ಬೆಂಗಳೂರು : ಬೆಂಗಳೂರಿನ ‘ಕಲಾವಿಲಾಸಿ’ ಆಯೋಜಿಸುವ “ನಾನು-ನಟ-ಪಾತ್ರ” ಎಂದರೆ? ವಿಷಯವನ್ನು ಆಧರಿಸಿ 5 ದಿನಗಳ ರಂಗ ನಟನಾ ಕಾರ್ಯಗಾರ ನಿರ್ದೇಶಕ ಯತೀಶ್ ಎನ್. ಕೊಳ್ಳೇಗಾಲ ಇವರ ನಿರ್ದೇಹಸನದಲ್ಲಿ ದಿನಾಂಕ 05-11-2023 ರಿಂದ 09-11-2023ರ ವರೆಗೆ ಬೆಂಗಳೂರಿನಲ್ಲಿ ಜಯನಗರದಲ್ಲಿ ನಡೆಯಲಿದೆ. ಈ ಕಾರ್ಯಗಾರದಲ್ಲಿ ಭಾಗಿಯಾದವರಿಗೆ ಅದರ ಮುಂದಿನ ಭಾಗವಾಗಿ ಹೊಸ ನಾಟಕದಲ್ಲಿ ತೊಡಗಿಸಿಕೊಳ್ಳುವ ಅವಕಾಶವಿರುತ್ತದೆ.
ಶುಲ್ಕ ಮತ್ತು ಇತರೆ ಮಾಹಿತಿಗೆ 9663523904. 9739398819 ಈ ಸಂಖ್ಯೆಗಳನ್ನು ಸಂಪರ್ಕಿಸಬಹುದು.
ಕಲಾವಿಲಾಸಿ ಬಗ್ಗೆ:
ಐದು ವರ್ಷ ಪೂರೈಸಿರುವ ‘ಕಲಾವಿಲಾಸಿ’ ಇದೊಂದು ಆಸಕ್ತ ಯುವ ರಂಗ ಉತ್ಸಾಹಿಗಳು ಕಟ್ಟಿದ ಹವ್ಯಾಸಿ ತಂಡ. ಬೀಚಿಯವರ ಜೀವನ ಆಧಾರಿತ “ಮಾನಸ ಪುತ್ರ” ನಾಟಕದ ಪ್ರದರ್ಶನ ಮೂಲಕ ಆರಂಭವಾದ ಈ ತಂಡದಿಂದ ಇಲ್ಲಿನವರೆಗೂ ಒಟ್ಟು ಹತ್ತು ವೇದಿಕೆಗಳಲ್ಲಿ ಪ್ರದರ್ಶನ ಕಂಡಿದೆ. ರಂಗ ಸಂಘಟನೆಯ ಭಾಗವಾಗಿ ‘ಆಟಮಾಟ’ ಧಾರವಾಡ ತಂಡಕ್ಕೆ ಕಥಾ ನಾಟಕೋತ್ಸವ ಆಯೋಜಿಸುವುದರ ಮೂಲಕ ‘ಕಲಾವಿಲಾಸಿ’ ತಂಡವು ರಂಗ ಸಂಘಟನೆಯ ಮೊದಲ ಹೆಜ್ಜೆಯನ್ನು ಇರಿಸಿತು. 2019ರ ಜೂನ್ 29 ಮತ್ತು 30ರಂದು ಕಲಾವಿಲಾಸಿ ತಂಡದ ಕಲಾವಿದರಿಗೆ ಮಹಾದೇವ ಹಡಪದ ಅವರಿಂದ ಎರಡು ದಿನದ ರಂಗ ಕಾರ್ಯಾಗಾರವನ್ನು ಹಮ್ಮಿಕೊಂಡಿತ್ತು. ಈ ತಂಡವು ತನ್ನ ಎರಡನೇ ನಾಟಕವಾಗಿ ತ.ರಾ.ಸು ಅವರ ಕಂಬನಿಯ ಕುಯಿಲು ಕಾದಂಬರಿ ಆಧಾರಿತ ‘ಚಿಗರಿಗಂಗಳ ಚೆಲುವೆ’ ನಾಟಕವನ್ನು 2019ರ ಅಕ್ಟೋಬರ್ ನಲ್ಲಿ ಮೊದಲ ಪ್ರದರ್ಶನ ಮಾಡಿ ಐತಿಹಾಸಿಕ ನಾಟಕದ ಮಜಲುಗಳನ್ನು ರಂಗದಮೇಲೆ ತರುವಲ್ಲಿ ತಂಡ ಯಶಸ್ವಿಯಾಗಿದೆ. ಈ ನಾಟಕವು ಇಲ್ಲಿನವರೆಗೆ ಒಟ್ಟು ನಾಲ್ಕು ಪ್ರದರ್ಶನಗಳನ್ನು ಕಂಡಿದೆ. 2020, 2021 ಮತ್ತು 2022(ಅರ್ಧ ವರ್ಷ) ಎರಡೂವರೆ ವರ್ಷದ ಕೊರೊನಾ ಕಾಲವನ್ನು ತಂಡವು ಪುಸ್ತಕದ ಓದು, ನಾಟಕದ ರಚನೆ ಮತ್ತು ಬರವಣಿಗೆಯಿಂದ ನಾಟಕದ ಅಭಿರುಚಿಯನ್ನು ಜೀವಂತವಾಗಿರಿಸಿತು. ತಂಡದ ಮೂರನೇ ನಾಟಕವಾಗಿ ಚಂದ್ರಶೇಖರ ಪಾಟೀಲ ಅವರ ಅಸಂಗತ ನಾಟಕಗಳನ್ನು ಒಟ್ಟು ಸೇರಿಸಿ ‘ಅಸಂಗತಗಳು’ ಎನ್ನುವ ನಾಟಕವನ್ನು 2022ರ ಡಿಸೆಂಬರ್ ತಿಂಗಳಲ್ಲಿ ಮೊದಲ ಪ್ರದರ್ಶನವನ್ನು ನೀಡಿ ಈಗ ನಾಲ್ಕನೇ ಪ್ರದರ್ಶನದ ತಯಾರಿಯಲ್ಲಿದೆ. ಅದರ ಭಾಗವಾಗಿ ರಂಗಕರ್ಮಿ ಯತೀಶ್ ಎನ್. ಕೊಳ್ಳೆಗಾಲ ಅವರಿಂದ ಐದು ದಿನದ ನಟನ ತಯಾರಿ ಕಾರ್ಯಗಾರ ಮತ್ತು ಅವರಿಂದಲೇ ಮುಂದಿನ ನಾಟಕದ ನಿರ್ದೇಶನವನ್ನು ಮಾಡಿಸುವ ಯೋಜನೆಯನ್ನು ತಂಡ ಹಾಕಿಕೊಂಡಿದೆ.
ಯತೀಶ್ ಎನ್, ಕೊಳ್ಳೆಗಾಲ ಅವರ ಬಗ್ಗೆ:
ಮೂಲತಃ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದ ಇವರು ಕಳೆದ 18 ವರ್ಷಗಳಿಂದ ರಂಗಭೂಮಿಯ ಅಭ್ಯಾಸವನ್ನು ಮಾಡುತ್ತಿದ್ದಾರೆ. 30ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯ, ಆಟಮಾಟ ಧಾರವಾಡ ತಂಡದ ಜೊತೆಗೆ ತಂತ್ರಜ್ಞರಾಗಿ ಹಾಗೂ ಸಂಘಟನೆಯಲ್ಲಿ ತೊಡಗಿಕೊಂಡಿದ್ದಾರೆ. ಪ್ರಸ್ತುತ ಕನ್ನಡ ರಂಗಭೂಮಿಯ ಸಂವೇದನಾಶೀಲ ನಟ, ನಿರ್ದೇಶಕ, ನಟನೆಯ ಮೇಷ್ಟ್ರುಗಳಲ್ಲಿ ಒಬ್ಬರು. ನೀನಾಸಂ ಹಾಗೂ ಎಮ್.ಎ.ಡ್ರಾಮಾ ಪದವೀಧರರು. ಸಮಕಾಲೀನ ರಂಗನಟನೆ ಮತ್ತು ಅಭಿನಯ ಶಿಕ್ಷಣ ಇವರ ಮುಖ್ಯ ಅಭ್ಯಾಸ ಕ್ಷೇತ್ರ. ಮೈಸೂರು ರಂಗಾಯಣದ ರಂಗಶಾಲೆಯಲ್ಲಿ ಎರಡು ವರ್ಷಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿರುತ್ತಾರೆ. ಸದ್ಯ ಮೈಸೂರಿನ ಒಂದಷ್ಟು ಗೆಳೆಯರ ಜೊತೆಗೆ ನಟ ರಂಗಭೂಮಿ ಚಟುವಟಿಕೆಯ ABCD ( ಆ್ಯಕ್ಟರ್ ಬೇಸಿಕ್ ಕ್ಲಾಸಸ್ ಆ್ಯಂಡ್ ಡಿಸ್ಕಶನ್ – ನಟನ ತಯಾರಿ ಕಾರ್ಯಗಾರ) ಮೂಲಕ ಸಕ್ರಿಯರಾಗಿದ್ದಾರೆ. ಇದುವರೆಗೆ ರಾಜ್ಯದ ಪ್ರತಿಷ್ಠಿತ ರಂಗ ಶಾಲೆಗಳಲ್ಲಿ ಅತಿಥಿ ಶಿಕ್ಷಕರಾಗಿ ನಾಟಕ ನಿರ್ದೇಶಕರಾಗಿ ಕೆಲಸ ಮಾಡಿರುವ ಅನುಭವ ಇರುವ ಇವರು ಈಗ workshop Inmysuru for theatre (ವರ್ಕ್ ಶಾಪ್ ಇನ್ ಮೈಸೂರು ಫಾರ್ ಥಿಯೇಟರ್) ಗ್ರೂಪನ್ನು ತಮ್ಮ ಕಾರ್ಯಕ್ಷೇತ್ರವನ್ನಾಗಿಸಿಕೊಂಡಿದ್ದಾರೆ.