ಯಕ್ಷಗಾನವು ದಕ್ಷಿಣ ಭಾರತದ ರಾಜ್ಯವಾದ ಕರ್ನಾಟಕದ ಕರಾವಳಿ ಪ್ರದೇಶಗಳಲ್ಲಿ ಹುಟ್ಟಿಕೊಂಡ ಸಾಂಪ್ರದಾಯಿಕ ನೃತ್ಯ ನಾಟಕ ರೂಪವಾಗಿದೆ. ಪ್ರಾಚೀನ ಕಾಲದಿಂದಲೂ ಯಕ್ಷಗಾನವು ಶ್ರೀಮಂತ ಮತ್ತು ರೋಮಾಂಚಕ ಕಲಾ ಪ್ರಕಾರವಾಗಿ ವಿಕಸನಗೊಂಡಿದೆ. ಅದು ತನ್ನ ವರ್ಣರಂಜಿತ ವೇಷಭೂಷಣಗಳು, ಲಯಬದ್ಧ ಸಂಗೀತ ಮತ್ತು ಕ್ರಿಯಾತ್ಮಕ ಪ್ರದರ್ಶನಗಳೊಂದಿಗೆ ಪ್ರೇಕ್ಷಕರನ್ನು ಆಕರ್ಷಿಸುತ್ತದೆ ಹೀಗೆ ಈ ಶ್ರೀಮಂತ ಕಲೆಯಲ್ಲಿ ತಮ್ಮ ಪ್ರತಿಭೆಯನ್ನು ನೀಡುತ್ತಿರುವ ಹಿರಿಯ ಕಲಾವಿದರು ಪೆರ್ಲ ಜಗನ್ನಾಥ ಶೆಟ್ಟಿ.
ಕಾಸರಗೋಡು ಜಿಲ್ಲೆಯ ಕಾಟುಕುಕ್ಕೆಯ ಪಟ್ಲದಲ್ಲಿ 21.10.1966ರಂದು ಮಂಜಪ್ಪ ಶೆಟ್ಟಿ ಹಾಗೂ ಕಮಲಾ ಎಂ ಶೆಟ್ಟಿ ಇವರ ಮಗನಾಗಿ ಜನನ. ಶ್ರೀ ಧರ್ಮಸ್ಥಳ ಲಲಿತ ಕಲಾ ಕೇಂದ್ರದಲ್ಲಿ ಯಕ್ಷಗಾನ ನಾಟ್ಯಾಭ್ಯಾಸವನ್ನು ನಾಟ್ಯ ಗುರುಗಳು ಕುಂಞರಾಮ ಮಣಿಯಾಣಿ (ಪ್ರಥಮ ಗುರುಗಳು)ಯವರಿಂಧ ಕಲಿತು ನಂತರದಲ್ಲಿ ಕರ್ಗಲ್ಲು ವಿಶ್ವೇಶ್ವರ ಭಟ್, ಕೆ.ಗೋವಿಂದ ಭಟ್ ಬಳಿ ಯಕ್ಷಗಾನವನ್ನು ಅಭ್ಯಾಸ ಮಾಡಿರುತ್ತಾರೆ. ಒಡನಾಡಿ ಹಿರಿಯರು ಗುರು ಸ್ವರೂಪರೆನಿಸಿದವರು ತೆಕ್ಕಟ್ಟೆ ಆನಂದ ಮಾಸ್ತರರು.
ಯಕ್ಷಗಾನ ರಂಗದಲ್ಲಿ ಸರ್ವ ಸಾಧಾರಣ ಎಲ್ಲಾ ವೇಷಗಳು ಮಾಡಿರುವ ಅನುಭವ ಪೆರ್ಲ ಜಗನ್ನಾಥ ಶೆಟ್ಟಿ ಅವರದು. ತುಳು ಪ್ರಸಂಗದಲ್ಲಿ ಕೋಟಿ, ಪೆರುಮಲ ಬಲ್ಲಾಳ್, ಪೌರಾಣಿಕ ಪ್ರಸಂಗದಲ್ಲಿ ಹರಿಶ್ಚಂದ್ರ, ನಳ, ಕೃಷ್ಣ, ಈಶ್ವರ ಪ್ರಿಯವಾದ ಪಾತ್ರಗಳು.
ಯಕ್ಷಗಾನದ ಇಂದಿನ ಸ್ಥಿತಿ ಗತಿ ಹಾಗೂ ಯಕ್ಷಗಾನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ಮೊದಲಿನ ಯಕ್ಷಗಾನಕ್ಕು ಈಗಿನ ಯಕ್ಷಗಾನಕ್ಕು ಬಹಳಷ್ಟು ವ್ಯತ್ಯಾಸಗಳಿವೆ. ಎಲ್ಲಿಯವರೆಗೆ ರಸಿಕತೆ ಕಲಾರಸಿಕರಲ್ಲಿ ಇರುತ್ತದೆಯೊ ಅಲ್ಲಿಯವರೆಗೆ ಕಲೆ ಶ್ರೀಮಂತವಾಗಿ ಹಾಗೂ ಕಲಾವಿದರು ಜೀವಂತವಾಗಿ ಇರುತ್ತಾರೆ.
ಇತ್ತೀಚಿನ ಜನಮಾನಸದಲ್ಲಿ ಹಾಗೂ ಯುವಕರಲ್ಲಿ ಕಲೆಯ ಮೇಲಿನ ಪ್ರೀತಿ ಹಾಗೂ ಆಸೆ ಬೆಳೆಯುತ್ತಿರುವುದು ಮೆಚ್ಚುವಂತಹ ವಿಚಾರ. ಈ ಪ್ರೀತಿ ಹಾಗೂ ಅಭಿಮಾನ ಯಕ್ಷಗಾನ ಪ್ರಾಕಾರದ ಮೇಲೆ ಇನ್ನಷ್ಟು ಬೆಳೆಯಲಿ ಎಂಬುದು ನನ್ನ ಕೋರಿಕೆ.
ಸನ್ಮಾನ ಹಾಗೂ ಪ್ರಶಸ್ತಿಗಳು:-
ಹರೇಕಳ ಪಾವೂರು ವ್ಯಾಯಾಮ ಶಾಲೆ ಸನ್ಮಾನ.
ವಿಶ್ವೇಶ್ವರಯ್ಯ ಶಾಲೆ ಮುಂಬೈ.
ಅಭ್ಯುದಯ (ರಿ) ಶಿವಮೊಗ್ಗ.
ಅಭಿಮಾನಿ ಬಳಗ ಕಲ್ಲಗುಡ್ಡೆ.
ಕುಂಟಾರು ಮೇಳ.
ಸಾರ್ವಜನಿಕ ಗಣೇಶೋತ್ಸವ ಸಮಿತಿ ಪುತ್ತೂರು.
ದುರ್ಗಾ ಮಿತ್ರವೃಂದ ಕೇಪು.
ಅಭಿಮಾನಿ ಬಳಗ ಬಸವೇಶ್ವರ ನಗರ, ಬೆಂಗಳೂರು.
ಬಸ್ತಿ ದಿ. ನಾರಾಯಣ ಚೌಟ ಹಾಗೂ ತಲಪಾಡಿ ಬಾವ ದಿ. ಪುಷ್ಪಾವತಿ ಚೌಟ ಸ್ಮರಣಾರ್ಥ ಸನ್ಮಾನ
ದುರ್ಗಾ ಪರಮೇಶ್ವರಿ ಯಕ್ಷಗಾನ ಸಂಘ ಕರಿಂಕ, ಮಾಣಿ.
ಕರ್ನಾಟಕ ತುಳು ಸಾಹಿತ್ಯ ಪ್ರಶಸ್ತಿ.
ಸುವರ್ಣ ಪ್ರತಿಷ್ಠಾನ ಕರ್ನಿರೆ ಪ್ರಶಸ್ತಿ.
ಯಕ್ಷ ತರಂಗಿಣಿ ಕೈಕಂಬ ಸನ್ಮಾನ ಪ್ರಶಸ್ತಿ.
ಸಂಪಾಜೆ ಯಕ್ಷೋತ್ಸವ ಪ್ರಶಸ್ತಿ.
ರಂಗೋಲಿ ಬಿ.ಸಿ.ರೋಡ್ ಸನ್ಮಾನ ಪ್ರಶಸ್ತಿ.
ಇನ್ನೂ ಹಲವಾರು ಸಂಘ ಸಂಸ್ಥೆಗಳು ಇವರ ಸಾಧನೆ ನೋಡಿ ಸನ್ಮಾನ ಹಾಗೂ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.
ತಿರುಗಾಟ ಮಾಡಿದ ಮೇಳ ಹಾಗೂ ವರ್ಷ:-
ಕದ್ರಿ ಮೇಳ 7 ವರ್ಷ, ಸುರತ್ಕಲ್ ಮೇಳ 13 ವರ್ಷ, ಕುಂಟಾರು ಮೇಳ 5 ವರ್ಷ, ಎಡನೀರು 2 ವರ್ಷ, ಹೊಸನಗರ 10 ವರ್ಷ, ಪ್ರಸ್ತುತ 7 ವರ್ಷಗಳಿಂದ ಹನುಮಗಿರಿ ಮೇಳದಲ್ಲಿ ತಿರುಗಾಟ ಮಾಡುತ್ತಿದ್ದಾರೆ.
ತಿರುಗಾಟದಲ್ಲಿ ನೆನಪಿಸುವ ಕಲಾವಿದರು:-
ಶೇಣಿ ಗೋಪಾಲಕೃಷ್ಣ ಭಟ್, ಎಂ. ಕೆ. ರಮೇಶ್ ಆಚಾರ್ಯ, ಪದ್ಯಾಣ ಗಣಪತಿ ಭಟ್, ಶಿವರಾಮ ಜೋಗಿ, ಸದಾಶಿವ ಕುಲಾಲ್, ಪೆರ್ಮುದೆ ಜಯಪ್ರಕಾಶ್ ಶೆಟ್ಟಿ, ರಂಗಾ ಭಟ್ ಮಧೂರು ಮುಂತಾದವರು.
ಶ್ರೀಯುತ ಟಿ. ಶ್ಯಾಮ್ ಭಟ್, ಕೊನೆತೋಟ ಮಹಾಬಲೇಶ್ವರ ಭಟ್ ಬದುಕಿಗೆ ಆಸರೆಯಾಗಿ ನಿಂತ ಮಹನೀಯರು ಎಂದು ಹೇಳುತ್ತಾರೆ ಪೆರ್ಲ ಜಗನ್ನಾಥ ಶೆಟ್ಟಿ.
ಪೆರ್ಲ ಜಗನ್ನಾಥ ಶೆಟ್ಟಿ ಅವರು ಮೋಹಿನಿ ಜಿ ಶೆಟ್ಟಿ ಇವರನ್ನು ಮದುವೆಯಾಗಿ ಮಕ್ಕಳಾದ ಧನ್ಯಶ್ರೀ, ರಮ್ಯ ಶ್ರೀ, ರೂಪಿತ್ ಶೆಟ್ಟಿ ಜೊತೆಗೆ ಸುಖೀ ಸಂಸಾರವನ್ನು ನಡೆಸುತ್ತಿದ್ದಾರೆ.
- ಶ್ರವಣ್ ಕಾರಂತ್ ಕೆ., ಶಕ್ತಿನಗರ, ಮಂಗಳೂರು.