ಬೆಂಗಳೂರು : ಬೆಂಗಳೂರಿನ ‘ಆಕ್ಟ್ ರಿಯಾಕ್ಟ್’ ಅರ್ಪಿಸುವ ಅತೋಲ್ ಫುಗಾರ್ಡ್ ಇವರ ‘ದಿ ಐಲ್ಯಾಂಡ್’ ನಾಟಕದ ರೂಪಾಂತರವಾದ ‘ದ್ವೀಪ’ ನಾಟಕದ ಪ್ರದರ್ಶನವು ದಿನಾಂಕ 15-10-2023ರಂದು ಬೆಂಗಳೂರಿನ ರಂಗಶಂಕರದಲ್ಲಿ ನಡೆಯಲಿದೆ.
ಲಕ್ಷ್ಮಣ ಕೆ.ಪಿ ರೂಪಾಂತರ ಮತ್ತು ನಿರ್ದೇಶಿಸಿದ ಈ ನಾಟಕಕ್ಕೆ ಬಿಂದು ರಕ್ಷಿದಿ ಸಹನಿರ್ದೇಶಕಿ ಮತ್ತು ಸಂಗೀತ ನಿರ್ವಹಣೆಯಲ್ಲಿ ಸಹಕರಿಸಲಿದ್ದಾರೆ. ಚಂದ್ರಶೇಖರ.ಕೆ ಬೆಳಕಿನ ವಿನ್ಯಾಸ ಮಾಡಲಿದ್ದು, ರಮಿಕ ಚೈತ್ರ ನಿರ್ಮಾಣ ವ್ಯವಸ್ಥಾಪಕಿಯಾಗಿ ಸಹಕರಿಸಲಿದ್ದಾರೆ. ರಂಗದಲ್ಲಿ ಪ್ರತಿಭಾನ್ವಿತ ನಟರಾದ ಭಾಸ್ಕರ್ ಆರ್ ಹಾಗೂ ನವೀನ್ ಸಾಣೇಹಳ್ಳಿ ನಟಿಸಲಿದ್ದಾರೆ.
ಮಧ್ಯಾಹ್ನ ಘಂಟೆ 3:30 ಮತ್ತು ಸಂಜೆ ಘಂಟೆ 7:30ಕ್ಕೆ ಹೀಗೆ ಎರಡು ಪ್ರದರ್ಶನಗಳು ನಡೆಯಲಿದ್ದು, ಟಿಕೇಟು ದರ ರೂಪಾಯಿ 200/-
ನಾಟಕದ ಬಗ್ಗೆ :
‘ದ್ವೀಪ’ ದಿಕ್ಕಿಲ್ಲದವರ, ಗತಿಗೆಟ್ಟವರ ನಾಟಕ. ಇಲ್ಲಿನ ಕಥನ, ಪಾತ್ರಗಳು, ರೂಪಕಗಳು ಎಲ್ಲವೂ ಜೀವವನ್ನು ಮತ್ತು ಬದುಕನ್ನು ಉಳಿಸಿಕೊಳ್ಳುವ ಹಪಾಹಪಿಯಲ್ಲೇ ಹುಟ್ಟುಕೊಂಡಿರುವಂತವು. ನಟನೆಯೂ ಇಲ್ಲಿನ ಪಾತ್ರಗಳ ಬದುಕಿನ ಅನಿವಾರ್ಯತೆಯೇ.
ದಕ್ಷಿಣ ಆಫ್ರಿಕಾದ ಇಬ್ಬರು ಕಪ್ಪು ನಟರು, ಚಳುವಳಿಗಾರರು ಮಾನವಹಕ್ಕುಗಳಿಗಾಗಿ, ಮನುಷ್ಯ ಘನತೆಗಾಗಿ ಹೋರಾಡುತ್ತಾ, ಪ್ರಭುತ್ವವನ್ನು ವಿರೋಧಿಸಿ ರಾಜಕೀಯ ಖೈದಿಗಳಾಗಿ ಕ್ರೂರ ದ್ವೀಪದ ಜೈಲಿಗೆ ದೂಡಲ್ಪಡುತ್ತಾರೆ. ಅಲ್ಲಿ ತಮ್ಮ ಬದುಕು, ಹೋರಾಟ, ನಡೆ ಮತ್ತು ನಂಬುಗೆಯ ಜೊತೆಗೆ ಅನುರಣಿಸುವ “ಅಂತಿಗೊನೆ” ಕುರಿತು ನಾಟಕ ಕಟ್ಟುವ ಸೃಜನಶೀಲ ಪ್ರಕ್ರಿಯೆಯಲ್ಲಿ ತಮಗೆ ಬೇಕಾದ ಪ್ರತಿರೋಧ ಶಕ್ತಿಯನ್ನು , ಜೀವನ ಪ್ರೀತಿಯನ್ನು ಸೃಜಿಸಿಕೊಳ್ಳುತ್ತಾರೆ. ಕಲೆಯೆಂಬುದು ಮನುಷ್ಯನಿಗೆ ಇದಕ್ಕಿಂತ ಹೆಚ್ಚಿನದನ್ನು ಏನನ್ನು ನೀಡಬಲ್ಲದು?
ಇಂಡಿಯಾದಲ್ಲಿ ಇಂದು ಪ್ರಭುತ್ವದ ನಿಲುವನ್ನು ಪ್ರಶ್ನಿಸುವುದು, ಭಿನ್ನ ಅಭಿಪ್ರಾಯ ತಳೆಯುವುದು ಕೂಡ ದೇಶ ದ್ರೋಹದ ಕೆಲಸವಾಗಿ ಬಿಂಬಿತವಾಗುತ್ತಿದೆ. ಇಂತಹ ಹಗೆ ಬಿತ್ತಿ, ಹಗೆ ಬೆಳೆಯುತ್ತಿರುವ ಕಾಲದಲ್ಲಿ ಅಂತಿಗೊನೆಯ ಪ್ರತಿರೋಧ ಮತ್ತು ಅಂತಃಕರಣ ಈ ನೆಲದ ತುರ್ತು. ನಾವು ಬದುಕುತ್ತಿರುವ ಕಾಲವೂ ಹಾಗೂ ಅನುಭವಿಸುತ್ತಿರುವ ಯಾತನೆಯೂ, ಸಂಕಟವೂ ಇಲ್ಲಿನ ಪಾತ್ರಗಳೊಂದಿಗೆ ಅನುರಣಿಸುತ್ತಿವೆ. ಆದ್ದರಿಂದ ಅವುಗಳನ್ನು ನಿಮ್ಮೆದುರು ತೆರೆದಿಡುತ್ತಿದ್ದೇವೆ.