ಕೋಟ : ಕೋಟದ ಡಾ.ಶಿವರಾಮ ಕಾರಂತ ಥೀಂ ಪಾರ್ಕ್ ಸಭಾಂಗಣದಲ್ಲಿ ಕೋಟತಟ್ಟು ಗ್ರಾಮ ಪಂಚಾಯತ್, ಡಾ. ಶಿವರಾಮ ಕಾರಂತ ಟ್ರಸ್ಟ್, ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ ಇದರ ಸಹಯೋಗದಲ್ಲಿ ದಿನಾಂಕ 10-10-2023ರಂದು ಡಾ. ಶಿವರಾಮ ಕಾರಂತ ಜನ್ಮ ದಿನೋತ್ಸವ ಹಾಗೂ ‘ಕಾರಂತ ಹುಟ್ಟೂರ ಪ್ರಶಸ್ತಿ’ ಪ್ರದಾನ ಸಮಾರಂಭ ‘ಇಂಪನ’ ಕಾರ್ಯಕ್ರಮವನ್ನು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಇವರು ಉದ್ಘಾಟಿಸಿ, ಸಂಗೀತಗಾರ ಡಾ. ವಿದ್ಯಾಭೂಷಣ ಅವರಿಗೆ ‘ಕಾರಂತ ಹುಟ್ಟೂರ ಪ್ರಶಸ್ತಿ’ ಪ್ರದಾನ ಮಾಡಿ ಮಾತನಾಡುತ್ತಾ “ಶಿವರಾಮ ಕಾರಂತರು ತಮ್ಮ ಜೀವನದಲ್ಲಿ ಕಲೆ, ಸಾಹಿತ್ಯ, ಪರಿಸರ, ಸಮಾಜಸೇವೆ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದು, ಅವು ಸಮಾಜಕ್ಕೆ ನೀಡಿದ ಮಾರ್ಗದರ್ಶನವಾಗಿದೆ. ಭಾರತೀಯ ಸಂಸ್ಕೃತಿ, ಧರ್ಮ, ಸಂಸ್ಕಾರದೊಂದಿಗೆ ಮಾನವೀಯ ಗುಣವುಳ್ಳ ಜನರು ತಯಾರಾದರೆ ಭಾರತ ವಿಶ್ವ ಗುರುವಾಗಲು ಸಾಧ್ಯ. ಕಲೆ, ಧರ್ಮ, ಸಂಸ್ಕೃತಿಯ ಸಮನ್ವಯದ ಅತ್ಯಗತ್ಯವಿದ್ದು, ತುಳುನಾಡಿನ ಸಮೃದ್ಧ ವಿರಾಸತ್ ಜಗತ್ತಿಗೆ ತಲುಪಬೇಕು. ಕಲೆ, ಸಾಂಸ್ಕೃತಿಕ ವಿರಾಸತ್ ಭಾರತದ ಜೀವಾಳ, ಈ ನಿಟ್ಟಿನಲ್ಲಿ ಮಕ್ಕಳಿಗೆ ಪ್ರೇರಣೆ ನೀಡಬೇಕು. ಕಾರಂತರು ನಡೆದಾಡುವ ವಿಶ್ವಕೋಶವಾಗಿದ್ದರು. ಆಧುನಿಕ ಠಾಗೋರ್ ಎಂದೆನಿಸಿದ ಅವರು ತುರ್ತು ಪರಿಸ್ಥಿತಿ ಸಮಯದಲ್ಲಿ ಪದ್ಮಭೂಷಣ ಹಿಂದಿರುಗಿಸಿ ದೇಶಭಕ್ತಿ ಮೆರೆದ ಮಹಾನ್ ವ್ಯಕ್ತಿ, ಅವರು ಹಾಕಿಕೊಟ್ಟ ಹಾದಿಯಲ್ಲಿ ಮುಂದಿನ ಪೀಳಿಗೆಯನ್ನು ಮುನ್ನಡೆಸಬೇಕು. ಗಾಂಧೀಜಿ ಸಿದ್ಧಾಂತದಿಂದ ಪ್ರಭಾವಿತರಾದ ಕಾರಂತರು ಕಾರ್ನಾಡ್ ಸದಾಶಿವ ರಾವ್ ನೇತೃತ್ವದಲ್ಲಿ ಖಾದಿ ಸ್ವದೇಶಿ ಚಳವಳಿಯಲ್ಲಿ ನಿರತರಾಗಿದ್ದು ಎಲ್ಲರಿಗೂ ಪ್ರೇರಣಾದಾಯಕ” ಎಂದು ಹೇಳಿದರು. ಈ ಸಂದರ್ಭದಲ್ಲಿ ರಾಜ್ಯಪಾಲರಿಗೆ ಕರಾವಳಿಯ ಗಂಡುಕಲೆಯ ಯಕ್ಷ ಕೀರಿಟ ಧರಿಸಿ ಗೌರವಿಸಲಾಯಿತು.
ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಸ್ವೀಕರಿಸಿದ ಖ್ಯಾತ ಸಂಗೀತಗಾರ ಡಾ. ವಿದ್ಯಾಭೂಷಣ ಮಾತನಾಡಿ, “ಕಾರಂತರ ಜೀವನದ ತಳಹದಿ ಬಹುವೈಶಿಷ್ಟತೆಯಿಂದ ಕೂಡಿದೆ. ಅಂತಹ ಮಹಾನ್ ಸಾಧಕನ ಹೆಸರಿನಲ್ಲಿ ಪ್ರಶಸ್ತಿ ಸ್ವೀಕರಿಸುವುದೇ ದೊಡ್ಡಭಾಗ್ಯ. ಇದು ಬಯಸದೇ ಬಂದ ಭಾಗ್ಯ. ಪ್ರಶಸ್ತಿಯನ್ನು ಹುಡುಕಿಕೊಂಡು ಹೋಗಬಾರದು ಅದು ನಮ್ಮನ್ನು ಅರಸಿಕೊಂಡು ಬರಬೇಕು. ತಾನು ಈವರೆಗೆ ಯಾವುದೇ ಪ್ರಶಸ್ತಿ, ಸನ್ಮಾನದ ಬಗ್ಗೆ ಯೋಚಿಸದವನಲ್ಲ. ಆದರೆ ಕಾರಂತರ ಹೆಸರಿನಲ್ಲಿ ನೀಡಿದ ಈ ಪ್ರಶಸ್ತಿ ಜ್ಞಾನಪೀಠದಷ್ಟೆ ಶ್ರೇಷ್ಠತೆಯನ್ನು ಹೊಂದಿದೆ, ಇಲ್ಲಿನ ಕಾರಂತ ಥೀಂ ಪಾರ್ಕ್ ಸೊಬಗು ಕಣ್ಣುಗಳಿಂದ ಅಳೆಯಲು ಸಾಧ್ಯವಿಲ್ಲ, ಅಂಥಹಾ ವಿಶೇಷತೆ ಇಲ್ಲಿ ಇದೆ. ಇದೊಂದು ಮುಂದಿನ ಜನಾಂಗಕ್ಕೆ ಕಾರಂತರನ್ನು ಪರಿಚಯಿಸುವಂತೆ ಇದು ಮಾಡಿದೆ. ಕಾರಂತರ ಬದುಕು ಇತರರಿಗೆ ಸ್ಪೂರ್ತಿದಾಯಕವಾಗಿದೆ” ಎಂದು ಅಭಿಪ್ರಾಯಪಟ್ಟರು.
ಅಧ್ಯಕ್ಷತೆ ವಹಿಸಿದ್ದ ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ, “ಕೋಟದ ಕೀರ್ತಿಯನ್ನು ಜಗತ್ತಿಗೆ ಹರಡಿದ ಶ್ರೇಷ್ಠ ವ್ಯಕ್ತಿತ್ವ ಹೊಂದಿದ ವ್ಯಕ್ತಿ ಕೋಟ ಶಿವರಾಮ ಕಾರಂತ. ಅವರು ವಿವಿಧ ಕ್ಷೇತ್ರಗಳಿಗೆ ನೀಡಿದ ಕೊಡುಗೆ ಇಂದಿಗೂ ಪ್ರಸ್ತುತ” ಎಂದರು. ಇದೇ ಸಂದರ್ಭದಲ್ಲಿ ಉತ್ತಮ ಕಾರ್ಯನಿರ್ವಹಿಸುತ್ತಿರುವ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಗಾಂಧಿ ಪುರಸ್ಕಾರ ಪಡೆದ 10 ಗ್ರಾಮ ಪಂಚಾಯತ್‌ಗಳಾದ ದಕ್ಷಿಣ ಕನ್ನಡ ಜಿಲ್ಲೆಯ ಉಳೇಬೆಟ್ಟು, ಮೂಡಬಿದಿರೆಯ ಪುತ್ತಿಗೆ, ಬಂಟ್ವಾಳದ ಅಮ್ಮುಂಜೆ, ಪುತ್ತೂರಿನ ಉಪ್ಪಿನಂಗಡಿ, ಕಡಬದ ಸವಣೂರು, ಬೆಳ್ತಂಗಡಿಯ ಬಳಂಜ, ಸುಳ್ಯದ ಮರ್ಕಂಜ, ಉಳ್ಳಾಲದ ಬೆಳ್ಳ, ಮೂಲ್ಕಿಯ ಕೆಮ್ರಾಲ್ ಹಾಗೂ ಉಡುಪಿ ಬಡಗಬೆಟ್ಟು ಗ್ರಾ.ಪಂ.ಗೆ ಡಾ.ಶಿವರಾಮ ಕಾರಂತ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕಾರ್ಯಕ್ರಮಕ್ಕೂ ಮುನ್ನ ಕಾರಂತರ ಹುಟ್ಟೂರ ಪ್ರಶಸ್ತಿಯನ್ನು ಕೋಟತಟ್ಟು ಗ್ರಾಮ ಪಂಚಾಯತ್‌ನಿಂದ ಕೋಟ ಥೀಂ ಪಾರ್ಕ್ ವರೆಗೆ ಮೆರವಣಿಗೆ ಮೂಲಕ ಪಲ್ಲಕ್ಕಿಯಲ್ಲಿ ತರಲಾಯಿತು. ಶಾಸಕರಾದ ಗುರುರಾಜ್ ಗಂಟಿಹೊಳೆ, ಯಶಪಾಲ್ ಎ. ಸುವರ್ಣ ಮತ್ತು ಗುರ್ಮೆ ಸುರೇಶ್ ಶೆಟ್ಟಿ, ಉಡುಪಿ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ, ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್, ಕುಂದಾಪುರ ಎ.ಸಿ. ರಶ್ಮಿ, ತಹಶೀಲ್ದಾರ್ ಶೋಭಾಲಕ್ಷ್ಮೀ, ಬ್ರಹ್ಮಾವರ ತಾ.ಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಹೆಚ್.ವಿ. ಇಬ್ರಾಹಿಂಪುರ್, ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಆನಂದ್ ಸಿ. ಕುಂದರ್, ಕೋಟತಟ್ಟು ಗ್ರಾ.ಪಂ. ಅಧ್ಯಕ್ಷ ಸತೀಶ್ ಕುಂದರ್, ಪ್ರತಿಷ್ಠಾನದ ಸದಸ್ಯ ಯು.ಎಸ್. ಶೆಣೈ ಉಪಸ್ಥಿತರಿದ್ದರು. ವಿಧಾನ ಪರಿಷತ್ ಶಾಸಕ ಕೋಟ ಶ್ರೀನಿವಾಸ ಪೂಜಾರಿ ಸ್ವಾಗತಿಸಿದರು. ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ ಮತ್ತು ಸದಸ್ಯ ಸತೀಶ್ ವಡ್ಡರ್ಸೆ ನಿರೂಪಿಸಿದರು. ಕೋಟತಟ್ಟು ಗ್ರಾಮಪಂಚಾಯತ್ ಅಧ್ಯಕ್ಷ ಸತೀಶ್ ಕುಂದರ್ ವಂದಿಸಿದರು.