ಮಂಗಳೂರು : ಮಂಗಳೂರು ವಿಶ್ವವಿದ್ಯಾಯದ ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ನಡೆಯುತ್ತಿರುವ ವಿವೇಕವಾಣಿ ಸರಣಿ ಉಪನ್ಯಾಸ ಕಾರ್ಯಕ್ರಮದ ಇಪ್ಪತ್ತೊಂಬತ್ತನೇ ಉಪನ್ಯಾಸವು ಮಂಗಳೂರಿನ ದೇರಳಕಟ್ಟೆಯ ನಿಟ್ಟೆ (ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯ) ದಲ್ಲಿ ದಿನಾಂಕ 12-10-2023ರಂದು ನಡೆಯಿತು.
ಕಾರ್ಯಕ್ರಮದಲ್ಲಿ “ವೈದ್ಯಕೀಯ ಮೌಲ್ಯ ಹಾಗು ನೈಪುಣ್ಯಗಳ ಮರುಗಳಿಕೆ ವಿವೇಕ ಮಾರ್ಗ’ ಎಂಬ ವಿಷಯದ ಕುರಿತು ಮಾತನಾಡಿದ ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ನ ಸಲಹೆಗಾರರಾದ ಡಾ.ಎಂ.ಎ.ಬಾಲಸುಬ್ರಹ್ಮಣ್ಯ “ನೀವು ಇಂದು ಏನು ಮಾಡುತ್ತೀರಿ ಅದು ನಿಮ್ಮ ಭವಿಷ್ಯವನ್ನು ನಿರ್ಧರಿಸುತ್ತದೆ. ಮೊದಲು ನಿಮ್ಮ ಮೇಲೆ ನಿಮಗೆ ನಂಬಿಕೆ ಇರಬೇಕು. ಹಾಗಿದ್ದರೆ ಏನನ್ನು ಬೇಕಾದರೂ ಸಾಧಿಸಬಹುದು. ಯಾವುದು ನಿಸ್ವಾರ್ಥವೋ ಅದು ನೈತಿಕ ಯಾವುದು ನಿಸ್ವಾರ್ಥತೆಯಲ್ಲವೋ ಅದು ಅನೈತಿಕ ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದಾರೆ. ಆದ್ದರಿಂದ ನಾವು ನಿಸ್ವಾರ್ಥವಾಗಿ ಸೇವೆ ಮಾಡಬೇಕು, ಬದುಕಿನಲ್ಲಿ ಒಂದು ಆದರ್ಶ ಇರಬೇಕು. ಸ್ವಾಮಿ ವಿವೇಕಾನಂದರೇ ಹೇಳಿದಂತೆ ಆದರ್ಶ ಇರುವ ವ್ಯಕ್ತಿ ಸಾವಿರ ತಪ್ಪುಗಳನ್ನು ಮಾಡಿದರೆ ಆದರ್ಶವಿಲ್ಲದ ವ್ಯಕ್ತಿ ಐವತ್ತು ಸಾವಿರ ತಪ್ಪುಗಳನ್ನು ಮಾಡುತ್ತಾನೆ. ಆದ್ದರಿಂದ ಒಂದು ಆದರ್ಶ ಇರುವುದು ಒಳಿತು.” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ನಿಟ್ಟೆ ವಿಶ್ವವಿದ್ಯಾಲಯದ ಆಡಳಿತ ವಿಭಾಗದ ವೈಸ್ ಡೀನ್ ಡಾ. ಜಯಪ್ರಕಾಶ್ ಶೆಟ್ಟಿ ಮಾತನಾಡಿ “ವಿವೇಕಾನಂದರ ಆದರ್ಶಗಳು ನಮ್ಮ ಬದುಕಿನ ಪ್ರತಿಯೊಂದು ಹಂತದಲ್ಲೂ ಮಾರ್ಗದರ್ಶಕ. ನಮ್ಮ ನಿತ್ಯ ಜೀವನದಲ್ಲಿ ಅದನ್ನು ನಾವು ಅಳವಡಿಸಿಕೊಳ್ಳಬೇಕಾದ ಅಗತ್ಯವಿದೆ. ವೈದರು ರೋಗಿಗಳ ಜೊತೆ ಉತ್ತಮ ಸಂಬಂಧ ಇಟ್ಟುಕೊಂಡು ಆತ್ಮಸ್ಥೈಯದಿಂದ ಕಾರ್ಯನಿರ್ವಾಹಿಸಬೇಕು” ಎಂದು ವೈದ್ಯಕೀಯ ವಿದ್ಯಾರ್ಥಿಗಳಿಗೆ ಕರೆ ಕೊಟ್ಟರು.
ಮುಖ್ಯ ಆತಿಥಿಗಳ ಭಾಷಣದ ನಂತರ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ಪ್ರಶ್ನೆಗೆ ಸ್ವಾಮೀಜಿಯವರು ಉತ್ತರಿಸಿದರು. ಕೆ. ಎಸ್. ಹೆಗ್ಡೆ ಮೆಡಿಕಲ್ ಕಾಲೇಜಿನ ಆನಸ್ತೇಶಿಯಾ ವಿಭಾಗದ ಮುಖ್ಯಸ್ಥರಾದ ಡಾ. ಶ್ರೀಪಾದ ಮೆಹಂದಲೆ ಸಂವಾದ ಕಾರ್ಯಕ್ರಮ ನಿರ್ವಹಿಸಿದರು. ಮಂಗಳೂರು ವಿಶ್ವವಿದ್ಯಾಲಯ, ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರದ ಸಂಯೋಜಕರಾದ ಪ್ರೊ.ಶ್ರೀಪತಿ ಕಲ್ಲೂರಾಯ ಪ್ರಾಸ್ತಾವಿಕಮಾತುಗಳನ್ನಾಡಿ ಸ್ವಾಗತಿಸಿ, ನಿಟ್ಟೆ (ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯ) ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜಕರಾದ ಶ್ರೀ ಶಶಿಕುಮಾರ್ ಶೆಟ್ಟಿ ವಂದನಾರ್ಪಣೆಗೈದರು.