ಮೂಡುಬಿದಿರೆ : ಅಶ್ವತ್ಥಪುರದ ಯಕ್ಷಚೈತನ್ಯದ ಹತ್ತೊಂಬತ್ತನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ದಿನಾಂಕ 08-10-2023ರಂದು ಜರುಗಿದ ಕಾರ್ಯಕ್ರಮದಲ್ಲಿ ಡಾ. ಜೋಶಿಯವರಿಗೆ ನಡೆದಾಡುವ ‘ಜ್ನಾನಕೋಶ’ ಎಂಬ ಬಿರುದು ನೀಡಿ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ.ಜೋಶಿಯವರು ಯಕ್ಷಗಾನದ ಎಲ್ಲಾ ಆಯಾಮಗಳು ದಾಖಲೀಕರಣವಾಗುತ್ತಿದ್ದು , ಪದವೀದರರು, ಸ್ನಾತ್ತಕೋತ್ತರರು, ಕಾನೂನು ಪದವೀದರರು ಇಂದು ಯಕ್ಷಗಾನದೆಡೆಗೆ ಆಕರ್ಷಿತರಾಗುತ್ತಿರುವುದು ಯಕ್ಷಗಾನದ ಪ್ರಮುಖ ಬೆಳವಣಿಗೆಯಾಗಿದೆ” ಎಂದರು.
ಅಧ್ಯಕ್ಷತೆ ವಹಿಸಿದ್ದ ದೇಶಸ್ಥ ಬ್ರಾಹ್ಮಣ ಪರಿಷತ್ತಿನ ಅಧ್ಯಕ್ಷರಾದ ಮಠ ನಿತ್ಯಾನಂದರವರು ಮಾತನಾಡಿ “ಇತ್ತೀಚೆಗೆ ಕೆಲವು ಯುವಕಲಾವಿದರಿಂದ ಕೆಲವು ಅಪಸವ್ಯಗಳು ಹಾಗೂ ಯಕ್ಷಗಾನದ ಹೆಸರಲ್ಲಿ ಕೆಲವು ಹಿರಿಯ ಕಲಾವಿದರಿಂದ ಸ್ಥಳೀಯ ದೂರದರ್ಶನದಲ್ಲಿ ಜರುಗುವ ಕೆಲವು ಧಾರವಾಹಿಗಳು ಯಕ್ಷಗಾನಕ್ಕೆ ಸಹ್ಯಬೆಳವಣಿಗೆಯಲ್ಲ” ಎಂದು ಅಭಿಪ್ರಾಯಪಟ್ಟರು.
ವೇ.ಮೂ.ಕಂಚಿಬೈಲು ಪ್ರಭಾಕರ ಭಟ್ ಅಶ್ವತ್ಥಪುರ ಇವರು ಆಶೀರ್ವಚನವಿತ್ತರು. ಶ್ರೀ ಮಧ್ಭಾಗವತ ಗ್ರಂಥ ಪ್ರಸಾರ ಅಭಿಯಾನದ ರೂವಾರಿಗಳಾದ ಕಾಯರಗುಡ್ಡೆ ಕೃಷ್ಣಮೂರ್ತಿ, ಶ್ರೀ ಸೀತಾರಾಮಚಂದ್ರ ದೇವಳದ ಮೊಕ್ತೇಸರ ಶಂಕರಮೂರ್ತಿ ಕಾಯರಬೆಟ್ಟು, ಹಿರಿಯ ಅರ್ಥದಾರಿ ಉಜಿರೆ ಅಶೋಕ ಭಟ್ ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿದ್ದರು.
ಯಕ್ಷಚೈತನ್ಯದ ಅಧ್ಯಕ್ಷರಾದ ಕೃಷ್ಣಮೂರ್ತಿ ಕಟೀಲು ಸ್ವಾಗತಿಸಿ, ಸಂಚಾಲಕ ಸದಾಶಿವ ನೆಲ್ಲಿಮಾರ್ ಸಂಮಾನ ಪತ್ರ ವಾಚಿಸಿ, ಕಾರ್ಯದರ್ಶಿ ಕೃಷ್ಣಮೂರ್ತಿ ಮಾಯಣ ಧನ್ಯವಾದ ಸಮರ್ಪಿಸಿ, ಶಿವದತ್ತ ಪಿಜಿಗುಡೇಲು ಕಾರ್ಯಕ್ರಮ ನಿರೂಪಿಸಿದರು
ಇದೇ ಸಂದರ್ಭದಲ್ಲಿ ಕಲಾವಿದ ಸಹಾಯ ನಿಧಿಯನ್ನು ಕಟೀಲು ಮೇಳದ ವೇಷಧಾರಿ ಶಂಕರ ರಾವ್ ಹಾಲಾಡಿ ಇವರಿಗೆ ಸಮರ್ಪಿಸಲಾಯಿತು. ಭಾಗವಹಿಸಿದ ಎಲ್ಲಾ ಕಲಾವಿದರಿಗೆ ಶ್ರೀ ಮಧ್ಭಾಗವತ ಪ್ರಸಾರ ಅಭಿಯಾನದಂಗವಾಗಿ ಎರಡೂ ಆವೃತ್ತಿಗಳ ಗ್ರಂಥಗಳನ್ನು ನೀಡಿ, ಶ್ರೀ ದೇವಳದ ವತಿಯಿಂದ ಎಲ್ಲಾ ಕಲಾವಿದರನ್ನು ಗೌರವಿಸಲಾಯಿತು.
ಜಿಲ್ಲೆಯ ಸುಪ್ರಸಿದ್ಧ ಕಲಾವಿದರಿಂದ ಬೊಟ್ಟಿಕೆರೆ ದಿ.ಪುರಷೋತ್ತಮ ಪೂಂಜ ವಿರಚಿತ “ಮಾ ನಿಷಾದ” ತಾಳಮದ್ದಳೆ ಬಲು ಯಶಸ್ವಿಯಾಗಿ ಸಂಪನ್ನಗೊಂಡಿತು. ಇದೇ ದಿನ ಬೆಳಗ್ಗೆ ಹಿರಿಯ ಭಾಗವತರಾದ ವಾಸುದೇವ ಎರ್ಮಾಳು, ವಿಕಾಸ್ ರಾವ್ ಕೆರೆಕಾಡು, ಅಭಿರಾಮ ಹೊಸಹಿತ್ಲು, ಸಮಾಹಿತ ಅಗರಿ ಇವರ ಹಿಮ್ಮೇಳದಲ್ಲಿ ಯಕ್ಷಚೈತನ್ಯದ ಸದಸ್ಯರಿಂದ ‘ಶ್ರೀ ರಾಮ ಪಟ್ಟಾಭಿಷೇಕ’ ತಾಳಮದ್ದಳೆ ಜರುಗಿತು.