲ್ ಆಫ್ ಸೋಶಿಯಲ್ ವರ್ಕ್ಸ್ ಇದರ ಮರಿಯಾ ಪೈವ ಸಭಾಂಗಣದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಪದ್ಮಶ್ರೀ ಪುರಸ್ಕೃತ ಹಾಗೂ ಕರ್ನಾಟಕ ಜನಪದ ಅಕಾಡೆಮಿ ಮಾಜಿ ಅಧ್ಯಕ್ಷರಾದ ಡಾ. ಮಾತಾ ಬಿ. ಮಂಜಮ್ಮ ಜೋಗತಿ ಕೃತಿ ಬಿಡುಗಡೆಗೊಳಿಸಲಿರುವರು. ದಕ್ಷಿಣ ಕನ್ನಡದ ಜಿಲ್ಲಾಧಿಕಾರಿಗಳಾದ ಶ್ರೀ ಮುಲ್ಲೈ ಮುಹಿಲನ್ ಐ.ಎ.ಎಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ರಾಷ್ಟ್ರಪ್ರಶಸ್ತಿ ಪುರಸ್ಕೃತ ಚಲನಚಿತ್ರ ನಿರ್ದೇಶಕರಾದ ಶ್ರೀ ಬಿ.ಎಸ್.ಲಿಂಗದೇವರು, ಸುಯೆಝ್ ಇಂಡಿಯಾ ಇದರ ಮಾನವ ಸಂಪನ್ಮೂಲ ವಿಭಾಗದ ಹಿರಿಯ ಉಪಾಧ್ಯಕ್ಷರು ಹಾಗೂ ಮುಖ್ಯಸ್ಥರಾದ ಶ್ರೀಮತಿ ಸುನಿತಾ ಕೊಹ್ಲಿ, ಸುಯೆಝ್ ಇಂಡಿಯಾ ಇದರ ಕಾರ್ಪೊರೇಟ್ ಕಮ್ಯೂನಿಕೇಶನ್ ವಿಭಾಗದ ಮುಖ್ಯಸ್ಥರಾದ ಶ್ರೀ ಸೃಜನ್ ಪ್ರಭಾಕರ್ ಹಾಗೂ ಮಂಗಳೂರಿನ ರೋಶನಿ ನಿಲಯ ಸ್ಕೂಲ್ ಆಫ್ ಸೋಶಿಯಲ್ ವರ್ಕ್ಸ್ ಇದರ ಉಪ ಪ್ರಾಂಶುಪಾಲರಾದ ಡಾ.ಟೆನಿಸ್ ಮೇರಿ ಭಾಗವಹಿಸಲಿರುವರು.
ಲೇಖಕಿಯ ಪರಿಚಯ:
ಡಾ.ರೇಶ್ಮಾ ಉಳ್ಳಾಲ್ ಸೂಕ್ಷ್ಮ ಸಂವೇದನೆಯ ಹೆಣ್ಣು. ಕಾಯ್ದುಕೊಳ್ಳುವ ಸಹನೆ, ನಿರುದ್ವಿಗ್ನತೆ ಆಕೆಗೊಂದು ವರ. ಇದರ ಫಲವೇ `ಬಿಂಬದೊಳಗೊಂದು ಬಿಂಬ-ತೃತೀಯ ಲಿಂಗಿಗಳ ಆಸ್ತಿತ್ವ ಮತ್ತು ಸಾಮಾಜಿಕ ಸಂಘರ್ಷ’ ಕೃತಿ.
ಡಾ. ರೇಶ್ಮಾ ಉಳ್ಳಾಲ್ ಮೂಲತ: ಪತ್ರಕರ್ತೆ. ಮಂಗಳೂರಿನ ಬೆಸೆಂಟ್ ಮಹಿಳಾ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಪಡೆದು ಪತ್ರಕರ್ತೆಯಾಗಿದ್ದವರು. ಒಬ್ಬ ಪತ್ರಕರ್ತೆಯಾಗಿ ತನಗೆ ಎದುರಾದ ಆನೇಕ ಸವಾಲುಗಳನ್ನು ಎದುರಿಸಿದ ದಿಟ್ಟ ಮಹಿಳೆ. ಪತ್ರಕರ್ತೆಯಾಗಿ ಸಮಾಜದ ನೋವುಗಳಿಗೆ ಹಾಗೂ ಅಂಕು ಡೊಂಕುಗಳಿಗೆ ಧ್ವನಿಯಾದವರು. ಜನವಾಹಿನಿ, ಸಂಯುಕ್ತ ಕರ್ನಾಟಕ ದಿನ ಪತ್ರಿಕೆ, ಜನಶ್ರೀ ಸುದ್ದಿವಾಹಿನಿ ಹಾಗೂ ಈನಾಡು ವೆಬ್ ಮಾಧ್ಯಮ ಸೇರಿದಂತೆ ಸುಮಾರು 15ವರ್ಷ ಮಾಧ್ಯಮ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸಿದ್ದು ಇವರ ಹೆಗ್ಗಳಿಕೆ. ಗುಣಮಟ್ಟದ ಶಿಕ್ಷಣಕ್ಕಾಗಿ ಕಾರ್ಯನಿರ್ವಹಿಸುತ್ತಿರುವ ಮಂಗಳೂರಿನ `ಮೌಲ್ಯಾಧಾರಿತ ಶಿಕ್ಷಣ’ ಸಂಸ್ಥೆ ಪಡಿಯಲ್ಲೂ ಮಾಧ್ಯಮ ಸಂಯೋಜಕಿಯಾಗಿ ದುಡಿದಿದ್ದಾರೆ.
ಅಧ್ಯಯನಾಸಕ್ತೆಯಾಗಿ ಕನ್ನಡ ಹಾಗೂ ಸಮಾಜಶಾಸ್ತ್ರ ವಿಷಯದಲ್ಲಿ ಮೈಸೂರು ಮುಕ್ತ ವಿಶ್ವ ವಿದ್ಯಾನಿಲಯದಿಂದ ಸ್ನಾತಕೋತ್ತರ ಪದವಿ ಪಡೆದು ನಂತರ ಡಾ.ಜೋಗನ್ ಶಂಕರ್ ಮಾರ್ಗದರ್ಶನದಲ್ಲಿ ತೃತೀಯ ಲಿಂಗಿಗಳ ಬದುಕಿನ ಕುರಿತು ಸಂಶೋಧನೆ ನಡೆಸಿದ್ದಾರೆ. ಈ ಮಹಾಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿ ದೊರೆತಿದೆ. ಇಲ್ಲಿಗೂ ನಿಲ್ಲದ ಅಧ್ಯಯನಾಸಕ್ತಿ ಮುಂದೆ ಎಂ.ಬಿ.ಎ ಪದವಿ ಪಡೆಯುವ ತನಕವೂ ಮುಂದುವರೆಯಿತು.
ಪ್ರಸ್ತುತ ಮಂಗಳೂರಿನ ಸುಯೆಝ್ ಸಂಸ್ಥೆಯಲ್ಲಿ ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿರುವ ರೇಶ್ಮಾ ಉಳ್ಳಾಲ್ ಹುಟ್ಟಿ ಬೆಳೆದಿರುವುದು ಮಂಗಳೂರಿಗೆ ಹೊರವಲಯದ ತೊಕ್ಕೊಟ್ಟುವಿನಲ್ಲಿ. ತಂದೆ ಗಂಗಾಧರ ಶೆಟ್ಟಿ ಉಳ್ಳಾಲ್, ತಾಯಿ ನಳಿನಾಕ್ಷಿ. ಪತಿ, ಪತ್ರಕರ್ತ ರಾಮಕೃಷ್ಣ.ಆರ್, ಹಾಗೂ ಪುತ್ರಿ ತನ್ವಿ ಜತೆ ಈಗ ಮಂಗಳೂರಿನ ಉರ್ವದಲ್ಲಿ ವಾಸವಾಗಿದ್ದಾರೆ. ಏನಾದರೂ ಸಾಧನೆ ಮಾಡಬೇಕು, ಸಮಾಜಕ್ಕೆ ಕೊಡುಗೆ ನೀಡಬೇಕೆಂಬ ಸದಾ ತುಡಿತದಲ್ಲಿರುವ ಇವರು ಒಂದಷ್ಟು ಸಮಾಜ ಸೇವೆಯ ಜತೆಗೆ ಇಂದಿಗೂ ಓದು, ಬರಹದಲ್ಲಿ ಹೆಚ್ಚಿನ ತನ್ಮಯತೆ ಹೊಂದಿದ್ದಾರೆ.