ಮಡಿಕೇರಿ : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ವರ್ಷಂಪ್ರತಿ ಜಿಲ್ಲೆಯ ಮಹಿಳಾ ಲೇಖಕರಿಗೆ ಕೊಡಮಾಡುವ ಪ್ರತಿಷ್ಠಿತ ‘ಕೊಡಗಿನ ಗೌರಮ್ಮ ದತ್ತಿ ಪ್ರಶಸ್ತಿ’ಗೆ 2023-24 ಸಾಲಿಗೆ ಈರಮಂಡ ಹರಿಣಿ ವಿಜಯ್ ಹಾಗೂ ಕಟ್ರತನ ಲಲಿತಾ ಅಯ್ಯಣ್ಣ ಆಯ್ಕೆಯಾಗಿದ್ದಾರೆ. ಈ ಬಾರಿ ಗೌರಮ್ಮ ದತ್ತಿ ಪ್ರಶಸ್ತಿಗೆ 12 ಲೇಖಕರು 15 ಪುಸ್ತಕಗಳನ್ನು ಕಳುಹಿಸಿದ್ದರು. ಇದರಲ್ಲಿ ಈರಮಂಡ ಹರಿಣಿ ವಿಜಯ್ ಅವರ ‘ಅಗ್ನಿ ಯಾತ್ರೆ’ ಮತ್ತು ಕಟ್ರತನ ಲಲಿತಾ ಅಯ್ಯಣ್ಣ ಅವರ ‘ಕಡಲಾಳದ ಮುತ್ತುಗಳು’ ಪುಸ್ತಕಗಳು ಸಮಾನ ಅರವತ್ತು ಅಂಕಗಳನ್ನು ಪಡೆದುಕೊಂಡ ಹಿನ್ನೆಲೆಯಲ್ಲಿ ಈ ಬಾರಿ ಪ್ರಶಸ್ತಿಯನ್ನು ಇಬ್ಬರು ಲೇಖಕಿಯರಿಗೆ ನೀಡಲಾಗುತ್ತಿದೆ.
ಜಿಲ್ಲಾ ಕಸಾಪದಿಂದ ದಿನಾಂಕ 27-10-2023ರಂದು ಮಧ್ಯಾಹ್ನ 1.30ಕ್ಕೆ ನಗರದ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯುವ ಗೌರಮ್ಮ ದತ್ತಿ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾವುದು. ಸಮಾರಂಭದಲ್ಲಿ ಗೌರಮ್ಮ ದತ್ತಿ ಕಥಾ ಸ್ಪರ್ಧಾ ವಿಜೇತರಿಗೂ ಬಹುಮಾನ ವಿತರಿಸಲಾಗುತ್ತದೆ. ಈ ಬಾರಿಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಕುಶಾಲನಗರದ ಫಾತಿಮಾ ಪ್ರೌಢ ಶಾಲೆಯ ತನ್ಮಯಿ ಎ.ಸಿ., ದ್ವಿತೀಯ ಸ್ಥಾನವನ್ನು ಚೆಂಬು ಶಾಲೆಯ ಬಿಂದು ಮತ್ತು ತೃತೀಯ ಸ್ಥಾನವನ್ನು ಮಡಿಕೇರಿ ಸರ್ಕಾರಿ ಪ್ರೌಢ ಶಾಲೆಯ ಅನುಷಾ ಪಡೆದುಕೊಂಡಿದ್ದಾರೆ.