ಬ್ರಹ್ಮಾವರ : ಶ್ರೀ ದಶಾವತಾರ ಯಕ್ಷ ಶಿಕ್ಷಣ ಕೇಂದ್ರ (ರಿ) ಬ್ರಹ್ಮಾವರ ಇದರ ನಾಲ್ಕನೆಯ ವಾರ್ಷಿಕೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 15-10-2023 ರಂದು ಬ್ರಹ್ಮಾವರ ಸಾಲಿಕೇರಿಯ ಶ್ರೀ ಬ್ರಹ್ಮಲಿಂಗ ವೀರಭದ್ರ ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.
ಸಾಲಿಕೇರಿ ದುರ್ಗಾಪರಮೇಶ್ವರಿ ದೇವಳದ ಆಡಳಿತ ಮುಕ್ತೇಸರರಾದ ಎಸ್. ಸುರೇಶ್ ಶೆಟ್ಟಿಗಾರ್ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಯಕ್ಷಗಾನ ಸವ್ಯಸಾಚಿ ಪುರಸ್ಕಾರ ಸ್ವೀಕರಿಸಿ ಮಾತನಾಡಿದ ಉಪನ್ಯಾಸಕ ಹಾಗೂ ಹವ್ಯಾಸಿ ಯಕ್ಷಗಾನ ಕಲಾವಿದರಾದ ಕೋಟ ಸುಜಯೀಂದ್ರ ಹಂದೆ “ಜಗತ್ತಿನ ಶ್ರೀಮಂತ ಕಲೆ ಯಕ್ಷಗಾನ. ಯಕ್ಷಗಾನದ ಈ ಶ್ರೀಮಂತಿಕೆಗೆ ಅದರದೇ ಆದ ಅನನ್ಯತೆಯೊಂದು ಕಾರಣವಾದರೆ, ಮತ್ತೊಂದು ಕಾರಣ ತಮ್ಮ ಮನೆ, ಸಂಸಾರದಿಂದ ದೂರವುಳಿದು ಸರಿಯಾದ ನಿದ್ದೆ ಮುದ್ದೆಯಿಲ್ಲದೆ ರಂಗವನ್ನು ಸಂಪನ್ನಗೊಳಿಸಿದ ಹಿರಿಯ ಕಲಾವಿದರು. ಆಧುನಿಕ ಸೌಲಭ್ಯಗಳಿಲ್ಲದ ಆ ಕಾಲದಲ್ಲೂ ಕಲೆಯ ಮೇಲಿರುವ ಅವರೆಲ್ಲರ ಶ್ರದ್ಧಾ ಭಕ್ತಿಯ ರಸಪಾಕವೇ ಯಕ್ಷಗಾನದ ಹಿರಿಮೆ. ಹಾಗಾಗಿ ಇಂದಿನ ಕಲಾವಿದರಿಗೆ ಸಿಕ್ಕ ಯಾವುದೇ ಪ್ರಶಸ್ತಿ, ಪುರಸ್ಕಾರ ಅರ್ಪಿತವಾಗಬೇಕಾದುದು ಅಂದಿನ ಮೇರು ಕಲಾವಿದರಿಗೆ” ಎಂದು ಹೇಳಿದರು.
ಬ್ರಹ್ಮಾವರ ರೋಟರಿ ವೆಲ್ಫೇರ್ ಟ್ರಸ್ಟಿನ ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ, ಹಿರಿಯ ಮದ್ದಳೆ ವಾದಕರಾದ ಬಿರ್ತಿ ಬಾಲಕೃಷ್ಣ, ಅಜಪುರ ಯಕ್ಷಗಾನ ಸಂಘದ ಗೌರವಾಧ್ಯಕ್ಷ ಕೃಷ್ಣಸ್ವಾಮಿ ಜೋಷಿ, ಉದ್ಯಮಿ ಕಿಶೋರ್ ಕುಮಾರ್ ಕುಕ್ಕುಡೆ, ಅರ್ಥಧಾರಿ ಪದ್ಮನಾಭ ಗಾಣಿಗ, ಕೇಂದ್ರದ ಗೌರವಾಧ್ಯಕ್ಷರಾದ ದಯಾನಂದ ನಾಯಕ್ ಸುಂಕೇರಿ, ಕೇಂದ್ರದ ಗುರು ಕಾರ್ತಿಕ್ ಶೆಟ್ಟಿಗಾರ್ ಉಪಸ್ಥಿತರಿದ್ದು, ಕೇಂದ್ರದ ಅಧ್ಯಕ್ಷ ಶ್ರೀಧರ ಶೆಟ್ಟಿಗಾರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಶ್ರೀಮತಿ ದಿವ್ಯ ಸ್ವಾಗತಿಸಿ, ಜಯಶ್ರೀ ಸುಧೀರ್ ಪ್ರಸ್ತಾವಿಸಿದರು. ಕಾರ್ಯದರ್ಶಿ ಜಯಲಕ್ಷ್ಮೀ ಶೆಟ್ಟಿಗಾರ್ ವಂದಿಸಿ, ರಾಜೇಶ್ ಶೆಟ್ಟಿಗಾರ್ ನಿರೂಪಿಸಿದರು.
Subscribe to Updates
Get the latest creative news from FooBar about art, design and business.