ಬೆಂಗಳೂರು : ಕೋಟೇಶ್ವರದ ಎನ್.ಆರ್.ಎ.ಎಮ್.ಎಚ್. ಪ್ರಕಾಶನ ಮತ್ತು ‘ಸ್ಥಿತಿಗತಿ’ ತ್ರೈಮಾಸಿಕ ಪತ್ರಿಕೆಯ ಆಶ್ರಯದಲ್ಲಿ ಕನ್ನಡದ ಹೆಸರಾಂತ ಕಾದಂಬರಿಕಾರ, ಸಂಘಟಕ ಪಾಂಡೇಶ್ವರ ಸೂರ್ಯನಾರಾಯಣ ಚಡಗರ ನೆನಪಿನಲ್ಲಿ ನೀಡಲಾಗುವ ಹದಿನಾಲ್ಕನೆಯ ವರ್ಷದ ‘ಚಡಗ ಕಾದಂಬರಿ ಪ್ರಶಸ್ತಿ’ಗೆ ಶಶಿಧರ ಹಾಲಾಡಿಯವರ ‘ಅಬ್ಬೆ’ ಕಾದಂಬರಿಯನ್ನು ಮತ್ತು ‘ಚಡಗ ಸಂಸ್ಕರಣಾ ಪುರಸ್ಕಾರ’ಕ್ಕೆ ಬಿ.ಜಿ. ಸತ್ಯಮೂರ್ತಿಯವರನ್ನು ಆಯ್ಕೆ ಮಾಡಿದೆ.
ಶಶಿಧರ ಹಾಲಾಡಿಯವರ ‘ಅಬ್ಬೆ’ ಕಾದಂಬರಿಯು ಅಪರೂಪದ ಸಸ್ಯ ವೈವಿಧ್ಯಗಳಲ್ಲಿ ಮತ್ತು ಅಷ್ಟೇ ಅಪರೂಪದ ದಂತಕತೆಯಂತೆ ಇರುವ ಅಬ್ಬೆ ಜೇಡ ಮತ್ತಿತರ ಜೀವ ವೈವಿಧ್ಯಗಳಲ್ಲಿ ಆಸಕ್ತನಾದ ಬ್ಯಾಂಕ್ ನೌಕರನೊಬ್ಬ, ಪರಿಸರವನ್ನು ಅವಲಂಬಿಸಿರುವ ಮನುಷ್ಯ ಜೀವಿಯು, ಪರಿಸರದಲ್ಲಿನ ವಿಷಜಂತುಗಳಿಗಿಂತ ಹೆಚ್ಚು ಅಪಾಯಕಾರಿಯಾಗಬಲ್ಲ ಎಂಬ ಕಟು ಸತ್ಯವನ್ನು ಕಂಡುಕೊಳ್ಳುವ ಕಥೆಯನ್ನು ಹೇಳುತ್ತದೆ. ಬಿ.ಜಿ.ಎಲ್. ಸ್ವಾಮಿಯವರೂ ಪೂರ್ಣಚಂದ್ರ ತೇಜಸ್ವಿಯವರೂ ಸೃಷ್ಟಿಸಿ ಕೈಬಿಟ್ಟ ನಿಗೂಢ ಜಗತ್ತುಗಳ ಮುಂದುವರಿಕೆಯಂತೆ ಕಾಣಿಸುವ ಇಲ್ಲಿನ ವಸ್ತು ಮತ್ತು ನಿರೂಪಣೆಯ ಸ್ನಿಗ್ಧತೆ ಮತ್ತು ಗಹನತೆಗಳನ್ನು ಗುರುತಿಸಿ, ಮೂವರು ತೀರ್ಪುಗಾರರ ಸಮಿತಿಯು ಈ ಕಾದಂಬರಿಯನ್ನು ಈ ವರ್ಷದ ಚಡಗ ಕಾದಂಬರಿ ಪುರಸ್ಕಾರಕ್ಕೆ ಆಯ್ಕೆ ಮಾಡಿದೆಯೆಂದು ಸ್ಪರ್ಧೆಯ ಸಂಚಾಲಕರಾದ ಪ್ರೊ.ಉಪೇಂದ್ರ ಸೋಮಯಾಜಿಯವರು ತಿಳಿಸಿರುತ್ತಾರೆ.
‘ಚಡಗ ಕಾದಂಬರಿ ಪ್ರಶಸ್ತಿ’ಯು ರೂ.10,000/- ನಗದು, ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆಗಳನ್ನು ಒಳಗೊಂಡ ಈ ಪ್ರಶಸ್ತಿಯನ್ನು ಕಾದಂಬರಿಕಾರ ಶಶಿಧರ ಹಾಲಾಡಿಯವರಿಗೆ ನವೆಂಬರ್ ತಿಂಗಳಲ್ಲಿ ಕೋಟದಲ್ಲಿ ನಡೆಯುವ ಸಾರ್ವಜನಿಕ ಸಮಾರಂಭದಲ್ಲಿ ಪ್ರದಾನ ಮಾಡಲಾಗುತ್ತದೆ. ಇದೇ ಸಂದರ್ಭದಲ್ಲಿ ಸಾಹಿತ್ಯ ಮತ್ತು ಸಂಘಟನೆ ಕ್ಷೇತ್ರಗಳಲ್ಲಿ ಚಡಗರ ಒಡನಾಡಿಯಾಗಿದ್ದ ಬಿ.ಜಿ. ಸತ್ಯಮೂರ್ತಿಯವರ ಜೀವಮಾನದ ಸಾಧನೆ ಪರಿಗಣಿಸಿ ಅವರಿಗೆ ‘ಚಡಗ ಸಂಸ್ಕರಣಾ ಪುರಸ್ಕಾರ’ (ರೂ.5,000/- ನಗದು ಹಾಗೂ ಸ್ಮರಣಿಕೆ) ನೀಡಿ ಗೌರವಿಸಲಾಗುವುದು ಎಂದು ಪ್ರಶಸ್ತಿ ಸಮಿತಿಯ ಅಧ್ಯಕ್ಷ ಡಾ. ಎನ್. ಭಾಸ್ಕರ ಆಚಾರ್ಯ ತಿಳಿಸಿದ್ದಾರೆ.
ಶಶಿಧರ ಹಾಲಾಡಿಯವರು ಉಡುಪಿ ಜಿಲ್ಲೆಯ ಹಾಲಾಡಿಯವರು. ಪ್ರಥಮ ರ್ಯಾಂ ಕ್ ಮತ್ತು ಚಿನ್ನದ ಪದಕದೊಂದಿಗೆ ಕನ್ನಡ ಎಂ.ಎ. ಪದವಿ ಪಡೆದವರು. ಸ್ಟೇಟ್ ಬ್ಯಾಂಕ್ನಲ್ಲಿ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸಿ, ಸ್ವಯಂನಿವೃತ್ತಿ ಪಡೆದು, ಕಳೆದ ಆರು ವರ್ಷಗಳಿಂದ ಪತ್ರಿಕೆಯೊಂದರ ಭಾನುವಾರದ ಪುರವಣಿ ನಿರ್ವಹಿಸುತ್ತಿದ್ದಾರೆ.
ಅಬ್ಬೆ, ಕಾಲಕೋಶ (ಕಾದಂಬರಿ), ಉರುಳಿದ ಕಟ್ಟಡ ಮರಳಿದ ನೆನಪು, ಚಿತ್ತ ಹರಿದತ್ತ, ಮನದ ಹಾಯಿದೋಣಿ, ಓಲಿ ಕೊಡೆ, ಪ್ರಕೃತಿ ಪ್ರಪಂಚ (ಅಂಕಣ ಬರಹಗಳು), ನಾ ಸೆರೆಹಿಡಿದ ಕನ್ಯಾಸ್ತ್ರೀ, ಅಮ್ಮಮ್ಮನ ದೀಪಾವಳಿ, ಬೆನಗಲ್ ನರಸಿಂಗರಾವ್, ಟುವ್ವಿ ಹಕ್ಕಿಯ ಗೂಡು, ದೇವರು ಎಚ್ಚರಗೊಂಡಾಗ, ಹಿತ್ತಲಿನಿಂದ ಹಿಮಾಲಯಕ್ಕೆ ಇತ್ಯಾದಿ ಇವರ ಪ್ರಕಟಿತ ಕೃತಿಗಳು.
ಬೆರಗು ಪುಸ್ತಕ ಪ್ರಶಸ್ತಿ, ಸ್ವಾಭಿಮಾನಿ ಕರ್ನಾಟಕ ಪುಸ್ತಕ ಪ್ರಶಸ್ತಿ, ಅವ್ವ ಸೃಜನಶೀಲ ಸಾಹಿತ್ಯ ಪ್ರಶಸ್ತಿ, ಹಾಮಾನಾ ಅಂಕಣ ಬರಹ ಪ್ರಶಸ್ತಿ, ಕನ್ನಡ ಸೇವಾ ರತ್ನ ಪ್ರಶಸ್ತಿ, ಕರುನಾಡು ಸೇವಾ ರತ್ನ ಪ್ರಶಸ್ತಿ ಮುಂತಾದವು ಇವರ ಶ್ರದ್ಧೆ ಮತ್ತು ಪ್ರೀತಿಯ ಸಾಹಿತ್ಯ ಸೇವೆಗೆ ದೊರೆತ ಗೌರವ.