ಕಣಿಯೂರು : ನವರಾತ್ರಿ ಮಹೋತ್ಸವದ ಅಂಗವಾಗಿ ದಿನಾಂಕ 17-10-2023ರ ಮಂಗಳವಾರದಂದು ಸಂಜೆ ಶ್ರೀ ಚಾಮುಂಡೇಶ್ವರೀ ಯಕ್ಷ ಕೂಟ ಕಣಿಯೂರು ಇವರಿಂದ ಯಕ್ಷಗಾನ ತುಳು ತಾಳಮದ್ದಳೆ ಪಂದುಬೆಟ್ಟು ವೆಂಕಟರಾಯ ವಿರಚಿತ ‘ಕೋಟಿ – ಚೆನ್ನಯ’ ಪ್ರಸಂಗವು ಬಹಳ ಸೊಗಸಾಗಿ ನಡೆಯಿತು. ಭಾಗವತರಾಗಿ ಶ್ರೀ ಸೂರ್ಯನಾರಾಯಣ ಭಟ್ ಕಣಿಯೂರು, ಮದ್ದಳೆ ಮತ್ತು ಚೆಂಡೆವಾದನದಲ್ಲಿ ಶ್ರೀ ರಾಮಮೂರ್ತಿ ಕುದ್ರೆಕೋಡ್ಳು, ಟಿ.ಡಿ.ಗೋಪಾಲಕೃಷ್ಣ ಭಟ್ ಪುತ್ತೂರು, ರಾಮದಾಸ್ ಶೆಟ್ಟಿ ದೇವಸ್ಯ ಹಾಗೂ ಮಾ. ಅದ್ವೈತ್ ಕನ್ಯಾನ ಅವರು ಭಾಗವಹಿಸಿದ್ದರು.
ಅರ್ಥಗಾರಿಕೆಯಲ್ಲಿ ಶ್ರೀಗಳಾದ – ಪೆರುಮಳ ಬಲ್ಲಾಳ – ಶ್ರೀ ಶ್ರೀ ಮಹಾಬಲೇಶ್ವರ ಸ್ವಾಮೀಜಿ, ಶ್ರೀ ಕ್ಷೇತ್ರ ಕಣಿಯೂರು, ಕೋಟಿ – ಕೊಳ್ತಿಗೆ ನಾರಾಯಣ ಗೌಡ, ಚೆನ್ನಯ- ದೀಕ್ಷಿತ್ ಕಣಿಯೂರು, ರಾಮ ಜೋಯಿಸ/ಕೇಮರ ಬಲ್ಲಾಳ- ರಾಜಗೋಪಾಲ್ ಕನ್ಯಾನ, ಕಿನ್ನಿದಾರು- ಶ್ರೀಮತಿ ರೇಣುಕಾ ಕಣಿಯೂರು, ಚಂದುಗಿಡಿ- ಶಂಕರ್ ಸಾರಡ್ಕ, ದೇವಣ್ಣ ಬಲ್ಲಾಳ- ಜಯರಾಂ ಭಟ್ ದೇವಸ್ಯ ಅವರು ಸಹಕರಿಸಿದರು. ಶ್ರೀ ಕೊಳ್ತಿಗೆಯವರ ಕೋಟಿಯ ಅರ್ಥವು ಜನರನ್ನು ಮಂತ್ರಮುಗ್ಧರನ್ನಾಗಿಸಿತು.
ಇದೇ ಸಂದರ್ಭದಲ್ಲಿ ಸುಮಾರು 60 ವರುಷಗಳಿಂದ ಯಕ್ಷಗಾನ ಕ್ಷೇತ್ರದಲ್ಲಿ ತನ್ನ ಸೇವೆಯನ್ನು ಸಲ್ಲಿಸುತ್ತಿರುವ ಹಿರಿಯ ಕಲಾವಿದರಾದ ಶ್ರೀಯುತ ಕೋಳ್ತಿಗೆ ನಾರಾಯಣ ಗೌಡರನ್ನು ಪರಮ ಪೂಜ್ಯ ಶ್ರೀ ಶ್ರೀ ಮಹಾಬಲೇಶ್ವರ ಸ್ವಾಮೀಜಿಯವರು ‘ತುಳು ಯಕ್ಷರಂಗೊದ ಬೀರೆ’ ಎನ್ನುವ ಬಿರುದು ನೀಡಿ ಸನ್ಮಾನಿಸಿದರು. ವೇದಿಕೆಯಲ್ಲಿ ಟ್ರಸ್ಟಿನ ಕಾರ್ಯದರ್ಶಿ ಶ್ರೀ ಚಂದ್ರಶೇಖರ ಕಣಿಯೂರು, ಕಣಿಪುರ ಯಕ್ಷಗಾನ ಮಾಸ ಪತ್ರಿಕೆಯ ಸಂಪಾದಕರಾದ ಶ್ರೀ ಎಂ. ನಾರಾಯಣ ಚಂಬಲ್ತಿಮಾರ್, ಸಂಚಾಲಕರಾದ ರಾಜಗೋಪಾಲ್ ಕನ್ಯಾನ, ಭಾಗವತ ಶ್ರೀ ಸೂರ್ಯನಾರಾಯಣ ಭಟ್ ಕಣಿಯೂರು, ದೀಕ್ಷಿತ್ ಕಣಿಯೂರು ಹಾಗೂ ನಾಗರಾಜ್ ಕಣಿಯೂರು ಉಪಸ್ಥಿತರಿದ್ದರು. ಸಭೆಯ ಅಧ್ಯಕ್ಷತೆಯನ್ನು ಶ್ರೀ ಎಂ.ನಾ.ಚಂಬಲ್ತಿಮಾರ್ ವಹಿಸಿದ್ದರು.